অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನಸಿಕ ಆರೋಗ್ಯ ಕಾರ್ಯಕ್ರಮ

ಮಾನಸಿಕ ಆರೋಗ್ಯ ಕಾರ್ಯಕ್ರಮ

ಆರೋಗ್ಯ ಎಂದರೆ ವ್ಯಕ್ತಿ ಯಾವುದೇ ಖಾಯಿಲೆ ಇಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಮಾತು ಸಾಮಾಜಿಕವಾಗಿ ಚೆನ್ನಾಗಿರುವುದೇ ಆಗಿದೆ. ಎಲ್ಲಾ ಸಮಯ, ಸಂದರ್ಭದಲ್ಲಿ ನೆಮ್ಮದಿಯಿಂದ ಇರುತ್ತಾ ಎಲ್ಲರೊಡನೆ ಹೊಂದಾಣಿಕೆಯಿಂದ ಬದುಕುತ್ತಾ, ಸ್ವಾವಲಂಬಿಯಾಗಿ, ಸಂತೋಷವಾಗಿ, ತೃಪ್ತಿಕರವಾಗಿರುವುದೇ ಮಾನಸಿಕ ಆರೋಗ್ಯ ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೆ ತೊಂದರೆಯಾದರೆ ಮತ್ತೊಂದಕ್ಕೆ ತೊಂದರೆ, ದೈಹಿಕ ಖಾಯಿಲೆ ಮಾನಸಿಕ  ನೆಮ್ಮದಿಯನ್ನು ಕೆಡಿಸಿದರೆ, ಮಾನಸಿಕ ಸಮಸ್ಯೆ ದೇಹದ ಆರೋಗ್ಯವನ್ನು ಕೆಡಿಸಬಲ್ಲದು.

ಮಾನಸಿಕ ಆರೋಗ್ಯ ಕಾರ್ಯಕ್ರಮದ ಉದ್ದೇಶಗಳು

ಮಾನಸಿಕ ಕಾಯಿಲೆಗಳಿಂದ ಮೂರ್ಛೆರೋಗಿಗಳಿಂದ, ಬುದ್ದಿಮಾಂದ್ಯತೆಯಿಂದ ಬಳಲುವವರಿಗೆ ಚಿಕಿತ್ಸೆ ಸಲಹೆ ಸಹಾಯವನ್ನು ನೀಡುವುದು. ಈ ಚಿಕಿತ್ಸೆ ಸೌಲಭ್ಯಗಳನ್ನು  ಅವರ ಮನೆಗೆ ಆದಷ್ಟು ಸಮೀಪದಲ್ಲಿ, ಪ್ರಾ.ಆ.ಕೇಂದ್ರದ ಸಿಬ್ಬಂದಿ, ಆದಷ್ಟು ಬೇಗ ಉಚಿತವಾಗಿ ಅಥವಾ ಅತ್ಯಲ್ಪ ಖರ್ಚಿನಲ್ಲಿ ಒದಗಿಸಿ ಕೊಡುವುದು. ಈ ರೋಗಿಗಳು ಗುಣಮುಖರಾಗಿ ಸ್ವಾವಲಂಬಿಗಳಾಗಿ ಉಪಯುಕ್ತ ಜೀವನ ಮಾಡುವಂತೆ ಪ್ರೋತ್ಸಾಹಿಸುವುದು.

ಏಕೆ ಈ ಕಾರ್ಯಕ್ರಮ

ಮಾನಸಿಕ ಖಾಯಿಲೆ, ಬುದ್ದಿಮಾಂದ್ಯತೆ, ಮೂರ್ಛೆ ರೋಗ, ಸಾರ್ವತ್ರಿಕ ಆರೋಗ್ಯ ಸಮಸ್ಯೆಗಳು. ಇವು ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸಿ ಆತ ತನಗಲ್ಲದೆ ಎಲ್ಲರಿಗೂ ಹೊರೆಯಾಗುವಂತೆ ಮಾಡುತ್ತವೆ.

ಸಮೀಕ್ಷೆಗಳ ಪ್ರಕಾರ ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ ೫ ಮಂದಿ ತೀವ್ರತರ ಮಾನಸಿಕ ಖಾಯಿಲೆಗಳಿಂದಲೂ, ೫೦ ರಿಂದ ೧೦೦ ಮಂದಿ ಅಲ್ಪತರ ಮಾನಸಿಕ ಖಾಯಿಲೆಗಳಿಂದಲೂ, ೧೦ ಮಂದಿ ಮೂರ್ಛೆ ರೋಗದಿಂದಲೂ ೨೦ ಮಕ್ಕಳು ಬುದ್ದಿಮಾಂದ್ಯದಿಂದಲೂ ಬಳಲುತ್ತಿದ್ದಾರೆ.

ಇವರಿಗೆ ಎಲ್ಲ ಚಿಕಿತ್ಸೆ /ಸಲಹೆ/ಸಹಾಯ ಬೇಕೇ ಬೇಕು:- ಇದರಿಂದ ಅವರಿಗೆ ಉತ್ತಮರಾಗಳು ಸಾಧ್ಯವಿದೆ.

ಈ ಕಾರ್ಯಕ್ರಮ ಇಲ್ಲದಿದ್ದರೆ ಏನಾಗುತ್ತದೆ

  • ರೋಗಿಗಳು ದೀರ್ಘ ಕಾಲ ನರಳುತ್ತಾರೆ.ತಮ್ಮ ಕೆಲಸ, ಕರ್ತವ್ಯಗಳನ್ನು ಮಾಡಲಾರರು, ದುಡಿಯಲಾರರು.
  • ಅವರನ್ನು ನೋಡಿಕೊಳ್ಳುವುದು ಮನೆಯವರ ಮೇಲೆ ಬಿದ್ದು, ಕುಟುಂಬದ ಮಾನಸಿಕ, ಆರ್ಥಿಕ ನೆಮ್ಮದಿ ಹಾಳಾಗುತ್ತದೆ.ನೋವು ದುಃಖ ಉಂಟಾಗುತ್ತದೆ.
  • ಚಿಕಿತ್ಸೆ ಇಲ್ಲದೆ ರೋಗಿಗಳು ಅಪಘಾತ, ಸೋಂಕು ರೋಗ ದೈಹಿಕ ರೋಗಗಳಿಗೆ ಸಿಕ್ಕಿ ಮತ್ತಷ್ಟು ದುರ್ಬಲರಾಗುತ್ತಾರೆ. ಸಾಯಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು.
  • ಆಧುನಿಕ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರೆ ಜನ ಮೂಢನಂಬಿಕೆ, ಮೂಢ ಆಚರಣೆಗಳಿಗೆ ಮೊರೆ ಹೋಗುತ್ತಾರೆ. ದೆವ್ವ ಮಾಟ ಮಂತ್ರ ಎಂದು ಸಾಕಷ್ಟು ಹಣ ಮತ್ತು ಕಾಲವನ್ನು ವ್ಯರ್ಥ ಮಾಡುತ್ತಾರೆ. ಈ ಹೆಸರಿನಲ್ಲಿ ಮಾನಸಿಕ ರೋಗಿಗಳಿಗೆ ಇನ್ನಷ್ಟು ನೋವು ದುಃಖಗಳನ್ನು ಉಂಟು ಮಾಡುತ್ತಾರೆ.
  • ರೋಗಿಗಳು ಮತ್ತು ಮನೆಯವರು ಮೌನವಾಗಿ ನಾನಾ ಸಂಕಟಗಳಿಗೆ ತುತ್ತಾಗುತ್ತಾರೆ. ಇದರಿಂದ ಇಡೀ ಸಮುದಾಯಕ್ಕೆ ನೋವು/ನಷ್ಟ.

ಮಾನಸಿಕ ರೋಗದ ಲಕ್ಷಣಗಳು

  • ವಿಚಿತ್ರ ನಡವಳಿಕೆ
  • ಮಂಕುತನ
  • ಆತ್ಮಹತ್ಯೆ
  • ಜಂಬಕೊಚ್ಚುವುದು
  • ವಯಸ್ಸಿಗೆ ತಕ್ಕ ಬೆಳವಣಿಗೆ ಇಲ್ಲದಿರುವುದು.
  • ಸಂಶಯ
  • ದುಃಖ / ಖಿನ್ನತೆ
  • ಇತರರಿಗೆ ಕೇಳಿಸದ ಶಬ್ಧಗಳು ಕೇಳಿಸುವುದು
  • ಉನ್ಮಾದ

(ಜೊತೆಗೆ ಬಹುತೇಕ ಮಾನಸಿಕ ರೋಗಿಗಳಲ್ಲಿ ನಿದ್ರೆ / ಹಸಿವು / ಮಲ-ಮೂತ್ರ  ವಿಸರ್ಜನೆ / ದೈಹಿಕ ಸ್ವಚ್ಛತೆ ಅಸ್ತವ್ಯಸ್ತವಾಗುತ್ತದೆ.)

ಕಾರಣಗಳು:-

  • ಮಾನಸಿಕ ಖಾಯಿಲೆ ಬರಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ.
  • ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳು.
  • ಮಾದಕ ವಸ್ತುಗಳ ಸೇವನೆ (ಗಾಂಜಾ, ಆಫೀಮು,ಹೆಂಡ).
  • ಮೆದುಳಿಗೆ ಸಂಬಂಧಿಸಿದ ರೋಗಗಳು (ಸೋಂಕು, ಗಡ್ಡೆ,ಪೆಟ್ಟು).
  • ಬಾಲ್ಯದಲ್ಲಿ ಪ್ರೀತಿ, ವಿಶ್ವಾಸ ಮತ್ತು ಪ್ರೋತ್ಸಾಹ, ಮಾರ್ಗದರ್ಶನದ ಕೊರತೆ.
  • ಪದೇ ಪದೇ ಬರುವ ಕಷ್ಟ ನಷ್ಟಗಳು, ನೋವು ನಿರಾಸೆಗಳು.
  • ಕುಟುಂಬ, ಹಣಕಾಸು, ಉದ್ಯೋಗ, ಲೈಂಗಿಕ ಸಮಸ್ಯೆಗಳು.
  • ಸಾಮಾಜಿಕ ಅವ್ಯವಸ್ಥೆ, ರೀತಿ ನೀತಿಗಳಲ್ಲಿ ಗೊಂದಲ, ಅಭದ್ರತೆ.

ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಏನು

  • ಮಾತ್ರೆ, ಇಂಜಕ್ಷನ್ ರೂಪದಲ್ಲಿ ಔಷಧಿ ಚಿಕಿತ್ಸೆ.
  • ರೋಗಿಯ ಕಷ್ಟ ನಷ್ಟ ವಿಚಾರಿಸಿ ಸಮಸ್ಯೆಗಳನ್ನು ವಿಶ್ಲೇಷಿಸಿ, ಸಮಾಧಾನ ಸಲಹೆ ಕೊಡುವ ಮನೋ ಚಿಕಿತ್ಸೆ .
  • ಕೆಲಸ ಕೊಡಿಸಿ ಚಟುವಟಿಕೆಯಿಂದಿರುವ ಉದ್ಯೋಗ ಚಿಕಿತ್ಸೆ.

ಎಲ್ಲಾ ರೋಗಿಗಳನ್ನು ಮಾನಸಿಕ ಆಸ್ಪತ್ರೆಗೆ ದಾಖಲು ಮಾಡುವ ಅವಶ್ಯಕತೆ ಇರುವುದಿಲ್ಲ. ಈ  ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಬಹುದು.

ಮೂರ್ಛೆ ರೋಗಿಗಳಿಗೆ

೩ ರಿಂದ ೫ ವರ್ಷಗಳ ಕಾಲ ಕ್ರಮವಾಗಿ ಸರಿಯಾದ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸುವುದು.

ಬುದ್ದಿಮಾಂದ್ಯರಿಗೆ

ಪ್ರಚೋದನೆ (ಕಣ್ಣು, ಕಿವಿ, ಚರ್ಮ).

