ಹಸಿರೆಲೆ ಗೊಬ್ಬರದ ಸಸ್ಯಗಳು ತ್ವರಿತವಾಗಿ ಬೆಳೆದು ಕಡಿಮೆ ಅವಧಿಯಲ್ಲಿ ಹೆಚ್ಚು ಸೊಪ್ಪನ್ನು ಕೊಡುವಂತಿರಬೇಕು. ಕಡಿಮೆ ನಾರಿನಿಂದ ಕೂಡಿದ್ದು ಮಣ್ಣಿನಲ್ಲಿ ಸೇರಿಸಿದಾಗ ಸುಲಭವಾಗಿ ಹಾಗೂ ಶೀಘ್ರವಾಗಿ ಕೊಳೆಯುವಂತಿರಬೇಕು. ಕಡಿಮೆ ಫಲವತ್ತತೆಯಿರುವ ಭೂಮಿಯಲ್ಲೂ, ಶುಷ್ಕ ವಾತಾವರಣದಲ್ಲೂ ಅಲ್ಪ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡು ಹುಲುಸಾಗಿ ಬೆಳೆಯುವಂತಿರಬೇಕು. ಆಳವಾಗಿ ಬೇರು ಬಿಡುವ, ಮಣ್ಣಿನ ಕೆಳಪದರಗಳಿಂದ ನೀರು ಹಾಗೂ ಪೋಷಕಾಂಶಗಳನ್ನು ಉಪಯೋಗಿಸಿಕೊಂಡು ಬೆಳೆಯುವ ಗುಣವಿರಬೇಕು. ದ್ವಿದಳ ಧಾನ್ಯ ವರ್ಗಕ್ಕೆ ಸೇರಿದ್ದು ವಾತಾವರಣದಲ್ಲಿರುವ ಸಾರಜನಕವನ್ನು ಸ್ಥೀರೀಕರಿಸುವಂಥ ಗುಣವುಳ್ಳದ್ದಾಗಿರಬೇಕು. ಅಲ್ಲದೆ ಬೇರಿನಲ್ಲಿ ಹಚ್ಚು ಸಾರಜನಕವನ್ನು ಕೂಡಿಡುವ ಶಕ್ತಿ ಹೊಂದಿರಬೇಕು. ಬಹಳ ಉಪಯೋಗಿ ಬೆಳೆಯಾಗಿರಬೇಕು. ನೆರಳಿನಲ್ಲಿ ಬೆಳೆಯುವ ಹಾಗೂ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಗುಣವಿರಬೇಕು. ಯಾವುದೇ ಕಾಲದಲ್ಲೂ ಹುಲುಸಾಗಿ ಬೆಳೆಯುವ ಗುಣ ಮತ್ತು ಹೆಚ್ಚು ಬೀಜವನ್ನು ಕೊಡುವ ಸಸ್ಯವಾಗಿರಬೇಕು. ರಾಸಾಯನಿಕ ಗೊಬ್ಬರಗಳ ಪ್ರಮಾಣ ಕಡಿಮೆ ಕೊಟ್ಟರೂ ಬೆಳೆಯ ಇಳುವರಿಯ ಪ್ರಮಾಣ ಕಡಿಮೆಯಾಗದಿರಬೇಕು. ಜಾನುವಾರುಗಳಿಗೆ ಒಳ್ಳೆಯ ಮೇವನ್ನು ಒದಗಿಸುವಂತಿರಬೇಕು. ಮೇಲೆ ಹೇಳಿದ ಎಲ್ಲಾ ಗುಣಗಳು ಒಂದೇ ವರ್ಗದ ಸಸ್ಯದಲ್ಲಿ ಇರುವುದು ದುರ್ಲಭ. ಆದ್ದರಿಂದ ಹಸಿರೆಲೆ ಗೊಬ್ಬರದ ಬೆಳೆಯನ್ನು ಆಯ್ಕೆ ಮಾಡುವಾಗ ಸ್ಥಳೀಯ ಸನ್ನಿವೇಶದಲ್ಲಿ ಚೆನ್ನಾಗಿ ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.