অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಾಯಿ ಚಪ್ಪರಿಸಲು ಚಂಪಡಕ್

ನೋಡುವಾಗ ಈ ಹಣ್ಣಿನಲ್ಲಿ ಅಂಥ ವಿಶೇಷ ಏನೂ ಕಾಣಿಸುವುದಿಲ್ಲ. ದಕ್ಷಿಣ ಭಾರತದಲ್ಲಿ ಧಾರಾಳವಾಗಿ ಕಾಣಸಿಗುವ ಹಲಸು ಅಂತಲೇ ಭಾವಿಸಿ ಸುಮ್ಮನಿರಬಹುದು. ಆದರೆ ನಮ್ಮೂರ ಹಲಸಿನ ಸಿಪ್ಪೆ ಸೀಳಲು ಬಲವಾದ ಕತ್ತಿಯೇ ಬೇಕು. ಇದು ಹಾಗಲ್ಲ, ಹರಿತ ಉಗುರುಗಳಿಂದ ಸಿಪ್ಪೆಯನ್ನು ಬಗೆಯಬಹುದು. ಆಗ ಮೂಗಿಗೆ ಬರುತ್ತದೆ ಮಕರಂದದ ದಿವ್ಯ ಸುವಾಸನೆ. ಒಳಗೆ ಕಿತ್ತಳೆ, ಹಳದಿ ಅಥವಾ ಬಿಳಿ ಬಣ್ಣದ ತೊಳೆ. ಅದನ್ನೆತ್ತಿ ಬಾಯಿಗೆ ಹಾಕಿಕೊಂಡ ತಕ್ಷಣ ತಾನಾಗಿ ಕರಗಿ ಹೋಗುವಷ್ಟು ಮೃದು. ‘ಆಹಾ, ಅಮೃತ!’ ಎಂಬ ಉದ್ಗಾರ ತನ್ನಿಂದ ತಾನೇ ಬರುತ್ತದೆ. ನಮ್ಮೂರ ಹಲಸಿನ ಹಣ್ಣಿಗಿಂತ ಸಾಕಷ್ಟು ಭಿನ್ನವಾಗಿದೆ ಇದು ಎಂದು ಒಂದು ಕ್ಷಣ ಎನಿಸುತ್ತದೆ.

ವಿಭಿನ್ನ ಗುಣ

ಹೋಲಿಕೆಯಲ್ಲಿ ಸಾಮಾನ್ಯ ಹಲಸಿನಹಣ್ಣಿನ ಹಾಗಿದ್ದರೂ ಗುಣ, ರುಚಿ, ಸಿಹಿಗಳಲ್ಲಿ ಯಾವುದೇ ಸಾಮ್ಯತೆಯಿಲ್ಲದ ಈ ಹಣ್ಣು ಚಂಪಡಕ. ಕ್ವೀನ್‌ಲ್ಯಾಂಡ್ ಇದರ ತವರೂರು. ಆಗ್ನೇಯ ಏಷ್ಯಾದ ಎಲ್ಲ ಕಡೆಗಳ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. ಮಲೇಷಿಯಾದಲ್ಲಿ ಇದೀಗ ಗಿಡ, ಬೀಜ, ಹಣ್ಣುಗಳ ಮಾರಾಟ ದಿಂದ ಲಕ್ಷಾಂತರ ಡಾಲರ್ ಲಾಭ ತರುವ ವಾಣಿಜ್ಯ ಕೃಷಿಯಾಗಿದೆ. ಇಂಡೋನೇಷ್ಯಾ, ನ್ಯೂಗಿನಿಯಾ, ಸಿಂಹಳ ಮಾತ್ರವಲ್ಲ, ದಕ್ಷಿಣ ಭಾರತದ ಕೇರಳ, ಆಂಧ್ರ, ತಮಿಳುನಾಡಿನ ರೈತರು ಇದರ ಮರಗಳನ್ನು ಬೆಳೆಸಿ ಹಣ್ಣು ಕೊಯ್ಯುತ್ತಿ ದ್ದಾರೆ. ಕರ್ನಾಟಕದಲ್ಲಿ ಕೆಲವು ರೈತರ ತೋಟದಲ್ಲಿ ಇದರ ಕೃಷಿ ಆರಂಭವಾಗಿದ್ದು ಇನ್ನು ಅತ್ಯಲ್ಪ ಅವಧಿಯಲ್ಲಿ ಚಂಪಡಕದ ಪರಿಮಳ ಹರಡುವುದು ನಿಶ್ಚಿತ. ಮಲೆನಾಡಿನಲ್ಲಿಯೂ ಇದರ ಕೃಷಿಗೆ ವಿಪುಲ ಅವಕಾಶಗಳಿವೆ.

