ಕಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ನೆಕ್ಕರೆ ಗಿಡದ ಪರಿಚಯ ಹೆಚ್ಚಿನ ಜನರಿಗೆ ಇರಲಾರದು. ಕೆರೆ, ಬಾವಿ, ನದಿಗಳ ಬದಿಗಳಲ್ಲಿ ಬೆಳೆಯುವ ಗಿಡ ಅನೇಕ ರೆಂಬೆಗಳನ್ನು ಬಿಟ್ಟು ಹಿಂಡು ಹಿಂಡಾಗಿ ಬೆಳೆಯುತ್ತದೆ. ರೆಂಬೆಗಳು ಕೆಂಬಣ್ಣದಲ್ಲಿರುವುದು ಇದರ ವಿಶೇಷತೆ. ಮೂರರಿಂದ ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಗಿಡದ ಎಲೆಗಳು ದಪ್ಪಗಿದ್ದು, ಕೈಗೆ ತಾಕಿದರೆ ತುರಿಸಿದಂತೆ ಭಾಸವಾಗುತ್ತದೆ.
ಅತ್ಯಧಿಕ ಜೀವಸತ್ವವನ್ನು ಹೊಂದಿರುವ ಗಿಡ ಎಂಬ ಹೆಗ್ಗಳಿಕೆ ಕೂಡಾ ಇದರದ್ದು. ಚಿಗುರನ್ನು ಸಾಂಬಾರು,ಚಟ್ನಿಯಲ್ಲಿ ಉಪಯೋಗಿಸುತ್ತಾರೆ. ಕಾಯಿ ತಿನ್ನುವುದರಿಂದ ಬಾಯಿ ಉಣ್ಣಿನಂತಹ ಕಾಯಿಲೆಗಳು ತಕ್ಷಣ ವಾಸಿ ಯಾಗುತ್ತವೆಯಂತೆ. ಹೂ ನೇರಳೆ ಬಣ್ಣವನ್ನು ಹೊಂದಿದ್ದು ಕುಸುಮ ಹಳದಿ ಮತ್ತು ಕೆಂಪು ಬಣ್ಣದಿಂದ ನೋಡುಗರ ಗಮನ ಸೆಳೆಯುತ್ತದೆ. ಹೂವಿನಲ್ಲಿ ಐದು ಎಸಳುಗಳಿದ್ದು ಅಂಗೈಯಗಲದ ಗಾತ್ರದಲ್ಲಿರುತ್ತದೆ. ಹೂ ನಾಲ್ಕೈದು ದಿನಗಳವರೆಗೆ ಹಾಳಾಗುವುದಿಲ್ಲ. ಹೂ ಮುದುಡಿದ ನಂತರ ಕಾಯಿಯ ಬೆಳವಣಿಗೆ ಆರಂಭವಾಗುತ್ತದೆ. ಕಾಯಿ ಬೆಳೆದಾಗ ಕೆಂಬಣ್ಣಕ್ಕೆ ತಿರುಗುತ್ತದೆ. ಹಿಂದಿನ ಕಾಲದಲ್ಲಿ ಇದರ ಹಣ್ಣನ್ನು ಹಸಿವಿಗಾಗಿ ಹುಡುಕಿಕೊಂಡು ಹೋಗಿ ತಿನ್ನುತ್ತಿದ್ದರಂತೆ.
ಸಿಪ್ಪೆ ಕೆಂಬಣ್ಣ ಹೊಂದಿದ್ದು, ಹಣ್ಣಿನ ಒಳಭಾಗ ಕಡು ನೇರಳೆಯಾಗಿರು ತ್ತದೆ. ಸಿಪ್ಪೆ ತೆಗೆದು ಸೇವಿಸಬಹುದು. ವರ್ಷದುದ್ದಕ್ಕೂ ಹೂಬಿಟ್ಟು ಕಾಯಿ ನೀಡುವ ನೆಕ್ಕರೆ ಹೂಗಳು ಫೆಬ್ರುವರಿ ಮಾಸದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಹೂ ಹೆಚ್ಚು ಪರಿಮಳ ಹೊಂದಿಲ್ಲ. ದೇವರ ಮುಡಿಗೂ ನೆಕ್ಕರೆ ಹೂವನ್ನು ಕೆಲವು ಕಡೆಗಳಲ್ಲಿ ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ನೆಕ್ಕರೆ ಗಿಡ ಕಾಣಸಿಗುವುದೇ ಅಪರೂಪ. ಈ ಗಿಡ ಹುಟ್ಟಿದ ಜಾಗದಲ್ಲಿ ನೀರು ಸಿಗುತ್ತದೆ. ಅಲ್ಲಿ ಬಾವಿ ತೋಡಬಹುದೆಂಬ ನಂಬಿಕೆ ಇಂದಿಗೂ ಹಳ್ಳಿಗಳಲ್ಲಿದೆ.
ನೀರಿನಾಂಶ ಇರುವೆಡೆಗಳಲ್ಲೇ ಹೆಚ್ಚಾಗಿ ಬೆಳೆಯುವ ಈ ಗಿಡದ ಬೇರನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಕಲ್ಲು ತಾಗಿದ ಗಾಯಗಳಿಗೆ ಹಚ್ಚಿದರೆ ಗಾಯ ಬೇಗ ಗುಣಮುಖವಾಗುತ್ತದೆಯಂತೆ. ಗಿಡ ದನ, ಕರುಗಳಿಗೆ ನೆಚ್ಚಿನ ಆಹಾರ ಕೂಡ.ಎಲ್ಲಾ ಮರದ ಎಲೆಗಳು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗಿದರೆ ಇದರ ಎಲೆ ಕೆಂಬಣ್ಣಕ್ಕೆ ತಿರುಗುತ್ತದೆ. ಮಣ್ಣಿನ ಸವಕಳಿಯನ್ನು ತಡೆಗಟ್ಟುವಲ್ಲಿ ಈ ಗಿಡದ ಪಾತ್ರ ಪ್ರಮುಖವಾದುದು. ಪ್ರಕೃತ್ತಿದತ್ತವಾದ ಈ ಕಾಡು ಹೂವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಳಿವಿನಂಚಿನಲ್ಲಿರುವ ಈ ಗಿಡವನ್ನು ಉಳಿಸುವತ್ತ ನಮ್ಮ ಪ್ರಯತ್ನ ಸಾಗಬೇಕಾಗಿದೆ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/28/2020