ಅಕ್ನೆ ವಲ್ಗಾರೀಸ್ ಅಥವಾ ಮೊಡವೆ ಸಹ ಚರ್ಮದ ದೋಷ ಲಕ್ಷಣಗಳು ಹದಿಹರೆಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಬೊಕ್ಕೆಗಳ ಸಂಖ್ಯೆ ಕಡಿಮೆಯಾದರೂ ೪೦ ವರ್ಷದವರೆಗೂ ಮೊಡವೆ ಕಾಣಿಸಿಕೊಳ್ಳಬಹುದು. ಚರ್ಮ ಉಬ್ಬಿದ್ದು ಕೆಂಪಗಾಗಿರುತ್ತದೆ. ಕೀವು ತುಂಬಿರುತ್ತದೆ. ಹೆಚ್ಚಾಗಿ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ. ಬೆನ್ನು ಹಾಗೂ ಎದೆಯ ಮೇಲೂ ಮೊಡವೆ ಏಳುತ್ತದೆ. ಕ್ರಮೇಣ ಚರ್ಮದ ಮೇಲೆ ಕಲೆ ಉಂಟಾಗಬಹುದು. ನೋವು, ಎಳೆತ ಹಾಗೂ ತುರಿಸುವಿಕೆ ಕಾಣಿಸಿಕೊಳ್ಳಬಹುದು. ಹೆಣ್ಣು ಮಕ್ಕಳಲ್ಲಿ ಋತುಸ್ರಾವಕ್ಕೆ ಮುನ್ನ ಸಮಸ್ಯೆ ಹೆಚ್ಚಬಹುದು. ಕಾರಣಗಳು ಮೊಡವೆಗೆ ನಿಜವಾದ ಕಾರಣ ಪತ್ತೆ ಹಚ್ಚಲು ಸಾಧ್ಯವಿಲ್ಲ. ಆಂಡ್ರೊಜನ್ ಹಾರ್ಮೋನ್ನಿಂದಾಗಿ ಕೆಲವರಲ್ಲಿ ಮೊಡವೆ ಏಳುತ್ತದೆ. ಕೆರಾಟಿನ್ ಎಂಬ ಪ್ರೋಟಿನ್ ರೋಮದ್ವಾರಗಳನ್ನು ಒತ್ತುವುದರಿಂದ ವೈಟ್ಹೆಡ್ ಹಾಗೂ ಬ್ಲಾಕ್ ಹೆಡ್ಗಳು ಕಾಣಿಸಿಕೊಳ್ಳುತ್ತವೆ. ಒತ್ತರಿಸಿದ ಭಾಗದಲ್ಲಿರುವ ಗ್ರಂಥಿಗಳು ಜಿಗುಟಾದ ದ್ರವ್ಯ ಸ್ರವಿಸುತ್ತವೆ. ಈ ದ್ರವ್ಯ ಹಾಗೂ ಚರ್ಮದ ಕೋಶಗಳು ಒಟ್ಟಾಗಿ ಇರಲಾರದೇ ಸತ್ತುಹೋಗುತ್ತವೆ. ಈ ಸತ್ತ ಕಣಗಳು ರೋಮದ್ರವ್ಯದ ಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತವೆ. ಆ ಭಾಗ ಉಬ್ಬುತ್ತದೆ. ಉಬ್ಬುವಿಕೆ ಹೆಚ್ಚಾದಲ್ಲಿ ಒಡೆದು ಚರ್ಮದ ಬ್ಯಾಕ್ಟೀರಿಯಾಗಳು ಸೋಂಕು ಉಂಟು ಮಾಡುತ್ತವೆ. ಅದೇ ಮೊಡವೆ. ಅದು ಮತ್ತಷ್ಟು ಹಿಗ್ಗಿ ಸಿಸ್ಟ್ ರಚನೆಯಾಗುತ್ತದೆ. ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಕ್ರೀಮ್ ಹಾಗೂ ಎಣ್ಣೆಗಳಿಂದಲೂ ಮೊಡವೆ ಏಳುತ್ತದೆ. ಕೆಲ ಔಷಧಗಳು ಮೊಡವೆಗೆ ಕಾರಣವಾಗುತ್ತವೆ. ಹೆಲ್ಮೆಟ್, ಮೊಬೈಲ್ ದೂರವಾಣಿ ಇತ್ಯಾದಿ ಪದೇಪದೇ ಮುಖದ ಚರ್ಮಕ್ಕೆ ಉಜ್ಜುತ್ತಿದ್ದಲ್ಲಿ ಮೊಡವೆ ಉಂಟಾಗಬಹುದು. ಸರಳ ಪರಿಹಾರಗಳು ಮೊಡವೆಗಳನ್ನು ಕೈಯಿಂದ ಮುಟ್ಟಿ, ಸೋಂಕುಂಟು ಮಾಡಬೇಡಿ. ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸೌಂದರ್ಯವರ್ಧಕಗಳನ್ನು ಹುಷಾರಾಗಿ ಬಳಸಿ ಕೆಲವೊಮ್ಮೆ ನಿರ್ದಿಷ್ಟ ಆಹಾರ ಪದಾರ್ಥಗಳು ಸಹ ಮೊಡವೆ ಹೆಚ್ಚಲು ಕಾರಣವಾಗುತ್ತವೆ ಮೂಲ:ಪೋರ್ಟಲ್ ತಂಡ