ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ

ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು, 2001

(ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ 1, 2008, ಭಾಗ - Iಗಿಎ, 338 ರಿಂದ 342ರ ವರೆಗಿನ ಪುಟಗಳಲ್ಲಿ ಪ್ರಕಟಿತವಾಗಿದೆ).

ಪ್ರಕರಣಗಳ ಅನುಕ್ರಮಣಿಕೆ

ನಿಯಮಗಳು:

1 ಹೆಸರು, ಪ್ರಾರಂಭ ಮತ್ತು ಅನ್ವಯ

2 ಪರಿಭಾಷೆಗಳು

3 ವಯಸ್ಸು

4 ಭರ್ತಿಯಾಗದ ಖಾಲಿ ಹುದ್ದೆಗಳನ್ನು ತುಂಬಲು ಖಾಲಿಹುದ್ದೆಗಳ ಬಿಡುಗಡೆ

5 ನೇಮಕಾತಿಯ ವಿಧಾನ

6 ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ

7 ಅಭ್ಯರ್ಥಿಗಳ ನೇಮಕ

8 ಇತರ ನಿಯಮಗಳ ಅನ್ವಯ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ ಡಿಪಿಎಆರ್ 13 ಎಸ್ಬಿಸಿ 2001, ಬೆಂಗಳೂರು, ದಿನಾಂಕ 21ನೇ ನವೆಂಬರ್, 2001

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ 3ನೇ

ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಿದಂತೆ, ಅಧಿಸೂಚನೆ ಸಂಖ್ಯೆ ಡಿಪಿಎಆರ್ 13

ಎಸ್ಬಿಸಿ 2001, ದಿನಾಂಕ 6ನೇ ಆಗಸ್ಟ್ 2001ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ

ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು,

2001ರ ಕರಡನ್ನು, ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ ಭಾಗ Iಗಿ-ಎ, ಸಂ. 1505 ದಿನಾಂಕ 6ನೇ ಆಗಸ್ಟ್

2001ರಲ್ಲಿ ಪ್ರಕಟಿಸಿ, ಸರ್ಕಾರಿ ರಾಜ್ಯಪತ್ರದಲ್ಲಿ ಅದನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಇದರಿಂದ

ಬಾಧಿತರಾಗಬಹುದಾದಂತಹ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ;

ಸದರಿ ರಾಜ್ಯಪತ್ರವನ್ನು 6ನೇ ಆಗಸ್ಟ್, 2001ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಗಣಿಸಿರುವುದರಿಂದ;

ಈಗ, ಆ ಕಾರಣದಿಂದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ

ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

ಹೆಸರು, ಪ್ರಾರಂಭ ಮತ್ತು ಅನ್ವಯ.-

(1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು, 2001 ಎಂದು ಕರೆಯತಕ್ಕದ್ದು.

(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.

(3) ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ

ಮೇರೆಗೆ ಮಾಡಲಾದ ಅಥವಾ ಮಾಡಲಾಗಿದೆಯೆಂದು ಭಾವಿಸಲಾದ ಯಾವುದೇ ಸೇವೆ ಅಥವಾ ಹುದ್ದೆ ಅಥವಾ ಇತರ

ಯಾವುದೇ ನಿಯಮಗಳ ಸಂಬಂಧದಲ್ಲಿ ವಿಶೇಷವಾಗಿ ಮಾಡಲಾದ ನೇಮಕಾತಿ ನಿಯಮಗಳಲ್ಲಿ ತದ್ವಿರುದ್ಧವಾದುದು ಏನೇ

ಒಳಗೊಂಡಿದ್ದರೂ, ಈ ನಿಯಮಗಳ ಉಪಬಂಧಗಳು, ಈ ನಿಯಮಗಳು ಪ್ರಾರಂಭವಾದ ದಿನಾಂಕದಂದು ಅಸ್ತಿತ್ವದಲ್ಲಿರುವ

ಭರ್ತಿ ಮಾಡದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಅನ್ವಯವಾಗತಕ್ಕದ್ದು.

