ಆರಂಭ ಅನ್ನೋದು ವರ್ಷ; ವ್ಯಾಪಾರ ಅನ್ನೋದು ನಿಮಿಷ...’
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕು ವಿಠಲಾಪುರ ಗ್ರಾಮದ ವೀರಣ್ಣ ಅವರು ಆಡಿದ ಈ ಮಾತು ಅವರ ಕುಟುಂಬದ ಕೃಷಿ ಅನುಭವದ ಸಾರ ಸರ್ವಸ್ವ. ಕಗ್ಗಾಡಿನಂತಿದ್ದ ಅಂಕುಡೊಂಕು ಕಲ್ಲು ಭೂಮಿಯನ್ನು ಸತತ 30 ವರ್ಷಗಳ ಪರಿಶ್ರಮದಿಂದ ಫಲವತ್ತಾದ ತೋಟವನ್ನಾಗಿ ಮಾರ್ಪಡಿಸಿದ್ದು ಈ ಕುಟುಂಬದ ಮಹತ್ತರ ಸಾಧನೆ.
‘ಬಂದೋರೆಲ್ಲಾ ಕತ್ತು ಎತ್ತಿ ಫಸಲು ನೋಡ್ತಾರೆ. ಕಿವಿಯಗಲಿಸಿ ಲಾಭ ಎಷ್ಟು ಅಂತ ಕೇಳ್ತಾರೆ. ಕತ್ತು ಬಗ್ಗಿಸಿ ಮಣ್ಣು ನೋಡಿದ್ರೆ ತಾನೆ ಸ್ವಾಮಿ ಲಾಭ- ನಷ್ಟದ ಅಂದಾಜು ಆಗೋದು’ ಎಂದು ವೀರಣ್ಣ ತಮ್ಮನ್ನು ಭೇಟಿಯಾಗಲು ಬರುವ ರೈತರನ್ನು ಪ್ರೀತಿಯಿಂದ ಗದರುತ್ತಾರೆ.
ತಂದೆ ತೀರಿಕೊಂಡಾಗ ರುದ್ರಪ್ಪನವರಿಗೆ ಕೇವಲ 6 ವರ್ಷ. ವೀರಣ್ಣ ಇನ್ನೂ 9ರ ಬಾಲಕ. ಅವರ ತಾಯಿ ಅವರಿವರ ಮನೆಯಲ್ಲಿ ಕೂಲಿ ಮಾಡಿಕೊಂಡು ಮಕ್ಕಳನ್ನು ಬೆಳೆಸಿದರು. ತಮ್ಮನಾದರೂ ಓದಲಿ ಎಂದು ರುದ್ರಪ್ಪ ಓದು ಬಿಟ್ಟು ಮನೆ ಸೇರಿದರು. ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಣ ಕಟ್ಟಲಾಗದೇ ವೀರಪ್ಪ ಸಹ ಮನೆ ಸೇರಿದರು. ಬರಗಾಲದ ಛಾಯೆ, ಕಿತ್ತು ತಿನ್ನುವ ಬಡತನ, ಮೈ ತುಂಬಾ ಸಾಲ. ಮುಂದೇನು ಎಂಬ ಉತ್ತರವಿಲ್ಲದ ಪ್ರಶ್ನೆ. ಮನೆಯಲ್ಲಿ ಕೂತು ಯೋಚಿಸಿದ ಸೋದರರಿಗೆ ಸಿಕ್ಕ ಉತ್ತರ ಒಂದೇ: ದುಡಿಮೆ.
‘ದುಡಿಯಬೇಕು, ದುಡಿದು ಬದುಕಬೇಕು. ಬೆಟ್ಟು ಆಡಿದ್ರೆ ಬೆಟ್ಟ ಸವೆಯುತ್ತೆ’ ಎಂದು ನಿರ್ಧರಿಸಿದ ನಂತರ ರುದ್ರಪ್ಪ- ವೀರಣ್ಣ ಹಿಂದೆ ನೋಡಲಿಲ್ಲ. ಅಂಕು ಡೊಂಕು ಭೂಮಿಯನ್ನು ಸಮ ಮಾಡಲು ಆರಂಭಿಸಿದರು. ರುದ್ರಪ್ಪ ಭೂಮಿಯ ಮೇಲೆ ಬೆವರು ಹರಿಸುತ್ತಿದ್ದರೆ ವೀರಣ್ಣ ಮನೆಯ ಹೊರಗಿದ್ದು ನೂರೆಂಟು ಕಸುಬು ಮಾಡಿ ಹಣ ಹೊಂದಿಸಲು ಯತ್ನಿಸಿದರು. ಸಂಕಲ್ಪ ಶಕ್ತಿಯೊಂದಿಗೆ ಇಂದು ಈ ಮಟ್ಟಕ್ಕೆ ಬಂತು ನಿಂತಿದ್ದಾರೆ.
‘ನಾನು ಓದಲೆಂದು ಸೋದರ ಮಾವನ ಮನೆಗೆ ಹೋಗಿದ್ದೆ. ಅವರ ಬಳಿಯೇ ಟೈಲರಿಂಗ್ ಕಲಿತೆ. ಊರಿಗೆ ಬರುವಾಗ ಟೈಲರಿಂಗ್ ಯಂತ್ರ ತಂದು ಜಾತ್ರೆಗಳು ಆಗುವ ಊರುಗಳಿಗೆ ಹೋಗಿ ಬಟ್ಟೆ ಹೊಲಿದು ಕೊಡುತ್ತಿದ್ದೆ. ಒಂದು ಜಾತ್ರೆಗೆ 300 ರೂಪಾಯಿ ದುಡಿದರೆ ಹೆಚ್ಚು ಎನ್ನುವ ಸ್ಥಿತಿ ಇತ್ತು’ ಎಂದು ವೀರಪ್ಪ ಸವೆಸಿದ ಹಾದಿ ನೆನಪಿಸಿಕೊಳ್ಳುತ್ತಾರೆ. ಅಣ್ಣ- ತಮ್ಮ ಊರಿನ ತೋಟದ ಮಾಲೀಕರ ಮನೆಯಲ್ಲಿ ತೆಂಗಿನಕಾಯಿ ಸುಲಿಯಲು, ಅಡಿಕೆಚೇಣಿ ಹಿಡಿಯಲು, ಬೇರೆಯವರ ಹೊಲಗಳಲ್ಲಿ ಗೇಣಿ ಆಧಾರದ ಮೇಲೆ ಶೇಂಗಾ ಬೆಳೆಯಲೂ ಹಿಂದೆ ಮುಂದೆ ನೋಡಲಿಲ್ಲ. 1985ರಲ್ಲಿ 2 ಬೋರ್‌ವೆಲ್ ಕೊರೆಸಿ ಬಾಳೆ ನೆಟ್ಟರು.
ಇಲ್ಲಿಂದಾಚೆಗೆ ಕುಟುಂಬದ ದೆಸೆ ಬದಲಾಯಿತು. ನೆಟ್ಟ ಮೊದಲ ವರ್ಷದಿಂದಲೇ ಬಾಳೆ ಹಣಕೊಡಲು ಆರಂಭಿಸಿತು. ‘ತೆಂಗು, ಅಡಿಕೆಯಲ್ಲಿ ಫಲ ಕಾಣಲು ಸಮಯ ಬೇಕು. ಆದರೆ ಬಾಳೆಯಲ್ಲಿ ಹಾಗಲ್ಲ. ನೆಟ್ಟ ಮರುವರ್ಷದಿಂದಲೇ ಗೊನೆ ಸಿಗುತ್ತೆ, ಕಾಸು ಬರುತ್ತೆ. ಬಾಳೆ ಅನ್ನೋದು ರೈತನ ಪಾಲಿಗೆ ಕರೆಯುವ ಎಮ್ಮೆ ಇದ್ದಂತೆ’ ಎಂಬುದು ಇವರು ಕಂಡುಕೊಂಡ ಸತ್ಯ. ‘ನಿಮ್ಮಲ್ಲಿ ಸಾವಯವ ಕೃಷಿಯ ಜಾಗೃತಿ ಮೂಡಿದ್ದು ಹೇಗೆ?’ ಎಂದು ಪ್ರಶ್ನಿಸಿದರೆ ವೀರಪ್ಪನವರು, ‘ಬೇರೆಯವರ ಸಲಹೆಯಂತೆ ಸಾವಯವ ಕೃಷಿಗೆ ಇಳಿದವರಲ್ಲ.
