ಈ ಕ್ರಮದಲ್ಲಿ ಕಲ್ಲುಚಪ್ಪಡಿ ಬಳಸಿ ತೊಟ್ಟಿಗಳನ್ನು ಕಟ್ಟಿಕೊಳ್ಳಬೇಕು. ಒಂದು ವೇಳೆ ಕಲ್ಲು ಚಪ್ಪಡಿ ಬಳಸಿ ತೊಟ್ಟಿಗಳನ್ನು ನಿರ್ಮಿಸಲು ಆರ್ಥಿಕವಾಗಿ ತೊಂದರೆ ಇದ್ದಲ್ಲಿ, ಸರ್ವ ಮರ/ಬಿದರಿನ ಮರ/ ಅಡಿಕೆ ಮರ ಇತ್ಯಾದಿ ಸ್ಥಳೀಯವಾಗಿ ಲಭ್ಯವಿರುವ ಮರಮುಟ್ಟುಗಳನ್ನು ಬಳಸಿ ತೊಟ್ಟಿಗಳನ್ನು ನಿರ್ಮಿಸಬಹುದು. ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ 18-20 ಅಂಗುಲ ಆಳದ ಕಂದಕವನ್ನು ಸುಮಾರು 4 ರಿಂದ 10 ಮೀ. ಉದ್ದ, 2.0 ಮೀ. ಅಗಲ ಮಾಡಿಕೊಂಡು ಅದರಲ್ಲಿ 1.5-1.8 ಮೀ. ಎತ್ತರ ಚಪ್ಪಡಿಗಳನ್ನು ನಿಲ್ಲಿಸಬೇಕು. ಇದನ್ನು ಉತ್ತರ ದಕ್ಷಿಣಾಭಿಮುಖವಾಗಿ ನಿಲ್ಲಿಸುವುದರಿಂದ ಗಾಳಿಯ ಸಂಚಾರ ಚೆನ್ನಾಗಿರುತ್ತದೆ. ಚಪ್ಪಡಿಗಳು ಬಿಗಿಯಾಗಿ ನಿಲ್ಲುವಂತೆ ಎಚ್ಚರಿಕೆ ವಹಿಸಬೇಕು.
ತೊಟ್ಟಿಯ ಕೆಳಭಾಗವನ್ನು ಗಟ್ಟಿಗೊಳಿಸಬೇಕು ಹಾಗೂ ಸಗಣಿ ಒಗ್ಗಡದಿಂದ ತೆಳುವಾಗಿ ಸಾರಿಸಿಕೊಳ್ಳುವುದು ಸೂಕ್ತ. ಸಾವಯವ ವಸ್ತುಗಳನ್ನು ಪದರ ಪದರವಾಗಿ ತೊಟ್ಟಿಯಲ್ಲಿ ತುಂಬಬೇಕು. ಸಾಮಾನ್ಯವಾಗಿ ನಿಧಾನವಾಗಿ ವಿಭಜನೆಯಾಗುವ ವಸ್ತುಗಳಾದ ತೆಂಗಿನ ಮೊಟ್ಟೆ, ಗರಿ, ತೆಂಗಿನನಾರು, ಜೋಳದ ಕಡ್ಡಿ ಇವುಗಳನ್ನು ಸಣ್ಣ ಚೂರುಗಳಾಗಿ ಮಾಡಿಕೊಂಡು, ಮೊದಲನೆಯ ಪದರವಾಗಿ ಸುಮಾರು 6 ಅಂಗುಲದ ವರೆಗೂ ಹರಡಬೇಕು. ಅನಂತರ ಚೆನ್ನಾಗಿ ನೀರು ಚಿಮುಕಿಸಿ, ಸಗಣಿಯ ಬಗ್ಗಡ ಮಾಡಿಕೊಂಡು ತೆಳುವಾಗಿ ಹರಡಿದ ನಂತರ ತೆಳು ಪದರವಾಗಿ ಮಣ್ಣನ್ನು ಹರಡಬೇಕು. ಮೊದಲನೆಯ ಪದರದ ವಸ್ತುಗಳಲ್ಲಿ ನಾರು ಮತ್ತು ಸೆಲ್ಯಲೋಸ್ ಅಂಶ ಜಾಸ್ತಿ ಇರುವುದರಿಂದ ಸೂಕ್ಷ್ಮ ಜೀವಿಗಳಾದ ಪ್ಲೊರೋಟಸ್, ಅಸ್ಟ್‍ರ್‍ಜಿಲ್ಲಸ್, ಟ್ರೈಕೋಡರ್ಮ, ಪ್ಯಾಸೊಲೋಮೈಸಿಸ್ ಮುಂತಾದವುಗಳ ಶಿಲೀಂಧ್ರಗಳನ್ನು ಸಗಣಿಯ ಬಗ್ಗಡದ ಜೊತೆಯಲ್ಲಿ ಸೇರಿಸಿ ಚಿಮುಕಿಸಬೇಕು.
