ಶ್ರೀ ತುಳಸಿ ದಯೆ ತೋರಮ್ಮ ಅಮ್ಮ!ಅರಿಶಿನ ಕುಂಕುಮ ಸೌಭಾಗ್ಯ ನೀಡಿ॥ಚಿರಕಾಲ ಕಾಪಾಡಮ್ಮ ಅಮ್ಮ!ಶ್ರೀ ತುಳಸಿ ದಯೆ ತೋರಮ್ಮ॥ಜನಿಸಿದ ಮನೆಯ ಶಾಂತಿಯ ಉಳಿಸಿ।ವರಿಸಿದ ಮನೆಯ ಮನೆತನ ಬೆಳೆಸಿ॥ತುಂಬಿದ ಸಂಸಾರದಿ ಸಂತಸ ನೆಲೆಸಿ।ಎಂದೆಂದೂ ಇರಲು ಹರಸಮ್ಮ ತುಳಸಿ॥ಮುಂದಿನ ಬಾಳಿನ ದಾರಿಯ ತೋರಿಸಿ।ಮಕ್ಕಳ ಅರಿವಿನ ದೀಪವ ಬೆಳಗಿಸಿ॥ಒಳ್ಳೆಯ ತಂದೆ ತಾಯಿಯೆನಿಸಿ।ಎಂದೆಂದೂ ಇರಲು ಹರಸಮ್ಮ ತುಳಸಿ॥ ಕಸ್ತೂರಿಶಂಕರ ಕೆ.ಎಸ್.ಎಲ್.ಸ್ವಾಮಿ ವಿರಚಿತ ಹಾಡಿದ ಜನಪ್ರಿಯ ತುಳಸಿ ಚಲನ ಚಿತ್ರದ ಗೀತೆಯಿದು. ಭಾರತೀಯರ ಮನೆ, ಮನಗಳ ಜನಮಾನಸದಲ್ಲಿ ಅಲಂಕರಿಸಿದ ಸಸ್ಯವೆಂದರೆ ತುಲಸಿ. ಅಪೂರ್ವವಾದದ್ದು, ದೇವತಾ ಸಮಾನ, ತುಲನೆಗೆ ಅತೀತವಾದದ್ದು. ಇದನ್ನು ಔಷಧೀಯ ಗುಣಗಳಲ್ಲಿ, ಶ್ರೇಷ್ಠತೆಯಲ್ಲಿ ಅನ್ಯ ಸಸ್ಯಗಳ ಜೊತೆ ತುಲನೆ ಮಾಡಲು ಅಸಾಧ್ಯದುದು. ಯಾವುದು ತನು, ಮನಗಳನ್ನು ಪರಿಶುದ್ಧಗೊಳಿಸುವದೋ ಅದುವೆ ಪವಿತ್ರವೂ, ಪಾವನವೂ, ಪುಣ್ಯವು. ಪ್ರಕೃತಿಯಲ್ಲಿ ಸರ್ವ ಶೇಷ್ಠ ವನಸ್ಪತಿಯಾಗಿ ವಿರಾಜಿಸುತ್ತಿರುವ ಸಸ್ಯವೇ ಶ್ರೀತುಳಸಿ. ಪ್ರತಿ ಹಿಂದೂ ಮನೆಯಂಗಳದ ವೃಂದಾವನ, ಮನೆ ಮಂದಿಯನ್ನೆಲ್ಲಾ ಕಾಪಾಡುವ ಭದ್ರತಾ ಕಾವಲುಗಾರ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗಿಡಮೂಲಿಕೆಗಳಿಗೆ ದೈವಿಕ ಸ್ಥಾನವಿದೆ. ಅಂಥಹ ಪವಿತ್ರ ಸಸ್ಯಗಳಲ್ಲಿ 'ಮೂಲಿಕೆಗಳ ರಾಣಿ' ಎಂದೇ ಪ್ರಸಿದ್ಧವಾದ ತುಳಸಿಗಿಡಕ್ಕೆ ಅಗ್ರಸ್ಥಾನ. ಪ್ರತಿಯೊಬ್ಬ ಭಾರತೀಯನ ಮನೆ ಅಂಗಳದಲ್ಲೂ ಶ್ರದ್ಧೆ, ಭಕ್ತಿಯ ಸಂಕೇತವಾಗಿ ಶೋಭಿಸುವ ತುಳಸಿ ಕೇವಲ ಪೂಜನೀಯ ಸಸ್ಯವಲ್ಲ: ಅದು ಮನೆ, ಮನಗಳಿಗೆ ಮಂಗಳ ತರುವ ಜೈವಿಕ ಶಕ್ತಿಯಾಗಿದೆ. ಅಂಗಳದ ಮೂಲೆಗೆ ಆಕರ್ಷಕ ರಂಗು ತುಂಬುವ ಮುಂಜಾನೆಯ ತಂಪಾದ ಗಾಳಿಗೆ ಸುಗಂಧ ಸೂಸುವ ಪ್ರಕೃತಿಯ ಅಪೂರ್ವ ಕೊಡುಗೆಯೇ ತುಳಸಿ, ಶತಶತಮಾನಗಳಿಂದಲೂ ಆಯುರ್ವೇದದ ಸಂಜೀವಿನಿಯಾಗಿ, ಪ್ರತಿ ಭಾರತೀಯ ಮನೆಯ ಉಚಿತ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿರುವ ತುಳಸಿ, ಪವಿತ್ರತೆ ಮತ್ತು ಆರೋಗ್ಯದ ದಿವ್ಯ ಸಮ್ಮಿಲನವಾಗಿದೆ. ತುಲಸಿಕಾನನಂ ಯತ್ರ ಯತ್ರ ಪದ್ಮವನಾನಿಚ। ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋಹರಿ:॥ ಯಾವ ಸ್ಥಳದಲ್ಲಿ ತುಳಸಿ ವೃಕ್ಷದ ವನವು ಹಬ್ಬಿದೆಯೋ ಅಂತಹ ಸ್ಥಳವು ಶ್ರೀ ಹರಿಯು ನೆಲೆಸುವ ಕ್ಷೇತ್ರ ಎಂಬುದು ನಮ್ಮ ನಂಬಿಕೆ. ತುಳಸಿಯ ಜನ್ಮ ಕುರಿತು ಪೌರಾಣಿಕ ಕಥೆಯೊಂದನ್ನು ನೋಡೊಣ. ರಾಜ ಧರ್ಮಧ್ವಜ ಆತನ ಪತ್ನಿ ಮಾಧವಿ ದೇವಿಗೆ ಪದ್ಮನಿ ಎಂಬ ಹೆಸರಿನ ಸುಂದರಿಯಾದ ಮಗಳಿದ್ದಳು. ಅವಳ ರೂಪರಾಶಿಯನ್ನು ಕಂಡು ಪ್ರಜಾಕೋಟಿಯು ಅವಳನ್ನು ತುಳಸಿ ಎಂಬ ಹೆಸರಿನಿಂದ ಕರೆಯುತ್ತಲಿತ್ತು. ತುಲಸಿ ಬೆಳೆದು ದೊಡ್ಡವಳಾದಂತೆಲ್ಲ ಶ್ರೀ ಹರಿಯು ಅವಳ ಮನವನ್ನು ಅವರಿಸಿದನು. ಶ್ರೀ ವಿಷ್ಣುವೇ ತನಗೆ ಪತಿಯಾಗಬೇಕೆಂಬ ಬಯಕೆಯಿಂದ ಅವಳು ಬಹು ಧೀರ್ಘ ತಪವನ್ನು ಆಚರಿಸಿದಳು. ಒಂದು ದಿನ ಶ್ರೀ ಹರಿಯು ಅವಳನ್ನು ಗೋವುಗಳ ಲೋಕಕ್ಕೆ ಕರೆದುಕೊಂಡು ಹೋದನು. ಈ ಘಟನೆ ಹೇಗೋ ಶ್ರೀಲಕ್ಷ್ಮಿಗೆ ತಲುಪಿತು. ಅವಳಲ್ಲಿ ಸವತಿ ಮತ್ಸರ ಪ್ರಕಟವಾಗತೊಡಗಿತು. ಇದನ್ನು ತಿಳಿದ ತುಳಸಿ ಹರಿಯ ನೆನೆದು ಸಸ್ಯ ರೂಪ ಪಡೆದು ವೃಂದಾವನದಲ್ಲಿ ಬೆಳೆಯತೊಡಗಿದಳು. ಅದಕ್ಕೆ ತುಳಸಿಯನ್ನು ವೃಂದಾ, ವೃಂದಾವನೀ, ವಿಶ್ವ ಪೂಜಿತಾ, ವಿಶ್ವ ಪಾವನಿ, ತುಳಸಿ, ಕೃಷ್ಣ ಜೀವನಿ ಎಂಬೆಲ್ಲ ಹೆಸರಿನಿಂದ ಕರೆಯಲಾರಂಭಿಸಿದರು. ಭಾರತೀಯ ಸಂಸ್ಕೃತಿಯಲ್ಲಿನ ಎಲ್ಲ ಧಾರ್ಮಿಕ ಆಚರಣೆಯಲ್ಲಿ ತುಳಸಿ ಪತ್ರೆಯು ಪ್ರಮುಖ ಸ್ಥಾನ ಪಡೆಯಿತು. ತುಲಸಿ ಕಾನನಂ ಚೈವ ಗೃಹೇಯಸ್ಯಾವತಿಷ್ಟತಿ ತದ್ ಗೃಹಂ। ತೀರ್ಥಭೂತಂಹಿ ನಾಯಾಂತಿ ಯಮಕಿಂಕರ:॥ ಯಾರ ಮನೆಯಲ್ಲಿ ತುಳಸಿಯ ವನ ಇದೆಯೋ ಅಂತ ಮನೆಗಳು ತೀರ್ಥ ಕ್ಷೇತ್ರಗಳಿಗೆ ಸಮಾನವಾದವು. ಅಂಥ ಮನೆಗಳಗೆ ಯಮ ಕಿಂಕರರು ಬರುವುದಕ್ಕೆ ಭಯ ಪಡುತ್ತಾರೆ ಎಂಬುದು ಹಿಂದುಗಳ ನಂಬಿಕೆ. ಆ ಹಿನ್ನೆಲೆಯಲ್ಲಿ ಪ್ರತಿ ಹಿಂದುವಿನ ಮನೆಯ ಅಂಗಳದಲ್ಲಿ ತುಳಸಿಯ ಆರಾಧನೆ ನಡೆಯುತ್ತದೆ. ಹಿಂದೂಗಳಲ್ಲಿ ನಡೆಯುವ ಸಸ್ಯ ಜೀವನದ ಈ ವಿವಾಹ ಪದ್ದತಿಗೆ ಕುಲ, ಗೋತ್ರ, ಜಾತಿ, ಮತ, ಪಂಥ, ಪಂಗಡ ಎಂಬ ಭೇದ ಭಾವವಿಲ್ಲದೇ, ಒಂದೇ ದಿನ ಒಂದೇ ಕಾಲದಲ್ಲಿ ಅಂದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಗೋಧೂಳಿಯ ಲಗ್ನದಲ್ಲಿ ವೃಂದಾವನಿಯಾದ ತುಳಸಿಯನ್ನು ಶ್ರೀಕೃಷ್ಣ ದಾಮೋದರನೊಂದಿಗೆ ವೈಭವದಿಂದ ವಿವಾಹ ಮಾಡುವ ಸಂಪ್ರದಾಯವಿದೆ. ಆಚಾರ ಏನೇ ಇರಲಿ ಪ್ರತಿ ಕುಟುಂಬದ ಜನರು ತುಲಸಿಯನ್ನು ಆರೋಗ್ಯದ ದೇವತೆಯಂತೆ ಶ್ರದ್ಧಾ ಭಕ್ತಿಯಿಂದ ಕಾರ್ತಿಕಮಾಸ ಪೂರ್ಣ ಪೂಜಿಸುವರು. ಬೇರೆ ಬೇರೆ ಮಾಸಗಳಲ್ಲಿ ಆಚರಿಸುವ ಸಿದ್ದಿವಿನಾಯಕ ವ್ರತ, ಶಿವಪೂಜಾ, ಮಹಾವಿಷ್ಣು ಪೂಜಾ, ದುರ್ಗಾ ಪೂಜಾ, ಲಕ್ಷ್ಮೀಪೂಜಾ, ಶನಿಕಥಾ ವ್ರತ, ನೀರಶನಾರ್ಕವಾರವ್ರತ, ಹರಿತಾಳಕಗೌರಿ ವ್ರತ, ಶನಿ ಪ್ರದೋಷ ವ್ರತ, ಋಷಿಪಂಚಮಿ ವ್ರತ, ಉಮಾಮಹೇಶ್ವರ ವ್ರತ, ಅನಂತ ಪದ್ಮನಾಭ ವ್ರತ, ಸತ್ಯನಾರಾಯಣ ವ್ರತ, ಸ್ವರ್ಣಗೌರಿ ವ್ರತ, ನಿತ್ಯ ಸೋಮವಾರ ವ್ರತ, ಮಾರ್ಗಶೀರ್ಷ ಮಹಾಲಕ್ಷ್ಮೀ ವ್ರತ, ವರಮಹಾಲಕ್ಷ್ಮೀ ವ್ರತ, ಸಂಕಷ್ಟ ಚತುರ್ಥಿ, ಧನ್ವಂತರಿ ಪೂಜಾ, ನಾಗಪಂಚಮಿ ವ್ರತ, ಸೋಮವತಿ ವ್ರತಗಳಲ್ಲಿನ ಪತ್ರ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸುವ ಪರಂಪರೆ ಶತಮಾನದಿಂದಲೂ ರೂಢಿಯಲ್ಲಿದೆ. ಕೊಟ್ಟ ಹಣ ವಾಪಸ್ಸು ಬರದೇ ಹೋದಾಗ ಅದನ್ನು ತುಳಸಿ ನೀರು ಬಿಟ್ಟಂತೆ ಎಂಬ ಮಾತಿದೆ. ಯಾವುದೇ ದಾನ ಕೊಡುವಾಗ ತುಳಸಿ ಹಿಡಿದು ನೀರು ಬಿಟ್ಟು ಕೊಡುವದು ಒಂದು ರಿವಾಜು. ಪಂಜಾಬಿನಲ್ಲಿ ಸಂತತಿ ಹೀನರಾದವರು ತುಳಸಿಯೊಂದಿಗೆ ಬ್ರಾಹ್ಮಣರನ್ನು ಕೂಡಿಸಿ ವಿವಾಹ ಮಾಡುತ್ತಾರೆ. ನಂತರ ಅಳಿಯನೆಂದು ಸ್ವೀಕರಿಸುವ ಪದ್ಧತಿಯಿದೆ. ಗ್ರೀಸ್ ದೇಶದಲ್ಲಿ ತುಳಸಿಯ ಕುಡಿಯನ್ನು ತಂದು ಮನೆಯಂಗಳದಲ್ಲಿ ಕಟ್ಟಿ ತುಳಸಿಯನ್ನು ಗುಣಗಾನ ಮಾಡುತ್ತಾ ಸೆಂನ್ಸವೆಲಿಸ್ಟೇ ಎಂಬ ಹೆಸರಿನಿಂದ ಉತ್ಸವವನ್ನು ನಡೆಸುತ್ತಾರೆ. ಹಿಂದೂಗಳು ಸ್ಮಶಾನದಲ್ಲಿ ದಹನ ಕ್ರಿಯೆಯಲ್ಲೂ ಧರ್ಮಕಾಷ್ಠ ಎಂದು ಅರ್ಪಿಸಿ ನಂತರ ತುಳಸಿಯನ್ನು ನೆಡುವುದು ಒಂದು ಕ್ರಿಯೆಯಾಗಿದೆ. ಮಹಾ ಭಾರತದಲ್ಲಿ ತುಲಾಭಾರ ಎಂಬ ಕಥೆಯು ತುಲಸಿಯ ಮಹಾತೆಯನ್ನು ಸಾರುವುದು. ಲ್ಯಾಮಿಯೇಸಿ ಸಸ್ಯ ಕುಟುಂಬದ ಸದಸ್ಯೆಯಾಗಿರುವ ತುಳಸಿಯ ವೈಜ್ಞಾನಿಕ ಹೆಸರು ಆಸಿಮಂ ಸ್ಯಾಂಕ್ಟಮ್. ಮಂಜರಿ, ಸುರಸಾ, ದೇವದುಂದುಭಿ, ಭೂತಪ್ರಿಯ, ಸ್ಥಾದುಗಂಧಾ ಎಂದು ಸಂಸ್ಕೃತದ ನಾಮಧೇಯ. ಇಂಗ್ಲಿಷ್ನಲ್ಲಿ ಹೋಲಿಬಾಸಿಲ್, ಕನ್ನಡದಲ್ಲಿ ಶ್ರೀತುಳಸಿ, ದೇವ ತುಳಸಿಯೆಂದು ಕರೆಯುವರು. ತುಳಸಿಯಲ್ಲಿ ಕೃಷ್ಣ ತುಳಸಿ, ರಾಮ ತುಳಸಿ, ಕಾಮ ಕಸ್ತೂರಿ, ನಿಂಬೆ ತುಳಸಿ, ಮಿಂಟ್ ತುಳಸಿ, ಕರ್ಪೂರ ತುಳಸಿ, ಲವಂಗ ತುಳಸಿ, ಸ್ಮಶಾನ ತುಳಸಿ, ಎಂಬ ಪ್ರಭೇದಗಳಿವೆ. ಕ್ಷಯ ರೋಗ, ಚರ್ಮರೋಗ, ಅಜೀರ್ಣ, ನೆಗಡಿ, ಕಫ, ಜ್ವರ, ಶೀತ ಪರಿಹಾರ, ಉರಿಮೂತ್ರ, ಮೂತ್ರ ಕಟ್ಟುವಿಕೆ, ಕಿವಿನೋವು, ಸ್ವರ ಭಂಗದಲ್ಲಿ ಬೀಜ, ಬೇರು, ಹೂವು ಎಲೆಯ ರಸದಿಂದ ಔಷಧ ತಯಾರಿಸುವುದು ಪಾರಂಪರಿಕ ವೈದ್ಯ ಪದ್ದತಿಯಲ್ಲಿದೆ. ನಿತ್ಯವೂ ಸಾಲಿಗ್ರಾಮಕ್ಕೆ ತುಳಸಿಯಿಟ್ಟು ಅಭಿಷೇಕ ಮಾಡಿದ ಜಲವನ್ನು ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾ ತೀರ್ಥ ಸೇವನೆ ಮಾಡುವುದು ಸನಾತನ ಸಂಸ್ಕೃತಿಯ ಒಂದು ಭಾಗವಾಗಿದೆ. 'ಒಂದು ದಳ ಶ್ರೀ ತುಳಸಿ, ಬಂದು ಗಂಗೋದಕವೂ, ಇಂದಿರಾ ರಮಣನಿಗರ್ಪಿತವೆನಲು ಒಂದೇ ಮನಸಿನಿಂದ ಸಿಂಧೂ ಶಯನ ತಾನು ಎಂದಿಗೂ ವಾಸಿಪ ಹೃನ್ ಮಂದಿರದೊಳಗೆ' ಎಂದು ಕನ್ನಡ ನಾಡಿನ ಹರಿದಾಸ ಪಂಥದವರು ಹಾಡಿ ಹೊಗಳಿದ್ದಾರೆ. ಪದ್ದ ಪುರಾಣದಲ್ಲಿ ಎರಡು ಅಧ್ಯಾಯಗಳು ತುಳಸಿ ಸಸ್ಯದ ಮಹತ್ವ ತಿಳಿಸುತ್ತವೆ. ಶತಾನಂದ ಉವಾಚ- ನಾಮೋಚ್ಚಾರೇಕೃತೇತಸ್ಯಾ: ಪ್ರೀಣಾತ್ಯಸುರದರ್ಪಹಾ। ಪಾಪಾನಿ ನಿಲಯಂ ಯಾಂತಿ ಪುಣ್ಯಂ ಭವತಿ ಚಾಕ್ಷಯಮ್|| ತುಳಸಿಯ ನಾಮವನ್ನು ಹೇಳಿದರೇನೆ ವಿಷ್ಣುವು ಸಂತೋಷಗೊಳ್ಳುತ್ತಾನೆ. ಪಾಪಗಳೆಲ್ಲವೂ ಹೋಗುತ್ತವೆ. ಅಕ್ಷಯವಾದ ಪುಣ್ಯವು ಲಭಿಸುತ್ತದೆ. ತುಲಸಿಪತ್ರಗಲಿತಂ ಯಸ್ತೋಯಂ ಶಿರಸಾ ವಹೇತ್! ಗಂಗಾಸ್ನಾನಮವಾಷ್ಟೋತಿ ದಶಧೇನುಫಲಪ್ರದಮ್ || ತುಳಸಿಯ ದಳದಿಂದ ಬಿದ್ದ ನೀರನ್ನು ತಲೆಯಮೇಲೆ ಹಾಕಿಕೊಂಡರೆ ಗಂಗಾ ಸ್ನಾನ ಮಾಡಿದ ಪುಣ್ಯವು ಬರುತ್ತದೆ ಮತ್ತು ಹತ್ತು ಗೋದಾನದ ಫಲವೂ ಲಭಿಸುವದು. ತತ್ರ ಕೇಶವ ಸಾನ್ನಿಧ್ಯಂ ಯತ್ರಾಸ್ತಿ ತುಳಸಿ ವನಮ್| ತತ್ರ ಬ್ರಹ್ಮಾ ಚ ಕಮಲಾ ಸರ್ವದೇವ ಗಣೇಸ್ಸಹ|| ತುಳಸಿಯ ವನವಿರುವಲ್ಲಿ ವಿಷ್ಣುವು ಬ್ರಹ್ಮನು ಲಕ್ಷ್ಮಿಯು, ಎಲ್ಲಾ ದೇವತೆಗಳು ನೆಲೆಸುತ್ತಾರೆ. ನಾರಾಯಣ ವನ, ಪುರಂದರ ವನ, ಶಿವಪಂಚಾಯತನ ವನ, ಸರ್ವೌಷಧವನ, ಅಂಬಿಕಾ ವನ, ಸಪ್ತರ್ಷಿ ವನ ಮೊದಲಾದ ಪವಿತ್ರ ವನ ನಿರ್ಮಾಣದಲ್ಲೂ ತುಳಸಿಯನ್ನು ವೃಕ್ಷಾರೋಪಣ ಮಾಡಬೇಕೆಂದು ವನ್ಯಶಾಸ್ತ್ರ ಸಂಹಿತಾದಲ್ಲಿ ಉಲ್ಲೇಖವಿದೆ. ಮುತ್ತು, ರತ್ನ, ವಜ್ರ ವೈಡೂರ್ಯಗಳ ನೂರಾರು ಮಾಲೆಗಳನ್ನು ಅಲಂಕರಿಸಿ ತುಲಸಿಯ ಮಾಲೆಯೊಂದಿಲ್ಲದಿದ್ದರೆ ಶ್ರೀ ಹರಿಯು ಆ ಪೂಜೆಯನ್ನು ಸ್ವೀಕರಿಸಲಾರ. ಭಾರತೀಯರ ನಿತ್ಯ ಜೀವನದಲ್ಲಿ ಈ ತುಳಸಿ ವೃಕ್ಷವು ಸತತವಾಗಿ ದೇವ ಪ್ರಜ್ಞೆ, ಧರ್ಮ ಪ್ರಜ್ಞೆ, ಸುಖ, ಶಾಂತಿ, ಕಾಂತಿಗಳನ್ನೀಯುವ ಮಹಾ ಸಂಜೀವಿನಿ ಎಂದು ಹೇಳಬಹುದು. ತುಳಸಿಯ ವನವಿರುವಲ್ಲಿ ವಿಷ್ಣುವು ಬ್ರಹ್ಮನು ಲಕ್ಷ್ಮಿಯು, ಎಲ್ಲಾ ದೇವತೆಗಳು ನೆಲೆಸುತ್ತಾರೆ. ನಾರಾಯಣ ವನ, ಪುರಂದರ ವನ, ಶಿವಪಂಚಾಯತನ ವನ, ಸರ್ವೌಷಧವನ, ಅಂಬಿಕಾ ವನ, ಸಪ್ತರ್ಷಿ ಅವನ ಮೊದಲಾದ ಪವಿತ್ರ ವನ ನಿರ್ಮಾಣದಲ್ಲೂ ತುಳಸಿಯನ್ನು ವೃಕ್ಷಾರೋಪಣ ಮಾಡಬೇಕೆಂದು