ಚಂಪಡಕದ ಕುರಿತು

ಚಂಪಡಕ ಮೊರಾಸಿಯೇ ಕುಟುಂಬದ ಸದಸ್ಯ. ವೈಜ್ಞಾನಿಕವಾಗಿ ಆರ್ಟೊಕಾರ್ಪಸ್ ಪೂರ್ಣಾಂಗ ಎಂದು ಕರೆಯುತ್ತಾರೆ. ಮಲಯದಲ್ಲಿ ಅದನ್ನು ಬ್ಯಾಂಕೊಂಗ್, ಥಾಯ್ಲೆಂಡ್‌ನಲ್ಲಿ ಚಂಪಡ, ವಿಯೆಟ್ನಾಮ್‌ನಲ್ಲಿ ಮಿತ್ ಎಂಬ ಹೆಸರುಗಳು ಇದಕ್ಕಿವೆ. ಇದರಲ್ಲಿ ದುಂಡಗೆ ಮತ್ತು ಸಿಲಿಂಡರ್ ಆಕೃತಿಯಲ್ಲಿ ಬೆಳೆಯುವ ಎರಡು ಜಾತಿಗಳು, ಅದರಲ್ಲಿ ಹಲವಾರು ವಿಧದ ತಳಿಗಳು ಕಂಡುಬಂದರೂ ರುಚಿಯಲ್ಲಿ ಒಂದಕ್ಕಿಂತ ಒಂದು ಹೆಚ್ಚು ಅನ್ನುವಷ್ಟು ಮಧುರವಾಗಿವೆ. ತೊಳೆಗಳ ಸುವಾಸನೆಯಲ್ಲಿ ಬೇಧಗಳಿರಬಹುದು.
ಕಾಯಿಯ ಹೊರಭಾಗದಲ್ಲಿ ಹಳದಿ, ಹಸಿರು ಅಥವಾ ಈ ಎರಡು ವರ್ಣಗಳ ಮಿಶ್ರಣವಿರಬಹುದು. ತೊಳೆ ಬಿಳಿಯಿರಲಿ, ಹಳದಿ ಅಥವಾ ಕಿತ್ತಳೆಯಿರಲಿ ಮೃದುತ್ವ ಮತ್ತು ಕರಗುವ ಗುಣ ಎಲ್ಲದರಲ್ಲೂ ಏಕಪ್ರಕಾರ. ಒಳಗೆ ಕಂದುವರ್ಣದ ಬೀಜಗಳಿರುವ ನೂರರಿಂದ ಐನೂರರ ತನಕ ತೊಳೆಗಳಿರುತ್ತವೆ.

20 ರಿಂದ 35 ಸೆ. ಮೀ. ತನಕ ಉದ್ದ, 10 ರಿಂದ 15 ಸೆ.ಮೀ. ವ್ಯಾಸವಿರುವ ಹಣ್ಣುಗಳು ಎರಡರಿಂದ ನಾಲ್ಕು ಕಿಲೋ ತೂಕವಿರುವುದುಂಟು. ಹಲಸು ವರ್ಷಕ್ಕೊಂದು ಬೆಳೆ ಕೊಡುವುದಾದರೆ ಚಂಪಡಕ ಎರಡು ಋತುಗಳಲ್ಲಿ ಎರಡು ಸಲ ಫಲ ನೀಡುತ್ತದೆ.

ನಮ್ಮಲ್ಲೂ ಬೆಳೆದವರು...

