ಒಂದು ರಾಷ್ಟ್ರದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲವೇ ಶಿಕ್ಷಣ. ಮನುಷ್ಯನಿಗೆ ಮಾನಸಿಕ ಮತ್ತು ಬೌದ್ಧಿಕ ಸಂಸ್ಕಾರ ನೀಡುವ ಮೂಲಕ ಮಾನವೀಯತ್ವ ಪ್ರಾಪ್ತವಾಗಲು ಮೂಲಕಾರಣವೇ ಶಿಕ್ಷಣ. ಇದರಲ್ಲಿ ಸಾಮಾನ್ಯ ಶಿಕ್ಷಣದ ಹಾಗೂ ಉನ್ನತ ಶಿಕ್ಷಣದ ಪಾತ್ರವು ಹಿರಿದಾದುದಾಗಿದೆ. ಮೂಲಭೂತ ಶಿಕ್ಷಣದ ಜೊತೆಯಲ್ಲಿಯೇ ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯು ಆಯಾ ರಾಷ್ಟ್ರದ ಉನ್ನತ ಶಿಕ್ಷಣದ ವ್ಯವಸ್ಥೆ, ಗುಣಮಟ್ಟ, ಸುಶಿಕ್ಷಿತರ ಪ್ರಮಾಣ ಮೊದಲಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಆಧುನಿಕ ಶಿಕ್ಷಣ ಕ್ರಮವು ೧೦+೨+೩ ಮಾದರಿಯದಾಗಿದ್ದು, ಸಾಮಾನ್ಯ ಶಿಕ್ಷಣ, ಪದವಿ ಪೂರ್ವ ಮತ್ತು ಉನ್ನತ ಶಿಕ್ಷಣಗಳನ್ನೊಳಗೊಂಡಿದೆ. ಇದರಲ್ಲಿ ಉನ್ನತ ಶಿಕ್ಷಣವು ಮನುಕುಲವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಮೊದಲಾದ ವಿಷಯಗಳ ಬಗ್ಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟು, ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಪೂರಕ ಕೊಡುಗೆಯನ್ನು ನೀಡುವ ಶಿಕ್ಷಣವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ “ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಹಾಗೂ ರಾಷ್ಟ್ರದ ಬಗೆಗಿನ ಹಿತ, ಆಸ್ಥೆಯ ರಾಷ್ಟ್ರೀಯತೆಯ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಚರಣೆಗೊಳ್ಳುವತ್ತಾ ಗಮನ ಹರಿಸುವುದು ಇಂದಿನ ಬದಲಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಕ್ಕೆ ಅಗತ್ಯ ಅನಿವಾರ್ಯವಾಗಿರುವುದನ್ನು ಕಾಣಬಹುದು. ಉನ್ನತ ಶಿಕ್ಷಣ ಸಂಸ್ಥೆಗಳು ಜೌದ್ಯೋಗಿಕ ಕ್ಷೇತ್ರಕ್ಕೆ ಅಗತ್ಯವಾದ ಯಂತ್ರಗಳಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಬದಲು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ಸರ್ವಜ್ಞಾನ ಪಡೆದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತಾಗಬೇಕು. ಶಿಕ್ಷಣದ ಮೂಲಕ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ವಿಷಯವನ್ನು ಮುಂಚೂಣಿಗೆ ತರುತ್ತಿರುವ ಲೋಕದ ಅನುಭವವನ್ನು ಕಟ್ಟಿಕೊಡುವ ಆಲೋಚನೆ, ಅಭಿಪ್ರಾಯ ಆಚರಣೆಗಳನ್ನು ಪ್ರಸ್ತುತಪಡಿಸುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ಪಾತ್ರ ಮಹತ್ವವನ್ನು ತಿಳಿಸುವ ಆಶಯವನ್ನು ಈ ಸಂಶೋಧನ ಲೇಖನವು ಹೊಂದಿದೆ. ಆಳಿಸಿಕೊಳ್ಳುವ ವರ್ಗಗಳು ಯಾವುದೇ ಮಾತನಾಡದೇ ಇರುವುದರಿಂದ ಆಳುವ ವರ್ಗಗಳ ಮಾತುಗಳಿಗೆ ಪ್ರಭಾವಕ್ಕೆ ಒಳಗಾಗಿ ಇಂದಿನ ಪ್ರಭುತ್ವವು ನಲುಗುತ್ತಿರುವುದರಿಂದ, ರಾಷ್ಟ್ರೀಯತೆಯ ಪರಿಕಲ್ಪನೇ ಬದಲಾಗಿದೆ. ಇದರಿಂದ ಮತ್ತೊಮ್ಮೆ ಪಾಶ್ಚಾತ್ಯರು ಜಗತ್ತನ್ನು ಆಳಬಲ್ಲವು ಎಂಬುದು ಆಘಾತಕಾರಿ ಸಂಗತಿಯಾಗಿದೆ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಣಿಕ ಅಸ್ತ್ರದ ಮೂಲಕ ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗೆ ನೈಜತೆ ತುಂಬುವ ಮೂಲಕ ಜೀವಂತಿಕೆಯನ್ನು ಕಾಪಾಡಬೇಕಾದ ಪ್ರಸ್ತುತತೆಯನ್ನು ಈ ಲೇಖನವು ತಿಳಿಸುವುದು.