ಹೊಲಕ್ಕೆ ರಾಸಾಯನಿಕಗೊಬ್ಬರ ಹಾಕಲು ನಮಗೂ ಮನಸ್ಸಿತ್ತು; ಆದರೆ ಖರೀದಿಸಲು ಹಣ ಇರಲಿಲ್ಲ. ಹೀಗಾಗಿ ಸಾವಯವದ ಮೊರೆ ಹೋದೆವು’ ಎಂದು ನಗುತ್ತಾರೆ. ಆದರೆ ಮುಂದೆ ಇದೇ ಅವರ ಬದುಕಿನ ದಿಕ್ಕು ಬದಲಿಸಿತು. ಸಾಕಷ್ಟು ಹಣ, ಕೀರ್ತಿ ಸಂಪಾದನೆಯಾದ ನಂತರವೂ ಇವರ ಸಾವಯವ ನಿಷ್ಠೆ ಬದಲಾಗಲಿಲ್ಲ. ಎರೆಹುಳು ಸಾಕಣೆಯಲ್ಲಿ ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆ ದುಮ್ಮಳ್ಳಿ ಗ್ರಾಮದ ಶಿವಮ್ಮ ಅವರ ಬಳಿ ಹೋಗಿ ಎರೆಹುಳು ಸಾಕಣೆ ತಂತ್ರ ಕಲಿತರು. ದೇವಂಗಿ ಪ್ರಫುಲ್ಲಚಂದ್ರ, ತೀರ್ಥಹಳ್ಳಿಯ ಪುರುಷೋತ್ತಮರಾಯರ ಬಳಿ ಕೃಷಿ ಮಾರ್ಗದರ್ಶನ ಪಡೆದರು.
ಈ ಕುಟುಂಬದ ಬಳಿ ಗೀರ್, ಕಾಂಕ್ರೇಜ್, ಹಳ್ಳಿಕಾರ್, ಅಮೃತ್‌ಮಹಲ್, ಮಲೆನಾಡುಗಿಡ್ಡ ತಳಿಯ ಒಟ್ಟು 12 ರಾಸುಗಳಿವೆ. ದೇಸಿ ತಳಿಯ ಘನೀಕೃತ ವೀರ್ಯವನ್ನು ಸಂಗ್ರಹಿಸಿದ್ದಾರೆ. ಮುಂದಿನ ದಿನದಲ್ಲಿ ದೇಸಿ ತಳಿಯ ಮತ್ತಷ್ಟು ರಾಸು ಬೆಳೆಸುವ ಆಸೆ ಹೊಂದಿದ್ದಾರೆ. ಕೇರಳದಲ್ಲಿ ಬಳಕೆಯಲ್ಲಿರುವ ಕಾಂಗೋ ಸಿಗ್ನಲ್ ತಳಿಯ ಹುಲ್ಲನ್ನು ಈ ಕುಟುಂಬ ತಮ್ಮ ತೋಟದ ಬದು ಸೇರಿದಂತೆ ಹಲವು ನಿರುಪಯುಕ್ತ ಸ್ಥಳದಲ್ಲಿ ಬೆಳೆಸಿದ್ದಾರೆ. ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿರುವ ಈ ಬಹುವಾರ್ಷಿಕ ಹುಲ್ಲು ನೀರು- ಗೊಬ್ಬರದ ಹಂಗು ಇಲ್ಲದೆ ಬೆಳೆಯುತ್ತೆ.