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಳಂಜದ ಅನಿಲಕುಮಾರರು ಚಂಪಡಕದ ಕೆಲವು ಗಿಡಗಳನ್ನು ನೆಟ್ಟಿದ್ದಾರೆ. ಸಾವಯವ ಗೊಬ್ಬರ ಹಾಕಿ ಸಾಮಾನ್ಯ ಹಲಸಿನ ಗಿಡದಂತೆಯೇ ಸಲಹಿದ್ದಾರೆ. ಗಿಡಕ್ಕೆ ಮೂರು ವರ್ಷಗಳಾಗಿದೆ.

‘ಕಸಿ ಗಿಡವಾದರೆ ಮೂರು ನಾಲ್ಕು ವರ್ಷಗಳಲ್ಲಿ ಫಲ ಕೊಡುತ್ತದೆ. ಆದರೆ ನಾನು ಕೊಸ್ಟರಿಕಾದಿಂದ ಬೀಜ ತರಿಸಿ ಗಿಡ ಮಾಡಿ ನೆಟ್ಟ ಕಾರಣ ಫಸಲು ಸಿಗಲು ಇನ್ನೊಂದೆರಡು ವರ್ಷ ಬೇಕಾದೀತು’ ಎನ್ನುತ್ತಾರೆ ಅವರು. ಎಲೆಗಳಲ್ಲಿರುವ ರೋಮರಂಧ್ರಗಳಲ್ಲಿ ಮಳೆಗಾಲದ ನೀರು ನಿಂತು ಎಲೆಗಳು ಕೊಳೆತು ಗಿಡವೂ ಸಾಯುತ್ತದೆ. ಅದಕ್ಕೆ ನಿವಾರಣೋಪಾಯಗಳು ತಿಳಿಯುತ್ತಿಲ್ಲವೆಂಬ ಅಳಲು ಅವರದು.
ಸದ್ಯಕ್ಕೆ ಚಂಪಡಕದ ಕಸಿ ಗಿಡಗಳನ್ನು ವಿದೇಶಗಳಿಂದ ತರಿಸಲು ಸಾಧ್ಯವಾಗುವುದಿಲ್ಲ. ಬೀಜಗಳನ್ನು ತರಿಸಿ ಗಿಡ ತಯಾರಿಸಬೇಕು. ಈ ಬೀಜಗಳನ್ನು ಪೂರೈಸುವ ಹಲವು ವೆಬ್‌ಸೈಟ್‌ ಗಳಿವೆ. ಸಾಧು ಗೋವರ್ಧನ್ ಅವರ organicfarm ಸಂಪರ್ಕ ಮಾಡಿದರೆ ಬೀಜಗಳನ್ನು ತರಿಸಬಹುದು. ಹಾಗೆಯೇ hawaiifruitಕೂಡ ಬೀಜಗಳನ್ನು ಕಳುಹಿಸುತ್ತದೆ.

ಹಣ್ಣಿನ ಹೊರಭಾಗದ ಸಿಪ್ಪೆ ಅಥವಾ ರಚ್ಚೆ ಬಹು ಮೃದು. ತೊಳೆಗಳನ್ನು ಹಾಗೇ ತಿನ್ನಬಹುದು. ಅನಾನಸ್ ಅಥವಾ ಬಾಳೆಹಣ್ಣಿನ ರುಚಿಯ ಮಿಶ್ರಣವಿದೆ. ಇಡೀ ಹಣ್ಣನ್ನು ಬೇಯಿಸಿ ಬಳಸುವುದೂ ಇದೆ. ವಿದೇಶಗಳಲ್ಲಿ ಮಾಂಸದೊಂದಿಗೆ ಇದನ್ನು ಸೇರಿಸಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಎಣ್ಣೆಯಲ್ಲಿ ಕರಿದು ಪನಿಯಾಣ ಎಂಬ ತಿಂಡಿ, ಬೆಣ್ಣೆ ಕೇಕ್, ಗೋರೆಂಗ್, ಐಸ್‌ಕ್ರೀಮ್, ಜಾಮ್, ಜ್ಯೂಸ್, ಕಾಯಿ ತೊಳೆಗಳಿಂದ ಉಪ್ಪಿನಕಾಯಿ ತಯಾರಿಸುತ್ತಾರೆ. ತೊಳೆಗಳನ್ನು ಅಕ್ಕಿ ಮತ್ತು ತೆಂಗಿನಕಾಯಿ ಹಾಲಿನೊಂದಿಗೆ ಬೇಯಿಸಿ ಸೂಪು ಮಾಡುತ್ತಾರೆ. ಒಣಗಿಸಿದ ತೊಳೆಗಳೂ ರುಚಿಕರವಾಗಿರುತ್ತವೆ.