ಪರಿಭಾಷೆಗಳು.-

(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) "ನೇಮಕಾತಿ ಪ್ರಾಧಿಕಾರ" ಎಂದರೆ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು

ಅಪೀಲು) ನಿಯಮಗಳು, 1957ರ ಅನುಸೂಚಿ-II ಮತ್ತು IIIರ 7ನೇ ನಿಯಮದಲ್ಲಿ ಅಥವಾ ಅಂಕಣ

2 ರಲ್ಲಿ ನಿರ್ದಿಷ್ಟಪಡಿಸಿದಂಥ ನೇಮಕಾತಿ ಪ್ರಾಧಿಕಾರಗಳು ಹಾಗೂ ಹಾಗೆ ಅದನ್ನು ನಿರ್ದಿಷ್ಟಪಡಿಸದಿದ್ದ

ಸಂದರ್ಭದಲ್ಲಿ, ಇಲಾಖಾ ಮುಖ್ಯಸ್ಥರು ಎಂದು ಅರ್ಥ;

(ಬಿ) "ಅರ್ಹತೆ" ಎಂದರೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ

ಅಧಿನಿಯಮ ಸಂಖ್ಯೆ 14)ರ ಮೇರೆಗೆ ಮಾಡಲಾದ ಅಥವಾ ಮಾಡಲಾಗಿದೆಯೆಂದು ಭಾವಿಸಲಾದ

ಸೇವೆ ಅಥವಾ ಹುದ್ದೆಗೆ ಸಂಬಂಧಿಸಿದಂತೆ ಅಥವಾ ಇತರ ಯಾವುವೇ ನಿಯಮಗಳಲ್ಲಿ ವಿಶೇಷವಾಗಿ

ಮಾಡಲಾದ ನೇಮಕಾತಿ ನಿಯಮಗಳಲ್ಲಿ ಗೊತ್ತುಪಡಿಸಲಾದ ಯಾವುದೇ ಸೇವೆ ಅಥವಾ ಹುದ್ದೆಯ

ನೇಮಕಾತಿಗೆ ಇರಬೇಕಾದ ಕನಿಷ್ಠ ಅರ್ಹತೆ ಎಂದು ಅರ್ಥ;

(ಸಿ) "ಆಯ್ಕೆ ಪ್ರಾಧಿಕಾರ" ಎಂದರೆ ಸಮೂಹ `ಎ' ಮತ್ತು ಸಮೂಹ 'ಬಿ' ಹುದ್ದೆಗಳಿಗೆ ಆಯ್ಕೆ ಮಾಡುವ

ಉದ್ದೇಶಕ್ಕಾಗಿ, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಸಮೂಹ `ಸಿ' ಹಾಗೂ ಸಮೂಹ `ಡಿ'

ಹುದ್ದೆಗಳಿಗೆ ಆಯ್ಕೆ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಎಂದು ಅರ್ಥ;

(ಡಿ) "ಭರ್ತಿ ಮಾಡದ ಖಾಲಿ ಹುದ್ದೆಗಳು" ಎಂದರೆ,-

(i) ಸರ್ಕಾರಿ ಆದೇಶ ಸಂ ಡಿಪಿಎಆರ್ 19 ಎಸ್ಬಿಸಿ 89 ದಿನಾಂಕ 12ನೇ ಜುಲೈ 1989ರಲ್ಲಿ

ಉದ್ದೇಶಿಸಲಾದಂತೆ, ಅದೇ ಸಂಖ್ಯೆಯನ್ನು ಹೊಂದಿರುವ ದಿನಾಂಕ 22ನೇ ಜುಲೈ 1989ರ

ತರುವಾಯದ ಸರ್ಕಾರಿ ಆದೇಶದೊಂದಿಗೆ ಓದಲಾದಂತೆ ಹಾಗೆ ಈ ನಿಯಮಗಳ ಪ್ರಾರಂಭದ

ದಿನಾಂಕದಂದು ಇದ್ದಂತೆ ನೇರ ನೇಮಕಾತಿಯಲ್ಲಿನ ಬ್ಯಾಕ್ಲಾಗ್;

(ii) ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 02 ಎಸ್ಎಲ್ಸಿ 90 ದಿನಾಂಕ 6ನೇ ಆಗಸ್ಟ್ 1990ಕ್ಕೆ