ಬೀಜ- ಕಡ್ಡಿಗಳಿಂದಲೂ ಮೊಳಕೆ ಬರುತ್ತದೆ. ಮೇವಿನ ಸಮಸ್ಯೆ ಬಹುಪಾಲು ನೀಗಿಸಿದೆ. ಭತ್ತದ ಹುಲ್ಲು- ಜೋಳದ ಸಪ್ಪೆ ಕೈ ಆಸರೆಗೆ ಸದಾ ಇರುತ್ತದೆ. ಹಾಲು ಕರೆಯುವ ಗೀರ್ ತಳಿಯ ರಾಸುಗಳಿಗೆ ಮನೆಯಲ್ಲಿಯೇ ಸಿದ್ಧಪಡಿಸಿದ ಪೂರಕ ಪೌಷ್ಟಿಕ ಆಹಾರವನ್ನು ದಿನಕ್ಕೆ ಸುಮಾರು 4 ಕೆ.ಜಿ. ನೀಡುತ್ತಾರೆ. ಅಜೋಲ್ಲಾ, ಮೆಕ್ಕೆಜೋಳ, ಅವರೆ, ಕಡಲೆ, ಬಟಾಣಿ ಹೊಟ್ಟು, ಬಾಯಿಲ್ಡ್ ಬೋಕಿ (ಕುಸುಬಲಕ್ಕಿಯ ತೌಡು) ಬೆರೆಸಿ ತಯಾರಿಸಿದ ಆಹಾರವನ್ನು ರಾಸುಗಳು ಇಷ್ಟಪಟ್ಟು ತಿನ್ನುತ್ತವೆ.
ಗೀರ್ ತಳಿಯ ಎರಡು ರಾಸುಗಳಿಂದ ದಿನವೊಂದಕ್ಕೆ ಸರಾಸರಿ 10 ಲೀಟರ್ ಹಾಲು ಸಿಗುತ್ತಿದೆ. ಮೊದಲು ಹಾಲನ್ನು ಡೇರಿಗೆ ಹಾಕುತ್ತಿದ್ದರು. ಆದರೆ ಹಾಲು ಉತ್ಪಾದನೆಗೆ ಆಗುವ ವೆಚ್ಚಕ್ಕೆ ಹೋಲಿಸಿದರೆ ಸಿಗುತ್ತಿದ್ದ ಪ್ರತಿಫಲ ಕಡಿಮೆ ಎನಿಸುತ್ತಿತ್ತು. ಹೀಗಾಗಿ ಇದೀಗ ತುಪ್ಪ ತಯಾರಿಸಿ ಮಾರುವ ತಂತ್ರ ಅನುಸರಿಸುತ್ತಿದ್ದಾರೆ. ಒಂದು ಕೆ.ಜಿ.ಗೆ 1.5 ಸಾವಿರದಂತೆ ತುಪ್ಪವನ್ನು ಮಾರುತ್ತಿದ್ದಾರೆ.
‘ಒಂದು ಕೆ.ಜಿ. ತುಪ್ಪ ತಯಾರಾಗಲು 25 ಲೀಟರ್ ಹಾಲು ಬೇಕು. ಒಂದು ಲೀಟರ್ ಹಾಲಿಗೆ 60 ರೂಪಾಯಿ ಸಿಗುತ್ತಿತ್ತು. ಮೊದಲು ಡೇರಿಗೆ ಹಾಕುವಾಗ ಒಂದು ಲೀಟರ್ ಹಾಲಿಗೆ ಕೇವಲ 25 ರೂಪಾಯಿ ಸಿಗು ತ್ತಿತ್ತು’ ಎಂದು ವೀರಪ್ಪ ಲಾಭ-ನಷ್ಟದ ಲೆಕ್ಕಾಚಾರ ಮುಂದಿಡುತ್ತಾರೆ. ಹಿಡಿದಿಟ್ಟ ಗೋಮೂತ್ರ ವನ್ನು ತೋಟದಲ್ಲಿ ಕೀಟನಾಶಕವಾಗಿ ಬಳಸುತ್ತಾರೆ. ಗೋಬರ್‌ಗ್ಯಾಸ್, ಬಯೋಡೈಜೆಸ್ಟರ್, ಎರೆಗೊಬ್ಬರ ಘಟಕಕ್ಕೆ ಸೆಗಣಿ ಬಳಕೆಯಾಗುತ್ತದೆ. ವರ್ಷಕ್ಕೆ ಸರಾಸರಿ 30 ಟನ್ ಗೊಬ್ಬರ ಸಿಗುತ್ತೆ.
ಕೊಟ್ಟಿಗೆಯಲ್ಲಿ ಕಾಯರ್‌ಪಿಟ್ ಬಳಕೆ ಈ ಕುಟುಂಬದ ವೈಶಿಷ್ಟ್ಯಗಳಲ್ಲಿ ಒಂದು. ತೆಂಗಿನ ನಾರಿನಿಂದ ತಯಾರಾದ ಕಾಯರ್‌ಪಿಟ್ ಬಳಕೆಯಿಂದ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡುವುದು ಸುಲಭ. ನಾರಿಗೆ ನೀರಿನ ಅಂಶ ಹೀರಿಕೊಳ್ಳುವ ಗುಣ ಇರುವುದರಿಂದ ಗೋಮೂತ್ರದ ಒಂದು ಕಣವೂ ವ್ಯರ್ಥವಾಗದು. ಮೈಕ್ರೋಸ್ಪ್ರಿಂಕ್ಲರ್ ವ್ಯವಸ್ಥೆಯ ಮೂಲಕ ತೋಟಕ್ಕೆ ನೀರು ಕೊಡುತ್ತಾರೆ. ಕಲ್ಲು ನೆಲವಾಗಿರುವ ಕಾರಣ ಹನಿ ನೀರಾವರಿಯಿಂದ ಹೆಚ್ಚು ಉಪಯೋಗವಿಲ್ಲ ಎನ್ನುವುದು ಅವರ ಅನುಭವ.
ಬದುಗಳನ್ನು ಬಂದೋಬಸ್ತ್ ಆಗಿ ಹಾಕಿರುವ ಕಾರಣ ಮಳೆ ನೀರು ಸಂಗ್ರಹ ಚೆನ್ನಾಗಿ ಆಗುತ್ತಿದೆ. ಬಸಿಗಾಲುವೆ ನಿರ್ಮಾಣದಿಂದ ಅಡಿಕೆ ಮರದ ಬೇರು ಉಸಿರಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೇ ಕಾಲುವೆಗಳು ಮಳೆ ನೀರು ಹಿಡಿದಿಡುವ ಕೆಲಸವನ್ನೂ ನಿರ್ವಹಿಸುತ್ತಿವೆ. ‘15 ಎಕರೆ ಜಮೀನಿನಿಂದ ವರ್ಷಕ್ಕೆ 12 ಲಕ್ಷ ಆದಾಯವಿದೆ. ಯಾವುದೇ ಬ್ಯಾಂಕ್‌ನಲ್ಲಿ ಒಂದು ರೂಪಾಯಿ ಸಾಲವೂ ಇಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುರುವಳ್ಳಿ ಗ್ರಾಮದಲ್ಲಿರುವ ಪುರು ಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಕಳೆದ 15 ವರ್ಷ ಗಳಿಂದ, ಸಾವಯವ ಕೃಷಿಯಲ್ಲಿ ಮಹತ್ತರ ಸಾಧನೆ ಮಾಡಿದ ಒಂದು ರೈತ ಕುಟುಂಬವನ್ನು ಸನ್ಮಾನಿಸುವ ಪರಿ ಪಾಠ ಇಟ್ಟುಕೊಂಡಿದೆ. ಈ ಬಾರಿಯ ಸನ್ಮಾನ ಸಮಾರಂಭ ಏಪ್ರಿಲ್ 11ರಂದು ಮಂಗಳೂರಿನಲ್ಲಿ ನಡೆಯ ಲಿದ್ದು, ಈ ಕುಟುಂಬವು ಪ್ರಶಸ್ತಿಗೆ ಭಾಜನ ವಾಗಿದೆ.