ಅಮೆರಿಕದಲ್ಲಿ ಈ ಹಣ್ಣಿನಿಂದ ತಯಾರಾಗುವ ಚಾಕೊಲೇಟ್ ಜನಪ್ರಿಯವಾಗಿದೆ. ಎಳೆಯ ಕಾಯಿ ಮತ್ತು ಮರದ ಚಿಗುರೆಲೆಗಳು ತರಕಾರಿಯಂತೆ ಉಪಯುಕ್ತವಾಗಿವೆ. 2 ರಿಂದ 3 ಸೆ. ಮೀ. ಉದ್ದವಿರುವ ಚಂಪಡಕದ ಬೀಜಗಳು ಕೂಡ ಬೇಯಿಸಿದರೆ ಆಲೂಗಡ್ಡೆಯಂತೆ ಸ್ವಾದಿಷ್ಟವಾಗಿವೆ. ಮಲೇಷಿಯಾದ ಬೀದಿಗಳಲ್ಲಿ ಹುರಿದು ಅಥವಾ ಬೇಯಿಸಿ ಉಪ್ಪು ಬೆರೆಸಿದ ಬೀಜಗಳನ್ನು ಮಾರುತ್ತಾರೆ.

ಚಂಪಡಕ ಹಣ್ಣು ಆರೋಗ್ಯಕ್ಕೆ ಸಹಕಾರಿಯೆಂದು ಆಹಾರ ಪಂಡಿತರು ಹೇಳುತ್ತಾರೆ. ‘ಫೈಟೊ ಮೆಡಿಸಿನ್’ ಪತ್ರಿಕೆ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಈ ಹಣ್ಣಿನ ತೊಳೆಗಳಲ್ಲಿ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಬಲ್ಲ ಅಣುಗಳ ಅಭಿವೃದ್ಧಿಯಾಗುತ್ತದೆಯೆಂದು ಹೇಳಿದೆ. ಅಲ್ಲದೆ ಗ್ಯಾಸ್ಟ್ರೊ ಪ್ರೊಟೆಕ್ಟಿವ್ ಅಂಶಗಳಿಂದಲೂ ಇದು ಸಮೃದ್ಧವಾಗಿದೆ. ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ನೆರವಾಗುವ ನಾರಿನಂಶ ತೊಳೆಯಲ್ಲಿದೆ. ಮಲೇರಿಯಾ ರೋಗಕಾರಕವಾದ ರೋಗಾಣುಗಳನ್ನು ಹೊರದಬ್ಬಬಲ್ಲ ಹೀಟರಿಫ್ಲಾವಿನ್ ಸಿಶೇ ಅಂಶಗಳನ್ನೂ ಹೊಂದಿದೆ. ಹಣ್ಣಿನ ತೊಗಟೆ (ರಚ್ಚೆ) ಕೂಡ ಗೆಡ್ಡೆಗಳನ್ನು ಕರಗಿಸಬಲ್ಲ ಗುಣ ಹೊಂದಿದ್ದು ಜಾನುವಾರು ಮತ್ತು ಆನೆಗಳು ಅತಿ ಪ್ರೀತಿಯಿಂದ ಇದನ್ನು ಭಕ್ಷಿಸುವ ಕಾರಣವನ್ನು ಪರೀಕ್ಷಿಸಿದಾಗ ವ್ಯಕ್ತವಾಗಿದೆ.