ಅನುಸಾರವಾಗಿ ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವಾಗ ಹಾಗೂ ಸರ್ಕಾರಿ

ಆದೇಶ ಸಂಖ್ಯೆ ಡಿಪಿಎಆರ್ 13 ಎಸ್ಎಲ್ಸಿ 94, ದಿನಾಂಕ 28ನೇ ಸೆಪ್ಟೆಂಬರ್ 1994ಕ್ಕೆ

ಅನುಸಾರವಾಗಿ ದಿನಗೂಲಿ ಡಿಪ್ಲೋಮೊ ಹಾಗೂ ಪದವೀಧರ ಇಂಜಿನಿಯರುಗಳನ್ನು

ಸಕ್ರಮಗೊಳಿಸುವಾಗ ನೇರ ನೇಮಕಾತಿಗೆ ಅನ್ವಯವಾಗಬಹುದಾದ ಮೀಸಲಾತಿ

ಆದೇಶಗಳಿಗನುಸಾರವಾಗಿ ಖಾಲಿ ಹುದ್ದೆಗಳ ವರ್ಗೀಕರಣಕ್ಕನುಸಾರವಾಗಿ ಈ ನಿಯಮಗಳ

ಪ್ರಾರಂಭದ ದಿನಾಂಕದಂದು ಅಸ್ತಿತ್ವದಲ್ಲಿರುವ ಸಂದರ್ಭಾನುಸಾರ ಪರಿಶಿಷ್ಟ ಜಾತಿಗಳು ಮತ್ತು

ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ಆ ಖಾಲಿಸ್ಥಾನಗಳಿಗೆ ಭರ್ತಿ ಮಾಡದಿರುವಷ್ಟರ

ಮಟ್ಟಿಗೆ ಖಾಲಿ ಹುದ್ದೆಗಳು; ಹಾಗೂ

(iii) ಯಾವ ಕೇಡರ್ನಲ್ಲಿ ಸಂವಿಧಾನದ 16ನೇ ಅನುಚ್ಛೇದದ (4)ನೇ ಖಂಡದಡಿಯಲ್ಲಿ ನೇರ

ನೇಮಕಾತಿಯಲ್ಲಿನ ಮೀಸಲಾತಿ ಆದೇಶವು ಸಂದರ್ಭಾನುಸಾರ ಪರಿಶಿಷ್ಟ ಜಾತಿಗಳಿಗೆ ಸೇರಿದ

ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಶೇಕಡಾ 15ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ

ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಶೇಕಡ 3 ರಷ್ಟು ತಲುಪುವುದಿಲ್ಲವೋ, ಆ ಯಾವುದೇ

ಕೇಡರಿನಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ

ಪ್ರಾತಿನಿಧ್ಯದ ಶೇಕಡಾವಾರು. ಮೇಲಿನ (i) ಮತ್ತು (ii)ನೇ ಖಂಡಗಳಲ್ಲಿ ನಮೂದಿಸಿದ ಭರ್ತಿ

ಮಾಡದ ಖಾಲಿ ಹುದ್ದೆಗಳನ್ನು ಗಣನೆಗೆ ತೆಗೆದುಕೊಂಡ ನಂತರವೂ, ಈ ನಿಯಮಗಳು

ಪ್ರಾರಂಭವಾದ ದಿನಾಂಕದಂದು ಇದ್ದಂತೆ ಭರ್ತಿ ಮಾಡದ ನೇರ ನೇಮಕಾತಿಯ ಖಾಲಿ

ಹುದ್ದೆಗಳ ಕೊರತೆ ಎಂದು ಅರ್ಥ ಮತ್ತು

- ಇವುಗಳನ್ನು ಒಳಗೊಳ್ಳುತ್ತವೆ.

(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸಿಲ್ಲದ ಇತರ ಪದಗಳು ಹಾಗೂ ಪದಾವಳಿಗಳು,

ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಅವುಗಳಿಗೆ ಕೊಟ್ಟಿರುವ ಅರ್ಥವನ್ನೇ

ಹೊಂದಿರತಕ್ಕದ್ದು.

ವಯಸ್ಸು.-

ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾ ಯಾವುದೇ

ಸೇವೆ ಅಥವಾ ಹುದ್ದೆಯ ನೇಮಕಾತಿಗೆ ವಿಶೇಷವಾಗಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ತದ್ವಿರುದ್ಧವಾದ ಏನನ್ನೇ

ಒಳಗೊಂಡಿದ್ದರೂ, ಈ ನಿಯಮಗಳ ಮೇರೆಗೆ ಯಾವುದೇ ಸೇವೆ ಅಥವಾ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳು

ಹದಿನೆಂಟು ವರ್ಷಗಳ ವಯಸ್ಸನ್ನು ತಲುಪಿರತಕ್ಕದ್ದು. ಆದರೆ ನಲವತ್ತು ವರ್ಷಗಳ ವಯಸ್ಸನ್ನು ತಲುಪಿರತಕ್ಕದ್ದಲ್ಲ.

