ಭತ್ತದ ಒಟ್ಟಲನ್ನು (ಸಸಿ ಬೆಳೆಸುವುದು) ಗದ್ದೆಯಲ್ಲಿ ಪಾತಿ ಮಾಡಿಕೊಂಡು ಬೆಳೆಸುವುದು ಸರ್ವೇ ಸಾಮಾನ್ಯ. ಆದರೆ, ಮಂಡ್ಯ ತಾಲ್ಲೂಕಿನ ಕುರಿಕೊಪ್ಪಲು ಹಾಗೂ ಚಂದಗಾಲದ ರೈತರು ತಾರಸಿ ಮೇಲೆ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ವಿ.ಸಿ. ಫಾರ್ಮ್‌ನ ಭತ್ತದ ತಳಿ ತಜ್ಞ ಡಿ.ಕೆ. ಸಿದ್ದೇಗೌಡರ ಮಾರ್ಗದರ್ಶನದಲ್ಲಿ ಮನೆಯ ತಾರಸಿ, ಮನೆಯಂಗಳ, ಸಜ್ಜದ ಮೇಲೆ ‘ಟ್ರೆ’ ಗಳಲ್ಲಿ ಬೆಳೆದು, ನಂತರ ಗದ್ದೆಯಲ್ಲಿ ನಾಟಿ ಮಾಡಲು ಮುಂದಾಗಿದ್ದಾರೆ. ಆ ಮೂಲಕ ನೀರು, ಸಮಯ, ಹಣದ ಉಳಿತಾಯಕ್ಕೆ ಮುಂದಾಗಿದ್ದಾರೆ.
ಭತ್ತದ ನಾಟಿಗೂ 21 ದಿನ ಗದ್ದೆಯಲ್ಲಿಯೇ ಪಾತಿಯೊಂದನ್ನು ಮಾಡಿಕೊಂಡು ಮುನ್ನ ಒಟ್ಟಲು (ಸಸಿ ಬೆಳೆಸುವುದು) ಹಾಕಲಾಗುತ್ತದೆ. ಪಾತಿ ಮಾಡಲು ಇಬ್ಬರು ಕೂಲಿಯಾಳುಗಳು ಬೇಕು. ಜತೆಗೆ ಪಾತಿ ಮಾಡಿದ ನಂತರ ನಿತ್ಯ ಹೊಲಕ್ಕೆ ಬಂದು ನೀರು ಹರಿಸುತ್ತಿರಬೇಕು. ಆದರೆ, ಮನೆಯ ತಾರಸಿಯ ಮೇಲೆ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ, ಮನೆಯಲ್ಲಿದ್ದವರೇ ಯಾರಾದರೂ ನೀರು ಹಾಕುತ್ತಾರೆ. ಕಳೆದ ವರ್ಷ ವಿ.ಸಿ. ಫಾರ್ಮ್ ‘ಟ್ರೇ’ಗಳಲ್ಲಿ ಭತ್ತದ ಒಟ್ಟಲು ಬೆಳೆಸಿತ್ತು. ಇದನ್ನು ಈ ಬಾರಿ ರೈತರ ಅಂಗಳಕ್ಕೆ ತಂದಿದೆ. ಪರಿಣಾಮ 20ಕ್ಕೂ ಹೆಚ್ಚು ರೈತರು ಒಟ್ಟಲನ್ನು ಮನೆಯ ತಾರಸಿಯ ಮೇಲೆ ಹಾಕಿದ್ದಾರೆ.
ಎರೆಗೊಬ್ಬರ ಹಾಗೂ ಮಣ್ಣನ್ನು ಸಣ್ಣಗೆ ಮಾಡಿ ‘ಟ್ರೇ’ಗಳಲ್ಲಿ ತುಂಬಬೇಕು. ಪ್ರತಿ ಟ್ರೇಗೂ 80 ಗ್ರಾಂ ನಷ್ಟು ಬೀಜ ಹಾಕಬೇಕು. ಭತ್ತದ ಹುಲ್ಲು ಅಥವಾ ಕಬ್ಬಿನ ತರಗಿನಿಂದ ಐದು ದಿನ ಮುಚ್ಚಬೇಕು. ಆ ನಂತರ ಅದನ್ನು ತೆಗೆಯಬೇಕು. ಮೊದಲ ಆರು ದಿನ ಬೆಳಿಗ್ಗೆ ಹಾಗೂ ಸಂಜೆ ನೀರು ಹಾಕಬೇಕು. ಆ ನಂತರ ದಿನಕ್ಕೆ ಒಮ್ಮೆ ನಿರು ಹಾಕಿದರೆ ಸಾಕು. ಒಂದು ಎಕರೆಗೆ 20 ಟ್ರೇ ಬೇಕಾಗುತ್ತವೆ.
