ಕಪ್ಪುಜೀರುಂಡೆ ಮತ್ತು ಕೊಂಡಿ ಹುಳು: ``ಡರ್ಮೆಸ್ಟೆಸ್ ಏಟರ್'' ಮತ್ತು ``ಲೇಬಿಯಾ ಅರಾಖಿಡಿಸ್'' ಎಂಬ ಕಪ್ಪು ಜೀರುಂಡೆ ಮತ್ತು ಕೊಂಡಿ ಹುಳುಗಳು ಬಿತ್ತನೆ ಕೋಠಿಗಳಲ್ಲಿ ಹೆಚ್ಚಿನ ಹಾನಿ ಉಂಟು ಮಾಡುತ್ತವೆ. ಈ ಉಪದ್ರವಿ ಕೀಟಗಳು ವರ್ಷಪೂರ್ತಿ ಕಾಣಿಸಿಕೊಳ್ಳುತ್ತವೆ. ಕಪ್ಪು ಜೀರುಂಡೆಗಳು ಭಕ್ಷಕ ಹುಳುಗಳಾಗಿದ್ದು, ರೇಷ್ಮೆಗೂಡುಗಳನ್ನು ಕೊರೆದು ಕೋಶಗಳನ್ನು ತಿನ್ನುವುದಲ್ಲದೆ, ರೇಷ್ಮೆ ಮೊಟ್ಟೆ, ಚಿಟ್ಟೆ, ಸಾವಯುವ ಪದಾರ್ಥಗಳನ್ನು ಸಹ ತಿಂದು ನಾಶಪಡಿಸುತ್ತವೆ. ಮೊಟ್ಟೆಗಳನ್ನಿಡಲು ಬಿಟ್ಟ ತಾಯಿ ಚಿಟ್ಟೆಗಳ ಹೊಟ್ಟೆ ಭಾಗವನ್ನು ಕೊಂಡಿ ಹುಳುಗಳು ಕಚ್ಚಿ ಗಾಯಗೊಳಿಸುತ್ತವೆ. ಗಾಯಗೊಂಡ ಚಿಟ್ಟೆಗಳು ತಮ್ಮ ದೇಹದಿಂದ ದ್ರವವನ್ನು ಸ್ರವಿಸಿ ಮೊಟ್ಟೆಗಳನ್ನಿಡುವ ಮೊದಲೇ ಸಾಯುತ್ತವೆ. ಗಾಯಗೊಂಡ ಚಿಟ್ಟೆಗಳ ರಕ್ತ ಕಪ್ಪಾಗಿ ಮೊಟ್ಟೆ ಹಾಳೆಗಳ ಮೇಲೆ ಕಲೆಗಳಾಗುತ್ತವೆ. ಕಪ್ಪು ಜೀರುಂಡೆಯು ತನ್ನ ಜೀವನ ಚಕ್ರವನ್ನು 37-42 ದಿನಗಳಲ್ಲಿ ಪೂರ್ತಿಗೊಳಿಸಿದರೆ, ಕೊಂಡಿಹುಳುವಿನ ಜೀವನ ಚಕ್ರವು 29-53 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ತಂತಿ ಜಾಲರಿಯನ್ನು ಬಾಗಿಲು ಮತ್ತು ಕಿಟಕಿಗಳಿಗೆ ಅಳವಡಿಸುವುದರಿಂದ ಉಪದ್ರವಿ ಕೀಟಗಳ ಚಲನೆಯನ್ನು ನಿಯಂತ್ರಿಸಬಹುದು. ಬಿತ್ತನೆ ಕೋಠಿ ಮತ್ತು ಗೂಡುಗಳನ್ನು ಸಂಗ್ರಹಿಸುವ ಪ್ರದೇಶ ಸ್ವಚ್ಛವಾಗಿರಬೇಕು. ಶೇ. 30 ಕ್ಲೋರಿನ್ಯುಕ್ತ, ಬ್ಲೀಚಿಂಗ್ ಪುಡಿಯನ್ನು ಪ್ರತಿ ಚದರ ಅಡಿಗೆ 200 ಗ್ರ್ರಾಂ. ನಂತೆ ಗೋಡೆಯ ಪಕ್ಕದಲ್ಲಿ, ನೆಲಕ್ಕೆ ಧೂಳೀಕರಿಸಿ ಜೀರುಂಡೆಗಳನ್ನು ನಾಶಪಡಿಸಬಹುದು. ಕೊರೆದ ಗೂಡುಗಳನ್ನು ಸಂಗ್ರಹಿಸುವ ಮೊದಲು ಶೇ. 50 ರ ಮೆಲಾಥಿಯಾನ್ ಧೂಳೀಕರಿಸಬೇಕು. 50 ಕಿ.ಗ್ರಾಂ. ಕೊರೆದ ಗೂಡುಗಳಿಗೆ 5 ಕಿ.ಗ್ರಾಂ. ಕೀಟನಾಶಕ ಬೇಕಾಗುತ್ತದೆ. ಕೊರೆದ ಗೂಡು ಶೇಖರಿಸುವ ಕೊಠಡಿಯ ನೆಲ ಮತ್ತು ಗೋಡೆಗಳಿಗೆ ಶೇ. 0.03 ರ ಡೆಲ್ಟಾಮಿಥ್ರಿನ್ ರಾಸಾಯನಿಕ ದ್ರಾವಣ ಸಿಂಪರಿಸಬೇಕು. ಜೀರುಂಡೆಗಳು ಮತ್ತು ಕೊಂಡಿಹುಳು ಆಶ್ರಿತವಾಗಿರುವ ಬಿದಿರಿನ ಅಥವಾ ಮರದ ತಟ್ಟೆಗಳನ್ನು ಶೇ. 0.076 ರ ಡಿ.ಡಿ.ವಿ.ಪಿ ದ್ರಾವಣದಲ್ಲಿ (1 ಮಿ.ಲೀ., ಡಿ.ಡಿ.ವಿ.ಪಿ. (ಇಸಿ=76%)ನ್ನು 1 ಲೀಟರ್ ನೀರಲ್ಲಿ) 2-3 ನಿಮಿಷ ಅದ್ದಬೇಕು. 10 ದಿನಗಳ ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ, ಮರುಬಳಕೆ ಮಾಡಬಹುದು. ದಡೇವು ಮತ್ತು ಕೊಠಡಿಯನ್ನು ಶೇ. 0.076 ಡಿ.ಡಿ.ವಿ.ಪಿ ದ್ರಾವಣದಿಂದ ಸಿಂಪರಿಸಬೇಕು. ಸೂಚನೆ:ಕೀಟನಾಶಕವನ್ನು ಅತ್ಯಾವಶ್ಯವಾದಾಗ ಮಾತ್ರ ಅತಿ ಜಾಗರೂಕತೆಯಿಂದ ಬಳಸಬೇಕು. ಮೂಲ : ಕರ್ನಾಟಕ ರೇಷ್ಮೆ ಇಲಾಖೆ