ಭರ್ತಿಯಾಗದ ಖಾಲಿ ಹುದ್ದೆಗಳನ್ನು ತುಂಬಲು ಖಾಲಿಹುದ್ದೆಗಳ ಬಿಡುಗಡೆ.-

(1) ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು ಈ ನಿಯಮಗಳ ಮೇರೆಗೆ ನೇಮಕಾತಿ ಮಾಡಿಕೊಳ್ಳುವ ಉದ್ದೇಶಕ್ಕಾಗಿ 1

[XXX] ಆಯ್ಕೆ ಪ್ರಾಧಿಕಾರಕ್ಕೆ ಭರ್ತಿಯಾಗದ ಖಾಲಿಹುದ್ದೆಗಳನ್ನು ಬಿಡುಗಡೆ ಮಾಡತಕ್ಕದ್ದು.

1. ಅಧಿಸೂಚನೆ ಸಂ. ಡಿಪಿಎಆರ್ 13, ಎಸ್ಬಿಸಿ 2001, ದಿನಾಂಕ 01.06.2002ರ ಮೂಲಕ ಬಿಟ್ಟುಬಿಡಲಾಗಿದೆ.

(2) ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರಗಳು, (1)ನೇ ಉಪನಿಯಮದಲ್ಲಿ ಉಲ್ಲೇಖಿಸಲಾದಂತೆ ಆಯ್ಕೆ

ಪ್ರಾಧಿಕಾರವು ಬಿಡುಗಡೆಯಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಹಣಕಾಸು ಇಲಾಖೆಯ

ಸಹಮತಿಯನ್ನು ಪಡೆಯಲಾಗಿದೆಯೆಂದು ಪೂರ್ವಭಾವನೆ ಮಾಡತಕ್ಕದ್ದು.

ನೇಮಕಾತಿಯ ವಿಧಾನ.-

(1) ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977

ಅಥವಾ ಯಾವುದೇ ಸೇವೆಗೆ ಅಥವಾ ಹುದ್ದೆಯ ನೇಮಕಾತಿಗೆ ವಿಶೇಷವಾಗಿ ಮಾಡಲಾದ ನೇಮಕಾತಿ ನಿಯಮಗಳಲ್ಲಿ

ತದ್ವಿರುದ್ಧವಾದ ಏನನ್ನೇ ಒಳಗೊಂಡಿದ್ದರೂ, ಈ ನಿಯಮಗಳ ಮೇರೆಗೆ ಆಯ್ಕೆ ಪ್ರಾಧಿಕಾರವು ನೇಮಕಾತಿಯನ್ನು

ಮಾಡತಕ್ಕದ್ದು.

(2) ಆಯ್ಕೆ ಪ್ರಾಧಿಕಾರವು, 4ನೇ ನಿಯಮದಲ್ಲಿ ಉಲ್ಲೇಖಿಸಲಾದ ಹುದ್ದೆಗಳ ಪ್ರವರ್ಗಕ್ಕೆ ನೇಮಕಾತಿ ಮಾಡುವ

ಬಗ್ಗೆ ಸರ್ಕಾರಿ ರಾಜ್ಯಪತ್ರದಲ್ಲಿ ಹಾಗೂ ವ್ಯಾಪಕವಾಗಿ ಪ್ರಸಾರವಿರುವ ಒಂದಕ್ಕಿಂತ ಹೆಚ್ಚಿನ ಪ್ರಾದೇಶಿಕ ದಿನಪತ್ರಿಕೆಗಳಲ್ಲಿ

ಇವುಗಳಲ್ಲಿ ಕನಿಷ್ಠ ಪಕ್ಷ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸುವುದರ ಮೂಲಕ ಅರ್ಹತೆಯನ್ನು ಹೊಂದಿರುವ

ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವಂತೆ ಮಾಡತಕ್ಕದ್ದು.

ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ.-

(1) ಆಯ್ಕೆ ಪ್ರಾಧಿಕಾರವು, 5ನೇ ನಿಯಮದ ಮೇರೆಗೆ ಅರ್ಜಿಗಳನ್ನು

ಆಹ್ವಾನಿಸುವ ಪ್ರಕಟಣೆಗನುಸಾರವಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ 29 ವರ್ಷಗಳ ವಯಸ್ಸನ್ನು ತಲುಪಿರುವ

ಆದರೆ 40 ವರ್ಷಗಳ ವಯಸ್ಸನ್ನು ತಲುಪದಿರುವ ಅಭ್ಯರ್ಥಿಗಳ ಪೈಕಿ, ಅರ್ಹತಾ ಪರೀಕ್ಷೆಯಲ್ಲಿ ಅವರು ಪಡೆದ ಒಟ್ಟು

ಅಂಕಗಳ ಶೇಕಡಾ ಆಧಾರದ ಮೇಲೆ ಅರ್ಹತೆಯ ಅನುಕ್ರಮದಲ್ಲಿ ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ

ನೇಮಕಾತಿ) ನಿಯಮಗಳು, 1977ಕ್ಕೆ ಅನುಸಾರವಾಗಿ, ಮಹಿಳೆಯರ, ಮಾಜಿ ಸೈನಿಕರ, ದೈಹಿಕ ಅಂಗವಿಕಲರ ಮತ್ತು

ಯೋಜನಾ ಸ್ಥಳಾಂತರಿತ ವ್ಯಕ್ತಿಗಳ ಮತ್ತು ಕರ್ನಾಟಕ ನೇಮಕಾತಿಗಳು ಅಥವಾ ಹುದ್ದೆಗಳ (ಗ್ರಾಮೀಣ ಅಭ್ಯರ್ಥಿಗಳಿಗೆ

ರಾಜ್ಯದ ಸಿವಿಲ್ ಸೇವೆಗಳಲ್ಲಿ) ಮೀಸಲಾತಿ ಅಧಿನಿಯಮ, 2000ದ ಅನುಸಾರವಾಗಿ ಗ್ರಾಮೀಣ ಅಭ್ಯರ್ಥಿಗಳ

ಮೀಸಲಾತಿಯನ್ನು ಗಣನೆಗೆ ತೆಗೆದುಕೊಂಡು ಪ್ರತಿಯೊಂದು ಹುದ್ದೆಗಳ ಪ್ರವರ್ಗಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು

ತಯಾರಿಸತಕ್ಕದ್ದು. ಆದಾಗ್ಯೂ, 29 ವರ್ಷಗಳ ವಯಸ್ಸನ್ನು ತಲುಪಿರುವ ಆದರೆ 40 ವರ್ಷ ವಯಸ್ಸನ್ನು ತಲುಪದಿರುವ

ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿಲ್ಲದಿದ್ದರೆ, 18 ವರ್ಷಗಳ ವಯಸ್ಸನ್ನು ತಲುಪಿದ ಆದರೆ 29 ವರ್ಷಗಳ

ವಯಸ್ಸನ್ನು ತಲುಪದ ಅಭ್ಯರ್ಥಿಗಳನ್ನು ಸಹಾ ಅಂಥ ಸಾಕಷ್ಟಿಲ್ಲದಿರುವ ಸಂಖ್ಯೆಯಷ್ಟರಮಟ್ಟಿಗೆ ಮೇಲೆ ನಿರ್ದಿಷ್ಟಪಡಿಸಲಾದ

ಉಪಬಂಧಗಳಿಗೆ ಅನುಸಾರವಾಗಿ ಆಯ್ಕೆ ಪಟ್ಟಿಯಲ್ಲಿ ಸೇರಿಸತಕ್ಕದ್ದು:

ಪರಂತು, ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು, ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ಅಂಕಗಳ ಸಮಾನವಾಗಿ

ಶೇಕಡ ಅಂಕಗಳನ್ನು ಪಡೆದಿದ್ದರೆ, ಅಂಥ ಅಭ್ಯರ್ಥಿಗಳ ಸಂಬಂಧದಲ್ಲಿನ ಅರ್ಹತಾ ಕ್ರಮವನ್ನು ಅವರ ವಯಸ್ಸಿನ

ಆಧಾರದ ಮೇಲೆ ನಿಗದಿಪಡಿಸತಕ್ಕದ್ದು, ವಯಸ್ಸಿನಲ್ಲಿ ಹಿರಿಯನಾಗಿರುವವನನ್ನು ಅರ್ಹತಾ ಕ್ರಮದಲ್ಲಿ ಮೇಲೆ ಇಡತಕ್ಕದ್ದು.

ಅರ್ಹತಾ ಅಭ್ಯರ್ಥಿಗಳ ಅಂಥ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು, ಈ ನಿಯಮಗಳ ಮೇರೆಗೆ

ಅಧಿಸೂಚಿಸಲಾದ ಖಾಲಿ ಹುದ್ದೆಗಳ ಒಟ್ಟು ಸಂಖ್ಯೆಗೆ ಸಮನಾಗಿರತಕ್ಕದ್ದು.

(2) (1)ನೇ ಉಪನಿಯಮದ ಅನುಸಾರವಾಗಿ ತಯಾರಿಸಿದ ಪಟ್ಟಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸತಕ್ಕದ್ದು

ಮತ್ತು ಅದು, ಈ ನಿಯಮಗಳ ಮೇರೆಗೆ ಅಧಿಸೂಚಿಸಲಾದ ನೇಮಕಾತಿಗೆ ಸೂಕ್ತವಾದ ಎಲ್ಲಾ ಅಭ್ಯರ್ಥಿಗಳು

ನೇಮಕವಾಗುವವರೆಗೆ ಸಿಂಧುವಾಗಿರತಕ್ಕದ್ದು.

[(3) ಆಯ್ಕೆ ಪ್ರಾಧಿಕಾರವು, (1)ನೇ ಉಪ-ನಿಯಮದ ಉಪಬಂಧಗಳಿಗನುಸಾರವಾಗಿ ತಯಾರಿಸಿದ ಪಟ್ಟಿಯಲ್ಲಿ

ಸೇರಿಸಿರದ ಅಭ್ಯರ್ಥಿಗಳ ಹೆಸರುಗಳ ಹೆಚ್ಚುವರಿ ಪಟ್ಟಿಯನ್ನು ಸಹ (1)ನೇ ಉಪನಿಯಮದ ಉಪಬಂಧಗಳಿಗೆ

ಅನುಸಾರವಾಗಿ ತಯಾರಿಸತಕ್ಕದ್ದು, ಅದರಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು, ಅಧಿಸೂಚಿಸಿದ ಖಾಲಿ ಹುದ್ದೆಗಳ

ಸಂಖ್ಯೆಗೆ ಸಮನಾಗಿರತಕ್ಕದ್ದು.

(4) (3)ನೇ ಉಪನಿಯಮದ ಅನುಸಾರವಾಗಿ ತಯಾರಿಸಿದ ಪಟ್ಟಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ

ಪ್ರಕಟಿಸತಕ್ಕದ್ದು. ಯಾವ ಅಭ್ಯರ್ಥಿಗಳ ಹೆಸರುಗಳನ್ನು (3)ನೇ ಉಪನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ

ಸೇರಿಸಲಾಗಿದೆಯೋ ಆ ಅಭ್ಯರ್ಥಿಗಳನ್ನು, (1)ನೇ ಉಪನಿಯಮದ ಮೇರೆಗೆ ಯಾವ ಅಭ್ಯರ್ಥಿಗಳ ಹೆಸರುಗಳನ್ನು

ಸಿದ್ಧಪಡಿಸಿದ ಪಟ್ಟಿಯಲ್ಲಿ ಸೇರಿಸಲಾಗಿದೆಯೋ ಆ ಅಭ್ಯರ್ಥಿಗಳು ಮತ್ತು ಯಾವ ಅಭ್ಯರ್ಥಿಗಳು ಗೊತ್ತುಪಡಿಸಿದ

ಸೇರಿಕೊಳ್ಳುವ ಅವಧಿಯೊಳಗೆ ನೇಮಕಾತಿ ಪ್ರಾಧಿಕಾರವು, ನೇಮಕಮಾಡಿದ ಹುದ್ದೆಗಳ ಪ್ರಭಾರವನ್ನು ವಹಿಸಿಕೊಳ್ಳದಿರುವ

ಸಂದರ್ಭದಲ್ಲಿ ಮಾತ್ರ ಮತ್ತು ಅಷ್ಟರಮಟ್ಟಿಗೆ ಅದೇ ರೀತಿಯಲ್ಲಿ ನೇಮಕ ಮಾಡಿಕೊಳ್ಳಬಹುದು.]1

1. ಅಧಿಸೂಚನೆ ಸಂ. ಡಿಪಿಎಆರ್ 13, ಎಸ್ಬಿಸಿ 2001, ದಿನಾಂಕ 01.06.2002ರ ಮೂಲಕ ಸೇರಿಸಲಾಗಿದೆ.