ಎರಡನೆಯ ಪದರವಾಗಿ ಒಣಹುಲ್ಲು, ಕಳೆ, ನೆಲಗಡಲೆ ಸಿಪ್ಪೆ, ಸತ್ತೆ ಸೋಯಾಅವರೆ ಅವಶೇಷಗಳನ್ನು ಸುಮಾರು 10 ರಿಂದ 12 ಅಂಗುಲ ಮುಂದವಾಗಿ ಹರಡಬೇಕು. ಪದರವನ್ನು ಹರಡುತ್ತಿರುವಾಗ ಆಗಾಗ್ಗೆ ನೀರು ಹಾಕುತ್ತಿರಬೇಕು. ಅನಂತರ ಸಗಣಿಯ ಬಗ್ಗಡ, ತೆಳುವಾಗಿ ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣವನ್ನು ಈಗಾಗಲೇ ತಿಳಿಸಿರುವಂತೆ ಹರಡಬೇಕು. ಮೂರನೆಯ ಪದರದಲ್ಲಿ ಒಕ್ಕಣೆ ಮಾಡುವ ಕಾಲದಲ್ಲಿ ಕಣದಲ್ಲಿ ಶೇಖರವಾಗುವ ವಸ್ತುಗಳನ್ನು ಸುಮಾರು 4-6 ಅಂಗುಲ ಮಂದದ್ ಪದರವಾಗಿ ಹರಡಬೇಕು. ಇಲ್ಲಿ ಹಸಿರೆಲೆ ಗೊಬ್ಬರವನ್ನು ಮಿಶ್ರಮಾಡಿಕೊಂಡು ತುಂಬುವುದು ಸೂಕ್ತ. ನಾಲ್ಕನೆಯ ಪದರದಲ್ಲಿ ಲಭ್ಯವಿರುವ ಹಸಿರೆಲೆ ಗೊಬ್ಬರಗಳು, ಲಭ್ಯವಿದ್ದರೆ ಕೋಳಿ ಗೊಬ್ಬರ, ರೇಷ್ಮೆ ಹುಳುವಿನಹಿಕ್ಕೆ, ತ್ಯಾಜ್ಯಗಳು, ಕರರೆಗೋಡು, ಬಯೋಗ್ಯಾಸ್ ಬಗ್ಗಡ, ಹೀಗೆ ಲಭ್ಯವಿರುವ ವಸ್ತುಗಳ ಮತ್ತೊಂದು ಪದರವನ್ನು ಸುಮಾರು 10-12 ಅಂಗುಲದಷ್ಟು ಮಂದವಾಗಿ ಹರಡಬೇಕು. ಪ್ರಕೃತಿದತ್ತವಾಗಿ ದೊರೆಯುವ ಶಿಲಾರಂಜಕವನ್ನು ಸೇರಿಸಬಹುದು. ಸಗಣಿ, ಮಣ್ಣು ಹಾಗೂ ಸೂಕ್ಷ್ಮಜೀವಿಗಳ ಮಿಶ್ರಣಗಳನ್ನು ತೆಳುವಾಗಿ ಹರಡುವುದನ್ನು ಪುನರಾವರ್ತಿಸಬೇಕು. ಐದನೆಯ ಪದರವಾಗಿ ಜಾನುವಾರುಗಳ ಕೊಟ್ಟಿಗೆಯಲ್ಲಿ ಲಭ್ಯವಾಗುವ ಸಗಣಿ, ದನಕರುಗಳು ತಿಂದು ಬಿಟ್ಟ ಮೇವಿನ ಭಾಗ, ಗಂಜಲ ಇವೆಲ್ಲವನ್ನು ಸುಮಾರು 6-12 ಅಂಗು ಎತ್ತರ ತೊಟ್ಟಿಯ ಮೇಲುಭಾಗಕ್ಕೆ ಬಂದಾಗ ಗಟ್ಟಿಯಾಗಿ ಸಗಣಿ ಬಗ್ಗಡ ಮಾಡಿಕೊಂಡು ಆರನೆಯ ಪದರವಾಗಿ ಹಾಕಿ ಸಾರಿಸಬೇಕು. ತೊಟ್ಟಿಯನ್ನು ತುಂಬುವಾಗ ಒಂದು ಕಡೆ ಸ್ವಲ್ಪ ಸ್ಥಳವನ್ನು ಬಿಟ್ಟುಕೊಂಡಿದ್ದಲ್ಲಿ ತಿರುವಿ ಹಾಕಲು ಅನುಕೂಲವಾಗುತ್ತದೆ. ಆಗಾಗ್ಗೆ ನೀರು ಚಿಮುಕಿಸುವುದು ಈ ವಿಧಾನದಲ್ಲಿ ಅವಶ್ಯಕ.
ತೊಟ್ಟಿ ಪದ್ಧತಿ / ಜಪಾನ್ ಪದ್ಧತಿಯಲ್ಲಿ ಸಾವಯವ ವಸ್ತುಗಳನ್ನು ತುಂಬುವ ವಿಧಾನ
ಹೆಚ್ಚಾಗಿ ಮಳೆ ಬೀಳುವ ಪ್ರದೇಶಕ್ಕೆ ಸೂಕ್ತವಾಗುವ ಈ ವಿಧಾನದಲ್ಲಿ ಸಾವಯವ ವಸ್ತುಗಳನ್ನು ಪದರ ಪದರವಾಗಿ ಹಾಕುತ್ತಾ ಬಂದು ಅದು ಸುಮಾರು 0.5-0.7 ಮೀ. ಎತ್ತರದಷ್ಟು ಏರಿಸಬಹುದು. ಕೆಳಭಾಗದಲ್ಲಿ ಅಗಲವಾಗಿ ಹಾಕಿ 1.0 ಮೀ. ಏರಿಸುತ್ತಾ ಬಂದಂತೆ 0.6 ಮೀ ಮೇಲುಗಡೆಯಿರುವಂತೆ ನೋಡಿಕೊಂಡಾಗ ಸಾವಯವ ವಸ್ತುಗಳು ಹಾರುವುದಿಲ್ಲ. 2-3 ಬಾರಿ ತಿರುವು ಹಾಕಿದರೆ ಆದಷ್ಟು ಬೇಗನೆ ಕಾಂಪೋಸ್ಟ್ ಮಾಡಿಕೊಳ್ಳಲು ಸಾಧ್ಯ.
ಗಡ್ಡೆ ಪದ್ಧತಿಯಲ್ಲಿ ಸಾವಯವ ವಸ್ತುಗಳನ್ನು ತಿರುವು ಹಾಕಲು ಮತ್ತು ಮಿಶ್ರ ಮಾಡಲು ಏರೋಟಿಲ್ಲರ್‍ಗಳನ್ನು ಬಳಸಬಹುದು.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019