ಸುಜಿ ಕುರ್ಯ, ಉಡುಪಿ ಕರಾವಳಿಯಲ್ಲೇ ಮೊದಲ ಬಾರಿಗೆ ಉಡುಪಿಯ ಪ್ರಗತಿಪರ ರೈತರೊಬ್ಬರು ಖರ್ಬೂಜ(ಜುಂ ಜುಂ ಹಣ್ಣು) ಬೆಳೆದು ಬಂಪರ್ ಫಸಲು ತಮ್ಮದಾಗಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯಡ್ಕದ ಪ್ರಗತಿಪರ ರೈತ ಸುರೇಶ್ ನಾಯಕ್ ಮುಂಡುಜೆ ತಮ್ಮ 40 ಸೆಂಟ್ಸ್ ಗದ್ದೆಯಲ್ಲಿ ಬೆಳೆದ ಖರ್ಬೂಜ ಉತ್ತಮ ಬೆಲೆ, ಲಾಭವನ್ನು ತಂದುಕೊಟ್ಟಿದೆ. ಅವರು ಪ್ಲಾಸ್ಟಿಕ್ ಮಲ್ಚಿಂಗ್ ವಿಧಾನದಲ್ಲಿ ಬೆಳೆದ ನಾಲ್ಕು ಕ್ವಿಂಟಾಲ್ ಖರ್ಬೂಜ ಹಣ್ಣನ್ನು ಕೆಜಿಗೆ ತಲಾ 25 ರೂ.ಗಳಂತೆ ಮಾರಾಟ ಮಾಡಿರುವುದು ವಿಶೇಷ.ಇನ್ನೂ ಎರಡು ಟನ್‌ಗಳಷ್ಟು ಹಣ್ಣು, ಕಾಯಿ ಕೊಯ್ಲಿಗೆ ಬಾಕಿಯಿದ್ದು, ಮೊನ್ನೆ ಬಿದ್ದ ಆಲಿಕಲ್ಲು, ಅಕಾಲಿಕ ಮಳೆಯ ಆತಂಕದ ಹೊರತಾಗಿಯೂ 50 ಸಾವಿರ ರೂ. ಲಾಭದ ನಿರೀಕ್ಷೆಯಲ್ಲಿದ್ದಾರೆ. ಅಂದ ಹಾಗೆ ಇವರು ಈ ಬೆಳೆಗೆ ವ್ಯಯಿಸಿದ್ದು ಕೇವಲ 20 ಸಾವಿರ ರೂ.
ಉಡುಪಿ ಜಿಲ್ಲೆಯಲ್ಲೇ ಬೇಡಿಕೆ: ಖರ್ಬೂಜ ಹಣ್ಣಿನ ಸಿಪ್ಪೆ, ತಿರುಳು ತೆಗೆದು ತುಂಡು ಮಾಡಿ ಸಕ್ಕರೆ ಹಾಕಿ ತಿನ್ನಬಹುದು. ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೆ ತಂಪು, ಆರೋಗ್ಯವರ್ಧಕ. ಹಣ್ಣನ್ನು ಪಾಯಸ, ಕಾಯಿಯಿಂದ ದೋಸೆ, ಪಲ್ಯ, ಸಾಂಬಾರೂ ಮಾಡಬಹುದು.
ರೈತ ಸುರೇಶ್ ನಾಯಕ್ ಬೆಳೆದ ತೋಟದಲ್ಲಿ ಹಣ್ಣುಗಳು ಕನಿಷ್ಠ ಅರ್ಧ ಕೆಜಿ, ಗರಿಷ್ಠ ಎರಡು ಕೆಜಿ ತೂಕವಿವೆ. ಅನ್ಯ ಜಿಲ್ಲೆ, ರಾಜ್ಯಗಳಲ್ಲಿ ಖರ್ಜೂಜ ಹಣ್ಣು ಬೆಳೆಯಲು 70ರಿಂದ 80 ದಿನಗಳು ಬೇಕು. ಆದರೆ ಉಡುಪಿಯಲ್ಲಿ ಕೇವಲ 60ರಿಂದ 70 ದಿನಗಳು ಸಾಕು. ಉತ್ತಮ ರುಚಿಯಿರುವುದರಿಂದ ಉಡುಪಿ ಜಿಲ್ಲೆಯ ನಾನಾ ಕಡೆಗಳಿಂದ ಬೇಡಿಕೆ ಬರುತ್ತಿದೆ.
