ಪೆರೆಯುವ ಚಂದನ ತನು ತಣಿಸು ಶ್ರೀಗಂಧ, ನಿನ್ನಯ ಪರಿಮಳ ದೈವಿಕ ಸಂಬಂಧ ಕಷ್ಟದಿ ಘರ್ಷಿಸಿದರೂ ಕುಂದದ ಸೌಗಂಧ, ನೀನೇ ನಮ್ಮೆಲ್ಲರ ಪ್ರೀತಿಯ ಶ್ರೀಗಂಧ ಕನ್ನಡ ನಾಡಿನ ಅಜ್ಞಾತ ಕವಿಯೋರ್ವರ ಚಂದದ ನಾಡಿನ ಚಂದನದ ವರ್ಣನೆಯಿದು. ಕರುನಾಡಿನ ಮಣ್ಣಿನ ಸುಗಂಧವನ್ನು ಜಗದಗಲ ಪಸರಿಸಿ, ತನ್ನ ದಿವ್ಯ ಪರಿಮಳದಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಆಳಿಸದ ಮುದ್ರೆ ಒತ್ತಿರುವ ಶ್ರೀಗಂಧವು ಕೇವಲ ಒಂದು ವೃಕ್ಷವಲ್ಲ, ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತಿಬಿಂಬ, ತನ್ನ ರಕ್ಷಣಾತ್ಮಕ ಮತ್ತು ವಾಣಿಜ್ಯ ಮೌಲ್ಯದಿಂದ ನಾಡಿನ ರೈತಾಪಿವರ್ಗ ಹಾಗೂ ಅರಣ್ಯ ಕೃಷಿಯ ಆರ್ಥಿಕತೆಯ ಗಟ್ಟಿ ಬೆನ್ನೆಲುಬಾಗಿ ನಿಂತಿರುವ ಈ 'ಗಂಧದ ಗುಡಿಯ ಹೆಮ್ಮೆಯ ಸಸ್ಯ ಶ್ರೀಗಂಧವು ಪ್ರಕೃತಿ ಮತ್ತು ಪ್ರಗತಿಯ ಅಪೂರ್ವ ಸಂಗಮಕ್ಕೆ ಅತ್ಯುತ್ತಮ ಸಾಕ್ಷಿಯಾಗಿದೆ. ಗಂಧದ ನಾಡು ಗಂಧದ ಬೀಡು ಎಂದೇ ಪ್ರಸಿದ್ದಿಯಾಗಿರುವ ನಮ್ಮ ಕರ್ನಾಟಕದ ಮಣ್ಣಿನ ಆಸ್ಥಿತೆ, ಸಂಸ್ಕೃತಿ ಮತ್ತು ಆರ್ಥಿಕತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅಮೂಲ್ಯ ನೈಸರ್ಗಿಕ ಸಂಪತ್ತು ಶ್ರೀಗಂಧ ನಾಡಿನ ಸಸ್ಯಸಂಕುಲದ ಸಾಲಿನ ಅಪ್ರತಿಮ ಸಸ್ಯವಿದು. ಈ ನಾಡಿನ ಜೀವನಾಡಿಯಾಗಿರುವ ಶ್ರೀಗಂಧವು ಶತ ಶತಮಾನಗಳಿಂದಲೂ ಭಾರತೀಯ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಹಬ್ಬ ಹರಿದಿನಗಳ ಪೂಜೆ, ಪುನಸ್ಕಾರಗಳ ಧಾರ್ಮಿಕ ವಿಧಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಆರ್ಥಿಕ ರಂಗದವರೆಗೆ ಇದರ ಸೌಗಂಧ ಪಸರಿಸಿದೆ. ಕರುನಾಡಿನ ಸುಂದರ ಪರಿಸರದ ಚೆಲುವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿರುವ ಶ್ರೀಗಂಧವು ನಾಡಿನ ಹೆಮ್ಮೆ ಮತ್ತು ಐಶ್ವರ್ಯದ ಸಂಕೇತವಾಗಿದೆ. ವಿವಿಧ ಉತ್ಸವ ಆಚರಣೆಗಳಲ್ಲಿ ಗಂಧದ ಲೇಪನ, ಆಯುರ್ವೇದದಲ್ಲಿ ಔಷಧಿಯ ಬಳಕೆ ಮತ್ತು ಕರಕುಶಲ ಕಲೆಗಳಲ್ಲಿ, ಕೆತ್ತನೆಗಳಿಂದ ಸಾಂಸ್ಕೃತಿಕ ಮೌಲ್ಯವನ್ನು ವರ್ಧಿಸಿದೆ. ಸುಗಂಧ ದ್ರವ್ಯ ಹಾಗೂ ಸೌಂದರ್ಯ ವರ್ಧಕ ಉದ್ಯಮದಲ್ಲಿ ಶ್ರೀಗಂಧದ ಎಣ್ಣೆಗೆ ಇರುವ ಜಾಗತಿಕ ಬೇಡಿಕೆಯಿಂದಾಗಿ ರೈತರ ಮತ್ತು ಸರ್ಕಾರದ ಆರ್ಥಿಕ ಬಲವನ್ನು ಹೆಚ್ಚಿಸಿದೆ. ಹಸಿರು ಚಿನ್ನ ಕಾಡಿನ ಮೌನ ಸುಗಂಧ ಚಂದದ ಕನ್ನಡ ನಾಡಿನ ಶ್ರೀಗಂಧ. ಶ್ರೀಗಂಧವು ಕನ್ನಡ ನಾಡಿನ ಸಾಹಿತ್ಯ ಕೃಷಿಯಲ್ಲಿಯೂ ಮೂಂಚೂಣಿಯಲ್ಲಿದೆ. ಕನ್ನಡದ ಕವಿಗಳು ವಚನಕಾರರು, ಶರಣರು ಕೀರ್ತನಕಾರರು, ಸಾಹಿತಿಗಳು ತಮ್ಮ ತತ್ವಪದಗಳು, ಭಜನೆ, ಸಾಹಿತ್ಯ, ಕಾವ್ಯಗಳಲ್ಲಿ ಶ್ರೀಗಂಧದ ಸುಗಂಧವನ್ನು ತುಂಬಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮ ಮಹಾಕಾವ್ಯವಾದ ರಾಮಾಯಣದ ಅಯೋಧಾ ಕಾಂಡದಲ್ಲಿ ರಾಮನ ಪಟ್ಟಐಷೇಕದ ವರ್ಣನೆಯಲ್ಲಿ 'ವರಾಹರುಧಿರಾಜೇಣ ಶುಚಿನಾಚ ಸುಗಂಧಿನಾ। ಅನುಲಿಪ್ತಂ ಪರಾರ್ಧೈನ ಚಂದನೇನ ಪರಂತಪಂ।।' ಯುವರಾಜ ಪಟ್ಟಾಭಿಷೇಕಕ್ಕೆ ಅಲಂಕೃತನಾಗಿದ್ದ ಶ್ರೀರಾಮನು ಹಂದಿಯ ರಕ್ಷದಂತೆ ಕಾಂತಿಯುಳ್ಳ, ನಿರ್ಮಲವಾದ ಸುವಾಸನೆಯುಳ್ಳ, ಶುದ್ಧವಾದ ಚಂದನದಿಂದ ಲೇಪನ ಮಾಡಲ್ಪಟ್ಟಿದ್ದನು. ದೇವ ಪೂಜಾ ವಿಧಿಯಲ್ಲಿ ಬಳಕೆಯಲ್ಲಿರುವ ಕನ್ನಡಕ್ಕೆ ರೂಪಾಂತರಗೊಳಿಸಿರುವ ಗಂಧ ಸಮರ್ಪಣೆ ಮಂತ್ರ ಹೀಗಿದೆ. 