ಗೆಳೆಯ ಮುರುಗೇಶ್ ಒಮ್ಮೆ ಮಾತಿಗೆ ಸಿಕ್ಕಾಗ ಗೂಳಿ ಕುರಿತಾಗಿ ಕುತೂಹಲಕಾರಿಯಾದ ಸಂಗತಿಯೊಂದನ್ನು ಹೇಳಿದ್ದ. ಅಲ್ಲಿಗೆ ಹೋಗಬೇಕು; ಅವುಗಳನ್ನು ತೀರಾ ಹತ್ತಿರದಿಂದ ನೋಡಬೇಕು ಎಂಬ ಹಂಬಲ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಆತ ಈಚೆಗೆ ಮತ್ತೊಮ್ಮೆ ಸಿಕ್ಕಾಗ ಅದೇ ವಿಷಯ ಪ್ರಸ್ತಾಪವಾಯಿತು. ಅಂದು ಸಂಜೆಯೇ ಅವನನ್ನು ಕರೆದುಕೊಂಡು ಕ್ಯಾಮೆರಾ ಜತೆ ಅಲ್ಲಿಗೆ ಹೊರಟೆ.
ಅದು ಕಾವೇರಿ ನದಿಯ ನಡುಗಡ್ಡೆ. ಶ್ರೀರಂಗಪಟ್ಟಣದ ಪಶ್ಚಿಮಕ್ಕೆ (ರಂಗನತಿಟ್ಟು ಪಕ್ಷಿಧಾಮಕ್ಕೆ ಹತ್ತಿರ) 6 ಕಿ.ಮೀ. ದೂರದಲ್ಲಿರುವ ಸುಮಾರು 80 ಎಕರೆ ವಿಸ್ತೀರ್ಣದ ಮುಳ್ಳು ಕಂಟಿಗಳ ತಾಣ. ದೋಣಿ ಏರಿ ಫರ್ಲಾಂಗು ದೂರದ ನಡುಗಡ್ಡೆ ಅಂಚಿಗೆ ನಾವು ತಲುಪಿದಾಗ ಆಗಲೇ ಸೂರ್ಯ ಕೆಂಬಣ್ಣಕ್ಕೆ ತಿರುಗಿದ್ದ. ಅಲ್ಲಿಂದ ನೂರಿನ್ನೂರು ಮೀಟರ್ ದೂರ ನಡೆದಿರಬೇಕು; ‘ಏಯ್, ಅಲ್ನೋಡೋ ದೊಡ್ಡ ಗೂಳಿ!’ ಎಂದು ಮುರುಗೇಶ್ ಉದ್ಗರಿಸಿದ. ಅತ್ತ ಕಣ್ಣು ತಿರುಗಿಸಿದೆ.
ಕಂಡದ್ದು ಗೂಳಿ ಮಾತ್ರವಲ್ಲ; 20ಕ್ಕೂ ಹೆಚ್ಚು ಕಾಡು ದನಗಳ ಹಿಂಡು. ಲೆಕ್ಕ ಹಾಕುತ್ತಾ ಹೋದಂತೆ ಚುಜ್ಜಲು ಮರದ ಪೊದೆಯಿಂದ ಒಂದೊಂದಾಗಿ ಅವು ಈಚೆಗೆ ಬರಲಾರಂಭಿಸಿದವು. ಅವುಗಳನ್ನು ಸಮೀಪದಿಂದ ನೋಡಬೇಕು ಎಂಬ ಕುತೂಹಲ ಇಮ್ಮಡಿಸಿ ಮುಂದೆ ಮುಂದೆ ನಡೆಯುತ್ತಾ ಹೋದೆವು. ನಾವು ಹತ್ತಿರ ಹತ್ತಿರ ಹೋದಂತೆ ಅವುಗಳಿಗೆ ಏನನಿಸಿತೋ, ದೂರ ದೂರ ಓಡಲಾರಂಭಿಸಿದವು.
ದುರಾಸೆಯ ಮನುಷ್ಯರು ನಮ್ಮನ್ನು ಹಿಡಿಯಲು ಬಂದಿರ ಬೇಕು ಎಂದು ಅವು ಅಂದು ಕೊಂಡಿರಬೇಕು.