ಮಾತ್ರೆ ,ಚುಚ್ಚುಮದ್ದು ,ಮತ್ತು ಟಾನಿಕ್ ಗಳಿಂದ ಪ್ರಯೋಜನವಿಲ್ಲ

  • ದೈನಂದಿನ ಚಟುವಟಿಕೆಗಳನ್ನು ಮಾಡಿತೋರಿಸಿ ಕಲಿಸುವುದು.
  • ಸರಳವಾದ ಕೈಕೆಲಸ ಮಾಡಲು ತರಬೇತಿ ಮತ್ತು ಮಾರ್ಗದರ್ಶನ.
  • ಶೇಕಡಾ ೪೦ ಕ್ಕಿಂತ ಮೇಲ್ಪಟ್ಟು ಅಂಗವಿಕಲತೆ ಇದ್ದಲ್ಲಿ ಸರ್ಕಾರ ಕೊಡುವ ಪ್ರೋತ್ಸಾಹಗಳು.

ಚಿಕಿತ್ಸೆ ಸಹಾಯವನ್ನು ಯಾರು ಕೊಡುತ್ತಾರೆ

  • ಹಿರಿಯ ಕಿರಿಯ ಆರೋಗ್ಯ ಸಹಾಯಕರು, ಅಂಗನವಾಡಿ ಸಹಾಯಕರು, ಆಶಾ ಕಾರ್ಯಕರ್ತರು, ಶಿಕ್ಷಕರು, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ / ಪಂಚಾಯತ್ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನವರು.
  • ರೋಗಿಗಳನ್ನು ಕಳುಹಿಸುವುದು, ಆಸ್ಪತ್ರೆಗೆ ಅವರನ್ನು ಕರೆತರುವುದು.
  • ಅನುಸರಣೆ ಮಾಡುವುದು.
  • ಆರೋಗ್ಯ ಶಿಕ್ಷಣ ಮತ್ತು ತಿಳುವಳಿಕೆ ನೀಡುವುದು.
  • ತರಬೇತಿ ಹಾಗೂ ಮಾರ್ಗದರ್ಶನ ನೀಡುವುದು.
  • ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆರೋಗ್ಯ ಕೇಂದ್ರ, ವೈದ್ಯರು, ಶುಶ್ರೂಷಕರು ರೋಗಿಗಳಿಗೆ ಚಿಕಿತ್ಸೆಯ ಪೂರ್ಣ ಜವಾಬ್ದಾರಿ.
  • ತಾಲೋಕ್, ಸಾರ್ವಜನಿಕ ಆಸ್ಪತ್ರೆ:- ಸ್ವಲ್ಪ ಕ್ಲಿಷ್ಟಕರವಾದ ರೋಗಿಗಳ ಚಿಕಿತ್ಸೆ.
  • ಜಿಲ್ಲಾ ಆಸ್ಪತ್ರೆ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಾನಸಿಕ ಆಸ್ಪತ್ರೆ:-  ಎಲ್ಲಾ ಬಗೆಯ ಕ್ಲಿಷ್ಟಕರಾದ ರೋಗಿಗಳ ಸಲಹೆ ಚಿಕಿತ್ಸೆ, ಒಳರೋಗಿಗಳ ಸೇವಾ ಸೌಲಭ್ಯ ಹಾಗೂ ಅಂಗವಿಕಲ ಪ್ರಮಾಣ ಪತ್ರ ನೀಡಿಕೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವೈಶಿಷ್ಟ್ಯಗಳು :-