'ವಾಸನಾಕ್ಷಯರೂಪ ಅಪವರ್ಗ ಸುಖದಾತೆ ಸಚ್ಚಿತ್ತುಖಾನಂದ ಪೂರ್ಣರೂಪ, ವಾಸನಾದ್ರವ್ಯನಿಡುವೆ నివాPAణీయ ಸುಖವನ್ನು క్షీణయుయందు ದೇವಿ ನನಗೆ ಕನ್ನಡದ ಅಜ್ಞಾತ ಕವಿಯೋರ್ವ ನೀತಿಯ ಕುರಿತು ಹೇಳುವಾಗ ಮಾಡಿದ ಗಂಧದ ವರ್ಣನೆ.' 'ನಿರುಪಂಗುಣಿಯೆನಿಸಿದ ಸತ್ಪುರುಷನ ರೂಪೆಂತುಟಾದೊಡಾತನೆ ಯೋಗ್ಯಂ ಪರಿಮಳವನೀವ ಚಂದನಕೊರುಡಂ ಮರುದಾದೊಡೇನೋ ಸುಜನೋತ್ತಂ ಸತ್ಯ ಶ್ರೀಗಂಧದ ಕೊರಡು ಮುಕ್ಕಾಗಿದ್ದರೇನು ಹೊರಸೂಸುವಂತೆ ರೂಪಲಾವಣ್ಯವಿಲ್ಲದಿದ್ದರೇನು? ಇಲ್ಲಿ ಸದ್ಗುಣಕ್ಕೆ ಶ್ರೀಗಂಧದ ಹೋಲಿಕೆ ಮಾಡಿರುವನು. ಹಳೆಗನ್ನಡದ ವ್ಯಾಕರಣದಲ್ಲಿ ಸ್ವಾರಸ್ಯಕರವಾದ ಒಂದು ಸಮಸ್ಯೆ ಕಂಡು ಬರುತ್ತದೆ. 'ದನಮಂ ಕೊಕೊಯ್ದು ಬಸದಿಯೋಳ್ ತುಂಬಿಟ್ಟರ್' ಎಲ್ಲಾದರೂ ಉಂಟೆ, ಜೈನ ಬಸದಿಯಲ್ಲಿ ವನ ಕೊಯ್ದು ಇಡುವದೇ? ಇದಕ್ಕೆ ಮೊದಲಲ್ಲಿ 'ಭಂ' ಸೇರಿಸಿದರೆ ಸಾಕು ಸಮಸ್ಯೆ ಬಗೆಹರಿಯುತ್ತದೆ. 'ಚಂದನಮಂ ಕೊಕೊಯ್ದು ಬಸದಿಯೋಳ್ ತುಂಬಿಟ್ಟರ್" ಇದು ಮಿತ್ರ ಗೌತಮ ಮಾಡಗೇರಿ ನೀಡಿದ ಮಾಹಿತಿ. ಸರ್ವಜ್ಞನು ತನ್ನ ತ್ರಿಪದಿಯಲ್ಲಿ ಬೀರಿದ ಗಂಧದ ಸೌರಭ, ಗಂಧವನು ತೇವಲ್ಲಿ ಒಂದು ನೊಣವನು ಕಾಣೆ ಸಂಧಿಸಿಹ ಮಲವ ಬಿಡುವಲ್ಲಿ ನೊಣಮುತ್ತ ವಂದವನು ನೋಡಾ ಸರ್ವಜ್ಞ, ಗಂಧದ ಸುವಾಸನೆಯಿದ್ದಲ್ಲಿ ಕ್ರಿಮಿ ಕೀಟಗಳು ಬರಲು ಅಸಾಧ್ಯ, ಚಂದನವ ತೇಯ್ತಷ್ಟು ಪರಿಮಳ ಬೀರುವಂತೆ ಸಜ್ಜನರು, ಸತ್ಪುರುಷಮ ತಮ್ಮ ಜೀವನವನ್ನು ಸಮಾಜಕ್ಕಾಗಿ ಒಳ್ಳೆಯ ಕಾರ್ಯಕ್ಕಾಗಿ ಸವೆಸಿ ಜಗಕೆ ಚಂದದ ವ್ಯಕ್ತಿಗಳಾಗುವರು ಎಂಬುದು ಸರ್ವಜ್ಞನ ತ್ರಿಪದಿ, ಚಂದನವ ಕರಗಿಸಲು ಬೆಂದು ಪರಿಮಳವನ್ನು ಸಂದಿವನರಿದು ಸತ್ಪುರುಷರೆನಿಸಿಹರು ನೊಂದು ಸ್ಥರಿಪರು ಸರ್ವಜ್ಞ ಸತ್ತುರುಷರು ಶರಣರು ಶಿವಸ್ವರೂಪಿ ಎನ್ನುತ್ತಾನೆ. ಮಲಯ ಪರ್ವತ ಪ್ರದೇಶದಲಿ ಗಂಧವಿರುವುದು ಮಲಯಜದ ಮರದೊಳಗೆ 'ಸಲೆಗಂಧವಿದ್ದಂತೆ ಸುಲಲಿತವಾದ ಶರಣರ ಹೃದಯದಲಿ ನೆಲೆಸಿಹನು ಶಿವನು ಸರ್ವಜ್ಞ', ಅಕ್ಕಮಹಾದೇವಿ ವಚನದಲ್ಲಿ 'ಚಂದನವ ಕಡಿದು ಕೊರೆದು ಶೇದೊಡ ನೊಂದನೆಂದು ಕಂಪ ಬಿಟ್ಟಿತ್ತೇ?' ಸುವಾಸನಾ ಭರಿತ ಶ್ರೀಗಂಧದ ಮರವನ್ನು ಕಡಿದು ಕೊರೆದು ತಿಕ್ಕಿ ತಿಕ್ಕಿ ತೇಯ್ದರೆ ಅದರಿಂದ ತಾನು ನೊಂದನೆಂದು ತನ್ನ ಗುಣಧರ್ಮವಾದ ಸುವಾಸನೆಯ ಬಿಡುವದೇ? ಇಲ್ಲಿ ಪರಶಿವ ತನ್ನನ್ನು ಯಾವುದೇ ರೀತಿ ಒರೆಗಿಕ್ಕಿ ನೋಡಿದರೂ ಅವನಿಗೆ ಶರಣೆಂಬುದನ್ನು ಬಿಡಲಾರೆ ಎಂದು ಹೇಳಲು ಚಂದನವನು ಉದಾಹರಣೆಯಾಗಿಸಿದ್ದಾರೆ. ಬಸವಣ್ಣನ ವಚನದಲ್ಲಿ, ಚಂದನಗುಣವನಿರಿಸುವದೇ ತರುಗಳಲ್ಲಿ, ಚಂದನದ ಸನ್ನಿಧಿಯಲ್ಲಿ ಪರಿಮಳತಾಗಿ ಬೇವು ಬೊಬ್ಬಿಲಿ, ತರು ಗಂಧಂಗಳಾಗವೇ? ಗಿರಿಗಳ ಮೇಲೆ ಹಲವು ತರುಮರಾದಿಗಳಿರ್ದು ಶ್ರೀಗಂಧ ಸಂನಿಧಿಯಲು ಪರಿಮಳವಾಗದೇ? ಶ್ರೀರಾಮಾಯಣ ದರ್ಶನದಲ್ಲಿ, ಚಂದನ ಕೊರಡು ಮುರುಟಿದ್ದರೇನೂನಾಯ್ತ ಗಂಧಕ್ಕೇ?. ಕವಿರತ್ನ ಕಾಳಿದಾಸನ ಋತು ಸಂಹಾರ ಕೃತಿಯಲ್ಲಿ 'ಚಂದನದ ರಸದಿಂದ ತೊಯ್ದ ಬೀಸಣಿಗೆಯಲಿ ಬೀಸಲೆಚ್ಚರಗೊಂಡು ಎವೆ ಬಿಚ್ಚಿ ನೋಡಿ ವಲ್ಲಕಿಯ ಕಾಕಲಿಯ ಮೃದು ಮಧುರ ಗಾನದಲಿ' 'ಅಗರು ಚಂದನ ಹಚ್ಚಿದಂಗವು ಸುತ್ತ ಸೌರಭವೆರೆದಿರೆ ಜಡೆಯ ಹೂವಿನ ದಂಡೆ ಪರಿಮಳ ಮತ್ತೆ ಘಮಘಮಿಸುತಿರೆ' ರಾಮಾಯಣದಲ್ಲಿನ ಉಲ್ಲೇಖವಿದು. 