ಆಧುನೀಕರಣದ ಪ್ರಭಾವ ಎಲ್ಲೆಡೆ ತೀರ್ವವಾಗಿ ಪಸರಿಸುತ್ತಿರುವುದರ ಹಿನ್ನೆಲೆಯಲ್ಲಿ ಕನ್ನಡದ ಸ್ಥಾನ-ಮಾನ, ಅದರ ಉಳಿವಿನ ಸವಾಲುಗಳು ಎದುರಾಗುತ್ತಿರುವುದು ಕನ್ನಡಿಗರೆಲ್ಲರಿಗೂ ವಿಷಾದನೀಯ ಸಂಗತಿ. ಆಧುನೀಕರಣದಿಂದಾಗಿ ಕನ್ನಡನಾಡಿನ ಜನ ಜೀವನದಲ್ಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಇದರ ತೀವ್ರ ಪ್ರಭಾವಕ್ಕೆ ಕನ್ನಡ ಭಾಷೆಯು ಹೊರತಾಗಿಲ್ಲ. ಪ್ರಗತಿ , ವೈಜ್ಞಾನಿಕ ಮುನ್ನಡೆ, ಆರ್ಥಿಕ ಪಟ್ಟಭದ್ರ ಹಿತಾಸಕ್ತಿಗಳು, ವ್ಯಾಪಾರ-ವ್ಯವಹಾರ, ತಂತ್ರಜ್ಞಾನ, ಸ್ಪರ್ಥೆ, ಲಾಭ ಮೊದಲಾದವುಗಳು ಆಧುನೀಕರಣದ ಲಕ್ಷಣಗಳಿಂದಾಗಿ ಹಿನ್ನಡೆಯುತ್ತಿರುವ ಕನ್ನಡ ನಾಡಿನ, ಕನ್ನಡ ಜನತೆಯ, ಕನ್ನಡ ಭಾಷೆಯ ಹಿರಿಮೆಯ ಹಿನ್ನೆಲೆಯನ್ನು ಮೊದಲು ಗುರುತಿಸೋಣ.

“ಇದಮಂಧಂ ತಮಃ ಕೃತ್ಸ್ನಂ ಜಾಯೇತ್ ಭುವನತ್ರಯಂ

ಯದಿ ಶಬ್ದಾಹ್ವಯಂ ಜ್ಯೋತಿರಾ ಸಂಸಾರನ್ನ ದೀಪ್ಯತೇ”

“ಮಾತೆಂಬ ಜ್ಯೋತಿಯು ಬೆಳಗದೇ ಇದ್ದಿದ್ದರೆ,

ಜಗತ್ರಯವಿಲ್ಲವೂ ಕಗ್ಗತ್ತಲ ಮೊತ್ತವಾಗಿರುತ್ತಿತ್ತು” ಎಂಬ

ದಂಡಿಯ ಮಾತು ಜೌಚಿತ್ಯಪೂರ್ಣವಾಗಿದೆ. ಮಾತು ಅರ್ಥಾತ್ ಭಾಷೆ. ಅತಿ ಶ್ರೇಷ್ಠ ಅಭಿವ್ಯಕ್ತಿ ಮಾಧ್ಯಮ. ಅದು ಅಮೂರ್ತ ಭಾವಗಳನ್ನು ಸೆರೆಹಿಡಿಯುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿಷ್ಠವಾಗಿರುವ ’ಕನ್ನಡ ನಾಡಿನ, ಕನ್ನಡ ಜನತೆಯ ನುಡಿಯೇ ಕನ್ನಡ’. ಕನ್ನಡ ಮೂಲ ದ್ರಾವಿಡದ ಮಗಳು. ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆ ತಾಯಿ ಮಡಿಲಿನಿಂದ ಕೆಳಗಿಳಿದು ಬಂದ ಕನ್ನಡವೆಂಬ ಶಿಶು ಪ್ರಬುದ್ಧಳಾಗಿ ಬೆಳೆದಿದ್ದಾಳೆ. ಆದರೆ ಪ್ರತಿಯೊಂದು ಭಾಷೆಗೂ ಸಹಜವಾಗಿಯೇ ಸಂಸ್ಕೃತಿಯ ಥಳಕು, ಮೋಹ ಇರುವುದರಿಂದ ಕನ್ನಡ ಭಾಷೆಗೂ ಸಂಸ್ಕೃತಿಯ ಥಳಕು, ಮೋಹವಿದ್ದು ಅನ್ಯ ಭಾಷೆಗಳ ಸಂಸ್ಕೃತಿಯ ಒಳಹರಿವನ್ನು ಸ್ವಾಗತಿಸಿ ತನ್ನ ಬುಡಕ್ಕೆ ಪರೋಕ್ಷವಾಗಿ ಕಿಡಿ ಹಚ್ಚಿಕೊಂಡ ಪರಿಣಾಮವಾಗಿ ಅನ್ಯ ಭಾಷೆಗಳು ಕನ್ನಡಕ್ಕೆ ಸವಾಲೊಡ್ಡಲು ಆರಂಭಿಸಿದವು