ಪೊದೆಯೊಳಕ್ಕೆ ದಾಪು ಗಾಲಿಡುತ್ತಾ ನುಗ್ಗಿದ ದನಗಳ ಹಿಂಡು ಮತ್ತೊಂದು ತುದಿ ಯಿಂದ ಇಣುಕಿ ನೋಡಿತು. ಕೆಲ ಸಮಯದ ನಂತರ ಬಲಿತ ಗೂಳಿಗಳು ನಮ್ಮತ್ತಲೇ ಬರಲಾರಂಭಿಸಿದವು. ಕಾಲು ಕೆರೆದು ದೂಳೆಬ್ಬಿಸುತ್ತಾ ಗುಟುರು ಹಾಕಿದವು. ತುಸು ಭಯ ಹುಟ್ಟಿತಾದರೂ ಅವುಗಳನ್ನು ಹತ್ತಿರದಿಂದ ನೋಡುವ ಮತ್ತು ಅವುಗಳ ಫೋಟೊ ತೆಗೆಯುವ ತವಕ ಇದ್ದುದರಿಂದ ಧೈರ್ಯ ಮಾಡಿ ದಿಬ್ಬವೊಂದರ ಮೇಲೇರಿ ನಿಂತುಕೊಂಡೆವು. ಗೂಳಿಗಳನ್ನು ಹಿಂಬಾಲಿಸಿ ಹಸುಗಳು, ಅವುಗಳನ್ನು ಹಿಂಬಾಲಿಸಿ ಮೂರ್ನಾಲ್ಕು ಕರುಗಳೂ ಹೊರ ಬಂದವು. ಆಗ ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.
ಕ್ಯಾಮೆರಾವನ್ನು ಈಚೆಗೆ ತೆಗೆದು ಫೋಟೊ ಕ್ಲಿಕ್ಕಿಸಲು ಶುರು ಮಾಡಿದೆ. ಎತ್ತರದ ಭುಜವಿದ್ದ, ಒಂದು ರೂಪಾಯಿ ನೋಟಿನ ಬಣ್ಣದ ಗೂಳಿಯೊಂದು ನಮ್ಮನ್ನೇ ದುರುಗುಟ್ಟಿ ನೋಡುತ್ತಾ ತನ್ನ ಗೊರಸಿನಿಂದ ನೆಲ ಕೆರೆಯುತ್ತಾ ದೂಳೆಬ್ಬಿಸುತ್ತಲೇ ಇತ್ತು. ಸುಮಾರು 10 ನಿಮಿಷಗಳ ಕಾಲ ಅದು ಗುಟುರು ಹಾಕುತ್ತಾ ಕಾಲು ಕೆರೆಯುತ್ತಲೇ ಇತ್ತು. ಇನ್ನು ಮುಂದೆ ಹೋಗು ವುದು ಅಪಾಯ ಎಂದರಿತು ಸುಮಾರು 100 ಮೀಟರ್ ದೂರದಿಂದಲೇ ಕೆಲವು ಫೋಟೊ ತೆಗೆದದ್ದಾಯಿತು. ಅಷ್ಟರಲ್ಲಿ ಸೂರ್ಯ ಅಸ್ತಂಗತನಾಗಿದ್ದ. ದನಗಳ ಹಿಂಡೂ ಪೊದೆಯತ್ತ ಮುಖ ಮಾಡಲಾರಂಭಿಸಿತು. ಮುಳ್ಳು ಗಿಡಗಳ ನಡುವೆ ತಾವು ಮಾಡಿಕೊಂಡು ನದಿ ತೀರದಲ್ಲಿದ್ದ ದೋಣಿ ಏರಿ ಇತ್ತ ಬಂದೆವು.
ಗೂಳಿ ತಿಟ್ಟು
ಈ ಕಾಡು ದನಗಳು ಇರುವ ನಡುಗಡ್ಡೆಯನ್ನು ಸ್ಥಳೀಯರು ಗೂಳಿ ತಿಟ್ಟು ಎಂದು ಕರೆಯುತ್ತಾರೆ. ಕುರಿ ತಿಟ್ಟು ಎಂಬ ಸ್ಥಳವೂ ಇದಕ್ಕೆ ಹೊಂದಿಕೊಂಡಿದೆ. ಈಚಲು, ನೇರಳೆ, ಹೊಂಗೆ, ನೀರಂಜಿ, ಮುಳ್ಳಿ ಇತರ ಮರಗಳು ಇಲ್ಲಿ ಬೆಳೆದು ನಿಂತಿವೆ. ಮಧ್ಯ ಭಾಗದಲ್ಲಿ ಬಯಲು ಪ್ರದೇಶವಿದ್ದು, ಪುಟ್ಟ ಕೆರೆಯೂ ಇದೆ. ಈ ಕಾಡು ದನಗಳು ಸ್ಪಷ್ಟವಾಗಿ ನೋಡಲು ಕಾಣಸಿಗುವುದೇ ಈ ಬಯಲಿನಲ್ಲಿ. ಸಂಜೆಯಾದೊಡನೆ ಗುಂಪಾಗಿ ಈ ಬಯಲಿಗೆ ಬಂದು ಬೀಡು ಬಿಡುತ್ತವೆ.
ಹಳ್ಳಿಕಾರ್ ತಳಿ
ಗೂಳಿ ತಿಟ್ಟಿನಲ್ಲಿ ಹಳ್ಳಿಕಾರ್ ತಳಿಯ ದನಗಳು ಹೆಚ್ಚಾಗಿವೆ. ಎತ್ತರದ ಭುಜವಿರುವ ಅಮೃತಮಹಲ್ (ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚು) ಕೆಲವು ಕಾಣಸಿಗುತ್ತವೆ. ಹಳ್ಳಿಕಾರ್ ಮತ್ತು ಅಮೃತಮಹಲ್–ಈ ಎರಡೂ ತಳಿಯ ಮಿಶ್ರಣವಾದ, ಯಾವ ಶುದ್ಧ ತಳಿಗೂ ಸೇರದ (ಎನ್‌ಡಿ–ನಾನ್ ಡಿಸ್ಕ್ರಿಪ್ಟ್) ದನಗಳೂ ಇವೆ. ದೇವಣಿ, ಮಲ್ನಾಡ್ ಗಿಡ್ಡ, ಕೃಷ್ಣ ವ್ಯಾಲಿ, ಕಿಲಾರಿ ತಳಿಯ ಒಂದೂ ನಮ್ಮ ಕಣ್ಣಿಗೆ ಬೀಳಲಿಲ್ಲ. ಬೂದು ಮಿಶ್ರಿತ ಬಿಳಿ, ಬಿಳಿ ಮತ್ತು ಕಪ್ಪು ಹಾಗೂ ಪೂರ್ಣ ಕಪ್ಪು ಬಣ್ಣದ ದನಗಳನ್ನು ಇಲ್ಲಿ ಕಾಣಬಹುದು.
ರಾಜ್ಯದಲ್ಲಿ ಕಾಡು ದನಗಳು ಕಾಣಸಿಗುವುದು ಗೂಳಿತಿಟ್ಟು ನಡುಗಡ್ಡೆಯಲ್ಲಿ ಮಾತ್ರ. ‘ಬಹಳ ವರ್ಷಗಳ ಹಿಂದೆ ಕೆ.ಆರ್. ಪೇಟೆ ಸಮೀಪದ ಹೇಮಾವತಿ ನದಿ ನಡುಗಡ್ಡೆಯಲ್ಲಿ ಇಂತಹ ಕಾಡು ದನಗಳಿದ್ದವು. ಪಕ್ಕದ ತಮಿಳುನಾಡಿನ ನೀಲಗಿರಿ ಕಾಡಿನಲ್ಲಿ ಈಗಲೂ ಕಾಡು ದನಗಳಿವೆ. ಶತಮಾನಗಳ ಹಿಂದೆ ಊರಿನಿಂದ ತಪ್ಪಿಸಿಕೊಂಡು ಬಂದು ಕಾವೇರಿ ನದಿಯ ನಡುಗಡ್ಡೆಯ ಕಾಡಿಗೆ ಸೇರಿಕೊಂಡಿರಬಹುದೇನೊ. ಚಿರತೆ, ಹುಲಿಯಂತಹ ದನ ಗಳನ್ನು ಬೇಟೆಯಾಡುವ ಕಾಡು ಪ್ರಾಣಿಗಳು ಇಲ್ಲಿ ಇಲ್ಲದೇ ಇರುವುದರಿಂದ ದನಗಳ ಸಂತತಿ ಬೆಳೆಯುತ್ತಾ ಬಂದಿರಬೇಕು’ ಎಂಬುದು ವನ್ಯ ಜೀವಿ ಛಾಯಾಗ್ರಾಹಕ ಕೃಪಾಕರ ಅವರ ಅಂಬೋಣ.
ಗೂಳಿ ತಿಟ್ಟಿನಲ್ಲಿ ಕಾಡು ದನಗಳನ್ನು ನೋಡಲು ಬಯಸು ವವರು ಸಂಜೆ 5 ಗಂಟೆ ನಂತರ ಇಲ್ಲಿಗೆ ಬರಬೇಕು. ರಂಗನತಿಟ್ಟು ಪಕ್ಷಿಧಾಮ ಇಲ್ಲವೆ ಬಂಗಾರದೊಡ್ಡಿ ಅಣೆಕಟ್ಟೆ ಮಾರ್ಗವಾಗಿ ದೋಣಿ ಅಥವಾ ಹರಿಗೋಲಿನಲ್ಲಿ ನದಿಯನ್ನು ದಾಟಿ ಹೋಗ ಬೇಕು. ಇದು ಮುಳ್ಳುಕಂಟಿಗಳ ಕುರುಚಲು ಕಾಡಾಗಿದ್ದು, ಇಲ್ಲಿ ಹಾವುಗಳು ಇರುವುದರಿಂದ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸಬೇಕು.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 12/31/2019