ಪ್ರೇಮ.ಪಿ, ಬೆಳ್ತಂಗಡಿ ಬಿದರಕ್ಕಿಯ ರುಚಿ, ಸ್ವಾದಕ್ಕೆ ನಗರದ ಮಂದಿ ಕೂಡ ಮರುಳಾಗುತ್ತಾರೆ. ಸಾಮಾನ್ಯ ಅಕ್ಕಿಗಿಂತ ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿರುವ, ಆದರೆ ಅದರೊಂದಿಗೆ ಬೆರೆಸಿದರೆ ತಕ್ಷಣ ಗುರುತಿಸುವುದು ಕಷ್ಟವೆನ್ನಿಸುವಂತಿದೆ ಬಿದಿರಕ್ಕಿ. ನಮ್ಮ ಪೂರ್ವಜರನ್ನು ಪೋಷಿಸಿದ್ದ, ಅವರ ಪಾಲಿಗೆ ಅನ್ನದ ಬಟ್ಟಲಾಗಿದ್ದ ಬಿದಿರಕ್ಕಿ ಈಗಲೂ ಪಶ್ಚಿಮಘಟ್ಟದ ಕಾಡುಗಳಲ್ಲಿ ಕಾಣಸಿಗುವ ಆಹಾರ ಧಾನ್ಯ.
ಅರವತ್ತಾದಾಗ ಅಕ್ಕಿ: ಬೆಳೆತ ಬಿದಿರು ಹೂಬಿಟ್ಟು ಅಕ್ಕಿಯನ್ನು ನೀಡುತ್ತದೆ. ಬಿದಿರು ಹೂವು ಬಿಟ್ಟಿತೆಂದರೆ ಅದಕ್ಕೆ 60 ವರ್ಷ ತುಂಬಿತು ಎಂದರ್ಥ. ಅಕ್ಕಿ ನೀಡಿದ ಮೇಲೆ ಅದು ಸಾವನ್ನಪ್ಪುವುದು ಪರಿಪಾಠ. ಬಿದಿರ ಮೆಳೆಗಳು ಒಣಗುತ್ತ ಬಂದು ಹೂ ಬಿಟ್ಟು ಅಕ್ಕಿ ಕೊಟ್ಟು ಸಾರ್ಥಕ್ಯದ ಸಾವು ಕಾಣುವುದು ಪ್ರಕೃತಿಯ ಸೋಜಿಗ. 70ರ ದಶಕದಲ್ಲಿ ಹೀಗೆ ಸಾಮೂಹಿಕವಾಗಿ ಬಿದಿರ ಮೆಳೆಗಳು ಸಾವನ್ನಪ್ಪಿದ ನೆನಪು ಹಳಬರಲ್ಲಿನ್ನೂ ಇದೆ. ಈಗ ಮತ್ತೆ ಆ ಕಾಲ ಬಂದಿದೆ.
ಬಿದಿರಕ್ಕಿ ಕಾಲ ಬರುವುದು ಬರಗಾಲಕ್ಕೆ ಮುನ್ನುಡಿ ಬರೆಯಲು ಎಂಬ ನಂಬಿಕೆ ಜನರಲ್ಲಿದೆ. ಕಾಡಿನಲ್ಲಿ ಬಿದಿರು ಹೂವು ಬಿಟ್ಟರೆ ನಾಡಿಗೆ ಸಂಕಷ್ಟ ಎಂಬ ನಂಬಿಕೆಯಲ್ಲಿ ವೈಜ್ಞಾನಿಕವಾಗಿಯೂ ಒಂದಿಷ್ಟು ಸತ್ಯ ಸಿಗುತ್ತದೆ. ನಾಡಿನ ಜನ ಬಿದಿರಕ್ಕಿಯನ್ನು ಸಂಗ್ರಹಿಸಲು ಕಾಡಿಗೆ ಹೋದರೆ, ಆಹಾರವಿಲ್ಲದೆ ಸೊರಗುವ ಕಾಡಿನ ಪ್ರಾಣಿಗಳು ನಾಡಿಗೆ ಬಂದು ಮಂದಿ ಬೆಳೆದ ಬೆಳೆಯನ್ನು ತಿನ್ನುತ್ತವೆ. ಕಾಡು ಪ್ರಾಣಿಗಳು ಅನಿವಾರ್ಯವಾಗಿ ನಾಡಿಗೆ ಸಂಕಷ್ಟ ತಂದೊಡ್ಡುವ ಸ್ಥಿತಿ ಇದು. ಹೂ ಬಿಟ್ಟು ಸತ್ತ ಬಿದಿರನ್ನು ಮನೆಗಳಿಗೆ ಮರಮಟ್ಟುವಾಗಿ ಉಪಯೋಗಿಸುವುದುಂಟು. ಇಂತಹ ಬಿದಿರಿನ ವಸ್ತುಗಳು 50 ವರ್ಷಗಳ ಕಾಲ ಬಾಳಿಕೆ ಬರುತ್ತದೆಯಂತೆ!
ಕೆಂಪಾದವೋ ಎಲ್ಲ ಕೆಂಪಾದವೋ: ಬಿದಿರು ಹೂವು ಬಿಟ್ಟಾಗ ಕಾಡು ಪೂರ್ತಿ ಕೆಂಬಣ್ಣವಾಗಿ ಕಾಣಿಸುತ್ತದೆ. ಆಗ ಊರಿನ ಜನ ಕಾಡಿಗೆ ತೆರಳಿ ಬಿದಿರ ಬುಡದ ಮುಳ್ಳುಗಳನ್ನು ಕತ್ತರಿಸಿ ಜಾಗವನ್ನು ಸ್ವಚ್ಛಗೊಳಿಸಿ ಬರುತ್ತಾರೆ. ಹೂ ಒಣಗುವ ಹಂತದಲ್ಲಿ ಕಾಡಿನಲ್ಲಿ ಅಕ್ಕಿಯನ್ನು ಇತರ ಪ್ರಾಣಿಗಳು ತಿನ್ನದಂತೆ ಕಾವಲು ಕಾಯುತ್ತಾರೆ. ಪ್ರತಿನಿತ್ಯ ಅಕ್ಕಿಯನ್ನು ಸಂಗ್ರಹಿಸಿ ಮೂಟೆಕಟ್ಟಿ ನಾಡಿಗೆ ತಂದು ಭತ್ತದ ಹೊಟ್ಟಿನಿಂದ ಅಕ್ಕಿ ಬೇರ್ಪಡಿಸುವ ವಿಧಾನದಲ್ಲೇ ಬೇರ್ಪಡಿಸಿ ಮೂಟೆಕಟ್ಟಿ ಮಳೆಗಾಲಕ್ಕೆ ಜೋಪಾನವಾಗಿ ಇಡುತ್ತಾರೆ. ಬಿದಿರು ಹೂ ಬಿಟ್ಟ ವರ್ಷ ಮುಂದಿನ ಎರಡು ಮೂರು ವರ್ಷಗಳಿಗೆ ಸಾಕಾಗುವಷ್ಟು ಅಕ್ಕಿಯನ್ನು ಸಂಗ್ರಹಿಸಿಡುತ್ತಾರೆ. ವರ್ಷಕ್ಕೊಮ್ಮೆ ಮನೆಮಂದಿಯೆಲ್ಲ ಒಟ್ಟು ಸೇರಿ ಬಿದಿರಕ್ಕಿಯ ಊಟ ಮಾಡು ಪದ್ಧತಿ ಈಗಲೂ ಅನೇಕ ಹಳ್ಳಿಗಳಲ್ಲಿವೆ. ಅನ್ನ, ತಿಂಡಿ ತಯಾರಿಯಲ್ಲಿ ಉಪಯೋಗಿಸುವ ಬಿದಿರಕ್ಕಿಗೆ ನಗರದಲ್ಲೂ ಬಹುಬೇಡಿಕೆಯಿದೆ.
ಬಿದಿರಕ್ಕಿಗೆ ಬೆಂಗಳೂರಿನಲ್ಲಿ ಬೇಡಿಕೆ: ಅನ್ನ, ರೊಟ್ಟಿ, ದೋಸೆ ತಯಾರಿಯಲ್ಲಿ ಬಿದಿರಕ್ಕಿ ಉಪಯೋಗಿಸಲಾಗುತ್ತದೆ. ಬಿದಿರಕ್ಕಿಯ ಊಟ ಹತ್ತಾರು ಕಾಯಿಲೆಗಳಿಗೆ ರಾಮಬಾಣವಂತೆ. ಆದರೆ ಬಿದಿರು ಕಾಣಸಿಗದ ಇತ್ತೀಚಿನ ದಿನಗಳಲ್ಲಿ ಅಕ್ಕಿ ಕೂಡ ನೋಡಲು ಅಪರೂಪ. ಪಶ್ಚಿಮಘಟ್ಟದ ಕಾಡುಗಳಲ್ಲಿ ಕಾಣಸಿಕ್ಕರೂ ಅಕ್ಕಿಯನ್ನು ಸಂಗ್ರಹಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಇಂದಿಗೂ ಬೆಂಗಳೂರಿನಂಥ ನಗರಗಳಲ್ಲಿ ಒಂದು ಕೆ.ಜಿ ಬಿದಿರಕ್ಕಿಗೆ 80ರಿಂದ 90 ರೂ. ಬೆಲೆ ಸಿಗುತ್ತದೆ.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 12/31/2019