ವನ್ಯಶಾಸ್ತ್ರ ಸಂಹಿತಾದಲ್ಲಿ ಉಲ್ಲೇಖವಿದೆ. ಮುತ್ತು, ರತ್ನ, ವಜ್ರ ವೈಡೂರ್ಯಗಳ ನೂರಾರು ಮಾಲೆಗಳನ್ನು ಅಲಂಕರಿಸಿ ತುಲಸಿಯ ಮಾಲೆಯೊಂದಿಲ್ಲದಿದ್ದರೆ ಶ್ರೀ ಹರಿಯು ಆ ಪೂಜೆಯನ್ನು ಸ್ವೀಕರಿಸಲಾರ. ಭಾರತೀಯರ ನಿತ್ಯ ಜೀವನದಲ್ಲಿ ಈ ತುಳಸಿ ವೃಕ್ಷವು ಸತತವಾಗಿ ದೇವ ಪ್ರಜ್ಞೆ, ಧರ್ಮ ಪ್ರಜ್ಞೆ, ಸುಖ, ಶಾಂತಿ, ಕಾಂತಿಗಳನ್ನೀಯುವ ಮಹಾ ಸಂಜೀವಿನಿ ಎಂದು ಹೇಳಬಹುದು. ತುಳಸಿ ಗಿಡವು ಕೇವಲ ಹಿಂದು ಧರ್ಮದಲ್ಲಿ -ಪೂಜಿಸಲ್ಪಡುವ ಒಂದು ಸಸ್ಯ ಮಾತ್ರವಲ್ಲ. 'ಅದೊಂದು ಜೀವ ಸಂಜೀವಿನಿಯಾಗಿದೆ. ನಮ್ಮ ಸಂಪ್ರದಾಯ ಮತ್ತು ವಿಜ್ಞಾನ ಎರಡೂ ತುಳಸಿಯ ಮಹತ್ವವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತವೆ. ಪ್ರತಿ ದಿನ ತುಳಸಿಯನ್ನು ಪೂಜಿಸುವದರಿಂದ ಮನೆಯಲ್ಲಿ ಸಕಾರತ್ಮಕ ಶಕ್ತಿ ಹಾಗೂ ನೆಮ್ಮದಿ ನೆಲೆಸುತ್ತದೆ. ಜೊತೆಗೆ ಇದರ ಸೇವನೆಯು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅನೇಕ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತದೆ. ಇಂದಿನ ಧಾವಂತದ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು - ಪ್ರಕೃತಿಯು ನಮಗೆ ನೀಡಿರುವ ಅಮೂಲ್ಯ ಕೊಡುಗೆಯೇ ಈ ತುಳಸಿ. ತುಳಸಿಯಲ್ಲಿ ಅನೇಕ ಪ್ರಭೇದಗಳಿವೆ ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ. ಭಾರತೀಯರಾದ ನಾವು ನಮ್ಮ ಮನೆಯಂಗಳದಲಿ ಬೆಳೆಸುವುದು, ಪೋಷಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ - ಮುಂದುವರಿಯುವುದು