  • ನಮ್ಮ ದೇಶಕ್ಕೆ ಹಾಗೂ ಇತರ ಅಭಿವೃದ್ದಿ ಶೀಲ ರಾಷ್ಟ್ರಗಳಿಗೆ ಮಾದರಿ, ಕಡಿಮೆ ಖರ್ಚಿನಲ್ಲಿ, ಜನರಿಗೆ ಅವರ ವಾಸಸ್ಥಳಕ್ಕೆ ಸಮೀಪದಲ್ಲಿ ಮಾನಸಿಕ ಆರೋಗ್ಯ ಸೌಲಭ್ಯಗಳು ಲಭ್ಯ.
  • ಜಿಲ್ಲಾ ಮಟ್ಟದಲ್ಲಿ, ತಾಲೋಕ್ ಮಟ್ಟದಲ್ಲಿ ಸಾರ್ವತ್ರಿಕ ಆರೋಗ್ಯ ಸೌಲಭ್ಯಗಳನ್ನು ಜೊತೆ ಜೊತೆಯಲ್ಲಿ ಮಾನಸಿಕ ಆರೋಗ್ಯ ಸೌಲಭ್ಯಗಳು ಲಭ್ಯ.
  • ಮಾನಸಿಕ ಆರೋಗ್ಯ ತಜ್ಞರ ಜೊತಗೆ, ಇತರ ಎಲ್ಲ ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ, ಜಿಲ್ಲಾ ಆಡಳಿತ ವ್ಯವಸ್ಥೆಯ ಸಿಬ್ಬಂದಿ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಹಾಗೂ ಇತರ ಇಲಾಖೆಗಳು, ಜಿಲ್ಲೆಯ ಅನೇಕ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಸಹ ಭಾಗಿಗಳು.

ಈ ಕಾರ್ಯಕ್ರಮ ಇಡೀ ಸಮುದಾಯದ ಕಾರ್ಯಕ್ರಮ

ನೀವೇನು ಮಾಡಬಹುದು? ಈ ಕಾರ್ಯಕ್ರಮದಲ್ಲಿ ಹೇಗೆ ಭಾಗವಹಿಸಬಹುದು

  • ನಿಮ್ಮ ಸುತ್ತಮುತ್ತ ಯಾರಿಗೆ ಮಾನಸಿಕ ಖಾಯಿಲೆ / ಬುದ್ದಿಮಾಂದ್ಯ / ಮೂರ್ಛೆ ರೋಗ ಇದೆ ಎಂದು ಗುರುತಿಸಿ.
  • ಅವರಿಗೆ ಇದು ಚಿಕಿತ್ಸೆಗೆ ಬಗ್ಗುವಂತ ಖಾಯಿಲೆ ಎಂದು ತಿಳುವಳಿಕೆ ಹೇಳಿ, ಹತ್ತಿರದ ಆಸ್ಪತ್ರೆಗೆ, ಆರೋಗ್ಯ ಸಹಾಯಕ / ವೈದ್ಯರ ಸಲಹೆ ಪಡೆಯಲು ಸೂಚಿಸಿ.
  • ವೈದ್ಯರು ಸೂಚಿಸಿದ ಔಷದೋಪಚಾರವನ್ನು ಕ್ರಮವಾಗಿ ಮಾಡಲು ಪ್ರೋತ್ಸಾಹಿಸಿ.
  • ಎರಡು ಅಥವಾ ನಾಲ್ಕು ವಾರಗಳಿಗೊಮ್ಮೆ ವೈದ್ಯರನ್ನು ಕಾಣಲು ಹೇಳಿ.
  • ರೋಗಿಯ ಬೇಕು ಬೇಡಗಳನ್ನು ಗಮನಿಸಿ, ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಲು ಉತ್ತೇಜಿಸಿ.
  • ರೋಗಿಯು ಆದಷ್ಟು ಬೇಗ ಕೆಲಸ ಮಾಡಲು, ಸ್ವಾವಲಂಬಿಯಾಗಿ ಬದುಕಲು ಅವಕಾಶ ಮಾಡಿಕೊಡಿ.
  • ರೋಗಿ ಮತ್ತು ಮನೆಯವರಿಗೆ ಸಮಾಧಾನ, ಆಸರೆ ನೀಡಿ.
  • ನೀವೂ ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ಭಾಗವಹಿಸಿ :-