ತೊಳೆಗಳಲ್ಲಿ ಶೇ 67ರಷ್ಟು ನೀರಿನ ಅಂಶವಿದೆ. ಇನ್ನು ಸುಣ್ಣ 40 ಮಿ. ಗ್ರಾಂ. ಪ್ರೊಟೀನ್ 2.5 ಗ್ರಾಂ, ಕೊಬ್ಬು 0.4 ಮಿ.ಗ್ರಾಂ. 25.8 ಕಾರ್ಬೋಹೈಡ್ರೇಟ್ಸ್, 3.4 ಗ್ರಾಂ. ನಾರು, ರಂಜಕ 5 ಮಿ.ಗ್ರಾಂ. ಸೋಡಿಯಂ, ಕಬ್ಬಿಣ, ಕ್ಯಾರೋಟಿನ್ ಇತ್ಯಾದಿಗಳಲ್ಲದೆ 117 ಕ್ಯಾಲರಿಗಳಿವೆ. ‘ಎ’ ಜೀವಸತ್ವ ಸಾಕಷ್ಟಿರುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಸಹಕಾರಿ. ‘ಸಿ’ ಜೀವಸತ್ವವೂ ವಿಪುಲವಾಗಿದೆ. ರಕ್ತದ ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ‘ಬಿ’ ಸಂಯುಕ್ತ ಜೀವಸತ್ವಗಳಿವೆ.

ಮಲೇಷಿಯಾದಲ್ಲಿ ಹಣ್ಣನ್ನು ಸುಲಿಯುವ ಮೊದಲು ನಾಲ್ಕು ತಾಸು ಉಪ್ಪುನೀರಿನಲ್ಲಿ ನೆನೆಸುತ್ತಾರೆ. ಇದರಿಂದ ಕೈಯಲ್ಲಿ ಸುಲಿಯುವಷ್ಟು ಮೆತ್ತಗಾಗುತ್ತದೆ. ಒಂದು ತಿಂಗಳು ಉಪ್ಪುನೀರಿನಲ್ಲಿದ್ದರೂ ಕೆಡುವುದಿಲ್ಲ. ಹೀಗೆಯೇ ಹಣ್ಣನ್ನು ತಂಪು ಜಾಗದಲ್ಲಿ ಮೂರು ವಾರ ಉಳಿಸಬಹುದು. ಆದರೆ ಉಷ್ಣಾಂಶ 11–13 ಸೆಂಟಿಗ್ರೇಡ್ ಬೇಕು.

