ಚಂದ್ರಹಾಸ ಚಾರ್ಮಾಡಿ ಅದೊಂದು ಕಾಲವಿತ್ತು. ಆಗೆಲ್ಲ ರೈತ ಮಂಜುನಾಥ್ ಜಮೀನಿನುದ್ದಕ್ಕೂ ಒಂದೇ ಬಗೆಯ ಬೆಳೆ ಹಚ್ಚ ಹಸಿರು ಮೈಚೆಲ್ಲಿ ನಿಲ್ಲುತ್ತಿತ್ತು. ಆದರೆ ಬೆಳೆದವನ ಜೇಬು ಮಾತ್ರ ತುಂಬುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಕಳೆದೆರಡು ವರ್ಷಗಳಿಂದ ಇವರ ಜಮೀನಿನಲ್ಲಿ ಬಹು ಬಗೆಯ ಬೆಳೆಗಳು ನಳನಳಿಸುತ್ತ ನಸು ನಗುತ್ತಿವೆ. ಬೆಳೆದ ಕೃಷಿಕನ ಕೈತುಂಬ ಕಾಂಚಾಣವೂ ನಲಿದಾಡುತ್ತಿದೆ!
ಇದು ಕೆ.ಆರ್. ನಗರದ ಹೊಸ ಅಗ್ರಹಾರ ಹೋಬಳಿಯ ಚಿಕ್ಕವಡ್ಡರಗುಡಿಯ ಕೃಷಿಕ ಮಂಜುನಾಥ್ ಅವರ ಕೃಷಿ ಸಾಧನೆಯ ಸ್ಥೂಲ ಪರಿಚಯ ಮಾತ್ರ. ನೀವೇನಾದರೂ ಈ ರೈತನ ಊರಿಗೆ ಬಂದರೆ ಸುತ್ತಮುತ್ತಲಿನಲ್ಲಿ ಹಡೀಲು ಬಿದ್ದಿರುವ ಎಕರೆಗಟ್ಟಲೆ ಜಮೀನುಗಳ ಮಧ್ಯೆ ಅರಳಿರುವ ಮಂಜುನಾಥ್‌ರ ಸಮಗ್ರ ಕೃಷಿ ತೋಟವನ್ನು ಕಣ್ತುಂಬಿಕೊಳ್ಳಬಹುದು.
ನಾನಾ ಬೆಳೆಗಳ ದರ್ಬಾರ್: ಹಿಂದೆ ಕೇವಲ ಕಲ್ಲಂಗಡಿ ಬೆಳೆಯುತ್ತಿದ್ದ ಇವರನ್ನು ಬಹು ಬೆಳೆ ಬೆಳೆಯುವಂತೆ ಪ್ರೇರೇಪಿಸಿದ್ದು ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಈಗ ತಮ್ಮ ಎರಡು ಎಕರೆ ಹತ್ತು ಗುಂಟೆ ಸಂತ ಜಮೀನಲ್ಲದೆ, ಪಕ್ಕದ ಭೂಮಿಯನ್ನು ಗೇಣಿಗೆ ಪಡೆದು ಒಟ್ಟು 3.5 ಎಕರೆ ತುಂಬ ಬಗೆಬಗೆಯ ಬೆಳೆಗಳನ್ನು ಬೆಳೆದು ಕಾಲ ಕಾಲಕ್ಕೆ ಆದಾಯ ಗಳಿಸುತ್ತಿದ್ದಾರೆ.
ರೂಬಿ ತಳಿಯ ಗುಲಾಬಿ ಗಿಡಗಳು, ಸಕಟ ತಳಿಯ 3,000 ಚೆಂಡು ಗಿಡಗಳು, ಇಂದ್ರ ತಳಿಯ 4,000 ಕ್ಯಾಪ್ಸಿಕಂ, ಹತ್ತು ಗುಂಟೆ ತುಂಬ 3,000 ಚಿಲ್ಲಿ ಮೆಣಸು, ಅರ್ಧ ಎಕರೆಯಲ್ಲಿ 2500 ಬಿಳಿ ಬದನೆ ಗಿಡ, ಕಲ್ಲಂಗಡಿ, ಹೂಕೋಸು, ನವಿಲುಕೋಸು, ಪಪ್ಪಾಯ ಗಿಡಗಳನ್ನು ನಾಟಿ ಮಾಡಿದ್ದಾರೆ.
ಅಲ್ಪಾವಧಿಯಲ್ಲಿ ಅಧಿಕ ಇಳುವರಿ: ಎರಡು ವರ್ಷ ಬದುಕುವ ಪಪ್ಪಾಯ ಗಿಡಗಳನ್ನು 3.5 ಎಕರೆಗೆ ಸುತ್ತಲಿಗೆ ಬೇಲಿ ನಿರ್ಮಿಸಿದಂತೆ ನೆಟ್ಟಿದ್ದು, ಅವುಗಳಿಗೆ ಪ್ರತ್ಯೇಕವಾಗಿ ನೀರು, ಗೊಬ್ಬರ ಉಣಿಸುವುದಿಲ್ಲ. ಇತರೆ ಗಿಡಗಳಿಗೆ ನೀಡಿದ್ದೇ ಇವುಗಳಿಗೂ ಸಾಕಾಗುತ್ತದೆ. ಇವು ಅಶೋಕ, ವಿನಾಯಕ, ಗ್ರೀನ್‌ಲ್ಯಾಂಡ್ ತಳಿಯ 200 ಪಪ್ಪಾಯ ಗಿಡಗಳಾಗಿದ್ದು, ಎರಡು ವರ್ಷ ಬದುಕುತ್ತವೆ. ಕಳೆದೆರೆಡ ವರ್ಷಗಳ ಹಿಂದೆ ನೆಟ್ಟ ಪಪ್ಪಾಯದಿಂದ ಈಗಾಗಲೇ ಒಂದು ಲಕ್ಷ ರೂ. ಆದಾಯ ಇವರಿಗೆ ಸಿಕ್ಕಿದೆ. ಕಡಿಮೆ ಶ್ರಮದಲ್ಲಿ ಬೆಳೆಯಬಹುದಾದ ಬೆಳೆ ಇದಾಗಿದ್ದು, ನೆಟ್ಟ ಆರು ತಿಂಗಳಲ್ಲಿ ಫಸಲು ಕೈಗೆ ಸಿಗುತ್ತದೆ. ಇವು ವರ್ಷದುದ್ದಕ್ಕೂ ಕಾಯಿ ನೀಡುತ್ತವೆ. ವ್ಯಾಪಾರಿಗಳು ಇವರ ತೋಟಕ್ಕೇ ಬಂದು ಕೆಜಿಗೆ 10ರೂ. ನಂತೆ ಖರೀದಿಸುತ್ತಾರಂತೆ.
ಮಿಶ್ರ ಕೃಷಿಯ ಖುಷಿ: ಗುಲಾಬಿ, ಗೊಂಡೆ, ಕ್ಯಾಪ್ಸಿಕಂ, ಚಿಲ್ಲಿ ಮೆಣಸು ಇದನ್ನು ಒಂದು ಸಾಲಿನ ನಂತರ ಇನ್ನೊಂದರಂತೆ ಜತೆಯಾಗಿ ನಾಟಿ ಮಾಡಿದ್ದಾರೆ. ಕೆ.ಆರ್.ನಗರದ ಮಣ್ಣಿಗೆ ಗುಲಾಬಿ ಹೊಸತು. ರೂಬಿ ತಳಿಯ ಗುಲಾಬಿಗಳನ್ನು ಇವರು ಆಯ್ಕೆ ಮಾಡಿದ್ದಾರೆ. ಮಿಶ್ರ ಕೃಷಿಯಿಂದ ರೋಗಗಳು ಕಾಡಲ್ಲವಂತೆ. ತೋಟದ ಮಧ್ಯೆ ಗೊಬ್ಬರ, ಕಟಾವಿಗೆ ಹೋಗುವುದು ಕೂಡ ಸುಲಭವಂತೆ. 1.5 ಎಕರೆಯಲ್ಲಿ 5,000 ಗುಲಾಬಿ ಗಿಡಗಳಿದ್ದರೂ ಎಲ್ಲಾ ಬೆಳೆಗಳಿಗೆ ಏಕ ಕಾಲದಲ್ಲಿ ಗೊಬ್ಬರ, ನೀರು ನೀಡುತ್ತಾರೆ. ಗುಲಾಬಿಯನ್ನು ಮೇ ತಿಂಗಳಲ್ಲಿ ನಾಟಿ ಮಾಡಿದ್ದಾರೆ. ಇವು 20 ವರ್ಷ ಬದುಕುತ್ತವೆ. ಗುಲಾಬಿ ಹೂವಿಗೆ ಕೆಜಿಗೆ 200ರಿಂದ 250 ರೂ. ದರವಿದ್ದು, ಕಳೆದ ವರ್ಷ ಖರ್ಚು ಕಳೆದು ಎರಡು ಲಕ್ಷ ರೂ. ಲಾಭವಾಗಿದೆಯಂತೆ.
ಎರಡು ತಿಂಗಳ ಬೆಳೆ ಚಂಡು : ನಾಟಿ ಮಾಡಿ 50 ದಿನಗಳಲ್ಲೇ ಇಳುವರಿ ನೀಡುವ ಸಕಟ ತಳಿಯ ಚೆಂಡು ಹೂವು, ಸತತ ಎರಡು ತಿಂಗಳುಗಳ ಕಾಲ ಫಸಲು ನೀಡುತ್ತದೆ. ಕೆಜಿಗೆ 10ರಿಂದ 40 ರೂ. ದರವಿದ್ದು 10 ಗುಂಟೆಯಲ್ಲಿರುವ 3,000 ಗಿಡಗಳಿಂದ ಮೂರು ತಿಂಗಳಲ್ಲಿ 45 ಸಾವಿರ ರೂ. ಆದಾಯ ಬಂದಿದೆ.
ಕ್ಯಾಪ್ಸಿಕಂ ಮುಗುಳ್ನಗೆ: ಚೆಂಡು ಹೂಗಳ ಮಧ್ಯೆ 15 ಗುಂಟೆಯಲ್ಲಿ 4000 ಕ್ಯಾಪ್ಸಿಕಂ ಮೆಣಸಿನ ಗಿಡಗಳನ್ನು ಜನವರಿಯಲ್ಲಿ ನಾಟಿ ಮಾಡಿದ್ದಾರೆ. ಐದು ತಿಂಗಳ ಬೆಳೆ ಇದಾಗಿದ್ದು ನಾಟಿ ಮಾಡಿದ ಎರಡು ತಿಂಗಳಿಂದ ಸತತ ಮೂರು ತಿಂಗಳು ಫಸಲು ನೀಡುವ ಕ್ಯಾಪ್ಸಿಕಂ ಕೆಜಿಗೆ 20ರಿಂದ 38 ರೂ. ದರವಿದ್ದು, ನಾಲ್ಕು ದಿನಕ್ಕೊಮ್ಮೆ ಕಟಾವು ಮಾಡಬಹುದು. ಇದನ್ನು ಬೆಳೆಯಲು ಖರ್ಚಾಗಿದ್ದು 20 ಸಾವಿರ, ಲಾಭ ಸಿಕ್ಕಿದ್ದು ಒಂದು ಲಕ್ಷ ರೂ.!
ಆರು ತಿಂಗಳ ಚಿಲ್ಲಿ ಮೆಣಸು : 10 ಗುಂಟೆಯಲ್ಲಿ 3000 ಚಿಲ್ಲಿ ಮೆಣಸಿನ ಗಿಡಗಳಿವೆ. ನಾಟಿ ಮಾಡಿದ ಎರಡು ತಿಂಗಳ ನಂತರ ಫಸಲು ನೀಡುವ ಚಿಲ್ಲಿ ಒಟ್ಟು ಆರು ತಿಂಗಳ ಬೆಳೆ. ಮೂರು ದಿನಕ್ಕೊಮ್ಮೆ ಕಟಾವು ಮಾಡುತ್ತಿದ್ದು, ನಾಲ್ಕು ತಿಂಗಳಲ್ಲಿ 50 ಸಾವಿರ ರೂ. ಆದಾಯ ಬಂದಿದೆ.
ಬಹುಬೇಡಿಕೆಯ ಬಿಳಿ ಬದನೆ : ಅರ್ಧ ಎಕರೆಯಲ್ಲಿ 2500 ಬಿಳಿ ಬದನೆ ಗಿಡಗಳಿದ್ದು, ಇದು ಆರು ತಿಂಗಳ ಬೆಳೆ. ಸರ್ವ ಋತುಗಳಲ್ಲೂ ಬಹುಬೇಡಿಕೆಯಿದ್ದು, ಜನವರಿ ನಾಟಿಗೆ ಸೂಕ್ತ. ನೆಟ್ಟು ಮೂರು ತಿಂಗಳಲ್ಲಿ ಬಿಳಿ ಬದನೆ ಇಳುವರಿ ಸಿಗುತ್ತದೆ. ತಿಂಗಳಿಗೆ 40ರಂತೆ ಮೂರು ತಿಂಗಳಲ್ಲಿ 120 ಕ್ವಿಂಟಾಲ್ ಮಾರಾಟ ಮಾಡಿದ್ದು, ಕೆಜಿಗೆ ಸರಾಸರಿ 10 ರೂ. ದರ ಸಿಗುತ್ತಿದೆ.