'ನಿರ್ಯಾಸರಸಮೂಲನಾಂ ಚಂದನಾನಾಂ ಸಹಸ್ರಶ: ವನಾನಿ ಪಠ್ಯ ಸೌಮ್ಯಾನಿ ಫ್ರಾಣ ತೃಪ್ತಿ ಕರಾಣಿಚ॥ ರಾವಣನು ಹೋಗುತ್ತಿದ್ದ ಹಾದಿಯಲ್ಲಿ ಬುಡದಲ್ಲಿ ಅಂಟಿನ ರಸವಿರುವ ವೃಕ್ಷಗಳಿಂದಲೂ ಸಾವಿರಾರು ಚಂದನ ವೃಕ್ಷಗಳಿಂದಲೂ ಕೂಡಿದ, ನಾಸಿಕಕ್ಕೆ ತೃಪ್ತಿ ಕೊಡುವ ಅರಣ್ಯಗಳಿದ್ದವು. ಮಾವು ದಾಳಿಂಬೆ, ಚಂದನ, ಕೆಂಪು ಕಣಗಿಲೆ, ಹೊನ್ನೆ, ಆಲ, ತಿನಿಸ, ಏಳೆಲೆಬಾಳೆ ಮೊದಲಾದ ವೃಕ್ಷಗಳಿಂದ ಕೂಡಿ ಕಣ್ಣನ ಸೂರೆಗೊಳ್ಳುತ್ತಿದ್ದವು ಎಂದು ಶ್ರೀರಾಮ ಪಂಪಾ ಸರೋವರದ ವರ್ಣನೆ ಮಾಡಿದ ಉಲ್ಲೇಖ ರಾಮಾಯಣದ ಅರಣ್ಯಕಾಂಡದಲ್ಲಿದೆ. ಸುಂದರ ಕಾಂಡ ನೀಡುವ ವಿವರದಂತೆ ಅಶೋಕ ವನದಲ್ಲಿ ಹನುಮಂತನು ಅಲ್ಲಿನ ವೃಕ್ಷಗಳನ್ನು ನೋಡುತ್ತಿದ್ದಾನೆ. 'ಅಶೋಕವನಿಕಾ ಚೇಯಂ ದೃಢಂ ರಮ್ಯಾ ದುರಾತ್ಮನ: ಚಂದನೈಶ್ಚಮಕೈಶ್ಚಾಪಿ ಬಕುಲೈಶ್ಚ ವಿಭೂಷಿತಾ' ಚಂದನ ಸಂಪಿಗೆ, ಬಕುಲ ಇವೇ ಮೊದಲಾದ ವೃಕ್ಷಗಳಿಂದ ವಿಭೂಷಿತವಾಗಿರುವ ದುರಾತ್ಮನಾದ ರಾವಣನ ಈ ಅಶೋಕ ವನವೂ ನಿಶ್ಚಯವಾಗಿಯೂ ರಮಣಿಯವಾಗಿದೆ. ಜೈನ ಧರ್ಮದಲೂ ಚಂದನ ಬಳಕೆಯ ಕುರಿತು ಪ್ರಾಚೀನ ಗ್ರಂಥಗಳಾದ ಮಂಗಾರಾಧನೆಯಲ್ಲಿ 'ಮಲಯಜಂ ಚಂದನಂ ಗಂದಮೆನಿಕ್ಕುಂ' ಪುಷ್ಪ ದಂತ ಪುರಾಣದಲ್ಲಿ ಗಂಧೋದಕ ಅಂದರೆ ಚಂದನದಿಂದ ತಯಾರಿಸಿದ ಜಲದಿಂದ ತೀರ್ಥಂಕರುಗಳಿಗೆ ಸ್ನಾನ ಮಾಡಿಸುವ ಕುರಿತು 'ಗಂಧೋದಕ ಸ್ನಾನ ಮಂಗಳಮಂ ತೀರ್ಥಂಕರಂಗೆ ಬ್ರಾಹ್ಮಣರ ಸಮಾರಾಧನೆಯಲ್ಲಿಯೂ ណាស ಮುಂಚೆ ಗಂಧ, ಅಕ್ಷತೆ ಕೊಡುವ ಸಂಪ್ರದಾಯವಿದೆ. ಅಗ್ನಿದೇವಾಲಯವೆಂದು ಕರೆಯಲ್ಪಡುವ ಪಾರ್ಸಿಜನಾಂಗದ ಆರಾಧನಾ ಮಂದಿರದ ಒಳ ಆವರಣದೊಳಗೆ ಇರುವ ಅಗ್ನಿ ಕುಂಡದಲ್ಲಿ ಅಗ್ನಿದೇವ ಸದಾಕಾಲವೂ ಪ್ರಜ್ವಲಿತನಾಗಿರುತ್ತಾನೆ. ಪಾವಿತ್ರ್ಯತೆಯ ಪರಾಕಾಷ್ಟತೆಯ ಕುರುಹಾಗಿ ಈ ಅಗ್ನಿಕುಂಡಕ್ಕೆ ಶ್ರೀಗಂಧದ ಚಕ್ಕೆಗಳನ್ನು ಅರ್ಪಿಸುವ ರಿವಾಜಿದೆ. ಮಹಾಭಾರತ, ಮತ್ತ್ವಪುರಾಣ, ವಾಯುಪುರಾಣ, ಬೃಹತ್ಸಂಹಿತೆ, ಕೌಟಿಲ್ಯನ ಅರ್ಥಶಾಸ್ತ್ರ ಮೊದಲಾದ ಪ್ರಾಚೀನ ಗ್ರಂಥಗಳು ಗಂಧದ ಸೌಗಂಧವನ್ನು ಪಸರಿಸಿವೆ. ಚಂದನವು ನಮ್ಮ ನಾಣ್ಣುಡಿಗಳಲ್ಲಿ ಹಾಸುಹೊಕ್ಕಾಗಿ ಬೆಳೆದಿದೆ. 'ಸಗಣಿಯವನೊಡನೆ ಸೆಣಸಾಡುವದಕ್ಕಿಂತ ಗಂಧದವನೊಡನೆ ಗುದ್ದಾಡುವದು ಲೇಸು' ಇದೊಂದು ಗಾದೆಮಾತು. ಭಗವಂತನಿಗೆ ಅರ್ಪಿಸುವಷ್ಟು ಶ್ರೇಷ್ಠ ಪರಿಮಳ ಹೊಂದಿರುವ ಚಂದನ ನಾಣ್ಣುಡಿಯಾಗಿ ಕವಿಗಳಿಗೂ, ವಚನಕಾರರರಿಗೂ, ಅಲಂಕಾರಕ್ಕೂ, ನೀತಿಪ್ರತಿಪಾದನೆಗೂ ಸಾಹಿತ್ಯದಲಿ ಉಪಮೆಯಾಗಿಯೂ ಬಳಸಲು ಧಾರಾಳ ಅವಕಾಶ ಒದಗಿಸಿಕೊಟ್ಟಿದೆ. ಶ್ರೀಗಂಧವು ಕೇವಲ ನಿಸರ್ಗದ ಕೊಡುಗೆಯಲ್ಲ ಅದು ನಮ್ಮನಾಡಿನ ಸಾಹಿತ್ಯಕ ಮತ್ತು ಆರ್ಥಿಕತೆ, ಸಂಸ್ಕೃತಿಯ ಜೀವಾಳವಾಗಿದೆ. ಆರ್ಥಿಕ ದೃಷ್ಟಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಮೌಲ್ಯವನ್ನು ಹೆಚ್ಚಿಸಿ, ನಾಡಿನ ಆರ್ಥಿಕತೆಯ ನೆಲೆಗಟ್ಟನ್ನು ಗಟ್ಟಿಗೊಳಿಸಿದ ಕೀರ್ತಿ ಶ್ರೀಗಂಧಕ್ಕಿದೆ. ಶ್ರೀಗಂಧವು ನಮಗಾಗಿ ಸವೆದು ಸುಗಂಧ ನೀಡುವ ಮೂಲಕ ಪರೋಪಕಾರಿ ಬದುಕಿನ ಸಂಕೇತವಾಗಿದೆ. ಭವ್ಯ ಸಾಂಸ್ಕೃತಿಕ ಮತ್ತು ಆರ್ಥಿಕ ಮೌಲ್ಯವಿರುವ ಶ್ರೀಗಂಧದ ಸಂಪತ್ತನ್ನು ಸಂರಕ್ಷಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ. ಸಸ್ಯಪುರಾಣಉಮಾಪತಿ ಭಟ್ಟ ಕೆ.ವಿ.ಅಧ್ಯಕ್ಷರು, ಸಮಗ್ರ ವಿಕಾಸ ಟ್ರಸ್ಟ್, ಶಿರಸಿ ಜನಮಾಧ್ಯಮ