ಅಭ್ಯರ್ಥಿಗಳ ನೇಮಕ.-

(1) 6ನೇ ನಿಯಮದ ಮೇರೆಗೆ ತಯಾರಿಸಿದ ಪಟ್ಟಿಯಲ್ಲಿ ಯಾವ ಅಭ್ಯರ್ಥಿಗಳ

ಹೆಸರುಗಳನ್ನು ಸೇರಿಸಲಾಗಿದೆಯೋ ಆ ಅಭ್ಯರ್ಥಿಗಳನ್ನು, ನೇಮಕ ಪ್ರಾಧಿಕಾರವು ನೇಮಕಕ್ಕೆ ಸಂಬಂಧಿಸಿದಂತೆ

ಅವಶ್ಯವೆಂದು ಪರಿಗಣಿಸಬಹುದಾದಂಥ ವಿಚಾರಣೆಯನ್ನು ಮಾಡಿದ ಮೇಲೆ ಎಲ್ಲಾ ರೀತಿಗಳಲ್ಲಿಯೂ ಪ್ರತಿಯೊಬ್ಬ

ಅಭ್ಯರ್ಥಿಯು ಸೂಕ್ತವಾಗಿರುವನೆಂದು ಅದಕ್ಕೆ ಮನದಟ್ಟಾದ ತರುವಾಯ, ನೇಮಕಾತಿ ಪ್ರಾಧಿಕಾರವು ಯಾವ ಕ್ರಮದಲ್ಲಿ

ಖಾಲಿ ಹುದ್ದೆಗಳಿಗೆ ಅವರ ಹೆಸರುಗಳು ಪಟ್ಟಿಯಲ್ಲಿ ಕಂಡುಬರುತ್ತವೆಯೋ ಆ ಹುದ್ದೆಗಳಿಗೆ ಅವರನ್ನು ನೇಮಕ

ಮಾಡಿಕೊಳ್ಳಬಹುದು.

(2) 6ನೇ ನಿಯಮದ ಮೇರೆಗೆ ಪ್ರಕಟಿಸಲಾದ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಸೇರಿಸಿರುವುದು

ನೇಮಕಕ್ಕೆ ಯಾವುದೇ ಹಕ್ಕನ್ನು ಅವರಿಗೆ ನೀಡುವುದಿಲ್ಲ.

ಇತರ ನಿಯಮಗಳ ಅನ್ವಯ .-

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ನಿಯಮಗಳು, ಕರ್ನಾಟಕ ಸಿವಿಲ್

ಸೇವೆಗಳ (ಪ್ರೊಬೇಷನ್) ನಿಯಮಗಳು, 1977, ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978

(1990ರ ಕರ್ನಾಟಕ ಅಧಿನಿಯಮ ಸಂ. 14)ರ ಮೇರೆಗೆ ಮಾಡಲಾದ ಅಥವಾ ಮಾಡಲಾಗಿದೆಯೆಂದು ಭಾವಿಸಲಾದ

ಸೇವಾ ಷರತ್ತುಗಳನ್ನು ವಿನಿಯಮಿಸುವ ಬಗ್ಗೆ ತತ್ಕಾಲದಲ್ಲಿ ಜಾರಿಯಲ್ಲಿರುವಂಥ ಇತರ ನಿಯಮಗಳು, ಈ ನಿಯಮಗಳ

ಉಪಬಂಧಗಳಿಗೆ ಅವುಗಳು ಅಸಂಗತವಾಗದಿರುವಷ್ಟರಮಟ್ಟಿಗೆ ಈ ನಿಯಮಗಳ ಮೇರೆಗೆ ನೇಮಕಗೊಂಡ ವ್ಯಕ್ತಿಗಳಿಗೆ

ಅನ್ವಯವಾಗತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ

ಹೆಸರಿನಲ್ಲಿ,

ಕೆ.ಎಲ್. ಜಯರಾಂ,

ಸರ್ಕಾರದ ಅಧೀನ ಕಾರ್ಯದರ್ಶಿ-2

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

(ಸೇವಾ ನಿಯಮಗಳು).