ಮಣ್ಣಿನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ನಶಿಸಿಹೋಗದಂತೆ ಅವುಗಳನ್ನು ಅಭಿವೃದ್ಧಿಗೊಳ್ಳಲು ಅನುವು ಮಾಡಿಕೊಡುವ ಕೃಷಿ ಪದ್ಧತಿಗಳಿಗೆ ಸುಸ್ಥಿರ ಕೃಷಿ ಎನ್ನಬಹುದು. ಪ್ರಖ್ಯಾತ ಕೃಷಿ ವಿಜ್ಞಾನಿ ಡಾ : ಎಂ. ಎಸ್. ಸ್ವಾಮಿನಾಥನ್ ಹೇಳಿರುವಂತೆ ಸುಸ್ಥಿರ ಕೃಷಿಯೆಂದರೆ ಇಂದಿನ ಜನಾಂಗವೇ ಅಲ್ಲದೆ ಮುಂದಿನ ತಲೆಮಾರುಗಳ ಅವಶ್ಯಕತೆಯನ್ನು ಪೂರೈಸುವಂತೆ ಉತ್ಪಾದನಾ ಮಟ್ಟವನ್ನು ಕಾಯ್ದುಕೊಂಡು ಹೋಗುವ ಕೃಷಿ ಪದ್ಧತಿ. ಸುಸ್ಥಿರ ಕೃಷಿಯ ಮುಖ್ಯ ತತ್ವಗಳೆಂದರೆ ಬೆಳೆಗಳಿಗೆ ಬೇಕಾಗುವ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳನ್ನು ಕಾಪಾಡಿಕೊಳ್ಳುವುದು. ಮಣ್ಣಿನಲ್ಲಿಯ ಸಾವಯವ ಅಂಶಗಳನ್ನು ಹೆಚ್ಚಿಸಿ ಜೈವಿಕ ಕ್ರಿಯೆಗಳು ನಡೆಯುವಂತೆ ಮಾಡುವುದು. ಮಣ್ಣಿನಲ್ಲಿ ಯಾವುದೇರೀತಿಯ ಅಹಿತಕಾರಿ ಪದಾರ್ಥಗಳ ಸಂಗ್ರಹವಾಗದಂತೆ ನೋಡಿಕೊಳ್ಳುವುದು. ಪರಿಸರ ಮಾಲಿನ್ಯವನ್ನು ತಡೆಗಟ್ಟಿ ನೈಸರ್ಗಿಕ ಸಮತೋಲನವನ್ನು ಕಾಯ್ದುಕೊಳ್ಳುವುದು. ಮೂಲ : ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.