ಗದ್ದೆಯಲ್ಲಿ ಒಟ್ಟಲು ಹಾಕಿದರೆ 25 ಕೆ.ಜಿ ಬೀಜ ಬಳಸಲಾಗುತ್ತದೆ. ಇಲ್ಲಿ 16 ರಿಂದ 18 ಕೆ.ಜಿ ಭತ್ತ ಸಾಕು. ಕಡಿಮೆ ನೀರು ಬಳಕೆ. ಕೂಲಿಕಾರರು ಬೇಕಾಗುವುದಿಲ್ಲ. ಹಣದಲ್ಲಿಯೂ ಉಳಿಕೆ. ಔಷಧಿ ಬಳಕೆಯೂ ಕಡಿಮೆ ಯಾಗುತ್ತದೆ. ಮನೆಯಲ್ಲಿರುವ ಯಾರಾದರೂ ನೀರು ಹಾಕಬಹುದು. 15 ರಿಂದ 16 ದಿನಕ್ಕೆ ನಾಟಿ ಮಾಡಬಹುದು.
ಗದ್ದೆಯಲ್ಲಿ ಹಾಕುವುದಕ್ಕಿಂತ ಇಲ್ಲಿಯೇ ಬೆಳೆಸುವುದರಲ್ಲಿ ಬಹಳ ಅನುಕೂಲವಿದೆ. ಗದ್ದೆಯಲ್ಲಿ ಪಾತಿ ತಯಾರಿಸಲು ಇಬ್ಬರು ಕೂಲಿಯವರು ಬೇಕು. ಇಲ್ಲಾದರೆ, ನಾವೇ ಮಾಡಿಕೊಳ್ಳಬಹುದು. ಮನೆಯ ಕೆಲಸದೊಂದಿಗೆ ಮನೆಯವರೇ ನೀರು ಹಾಕುತ್ತಾರೆ. ಔಷಧದ ಬಳಕೆಯೂ ಕಡಿಮೆಯಾಗಿದೆ ಎನ್ನುತ್ತಾರೆ ತಾರಸಿ ಮೇಲೆ ಒಟ್ಟಲು ಮಾಡಿರುವ ರೈತ ಜೋಗಿಗೌಡ.
ಕೆಲವನ್ನು ತಾರಸಿ ಮೇಲೆ ಇಟ್ಟಿದ್ದರೆ, ಇನ್ನು ಕೆಲವನ್ನು ಕೊಠಡಿಯೊಳಗೆ ಇರಿಸಿದ್ದೇನೆ. ನೆರಳಿನಲ್ಲಿಯೂ ಯಾವುದೇ ತೊಂದರೆ ಇಲ್ಲದೆ ಬೆಳೆಯುತ್ತವೆ. ಆರು ಬಿಂದಿಗೆಯಷ್ಟು ನೀರು ಸಾಕು. ನಾಲೆಯಲ್ಲಿ ನೀರು ಬಿಡುವ ಮೊದಲೇ ಒಟ್ಟಲು ಮಾಡಿಕೊಂಡಿರುತ್ತೇವೆ. ನೀರು ಬರುತ್ತಿದ್ದಂತೆಯೇ ನಾಟಿ ಮಾಡುತ್ತೇವೆ ಎನ್ನುತ್ತಾರೆ ರೈತ ಕೆ.ಎನ್. ಅಶೋಕ್.
‘ಟ್ರೇ’ಗಳಲ್ಲಿ ಭತ್ತದ ಒಟ್ಟಲು ಮಾಡುವುದರಿಂದ ರೋಗ ಬರುವುದಿಲ್ಲ. ಜಿಲ್ಲೆಯ ಕೆಲವೆಡೆ ಗಂಟು ಬೇರು ರೋಗ ಬರುತ್ತದೆ. ಗದ್ದೆಯಲ್ಲಿಯೇ ಒಟ್ಟಲು ಮಾಡಿದರೆ, ಸರಳವಾಗಿ ಹರಡಿಕೊಂಡು ಬಿಡುತ್ತದೆ. ಟ್ರೇನಲ್ಲಿ ಹೀಗಾಗುವುದಿಲ್ಲ ಎನ್ನುತ್ತಾರೆ ಭತ್ತದ ತಳಿ ತಜ್ಞ ಡಿ.ಕೆ. ಸಿದ್ದೇಗೌಡ.
‘ಒಂದು ಎಕರೆ ಭತ್ತದ ಒಟ್ಟಲಿಗೆ 20 ಟ್ರೇಗಳು ಬೇಕಾಗುತ್ತವೆ. ಈ ಬಾರಿ ನಾವು ವಿ.ಸಿ. ಫಾರ್ಮ್‌ನಿಂದ ರೈತರಿಗೆ ಒದಗಿಸಿದ್ದೇವೆ. ಮಾರುಕಟ್ಟೆಯಲ್ಲಿ ₹ 25ಕ್ಕೆ ಒಂದರಂತೆ ಸಿಗುತ್ತವೆ. ಒಂದು ಬಾರಿ ಟ್ರೇ ಕೊಂಡರೆ, ಅದರಲ್ಲಿ ನಾಲ್ಕೈದು ಬಾರಿ ಒಟ್ಟಲು ಮಾಡಬಹುದು’ ಎನ್ನುತ್ತಾರೆ ಅವರು.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019