ಮರ ಹೀಗಿದೆ

ನಿತ್ಯ ಹರಿದ್ವರ್ಣದ ಕವಲೊಡೆಯುವ ಸಸ್ಯ ಚಂಪಡಕ. ಉಷ್ಣವಲಯದ ಹಣ್ಣಾದರೂ ತಂಪಗಿರುವ ಜಾಗದಲ್ಲಿ ಬೆಳೆಯುತ್ತದೆ. ಎಲೆಗಳು ಹಸಿರಾಗಿದ್ದು ಕಂದುವರ್ಣದ ಕೂದಲುಗಳನ್ನು ಹೊಂದಿವೆ. ಹಲಸಿನ ಎಲೆಗಳಿಗಿಂತ ದೀರ್ಘವೃತ್ತವಾಗಿದ್ದು ಅಗಲವಾಗಿವೆ. 1250 ಮಿ. ಮೀ. ಮಳೆ ಬೀಳುವ ಪ್ರದೇಶ ಅದಕ್ಕಿಷ್ಟ. ಗಿಡ ನೆಟ್ಟು ನಾಲ್ಕು ವರ್ಷಗಳಲ್ಲಿ ಫಲ ಕೊಡಲಾರಂಭಿಸುತ್ತದೆ. ಉಭಯಲಿಂಗಿ ಹೂಗಳು ಒಂದೇ ಮರದಲ್ಲಿರುವುದರಿಂದ ಪರಾಗ ಸಂಪರ್ಕದ ಬಗೆಗೆ ಆತಂಕವಿಲ್ಲ. ಬಿಸಿಲಿನ ವಾತಾವರಣವೇ ಮರಕ್ಕೆ ಇಷ್ಟ. ಆದರೆ ಮೊದಲ ವರ್ಷ ಗಿಡಕ್ಕೆ ನೆರಳು ಮತ್ತು ಸಾಕಷ್ಟು ನೀರಿನ ಅಗತ್ಯವಿದೆಯಾದರೂ ಬುಡದಲ್ಲಿ ನೀರು ನಿಲ್ಲುವ ಜೌಗು ಪ್ರದೇಶದಲ್ಲಿ ಬದುಕುವುದಿಲ್ಲ. ರಸಗೊಬ್ಬರ ಮತ್ತು ಸಾವಯವ ಗೊಬ್ಬರ ಹಾಕಿದರೆ ಗಿಡದ ಬೆಳವಣಿಗೆ ಶೀಘ್ರವಾಗುತ್ತದೆ. ಆಗಸ್ಟ್‌ನಿಂದ ಜುಲೈ ತನಕ ಹಣ್ಣುಗಳ ಸುಗ್ಗಿ.
ವಿದೇಶಗಳಲ್ಲಿ ಅದರ ಹಣ್ಣು, ಬೀಜ ಮತ್ತು ಗಿಡಗಳನ್ನು ಆನ್‌ಲೈನ್ ಮೂಲಕ ಮಾರುವ ಹೇರಳ ನರ್ಸರಿ ಸಂಸ್ಥೆಗಳಿವೆಯಲ್ಲದೆ ಕೇರಳ ಮತ್ತು ತಮಿಳುನಾಡುಗಳಲ್ಲಿಯೂ ನರ್ಸರಿಗಳಲ್ಲಿ ಗಿಡಗಳು ಸಿಗುತ್ತವೆ.
ಇದರಲ್ಲಿ ಕಿತ್ತಳೆ ವರ್ಣದ ತೊಳೆಗಳಿರುವ ಸಿ.ಎಚ್.28, ಬೀಜರಹಿತವಾದ ಸಿ.ಎಚ್ 27, ಹೆಚ್ಚು ಪರಿಮಳವಿರುವ ಸಿ.ಎಚ್ 28 ಮತ್ತು 33, ಸಣ್ಣ ಗಾತ್ರದ ಬೀಜಗಳಿರುವ ಸಿ.ಎಚ್ 30 ತಳಿಗಳು ಸಿದ್ಧವಾಗಿವೆ.

ಇತರ ಉಪಯೋಗ

ಚಂಪಡಕದ ಬಲಿತ ಮರ ಹಲಸಿನ ಮರದಂತೆಯೇ ದೃಢವಾಗಿದ್ದು ಗೆದ್ದಲು ನಿರೋಧಕವಾಗಿದೆ. ದೋಣಿ ಮತ್ತು ಪೀಠೋಪಕರಣಗಳ ತಯಾರಿಕೆಗೆ ಬಳಕೆಯಾಗುತ್ತದೆ. ಮರ 20 ಮೀಟರ್ ಎತ್ತರವಾಗುತ್ತದೆ. ಮರದ ತೊಗಟೆಯ ನಾರಿನಿಂದ ಹಗ್ಗ ಹೊಸೆಯುತ್ತಾರೆ. ಹಣ್ಣಿನಿಂದ ಶೇಖರಿಸಿದ ಮೇಣದಿಂದ ತಾಂಬೂಲದ ಸುಣ್ಣ ತಯಾರಿಸುತ್ತಾರೆ. ತೊಗಟೆಯ ಒಳಭಾಗದ ಹಳದಿ ಬಣ್ಣವನ್ನು ನೆಲಕ್ಕೆ ಹಚ್ಚುತ್ತಾರಲ್ಲದೆ ಚೀನಾ ಮತ್ತು ಭಾರತದ ಬೌದ್ಧ ಪುರೋಹಿತರ ನಿಲುವಂಗಿಗಳಿಗೆ ಬಣ್ಣ ನೀಡಲು ಬಳಸುತ್ತಾರೆ.

ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate