ದಾಳಿಂಬೆ, ಸಪೋಟ, ಸೀಬೆ ಮರಗಳ ಮೇಲೆ ಬಾಲ ಕುಣಿಸಿಕೊಂಡು ಓಡುವ ಅಳಿಲುಗಳನ್ನು ಸಾಕುವ ಯೋಚನೆ ಯಾವತ್ತಾದರೂ ಬರಬಹುದೆನ್ನುವ ಕಲ್ಪನೆಯೂ ನನಗಿರಲಿಲ್ಲ. ಎಲ್ಲೂ ಕಂಡು ಕೇಳರಿಯದ ಅಳಿಲು ಸಾಕುವ ಆಲೋಚನೆ ಮನಸ್ಸಿನಲ್ಲಿ ಮೂಡಿದ್ದು ನಾವು ಮನೆ ಕಟ್ಟಿಸಲು ಯೋಚಿಸಿದಾಗಲೇ.
ಹಳ್ಳಿಮನೆಗೆ ಸರಿಹೊಂದುವಂತೆ ಸುಂದರವಾದ ಪ್ಲಾನ್ ಹಾಕಿಕೊಟ್ಟ ಎಂಜಿನಿಯರ್, ‘ಮನೆ ಕಟ್ಟಲು ಯಾವ ಮರಳನ್ನು ಉಪಯೋಗಿಸುವುದು’ ಎಂದು ಕೇಳಿದರು. ‘ಕಾವೇರಿ ಮರಳು’ ಎಂದು ತಟ್ಟನೆ ಉತ್ತರ ಕೊಟ್ಟೆವು. ತಬ್ಬಿಬ್ಬಾದ ಅವರು ‘ಕಪಿಲಾ, ಕಾವೇರಿ ಮರಳು ಎಂದು ಕೇಳಲಿಲ್ಲ ನಾನು, ಮರಳಿಗೆ ಪರ್ಯಾಯ ಮರಳುಗಳಾದ ಜೆಲ್ಲಿ ಮರಳು, ಕಬ್ಬಿಣದ ಅದಿರಿನ ಮರಳು...’ ಎಂದು ವಿವರಿಸಿದರು. ನಮ್ಮ ಮರಳಿನ ಅಜ್ಞಾನ ಕಂಡ ಅವರು, ‘ಯೋಚಿಸಿ ತೀರ್ಮಾನಿಸಿ’ ಎಂದರು. ‘ಕೆಲವು ತಿಂಗಳ ಹಿಂದೆ ಮರಳಿಗೆ ಚಿನ್ನದ ದರ ಇತ್ತು. ಆದರೂ ಹೇಗಾದರೂ ತರಿಸಿ ಮನೆ ಕಟ್ಟಿಸಬಹುದಿತ್ತು. ಈಗಂತೂ ಮರಳು ಸಿಗುವುದೇ ದುಸ್ತರವಾಗಿ ಪರ್ಯಾಯ ಮರಳು ಬಳಸುತ್ತಿದ್ದೇವೆ’ ಎಂದರು. ಮರಳಿಗೂ ಪರ್ಯಾಯವೇ, ಇದಂತೂ ತೀರ ಹೊಸ ವಿಷಯವಾಗಿತ್ತು ನಮ್ಮ ಪಾಲಿಗೆ. ಮರಳಿನ ಬಗ್ಗೆ ಯೋಚಿಸಿ ಮನೆ ಕಟ್ಟುವ ತೀರ್ಮಾನ ಮಾಡುತ್ತೇವೆಂದು ಮನೆಗೆ ಬಂದೆವು.
ಮನೆಗೆ ಬಂದರೂ ಮರಳಿನ ಗುಂಗಿನಿಂದ ಹೊರಬಂದಿರಲಿಲ್ಲ. ಆ ಕಡೆ ಕಾವೇರಿ ನದಿ, ಈ ಕಡೆ ಕಪಿಲಾ ನದಿ. ನಡುವೆ ನಮ್ಮ ಹಳ್ಳಿ ರಾಯರಹುಂಡಿ (ಟಿ. ನರಸೀಪುರ ತಾಲ್ಲೂಕು). ನಮ್ಮ ಹಳ್ಳಿ ಬಳಸಿಕೊಂಡು ಅವೆರಡೂ ನದಿಗಳು ತಿರಮಕೂಡಲಿನಲ್ಲಿ ಸೇರಿ ಸಂಗಮವಾಗುತ್ತವೆ. ನದಿ ದಂಡೆಯ ಸಮೀಪವೇ ನಮ್ಮ ಮನೆ ಇರುವುದರಿಂದ ಲಾರಿಗಳಲ್ಲಿ ಮರಳು ಸಾಗಿಸಲಾಗದಿದ್ದರೂ, ಎತ್ತಿನ ಗಾಡಿಯಲ್ಲಿ ಮರಳು ಹೂಡಿಸುವ ಪ್ರಯತ್ನ ಮಾಡೋಣವೆಂದುಕೊಂಡೆವು. ಗಾಡಿಯವರನ್ನು ಕೇಳಿದರೆ ಅವರು ನಾವು ಯಾವ ಶತಮಾನದ ಮಾತನಾಡುತ್ತಿದ್ದೇವೆ ಎಂಬಂತೆ ನೋಡಿದರು. ‘ನದಿಯಿಂದ ಯಾರಾದರೂ ಮರಳು ಎತ್ತಿಕೊಟ್ಟರೆ ನಿಮ್ಮ ಮನೆಗೆ ಸಾಗಿಸುತ್ತೇವೆ’ ಎಂದು, ನದಿಯಿಂದ ಮರಳು ತೆಗೆಸುವ ಕೆಲಸ ನಮಗೇ ಬಿಟ್ಟರು. ಯಾರಾದರೂ ಕೊಪ್ಪರಿಗೆಯಲ್ಲಿ ಮರಳು ಎತ್ತಿಕೊಡುವವರು ಸಿಗಬಹುದೆಂದು ವಿಚಾರಿಸಿದರೆ, ತುಕ್ಕು ಹಿಡಿದಿದ್ದ ಕೊಪ್ಪರಿಗೆಗಳನ್ನು ತೋರಿಸಿ, ‘ಈಗ ತುಂಬಾ ಬಿಗಿಯಾದ ಕಾನೂನಾಗಿದೆ ಬುದ್ದಿ, ಇದು ಮುಖ್ಯಮಂತ್ರಿ ಕ್ಷೇತ್ರ’ ಅಂತ ನಮಗೇ ಕಾನೂನು ತಿಳಿವಳಿಕೆ ಕೊಟ್ಟು ಕಳಿಸಿದ.
‘ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಅಂತಾಯಿತಲ್ಲ. ನದಿಯಿಂದ ಮರಳು ತೆಗೆದು, ಮರಳು ವ್ಯಾಪಾರ ಮಾಡುತ್ತಿದ್ದವರೆಲ್ಲಾ ಬೇಸಿಗೆ ಆರಂಭವಾಗುತ್ತಿದಂತೆ ನದಿಯಿಂದ ಮರಳು ತೆಗೆದು ನಮ್ಮ ತೋಟದಲ್ಲೇ ಸಂಗ್ರಹಿಸುತ್ತಿದ್ದರು. ಗುರುತು, ಪರಿಚಯ ಇಲ್ಲದವರೆಲ್ಲಾ ನಮ್ಮ ತೋಟದಲ್ಲಿ ಮರಳು ಗುಡ್ಡೆ ಹಾಕಿರುತ್ತಿದ್ದರು. ಮಳೆ ಬಂದು ನದಿಯಲ್ಲಿ ಮರಳು ತೆಗೆಯಲು ಸಾಧ್ಯವಾಗದೇ ಹೋದಾಗ ಇದನ್ನು ಖಾಲಿ ಮಾಡುತ್ತಿದ್ದರು. ಆಗೆಲ್ಲಾ ಮರಳಿಗೆ ಹೀಗೆ ಬೆಲೆ ಇರಲಿಲ್ಲ. ಬೇಸಿಗೆ ರಜೆ ಕಳೆಯಲು ಹಳ್ಳಿಗೆ ಬಂದ ಮಕ್ಕಳೆಲ್ಲಾ ಇಡೀ ದಿನ ಮರಳು ದಿಬ್ಬದ ಮೇಲೆ ಆಡಿ, ಕುಣಿದು ಕಾಲ ಕಳೆಯುತ್ತಿದ್ದರು. ಮರಳು ಗುಡ್ಡೆಯಲ್ಲಿ ಮಕ್ಕಳು ಎಂತೆಂಥ ಮನೆಗಳನ್ನು ಕಟ್ಟುತ್ತಿದ್ದರು. ಅದಕ್ಕೆ ಅಲ್ಲೇ ಸಿಗುವ ರೋಡ್ ಮಲ್ಲಿಗೆ, ಮೇ ಫ್ಲವರ್‌ಗಳಿಂದ ಸುಂದರವಾಗಿ ಅಲಂಕರಿಸಿರುತ್ತಿದ್ದರು. ಒಂದಷ್ಟು ಕಪ್ಪೆಗೂಡು ಮಾಡುತ್ತಿದ್ದರು. ಅದಕ್ಕೆಲ್ಲಾ ಕಪ್ಪೆಚಿಪ್ಪು, ಶಂಖಗಳಿಂದ ಅಲಂಕಾರ ಮಾಡುತ್ತಿದ್ದರು. ಹೇಗಿದ್ದ ಕಾಲ ಹೇಗಾಯಿತಲ್ಲ, ಹೀಗಾದರೆ ಮರಳಿಗೇನು ಮಾಡೋದು? ಮನೆ ಹೇಗೆ ಕಟ್ಟೋದು? ಎಂದು ಯೋಚಿಸುವಂತಾಯಿತು.
ರಾಮನವಮಿ ಕಾರ್ಯಕ್ರಮದಲ್ಲಿ ಏನೇನೋ ಕಥೆ, ಹರಿಕಥೆ, ಉಪಕಥೆ ಇತ್ಯಾದಿ ಟಿ.ವಿ.ಯಲ್ಲಿ ಬರುತ್ತಿತ್ತು. ಅದನ್ನು ನೋಡುತ್ತಿದ್ದೆನಾದರೂ ಮನಸ್ಸಿನ್ನೂ ಮರಳಿನ ಗುಂಗಿನಿಂದ ಹೊರ ಬಂದಿರಲಿಲ್ಲ. ಅದರಲ್ಲಿ ಅಳಿಲು, ಸೇತುವೆ ಕಟ್ಟಲು ಮಾಡಿದ ಸಹಾಯವನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು. ಸೀತೆಯನ್ನು ಕರೆತರಲು ಲಂಕೆಗೆ ದೊಡ್ಡ ಸೈನ್ಯ ಹೋಗಬೇಕು. ಸಮುದ್ರಕ್ಕೆ ಸೇತುವೆ ನಿರ್ಮಾಣವಾಗಬೇಕು. ಆ ಕಾರ್ಯದಲ್ಲಿ ಕೈ ಜೋಡಿಸದವರೇ ಇಲ್ಲ. ಅಲ್ಲೇ ಇದ್ದ ಒಂದು ಅಳಿಲಿಗೆ ಸೇತುವೆ ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳುವ ಬಯಕೆ ಉಂಟಾಗುತ್ತದೆ. ಎಲ್ಲರೂ ಅವರ ಶಕ್ತ್ಯಾನುಸಾರ ರಾಮನ ಸೇವೆಯೆಂದು ಕೆಲಸ ಮಾಡುತ್ತಿದ್ದಾರೆ. ಅಳಿಲು ತನ್ನ ಪಾಲಿನ ಸೇವೆ ಹೇಗೆ ಮಾಡಬಹುದೆಂದು ಯೋಚಿಸಿ ಸಮುದ್ರದಲ್ಲಿ ಮುಳುಗಿ ಮೈಗೆ ಮರಳು ಮೆತ್ತಿಕೊಂಡು ದಡಕ್ಕೆ ಬಂದು ಮರಳು ಜಾಡಿಸಿ ಹೋಗುತ್ತದೆ.