  • ಗರ್ಭಿಣಿ ತಾಯಿ ಮತ್ತು ಮಗುವಿನ ಪೋಷಣೆ ಚೆನ್ನಾಗಿರಲಿ, ಅವಧಿಗೊಂದಾವರ್ತಿ ಬಾರಿ ವೈದ್ಯರ ಸಲಹೆ ಪಡೆಯಲಿ.
  • ಹೆರಿಗೆಯನ್ನು ತರಬೇತಿ ಪಡೆದ ದಾದಿ/ನರ್ಸ್/ವೈದ್ಯರಿಂದ ಮಾಡಿಸಬೇಕು.
  • ಒಳ್ಳೆಯ ವಾತಾವರಣದಲ್ಲಿ ಮಗುವಿಗೆ ಆಟ -ವಸ್ತುಗಳು -ಪಾಠದ ಮೂಲಕ ಪ್ರಚೋದನೆ ಕೊಡಬೇಕು.
  • ತಲೆಗೆ-ಮೆದುಳಿಗೆ ಪೆಟ್ಟು ಬೀಳದಂತೆ ಮುಂಜಾಗ್ರತೆ ವಹಿಸಬೇಕು.
  • ಮಾದಕ ವಸ್ತುಗಳನ್ನು (ಆಲ್ಕೋಹಾಲ್/ಗಾಂಜಾ/ ಆಫೀಮು) ಸೇವಿಸದಿರುವುದು.
  • ಪ್ರತಿಯೊಬ್ಬ ವ್ಯಕ್ತಿ ಪ್ರತಿ ದಿನ ಒಂದು ಘಂಟೆ ಕಾಲ ಆಟ, ವ್ಯಾಯಾಮ, ಓದುವುದು, ಸಂಗೀತ ಇತರ ಆರೋಗ್ಯಕರ ಹವ್ಯಾಸಗಳನ್ನು ಇಟ್ಟುಕೊಳ್ಳಬೇಕು.
  • ಶಾರೀರಿಕ ಖಾಯಿಲೆಗಳಿಗೆ ಕ್ರಮವಾದ ಚಿಕಿತ್ಸೆಯನ್ನು ಪಡೆಯಬೇಕು.
  • ಇರುವ ಅನುಕೂಲ - ಸುಳಭ್ಯಗಳ ಮಿತಿಯಲ್ಲೇ ಆದಷ್ಟು ನೆಮ್ಮದಿಯ ಜೀವನ ನಡೆಸಲು ಪ್ರಯತ್ನ ಮಾಡಬೇಕು.

ನೆನಪಿಡಿ

  • ಮಾನಸಿಕ ಖಾಯಿಲೆ ಮತ್ತು ಮೂರ್ಛೆ ರೋಗ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು. ಸೂಕ್ತ ಔಷದೋಪಚಾರದಿಂದ ಹತೋಟಿಗೆ ಬರುತ್ತದೆ.
  • ಬುದ್ದಿ ಮಾಂದ್ಯತೆ- ಇದು ಮೆದುಳಿನ ನ್ಯೂನತೆ, ಆದಷ್ಟು ಬೇಗ ಮಗುವಿಗೆ ತರಬೇತಿ ಕೊಟ್ಟು ಕಲಿಸುವುದರಿಂದ ಅದು ಉತ್ತಮವಾಗುತ್ತದೆ.
  • ಈ ಖಾಯಿಲೆಗಳಿಗೆ ಸೂಕ್ತ ಸಲಹೆ, ಚಿಕಿತ್ಸೆ ಈಗ ನಿಮ್ಮ ಸಮೀಪದ ಆಸ್ಪತ್ರೆಯಲ್ಲಿ ಲಭ್ಯವಿದೆ. ನಿಮ್ಮ ಆರೋಗ್ಯ ಸಹಾಯಕರು ಅಥವಾ ವೈದ್ಯರೇ ಇದನ್ನು ಕೊಡಬಲ್ಲರು.
  • ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಬಹುದು, ರೋಗಿಗಳಿಗೆ ತಮ್ಮ ಕೈಲಾದ ನೆರವು ಮತ್ತು ಆಸರೆಯನ್ನು ನೀಡಬಹುದು.

 

ಮೂಲ;ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate