ವಾರಕ್ಕೆರಡು ದಿನಗಳ ರಜೆಯಲ್ಲಿ ಕೃಷಿ ಕಾಯಕದ ಅಳಿಲ ಸೇವೆ ಸಲ್ಲಿಸುತ್ತಿದ್ದ ಕಸ್ಟಮ್ಸ್ ಅಕಾರಿಯೊಬ್ಬರು ಸ್ವಯಂ ನಿವೃತ್ತಿ ಬಳಿಕ ಪೂರ್ಣ ಪ್ರಮಾಣದ ಕೃಷಿಕರಾಗಿರುವುದಷ್ಟೇ ಅಲ್ಲ, ರೈತರು ಮತ್ತು ಗ್ರಾಹಕಸ್ನೇಹಿ ಕೃಷಿ ವ್ಯವಹಾರದಲ್ಲೂ ತೊಡಗಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಉಡುಪಿ ಸಮೀಪದ ಅಲೆವೂರು ಗುಡ್ಡೆ ಅಂಗಡಿಯ ಗೋಪಾಲ ಕೆ. ನಾಯ್ಕ್(48) ರೈತರಿಂದ ನೇರವಾಗಿ ತೆಂಗು, ಅಡಕೆ, ಹೂ, ತರಕಾರಿ ಸಹಿತ ಕೃಷಿ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಖರೀದಿಸಿ ಒಂದೆರಡು ರೂ. ಲಾಭಾಂಶವನ್ನಷ್ಟೇ ಇಟ್ಟು ಗ್ರಾಹಕರಿಗೆ ಮಾರಾಟ ಮಾಡಲೆಂದೇ ವಿನಾಯಕ ಟ್ರೇಡರ್ಸ್ ಆರಂಭಿಸಿದ್ದಾರೆ.
ಸಾವಯವ ತರಕಾರಿ ಸಹಿತ ತೆಂಗಿನಕಾಯಿಯನ್ನು ಲಂಡನ್, ದುಬೈ ಸಹಿತ ಕೆಲ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜನೆ ರೂಪಿಸಿದ್ದಾರೆ. ಮುಂದಿನ ಮಳೆಗಾಲದ ಬಳಿಕ ಸಾವಯವ ವಿಧಾನದಲ್ಲಿ ತರಕಾರಿ ಬೆಳೆಯಲು ಸಿದ್ಧತೆ ನಡೆಸಿದ್ದು, ರಫ್ತು ಅವಕಾಶದ ನಿಟ್ಟಿನಲ್ಲಿ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಇಲಾಖೆಯಲ್ಲಿ ಗಳಿಸಿದ ಅನುಭವವನ್ನು ಧಾರೆ ಎರೆಯಲಿದ್ದಾರೆ.
ಹಿರಿಯರಿಂದ ಬಂದ 4 ಎಕರೆ ಜಾಗದಲ್ಲಿ 230 ಅಡಕೆ ಮರಗಳಿದ್ದು 150 ಮರದಲ್ಲಿ ವೀಳ್ಯದೆಲೆ ಬೆಳೆದು ದಿನಕ್ಕೆ 300 ರೂ. ಮೌಲ್ಯದ ಎಲೆ ಮಾರುತ್ತಿದ್ದಾರೆ. 20 ವರ್ಷಗಳಿಂದ ಪ್ರತಿ ಮಳೆಗಾಲದ ಬಳಿಕ ತರಕಾರಿ, ಸೌತೆ, ಹೀರೆ, ಸಾಮ್ರಾಣಿ, ಮುಳ್ಳು ಸೌತೆ, ಮಟ್ಟು ಗುಳ್ಳವನ್ನು ಬೆಳೆಯುತ್ತಿದ್ದಾರೆ. ಕೋಳಿ ಫಾರ್ಮ್‌ನಲ್ಲಿ 500ಕ್ಕೂ ಅಕ ನಾಟಿ ಕೋಳಿಗಳನ್ನು ಸಾಕಿ ಮಾರಾಟ ಮಾಡಿದ್ದಾರೆ.
ರಾತ್ರಿಯಲ್ಲಿ ಚಿರತೆಯೊಂದು 2 ನಾಯಿ, 15ಕ್ಕೂ ಅಕ ಕೋಳಿಗಳನ್ನು ತಿಂದುಹಾಕಿದ ಬಳಿಕ ಕೋಳಿ ಫಾರ್ಮ್‌ನ ತಂಟೆಗೆ ಹೋಗಿಲ್ಲ. ಅದನ್ನೀಗ ಮತ್ತೆ ವ್ಯವಸ್ಥಿತವಾಗಿ ಮಾಡಲು ಯೋಜಿಸಿದ್ದಾರೆ. ಪಪ್ಪಾಯಿ, ಅಜೋಲಾವನ್ನೂ ಬೆಳೆದಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಕ್ಕೂಟ, ಭಜನಾ ಮಂಡಳಿಗಳಲ್ಲೂ ತೊಡಗಿಕೊಂಡಿದ್ದಾರೆ. ಎರಡು ಬಾವಿಗಳಿದ್ದು 86 ತೆಂಗಿನ ಮರಗಳ ಉತ್ಪತ್ತಿಯನ್ನು ಮಾರುತ್ತಿದ್ದಾರೆ. ಸಾವಯವ ಕೃಷಿಯಲ್ಲೂ ತರಬೇತಿ ಪಡೆದಿದ್ದಾರೆ. ರಾಜ್ಯದ ಯಾವ ಮೂಲೆಯಲ್ಲಿ ಕೃಷಿ ಸಮ್ಮೇಳನ ನಡೆದರೂ ಅಲ್ಲಿ ಹಾಜರಿರುತ್ತಾರೆ. ಮಡದಿ ಪುಷ್ಪಲತಾ ಗಣಿತ ಸಹ ಶಿಕ್ಷಕಿ.
ಆದಿ ಉಡುಪಿಯ ಲ್ಯಾಂಪ್ಸ್ ಸೊಸೈಟಿ ಉಪಾಧ್ಯಕ್ಷ, ಕೊರಂಗ್ರಪಾಡಿ ಸಿ.ಎ. ಬ್ಯಾಂಕ್ ನಿರ್ದೇಶಕರಾಗಿದ್ದು, ರೈತರ ಉತ್ಪನ್ನಗಳಿಗೆ ಉತ್ತಮ ದರ ದೊರಕಿಸಿಕೊಡಬೇಕು, ಕೃಷಿ ಲಾಭದಾಯಕವಾಗಬೇಕೆನ್ನುವುದು ಗೋಪಾಲ್ ಗುರಿ. ಮಣ್ಣು , ಕಾಲ, ಹವಾಮಾನಕ್ಕೆ ತಕ್ಕ ಬೆಳೆ ಬೆಳೆಯಬೇಕು. ಒಂದೇ ಬೆಳೆಗೆ ಜೋತು ಬೀಳದೆ ಬಹು ಬೆಳೆ ಬೆಳೆಯಬೇಕೆನ್ನುವ ಕೃಷಿಕ ಗೋಪಾಲ್ ಅವರ ದೂ.ಸಂ. 9480764436.
23 ವರ್ಷ ಸರಕಾರಿ ಸೇವೆ: ಇಂಗ್ಲೀಷ್ ಸೀನಿಯರ್ ಟೈಪಿಂಗ್, ಪಿಯುಸಿ ಬಳಿಕ ವೈಟ್ ಕಾಲರ್ ಹುದ್ದೆಯ ಆಸೆಯಿಂದ ಅರ್ಜಿ ಹಾಕಿದ್ದ ಗೋಪಾಲ್ ಲೋವರ್ ಡಿವಿಷನ್ ಕ್ಲರ್ಕ್ ಆಗಿದ್ದರು. ಈಕ್ಷಕ ಹುದ್ದೆಯಿಂದ ಎರಡು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆವ ಮೊದಲು ಬೆಳಗಾವಿ, ಮೈಸೂರು, ಉಡುಪಿ, ಮಂಗಳೂರು ಸೇರಿದಂತೆ ನಾನಾ ಕಡೆ 23 ವರ್ಷಗಳ ಸೇವೆ ಸಲ್ಲಿಸಿದ್ದು ಐದಂಕಿ ಸಂಬಳ ಪಡೆಯುತ್ತಿದ್ದವರು. ಈಗ ಅರ್ಧ ಪಿಂಚಣಿಯನ್ನೂ ಪಡೆಯುತ್ತಿದ್ದಾರೆ. ಗುಲಾಮನಾಗುವುದಕ್ಕಿಂತ ಜಮೀನಿನಲ್ಲಿ ಕೃಷಿಕನಾಗಿ ತಲೆಯೆತ್ತಿ ಬಾಳುವುದೇ ಲೇಸೆಂದು ಸ್ವಾಭಿಮಾನದ ಬದುಕಿಗಾಗಿ ಹುದ್ದೆ ತೊರೆದಿದ್ದಾರೆ.
ರೈತನೇ ದೇಶದ ಬೆನ್ನೆಲುಬು. ಭೂಮಿ ಇದ್ದವರು ಕನಿಷ್ಠ ಪಕ್ಷ ಮನೆಯ ಖರ್ಚಿಗಾಗುವಷ್ಟು ಉತ್ಪತ್ತಿಗಾದರೂ ಕೃಷಿಯಲ್ಲಿ ಆಸಕ್ತಿ ವಹಿಸಬೇಕು. ಕಾರ್ಮಿಕರನ್ನು ನೆಚ್ಚಿಕೊಳ್ಳದೆ ಸ್ವಯಂ ಪಾಲ್ಗೊಳ್ಳುವಿಕೆ ಇರಬೇಕು. ಕೃಷಿಯ ಪ್ರಾಯೋಗಿಕ ಜ್ಞಾನ, ಅನುಭವ ಅತಿ ಮುಖ್ಯ. -ಗೋಪಾಲ ಕೆ. ನಾಯ್ಕ್, ಗುಡ್ಡೆ ಅಂಗಡಿ, ಅಲೆವೂರು.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019