ಕಾಯುವ ವಿಷದ ಮರ: ವಿಷದ ಮರವೊಂದು ಹೇಗೆ ನಮ್ಮನ್ನು ಕಾಯುತ್ತದೆ ಎಂಬ ಕುತೂಹಲ ಮೂಡಬಹುದು. ಉತ್ತರ ಕನ್ನಡ ಅಥವಾ ಉತ್ತರ ಕೇರಳದ ಗಡಿನಾಡು ಕಾಸರಗೋ(ಕೊಡು ಎಂಬ ಸ್ಥಳ ನಾಮದ ಹಿಂದೆ ಈ ಮರದ ಹೆಸರಿದೆ, ಕಾಸರಕದ ತುಳು ಹೆಸರು, ಕಾವ. ಸುಶ್ರುತ ಸಂಹಿತೆಯಲ್ಲಿ 'ಸುರಸಾದಿ ಗಣ' ಎಂಬ ಎನೀಮ ಕಷಾಯಗಳ ಗುಂಪಿನಲ್ಲಿ ಈ ಮರದ ಕಷಾಯದ ಉಲ್ಲೇಖವಿದೆ. ಕಾಶಿಯಲ್ಲಿ ಕುಳಿತು ಬರೆದ ದಿವೋದಾಸ ಗುರು ರಚಿಸಿದ 'ವಿಷಮುಷ್ಟಿಕಾ' ಎಂದ ಗ್ರಂಥದಲ್ಲೂ ಕಾಸರಕ ಮರದ ವಿವರ ಇದೆ. ಈ ಗ್ರಂಥದ ಕಾಲಘಟ್ಟ ಸುಮಾರು ಐದು ಸಹಸ್ರವರುಷ, ಕಡಲ ತಡಿಯ ಪೂರ್ವ ಮತ್ತು ಪಶ್ಚಿಮ ಘಟ್ಟ ಸಾಲಿನಲ್ಲಿರುವ ಈ ವಿಷಮರದ ಉಪಯೋಗಗಳಿಂದಾಗಿ ಆತ ಕೊಟ್ಟ ಹೆಸರು ಗಮನೀಯ. ಮುಷ್ಟಿಗಾತ್ರದ ಕಿತ್ತಳೆ ಬಣ್ಣದ ಗಟ್ಟಿ ಕವಚದ ಹಣ್ಣುಗಳ ಬಣ್ಣನೆಯನ್ನು ದಿವೋದಾಸ ವಿಷಮುಷ್ಟಿಕಾ ಗ್ರಂಥದಲ್ಲಿ ಮಾಡಿದ್ದಾರೆ. ಕಾಯೆ! ಕಾಯುವ ಪದ ಅಲ್ಲಿ ನಿಚ್ಚಳ, ಯಾವುದನ್ನು ಇದು ಕಾಯುತ್ತದೆ? ಯಾರನ್ನು ಯಾವುದನ್ನು ಇದು ಕಾಯುತ್ತದೆ? ಆಗ ತಾನೇ ನಾಟಿ ಮಾಡಿದ ಭತ್ತದ ಸಸಿಯ ಗದ್ದೆಯನ್ನು ಈ ಸಸ್ಯ ಕಾಯುತ್ತದೆ. ಕೆಸರುಗದ್ದೆಗೆ ಹಸಿರು ಕಣೆಯೊಂದರ ಸಿಂಗಾರ ಮಾಡಿರುತ್ತಾರೆ. ಗದ್ದೆ ನಡುವೆ ಮತ್ತು ನಾಕು ಮೂಲೆಗೆ ಕಾಸರಕದ ಮುಳ್ಳು ಕಣೆ ನೆಡುತ್ತಾರೆ. ಹತ್ತಾರು ದಿನದಲ್ಲಿ ಅದರ ಎಲೆ ಉದುರಿ ಗದ್ದೆ ನೀರಿನಲ್ಲಿ ಕರಗುತ್ತಿತ್ತು. ಭತ್ತದ ಕಾಂಡ, ಬೇರು ಕೊರಕ ನಿಮೆಟೋಡ್ ನಿಯಂತ್ರಣಕ್ಕೆ ಬೇಸಾಯಗಾರರು. ಸರಳ ವಿಧಾನವಿದು. ಇದರಲ್ಲಿ ವೈಜ್ಞಾನಿಕ ಅಂಶವೂ ಇದೆ. ಗದ್ದೆಯ ಫಸಲಿಗೆ ಹತ್ತಿಪ್ಪತ್ತು ಎಲೆ ಸಾಕೇ ಎನ್ನಿಸಬಹುದು? ಆದರೆ ಇದರಲ್ಲಿ ಮದ್ದಿನ ಗುಣ ಹೆಚ್ಚಾಗಿರುವುದರಿಂದ ಇದು ರೋಗವನ್ನು ನಿಯಂತ್ರಣ ಮಾಡುತ್ತದೆ. ನರಮಂಡಲದ ಕಾಯಿಲೆಗಳಿಗೆ, ಲಕ್ಷ, ಇಡಿ ದೇಹವೇ ಮರಗಟ್ಟುವ ಅಧರಾಂಗ, ಸರ್ವಾಂಗ ವಾತಗಳಿಗೆ ಕೊಡುವ ಎನೀಮ ಚಿಕಿತ್ಸೆಗೆ ವಿಷಮುಷ್ಟಿ ಬಳಸುವ ಉಲ್ಲೇಖವಿದೆ. ಹಾಗಾಗಿ ನಮ್ಮನ್ನು ಕಾಪಾಡುವ ಈ ಮರ ಐತಿಹಾಸಿಕ ಯುಗದ ಅರಿವಿನ ಕುರುಹು ಎಂದರೆ ತಪ್ಪಾಗಲಾರದು. ಕಟ್ಟಿಗೆಗೂ ಬೇಡದ ಮರ ಕಾಸರಕ. ಸಂಸ್ಕೃತದಲ್ಲಿ ಕುಪೀಲು, ವಿಷತಿಂದುಕ ಎಂದು ಕರೆಯಲ್ಪಡುವ ಮರ ೩೫-೪೫ ಅಡಿ ಎತ್ತರ ಬೆಳೆಯುತ್ತದೆ. ಗಟ್ಟಿ ಮರ, ಬೂದು ಬಣ್ಣದ ತೊಗಟೆ, ತೊಗಟೆ ಕೆತ್ತಿದರೆ ಹಳದಿ ಬಣ್ಣ ಸ್ರಾವ ಹೊರಬರುತ್ತದೆ. ಆಯಾತಕಾರ ಅಥವಾ ವೃತ್ತಾಕಾರದ ಅಭಿಮುಖ ಎಲೆಗಳು, ಒಂದು ಇಂಚು ಉದ್ದದ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿ ಹೂ ಕಂಡು ಬರುತ್ತದೆ. ಹಳದಿ ಉರುಟಾದ ಫಲ ಬೆಳೆದು ಹಣ್ಣಾದಾಗ ಕೇಸರಿ ಬಣ್ಣದ ಕವರಿಂಗ್ ಬಾಲಿನಂತೆ ಕಂಡು ಬರುತ್ತದೆ. ಹಣ್ಣಿನೊಳಗೆ ಕಹಿ ಪೇಸ್ಟ್ ನಂತಹ ಸಂಗ್ರಹ ಇದ್ದರೆ ಚಟ್ಟೆ ಬೀಜಗಳೂ ಅದರೊಂದಿಗೆ ಸೇರಿರುತ್ತದೆ. ಕಾಸರಕದ ಬೀಜವನ್ನೇ ಶೋಧನೆ ಮಾಡಿ ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಬೀಜವನ್ನು ಏಳು ದಿನ ಗೋಮೂತ್ರದಲ್ಲಿ ಇರಿಸಿ ಅದರ ಸಿಪ್ಪೆ ತೆಗೆದು ಹಾಲಿನಲ್ಲಿ ಬೇಯಿಸಿ ತುಪ್ಪದಲ್ಲಿ ಹುರಿದು ನಂತರ ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಶುದ್ಧಿ ಮಾಡಿದ ಬೀಜದಿಂದ ಅಗ್ನಿತುಂಡಿ, ವಿಷಮುಷ್ಟಿ ವಟಿ, ಏಕಾಂಗ ವೀರ ರಸ, ಕ್ರಿಮಿ ಮುದ್ಗರ ರಸ, ವಿಷಗರ್ಭ ತೈಲ ಮುಂತಾದ ವಿಶೇಷ ಔಷಧಿಗಳನ್ನು ತಯಾರಿಸಲಾಗುತ್ತದೆ. ಈ ಔಷಧಿಗಳಿಂದ ಗೃದ್ರಸಿ (sciatica) ಯಂತಹ ರೋಗದಲ್ಲಿ ಬರುವ ನೋವು ನಿವಾರಣೆ ಮಾಡುವುದು. ಪಕ್ಷಾಘಾತದಲ್ಲಿ ಪ್ರಯೋಜನಕಾರಿ. ಜೀರ್ಣ ವೃದ್ಧಿ ಮಾಡುವುದು, ಹಸಿವು ಹೆಚ್ಚಿಸುವುದು, ಹೊಟ್ಟೆ ನೋವು ಕಡಿಮೆ ಮಾಡುವುದು, ಜ್ವರ ನಿವಾರಿಸುವುದು, ಹೊಟ್ಟೆ ಕ್ರಿಮಿಯನ್ನು ಕಡಿಮೆಮಾಡುವುದು. ಬೀಜ ಸೇರಿಸಿ ಎಣ್ಣೆ ಪಾಕ ಮಾಡಿ ಮೈಗೆ ಹಚ್ಚುವ ಮೂಲಕ ನೋವು ನಿವಾರಣೆ ಮಾಡುವುದು. ಕೆಲವು ಚರ್ಮ ತೊಂದರೆಗಳನ್ನು ನಿವಾರಿಸುವುದು. ವಿಷ ವೃಕ್ಷ ಕಾಸರಕದ ಇಡೀ ಸಂಕುಲವೇ ನಮ್ಮ ಕಾಡುಗಳಲ್ಲಿ ಅವನತಿಯ ಹಾದಿಯಲ್ಲಿದೆ. ಕಾರಣ ಹಲವು. ಹಸಿರು ಘಟ್ಟಗಳಲ್ಲಿ ಹಸಿರು ಕಾಡು ಕ್ರಮೇಣ ಕಣ್ಮರೆ. ಎರಡನೆಯ ಕಾರಣ ಈ ಬೀಜಗಳನ್ನೇ ಹೆಕ್ಕಿ ಹೆಕ್ಕಿ ತಂದು ಅಂಗಡಿಗಳಿಗೆ ಮಾರುತ್ತಿರುವುದರಿಂದ ಈ ಸಸ್ಯ ಸಂತತಿ ಮಾಯವಾಗುತ್ತಿದೆ.