ವರ್ಷಪೂರ್ತಿ ಆದಾಯ: ನಾನಾ ಬಗೆಯ ಬೆಳೆಗಳನ್ನು ಬೆಳೆಯುವುದರಿಂದ ವರ್ಷಪೂರ್ತಿ ಆದಾಯ ಸಿಗುತ್ತಿದೆ. ಕೆ.ಆರ್.ನಗರ, ಮೈಸೂರಿನಲ್ಲಿ ಇವರ ತರಕಾರಿಗಳಿಗೆ ಬಹುಬೇಡಿಕೆಯಿದೆ. ಹೀಗಾಗಿ ಮಾರುಕಟ್ಟೆ ಸಮಸ್ಯೆಯಾಗಿಲ್ಲ.
ತಮ್ಮ ಭೂಮಿಯಲ್ಲಿ ತಾವೇ ಸ್ವತಃ ದುಡಿಯುತ್ತಿದ್ದು, ಅಗತ್ಯಬಿದ್ದರೆ ಮಾತ್ರ ಕೂಲಿಯಾಳುಗಳ ಮೊರೆ ಹೋಗುತ್ತಾರೆ. ಕಟಾವು, ನೀರು ಪೂರೈಕೆ, ಗೊಬ್ಬರ ನೀಡುವ ಕೆಲಸಗಳಿಗೆ ಪತ್ನಿ ಶಾಂತಮ್ಮ ಹಾಗೂ ಇಬ್ಬರು ಮಕ್ಕಳು ಜತೆಯಾಗುತ್ತಾರೆ. ಮೆಣಸನ್ನು ರಾತ್ರಿ ವೇಳೆ ಕೊಯ್ದರೆ, ಚೆಂಡು ಹೂವನ್ನು ಬೆಳಗ್ಗೆ ಬೇಗ ಎದ್ದು ಕಟಾವು ಮಾಡುತ್ತಾರೆ. ಮನೆಮಂದಿಯೆಲ್ಲ ದುಡಿಯುವುದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಇವರದ್ದಾಗುತ್ತಿದೆ.
ಕಡಿಮೆ ನೀರಲ್ಲೂ ಬಹುಬೆಳೆಗಳಿಂದ ಕೈತುಂಬ ಲಾಭ ಗಳಿಸುವ, ಸಮಗ್ರ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಮಂಜುನಾಥ್‌ರನ್ನು ರಾತ್ರಿ 8ರಿಂದ 8.30ರ ಒಳಗೆ ದೂ.ಸಂ. 9740133419 ಮೂಲಕ ಸಂಪರ್ಕಿಸಬಹುದು.
ಹನಿ ನೀರಿನ ಶಕ್ತಿ: ಮಂಜುನಾಥ್ ಹನಿ ನೀರಾವರಿ ಮೂಲಕ ಕೃಷಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಎಲ್ಲರಂತೆ ಇವರಿಗೂ ನೀರಿನ ಸಮಸ್ಯೆ ಇದ್ದರೂ ಜೀವಜಲವನ್ನು ಜಾಣತನದಿಂದ ಬಳಸುವುದರಿಂದ ಇವರು ಯಶಸ್ಸಿನ ಬೆನ್ನೇರಿದ್ದಾರೆ. ಎರಡು ಬೋರ್‌ನಿಂದ ಲಭ್ಯವಾಗುವ 1.5 ಇಂಚು ನೀರನ್ನು ಪ್ರತಿನಿತ್ಯ ಒಂದು ತಾಸುಗಳ ಕಾಲ ಎಲ್ಲ ಕೃಷಿಗೂ ಹನಿ ನೀರಾವರಿ ಮೂಲಕ ಪೂರೈಸುತ್ತಾರೆ. ಎಲ್ಲ ಋತುಗಳಲ್ಲೂ ಮಣ್ಣಿನಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳುವುದು ಇವರ ಯಶಸ್ಸಿನ ಕೀಲಿಕೈ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 4/27/2020