ಗದ್ದೆಗೆ ಭೇಟಿ ನೀಡಿ ಬೆಳೆ ನೋಡಿದ ರೈತರು ಮುಂದಿನ ವರ್ಷದಿಂದ ತಾವೂ ಖರ್ಬೂಜ ಹಣ್ಣು ಬೆಳೆವ ಉತ್ಸಾಹ ತೋರಿದ್ದಾರೆ. ತೋಟಗಾರಿಕಾ ಇಲಾಖೆಯ ಯಾವುದೇ ಸವಲತ್ತು ಬಳಸದ ಮಾದರಿ ಪ್ರಯೋಗ ಇವರದ್ದಾಗಿದೆ. ಅಂಗಡಿಗಳಲ್ಲಿ ಹಣ್ಣಿಗಿದ್ದ ಗರಿಷ್ಠ 60 ರೂ. ದರ ಈಗ 30ರಿಂದ 40 ರೂ.ಗಿಳಿದರೂ ಲಾಭಕ್ಕೆ ಕೊರತೆ ಏನೂ ಆಗಿಲ್ಲ. ಕರಾವಳಿಯಲ್ಲೂ ಖರ್ಬೂಜ ಬೆಳೆ ಲಾಭದಾಯಕ ಎನ್ನುವುದಕ್ಕೆ ಸುರೇಶ್ ಅವರೇ ಸಾಕ್ಷಿ.
ಪ್ರಯೋಗಶೀಲ ಕೃಷಿಕ: ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷರೂ ಆಗಿರುವ ಸುರೇಶ್ ನಾಯಕ್, 60 ಟನ್ನಿನಷ್ಟು ಕಲ್ಲಂಗಡಿ ಹಣ್ಣು ಬೆಳೆದು ಮಾರಿದ್ದರೆ, ಎರಡನೇ ಬೆಳೆ 2.50 ಎಕರೆಯಲ್ಲಿ ಹೂ ಬಿಟ್ಟು ಸಿದ್ಧವಾಗಿದೆ. ಭತ್ತದ ಬೆಳೆಯಲ್ಲೂ ಇವರು ಎತ್ತಿದ ಕೈ. ಟೊಮೆಟೊ, ಕ್ಯಾಬೇಜ್, ಹೂಕೋಸು ಹೊರತಾಗಿ ತರಕಾರಿ ವೈವಿಧ್ಯಗಳ ಬೆಳೆಯಲ್ಲಿ ನಾಯಕ್ ಪಳಗಿದ್ದಾರೆ.
ಬೆಳೆದಿದ್ದು ಹೇಗೆ?: ಸಾಲು ಮಣ್ಣಿನ ಏರು ಮಾಡಿ, ಗೊಬ್ಬರ ಹಾಕಿ ಡ್ರಿಪ್ ಅಳವಡಿಸಿ, ಮಲ್ಚಿಂಗ್ ಪ್ಲಾಸ್ಟಿಕ್ ಹಾಸಿ ಅಂತರದಲ್ಲಿ ತೂತು ಮಾಡಿ ಇದರಲ್ಲಿ ಬೀಜ ಬಿತ್ತಿ ನೀರು ಬಿಡಲಾಗಿದೆ. ಬಿತ್ತಲು ಬಳಸಿದ್ದು, ನಾಮಧಾರಿ, ಇಂಡೋ ಅಮೆರಿಕನ್ ತಳಿಗಳ ಬೀಜಗಳನ್ನು. ಪ್ಲಾಸ್ಟಿಕ್ ಮಲ್ಚಿಂಗ್ ವಿಧಾನದಲ್ಲಿ ಕಳೆ ಕಡಿಮೆ. ಗಿಡಗಳ ಬೆಳವಣಿಗೆ ಮತ್ತು ಇಳುವರಿ ಹೆಚ್ಚು. ಈ ವಿಧಾನದ ಮೂಲಕ ಕಲ್ಲಂಗಡಿ, ತರಕಾರಿ ಮತ್ತು ಖರ್ಬೂಜದ ಬಂಪರ್ ಬೆಳೆ ಪಡೆಯಲು ಸಾಧ್ಯ
ಖರ್ಬೂಜ ಬೆಳೆಗೆ ಕರಾವಳಿ ತೀರದ ಬಯಲು ಪ್ರದೇಶ ಸೂಕ್ತ, ಉತ್ತಮ ಫಲವತ್ತತೆ ಇದೆ. ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ಮಾದರಿ ಪ್ರಯೋಗದ ನೆಲೆಯಲ್ಲಿ ಶಿಫಾರಸು ಮಾಡಿದ್ದು ಉತ್ತಮ ಬೆಳೆ ಬಂದಿದೆ. ಕೃಷಿ ವಿವಿ ಕುಲಪತಿಗಳೂ ಬೆಳೆ ವೀಕ್ಷಿಸಿದ್ದಾರೆ. -ಡಾ. ಎಂ. ಹನುಮಂತಪ್ಪ, ಸಹ ಸಂಶೋಧನಾ ನಿರ್ದೇಶಕರು, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020