ನಮ್ಮ ಒಂದು ವರ್ಷದ ಮಿಶ್ರ ತಳಿ ಕರು ಮಲಗಿದಲ್ಲಿಂದ ಮೇಲಕ್ಕೆ ಏಳ್ತಾನೇ ಇಲ್ಲ ಮಾರಾಯ್ರೇ. ತಿನ್ನೋಕೇನೂ ತೊಂದ್ರೆ ಇಲ್ಲ. ದೊಡ್ ಹಸು ತಿಂದಷ್ಟು ತಿನ್ನುತ್ತೆ. ದಿನಾ ಬಾಲ ಹಿಡಿದು ಮೇಲಕ್ಕೆತ್ತಬೇಕು. ಒಂದ್ಸಾರಿ ಎದ್ದ ಮೇಲೆ ಪರ್ವಾಗಿಲ್ಲ, ಚೆನ್ನಾಗೇ ಓಡಾಡುತ್ತೆ...’ ಬಹಳಷ್ಟು ರೈತರು ನನ್ನ ಬಳಿ ಇಂಥ ಸಮಸ್ಯೆಗಳನ್ನು ತರುತ್ತಾರೆ. ಈ ಸಮಸ್ಯೆಯು ಆಕಳ ಕರು ಮತ್ತು ಎಮ್ಮೆಯ ಕರುಗಳೆರಡರಲ್ಲೂ ಕಾಣಬಹುದು. ಮಿಶ್ರತಳಿ ಕರುಗಳಲ್ಲಿ ಈ ಪ್ರಮಾಣ ಕೊಂಚ ಹೆಚ್ಚು. ಜಾನುವಾರು ನಿರ್ವಹಣೆ ಮತ್ತು ಆಹಾರಕ್ರಮ ಸರಿ ಇಲ್ಲದಿದ್ದರೆ ಹೀಗಾಗುತ್ತದೆ.
ಶಕ್ತಿಹೀನ ಕಾಲುಗಳು, ಪಕ್ಕೆಲುಬುಗಳು ಕಾಣುವಂತಿರುವುದು, ಹೊಟ್ಟೆ ಭಾಗ ಉಬ್ಬಿರು ವುದು, ಹಿಂಭಾಗ ಚೂಪಾಗಿ ಕಾಣುವುದು, ಕಾಂತಿ ಹೀನ ಚರ್ಮ, ಬಸವಳಿದ ಕಣ್ಣುಗಳು ಮತ್ತು ರಕ್ತಹೀನತೆ ಇವು ಸಾಮಾನ್ಯ ಲಕ್ಷಣಗಳು. ಪರಿಸ್ಥಿತಿ ಇನ್ನೂ ಮುಂದುವರೆದರೆ ಗದ್ದದ ಕೆಳಗೆ ಬಾವು ಬರುತ್ತದೆ. ಕೆಲವು ಕರುಗ ಳಲ್ಲಿ ಭೇದಿ ಪ್ರಾರಂಭವಾಗುತ್ತದೆ. ಹೀಗಾದಾಗ ಮೇಲೇಳಲಾಗುವುದಿಲ್ಲ.
ಇಷ್ಟೆಲ್ಲ ಆದರೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ನೀರು ಕುಡಿಯುವ ಪ್ರಮಾಣವೂ ಹೆಚ್ಚು. ಈ ಹಂತ ತಲುಪಿದ ಕರು ಬೆಳವಣಿಗೆ ಆಗುವುದಿಲ್ಲ. ಕೊನೆಗೆ ಸಾವು ಕೂಡ ಉಂಟಾಗುತ್ತದೆ.
ಕರು ಹುಟ್ಟಿದ ತಕ್ಷಣ ಅರ್ಧಗಂಟೆಯೊಳಗೆ ಗಿಣ್ಣದ ಹಾಲನ್ನು ನೀಡದಿದ್ದರೆ ಈ ಸಮಸ್ಯೆ ಹೆಚ್ಚು. ಮಿಶ್ರ ತಳಿ ಕರುಗಳಿಗೆ ಸುಮಾರು 3 ಲೀಟರ್ ಹಾಲನ್ನು ದಿನಕ್ಕೆ 2–3 ಬಾರಿ ವಿಭಾಗಿಸಿ ನೀಡ ಬೇಕು. ಗಿಣ್ಣದ ಹಾಲಿನಲ್ಲಿ ಅತ್ಯಧಿಕ ಪ್ರಮಾಣದ ಸಸಾರಜನಕ, ಖನಿಜಾಂಶ, ವಿಟಮಿನ್‌ಗಳು ಮತ್ತು ರೋಗನಿರೋಧಕ ಶಕ್ತಿ ಅಡಕವಾಗಿರುವು ದರಿಂದ ಕರುವಿಗೆ ಇವುಗಳ ಕೊರತೆಯಾದರೆ ಬೆಳವಣಿಗೆ ಕುಂಠಿತವಾಗುತ್ತದೆ. ಮೂರು ತಿಂಗಳ ತನಕ ಕರುವಿಗೆ ತಾಯಿಯ ಹಾಲು ಅಗತ್ಯ. ಈಗ ಲಭ್ಯವಿರುವ ಪಶು ಆಹಾರವನ್ನು ಮೂರು ವಾರ ವಯಸ್ಸಿನಿಂದ ಪ್ರಾರಂಭಿಸಬಹುದು. ತಯಾರಕರ ನಿರ್ದೇಶನ ದಂತೆ ಮೊದಲಿಗೆ ದಿನಕ್ಕೆ 100 ಗ್ರಾಂ, 35 ದಿನದಿಂದ 2 ತಿಂಗಳವರೆಗೆ ಪ್ರತಿ ದಿನ 250 ಗ್ರಾಂ, 2 ರಿಂದ 3 ತಿಂಗಳವರೆಗೆ 500 ಗ್ರಾಂ ಕರುಗಳ ಹಿಂಡಿ ನೀಡಬೇಕು. ಕರುಗಳ ಹಿಂಡಿ ಸಿಗದಿದ್ದರೆ ಉತ್ತಮ ಗುಣಮಟ್ಟದ ನೆಲಗಡಲೆ ಹಿಂಡಿಯನ್ನು ಮೇಲೆ ಹೇಳಿದ ಅರ್ಧದಷ್ಟನ್ನಾ ದರೂ ಕೊಟ್ಟರೆ ಉತ್ತಮ. ಕರುವಿನ ದೇಹ ತೂಕದ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಪ್ರತಿದಿನ ಒಂದು ಕಿ.ಗ್ರಾಂ ಹಾಗೂ ಒಂದು ವರ್ಷದಿಂದ ಬೆದೆಗೆ ಬರುವ ತನಕ ಎರಡು ಕಿ.ಗ್ರಾಂ ಪಶು ಆಹಾರ ನೀಡಬೇಕು.
ರೈತರು ಗಮನಕೊಡದ ಇನ್ನೊಂದು ಅಂಶವೆಂದರೆ ಸರಿಯಾದ ಜಂತುನಾಶಕ ನೀಡದೇ ಇರುವುದು. ಕರು ಹುಟ್ಟಿ 8 ರಿಂದ 15 ದಿನಗಳಲ್ಲಿ ಪೈಪರಜಿನ್ ಎಂಬ ಜಂತುನಾಶಕ ಹೊಂದಿದ ಔಷಧಿಯನ್ನು ಒಮ್ಮೆ ಹಾಗೂ 21 ದಿನಗಳ ನಂತರ ಮತ್ತೊಮ್ಮೆ 20 ಮಿಲೀ ಪ್ರಮಾಣದಲ್ಲಿ ನೀಡಬೇಕು. ನಂತರ ಪ್ರತಿ ತಿಂಗಳಿಗೊಮ್ಮೆ ಒಂದು ವರ್ಷದವರೆಗೆ ಸೂಕ್ತ ಜಂತುನಾಶಕ ಔಷಧವನ್ನು ಕರುಗಳ ದೇಹ ತೂಕವನ್ನು ಆಧರಿಸಿ ನೀಡಬೇಕು. ಗಡಿಗೆ ಹೊಟ್ಟೆ ಸಮಸ್ಯೆಗೆ ಇನ್ನೊಂದು ಕಾರಣ ವೆಂದರೆ ನಿಯಮಿತವಾಗಿ ಕರುಗಳ ಮೈ ಸವರದಿರುವುದು. ಪ್ರತಿದಿನ ಮೈ ಸವರುವುದರಿಂದ ಕರುಗಳ ಚರ್ಮದ ರಕ್ತ ಪರಿಚಲನೆ ಅಧಿಕವಾಗಿ ಚರ್ಮವು ಮೃದುವಾಗಿ ಕಾಂತಿಯುಕ್ತವಾಗುತ್ತದೆ.
ಇದು ಕರುವಿನ ಉತ್ತಮ ಬೆಳವಣಿಗೆಗೆ ಸಹಕಾರಿ. ಜೊತೆಗೆ ತಾಯಿ ಹಸು ತನ್ನ ಕರುವನ್ನು ಹುಟ್ಟಿದಾಗಿನಿಂದ ನೆಕ್ಕಲು ಬಿಟ್ಟರೆ ಒಳ್ಳೆಯದು. ಇದರಿಂದ ಮೆಲುಕಿನಲ್ಲಿರುವ ಜೀರ್ಣಕಾರಿ ಸೂಕ್ಷ್ಮಾಣುಜೀವಿಗಳು ಕರುವಿನ ದೇಹ ಪ್ರವೇಶಿಸಿ ಕರುವಿನ ಮೆಲುಕುಚೀಲ ಶೀಘ್ರವಾಗಿ
ಬೆಳವಣಿಗೆಯಾಗಿ ಜೀರ್ಣಕ್ರಿಯೆ ಶೀಘ್ರದಲ್ಲಿ ಪ್ರಾರಂಭವಾಗುವಂತೆ ಮಾಡುತ್ತದೆ. ಇದು ಕರುವಿನ ಬೆಳವಣಿಗೆ ಉತ್ತಮಗೊಳಿಸುತ್ತದೆ.
ಕರುಗಳಲ್ಲಿ ಕಂಡುಬರುವ ಭೇದಿ, ಕಾಲುಗಳ ಗಂಟುಬಾವು ಕೂಡ ಗುಡಾಣ ಹೊಟ್ಟೆಯ ಬೆಳವಣಿಗೆಗೆ ಕಾರಣವಾಗಬಲ್ಲದು. ಕರು ಹುಟ್ಟಿದ ತಕ್ಷಣ ಟಿಂಚರ್ ಅಯೋಡಿನ್‌ನಂತಹ ಜೀವ ನಿರೋಧಕಗಳನ್ನು ಉಪಯೋಗಿಸಿ ಹೊಕ್ಕಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡದಿದ್ದಲ್ಲಿ ರೋಗ ಕಾರಕ ಸೂಕ್ಷ್ಮಾಣುಜೀವಿಗಳು ಹೊಕ್ಕಳಿನ ಮೂಲಕ ಕರುವಿನ ದೇಹವನ್ನು ಪ್ರವೇಶಿಸಿ ಗಂಟು ಬಾವು ಮತ್ತು ಭೇದಿಯನ್ನುಂಟು ಮಾಡುತ್ತವೆ. ಇದರಿಂದ ಕರುವಿನ ದೇಹದಲ್ಲಿ ಪೌಷ್ಠಿಕತೆ ನಷ್ಟ ವಾಗುತ್ತದೆ. ಕೆಲ ಜಾತಿಯ ಜಂತುಹುಳುಗಳಿಂದ ದೇಹದಲ್ಲಿ ಸಸಾರಜನಕದ ಪ್ರಮಾಣ ಕಡಿಮೆಯಾಗಿ ಕರುವಿನ ಗದ್ದದ ಕೆಳಗೆ ಬಾವು ಉಂಟಾಗುತ್ತದೆ. ಗಡಿಗೆ ಹೊಟ್ಟೆಯ ಕರು ಸಾವನ್ನು ಸಮೀಪಿಸುತ್ತಿದ್ದಂತೆ ಈ ತರದ ಬಾವು ಕಂಡುಬರುತ್ತದೆ.
ಕರುಗಳು ಈ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅವುಗಳಿಗೆ ಸಸಾರಜನಕಸಹಿತ ಆಹಾರಗಳಾದ ಬೇಯಿಸಿದ ಹುರುಳಿ ಇಲ್ಲವೇ ನೆಲಗಡಲೆ ಹಿಂಡಿ, ಸೋಯಾ ಹಿಂಡಿಯಂತಹ ಆಹಾರವನ್ನು ಖನಿಜಾಂಶಗಳ ಜೊತೆ ನೀಡಬೇಕು. ಉತ್ತಮ ದರ್ಜೆಯ ಹಸಿರು ಮೇವನ್ನು ದ್ವಿದಳ ಮೇವಿನ ಜೊತೆಗೆ ನೀಡಬೇಕು. ಯಕೃತ್ತಿನ ಕಾರ್ಯವರ್ಧಕ ಗಳು (ಲಿವರ್ ಟಾನಿಕ್) ಹಾಗೂ ಕಿಣ್ವಗಳ (ಎಂಜೈಮ್) ಮಿಶ್ರಣ ಔಷಧಿಗಳನ್ನು ಕೊಡ ಬೇಕು. ಕರುಗಳನ್ನು ಒಂದೆಡೆ ಕಟ್ಟಿಹಾಕಿ ಸಾಕದೇ ಓಡಾಡಲು ಬಿಟ್ಟು ವ್ಯಾಯಾಮ ಸಿಗುವಂತೆ ಮಾಡಬೇಕು. ದಿನಕ್ಕೊಮ್ಮೆಯಾದರೂ ಮೈನೇವರಿಸುತ್ತಿರಬೇಕು. ಇಷ್ಟು ಮಾಡಿದರೆ ಕರು ಚೆನ್ನಾಗಿ ಬೆಳವಣಿಗೆ ಹೊಂದಿ ಒಂದೂವರೆ ವರ್ಷಕ್ಕೇ ಬೆದೆಗೆ ಬರುತ್ತದೆ. ಯಾವ ತೊಂದರೆ ಯಿಲ್ಲದೇ ಗರ್ಭ ಧರಿಸಿ ಒಳ್ಳೆಯ ಹಸುವಾಗಿ ರೈತರಿಗೆ ಲಾಭ ತಂದುಕೊಡುತ್ತದೆ.ಸಂಪರ್ಕಕ್ಕೆ: (08384-) 226848 .
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 5/5/2020