ಹೀಗೇ ಮುಳುಗಿ, ಎದ್ದು ಮೈ ಜಾಡಿಸಿ, ಒಂದು ಅಳಿಲು ಗುಡ್ಡೆಯಷ್ಟು ಮರಳು ಸಂಗ್ರಹಿಸಿದ್ದನ್ನು ನೋಡಿ ಶ್ರೀರಾಮಚಂದ್ರ ಪ್ರೀತಿಯಿಂದ ಅದರ ಮೈ ಮೇಲೆ ಬೆರಳಾಡಿಸಿದ. ಈಗಲೂ ಅಳಿಲಿನ ಬೆನ್ನಮೇಲೆ ಬೆರಳು ಗುರುತು ನೋಡಬಹುದು. ಕೆಲಸ ಚಿಕ್ಕದಾಗಲೀ, ದೊಡ್ಡದಾಗಲೀ ಮಾಡುವ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡಬೇಕೆಂದು ಹೇಳುತ್ತಿದ್ದರು. ಅಳಿಲು ಸೇವೆ ಎನ್ನುವುದನ್ನು ಕೇಳುತ್ತಲೇ ಬೆಳೆದುಬಂದಿದ್ದರೂ ಇವತ್ತು ಅದರ ಪ್ರಭಾವ ಬೇರೆ ರೀತಿ ಯೋಚಿಸುವಂತೆ ಮಾಡಿತು. ಪುರಾಣ ಕಾಲದಲ್ಲಿ ದ್ರೌಪದಿ ಬಳಸುತ್ತಿದ್ದ ಅಕ್ಷಯಪಾತ್ರೆ ಸೋಲಾರ್ ಕುಕ್ಕರ್ ಅಂತೆ. ರಾಮಾಯಣದ ಕಾಲದಲ್ಲೇ ವಿಮಾನಗಳು ಇದ್ದವಂತೆ. ಮಹಾಭಾರತ ಕಾಲದಲ್ಲೇ ಪ್ರನಾಳಶಿಶು ಹುಟ್ಟಿತ್ತಂತೆ, ಈಗಿನ ಸಂಶೋಧನೆಗಳೆಲ್ಲಾ ಅದರ ಆಧಾರದ ಮೇಲೆ ನಡೆಯುತ್ತಿವೆ, ನಡೆಯಬೇಕು ಅಂತೆಲ್ಲಾ ಕೇಳಿದ್ದ ನೆನಪು ಒಮ್ಮೆ ಮನಸ್ಸಿನಲ್ಲಿ ಮೂಡಿಬಂತು. ನಾನೇಕೆ ದೊಡ್ಡ ಪ್ರಮಾಣದಲ್ಲಿ ಅಳಿಲು ಸಾಕಬಾರದು. ಅದಕ್ಕೆ ತರಬೇತಿ ನೀಡಿ ನದಿಯಿಂದ ಮರಳು ತೆಗೆಸಬಾರದು. ಅದಕ್ಕೆ ಕಾನೂನಿನ ತೊಡಕು ಇರುವುದಿಲ್ಲವಾ ಎಂದು ಕಾನೂನು ತಜ್ಞರನ್ನು ಕೇಳುತ್ತಿದ್ದೇನೆ. ಹಾಗೇ ನಿಮಗೂ ಯಾರಾದರೂ ಅಳಿಲು ಸಾಕಿ ಮರಳು ತೆಗೆಸುವ ಪ್ರಯತ್ನ ಮಾಡಿರುವುದು ಗೊತ್ತಿದ್ದರೆ ನನಗೂ ತಿಳಿಸುತ್ತೀರಲ್ಲ. ಅಥವಾ ಇದೆಂಥ ಮರುಳು ಎಂದು ಮರುಗುತ್ತೀರೋ?
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019