15 ಎಕರೆ ಭೂಮಿಯಲ್ಲಿ ಏನುಂಟು, ಏನಿಲ್ಲ ಎನ್ನುವಂತಿಲ್ಲ. ಮನೆ ಬಳಕೆಗೆ ಬೇಕಾದ ಬಹು ಪಾಲು ಎಲ್ಲವೂ ಇದೆ. ಅಡಿಕೆ, ತೆಂಗು, ಕೋಕೋ, ಕಾಳುಮೆಣಸು, ಜಾಕಾಯಿ, ಬಾಳೆ, ಕಬ್ಬು, ರಾಗಿ, ಶೇಂಗಾ, ಭತ್ತ, ಹೆಸರು, ಉದ್ದು, ಈರುಳ್ಳಿ, ಮಾವು, ಹುಣಸೆ, ಸಪೋಟಾ, ವೆಲ್ವೆಟ್ ಬೀನ್ಸ್, ಸಿಲ್ವರ್‌ಓಕ್, ತೇಗ, ಹೆಬ್ಬೇವು, ಬಿದಿರು ಇತ್ಯಾದಿ ಗಿಡಮರಗಳು ಎದ್ದು ಕಾಣುತ್ತವೆ. ಸಮಗ್ರ ಕೃಷಿ ಪದ್ಧತಿಯ ಯೋಜಿತ ಅನುಸರಣೆ ಈ ಕುಟುಂಬದ ವಿಶೇಷ. ಬಹು ಹಂತದ ಕೃಷಿ ಪದ್ಧತಿ ಇರುವ ಕಾರಣ ಅಡಿಕೆ ಗಿಡಕ್ಕೆ ಮಾಡುವ ಉಪಚಾರ- ಹರಿಸುವ ನೀರಿನಲ್ಲಿಯೇ ಜಾಕಾಯಿ- ಕೋಕೋ- ಕಾಳುಮೆಣಸು ಆದಾಯ ತಂದುಕೊಡುತ್ತದೆ.
ಪಶ್ಚಿಮದ ಬಿಸಿಲು ಬೀಳುವ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿರುವ ಕಾರಣ ಬಿಸಿಲಿನ ಹೊಡೆತದಿಂದ ಮರಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ. ಅಡಿಕೆ ತೋಟದಲ್ಲಿಯೇ ಕೋಕಾ- ವೆಲ್ವೆಟ್ ಬೀನ್ಸ್‌ಇದೆ. ವೆಲ್ವೆಟ್ ಬೀನ್ಸ್ ಜೀವಂತ ಮುಚ್ಚಿಗೆಯಾಗಿ ಕಳೆ ನಿಯಂತ್ರಣ- ತೇವಾಂಶ ರಕ್ಷಣೆಯ ಕೆಲಸ ಮಾಡಿದರೆ ನೇರವಾಗಿ ಬೇರು ಇಳಿಸುವ ಕೋಕಾ ತೇವಾಂಶದ ಸಮರ್ಪಕ ಬಳಕೆಯಿಂದ ಪೂರಕ ಆದಾಯ ತಂದುಕೊಡುತ್ತಿದೆ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 4/28/2020