অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾರ್ಲ್, ಬಾಷ್

ಕಾರ್ಲ್, ಬಾಷ್

ಕಾರ್ಲ್, ಬಾಷ್ (1874-1940)  ೧೯೩೧

ಜರ್ಮನಿ-ರಸಾಯನಶಾಸ್ತ್ರ-ಕೈಗಾರಿಕಾ ಮಟ್ಟದಲ್ಲಿ ಅಮೋನಿಯಾ ಸಂಶ್ಲೇಷಿಸುವ ತಂತ್ರ ಪರಿಚಯಿಸಿದಾತ.

ಕಾರ್ಲ್ ಬಾಷ್ 27 ಆಗಸ್ಟ್ 1874ರಂದು ಕೊಲೊನ್‍ನಲ್ಲಿ ಜನಿಸಿದನು. 1894 ರಿಂದ 1896ರವರೆಗೆ ಚಾರ್ಲೊಟ್ಜಬರ್ಗ್‍ನ ಟೆಕ್ನಿಷ್ ಹೂಕ್ಶುಲೆ ಯಲ್ಲಿ ಲೌಹಿಕ ಹಾಗೂ ಯಾಂತ್ರಿಕ ಇಂಜಿನಿಯರಿಂಗ್ ವ್ಯಾಸಂಗ ಮಾಡಿದನು. 1896ರಲ್ಲಿ ಲಿಪ್‍ಜಿಗ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಅಧ್ಯಯನ ಪ್ರಾರಂಭಿಸಿ, 1898ರಲ್ಲಿ ಪದವಿ ಗಳಿಸಿದನು.  ಬಣ್ಣ ತಯಾರಿಕಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಕಾರ್ಲ್ ಬಾಷ್ ರುಡಾಲ್ಫ್ ರೀಟ್ಸೆಯ ಮಾರ್ಗದರ್ಶನದಲ್ಲಿ ಕೈಗಾರಿಕೆಗೆ ಬೇಕಾದ ಸಂಶ್ಲೇಷಿತ ಊದಾ ಬಣ್ಣವನ್ನು ತಯಾರಿಸುವ ವಿಧಾನ ರೂಪಿಸಿದನು. 1901 ರ ಸುಮಾರಿಗೆ ಸಾರಜನಕವನ್ನು ಸ್ಥೀರೀಕರಿಸುವ ಸಮಸ್ಯೆಯನ್ನು ಕೈಗೆತ್ತಿಕೊಂಡ ಕಾರ್ಲ್ ಆರಂಭದಲ್ಲಿ ಇದಕ್ಕಾಗಿ ಲೌಹಿಕ (Metallic)ಸಯನೈಡ್ ಹಾಗೂ ನೈಟ್ರೈಟ್‍ಗಳನ್ನು ಬಳಸಿದನು. 1908ರಲ್ಲಿ ಕಾರ್ಲ್ ಉದ್ಯೋಗಿಯಾಗಿದ್ದ ಬಡಿಷ್ಕೋ ಅನಿಲಿನ್ ಉಂಡ್ ಸೋಡ್ ಪ್ಟ್ಯಾಬ್ರಿಕ್ ಕಂಪನಿ ಅಧಿಕ ಒತ್ತಡದಲ್ಲಿ ಅಮೋನಿಯವನ್ನು ಸಂಶ್ಲೇಷಿಸುವ ತಂತಜ್ಞಾನವನ್ನು ಹೊಂದಿತು.  ಈ ವಿಧಾನವನ್ನು ಟೆಕ್ನಿಷ ಹೂಕ್ಷಲೆ ಸಂಸ್ಥೆಯ ಫ್ರಿಟ್ಜ್ ಹೇಬರ್ ಅಭಿವೃದ್ಧಿಗೊಳಿಸಿದ್ದನು.  ಇದನ್ನು ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ಮಟ್ಟದಲ್ಲಿ ಉತ್ಪಾದಿಸುವಂತಹ ಮಾರ್ಗಗಳನ್ನು ರೂಪಿಸುವ ಹೊಣೆಯನ್ನು ಕಾರ್ಲ್‍ಗೆ ಹೊರಿಸಲಾಯಿತು.  ಅಧಿಕ ತಾಪಮಾನ, ಒತ್ತಡ ತಾಳಿಕೊಳ್ಳುವಂತಹ ಅಮೋನಿಯಾ ಉತ್ಪಾದನಾ ಸ್ಥಾವರದ ನಿರ್ಮಾಣ ತಂತ್ರಜ್ಞಾನವನ್ನು ಸೃಷ್ಟಿಸಬೇಕಾದ ಸವಾಲುಗಳೆದುರಾದವು.  ಹೇಬರ್‍ನ ವಿಧಾನದಲ್ಲಿ ಓಸ್ಮಿಯಂ ಮತ್ತು ಯುರೇನಿಯಂಗಳನ್ನು ವೇಗವರ್ಧಕಗಳಾಗಿ (Catalyst)ಬಳಸಲಾಗಿದ್ದಿತು.  ಇವುಗಳ ಬದಲಾಗಿ ಕಾರ್ಲ್ ತಂಡ  ಅಗ್ಗವಾದ ಶುದ್ಧ ಕಬ್ಬಿಣವನ್ನು ಕೆಲವೊಂದು ಸಂಯುಕ್ತಗಳೊಂದಿಗೆ ಬೆರೆಸಿ ಬಳಸಿದರು.  ಇದರ ಫಲಿತಾಂಶವಾಗಿ ಅಮೋನಿಯಂನ್ನು ಅಗ್ಗವಾಗಿ, ಬೃಹತ್ ಪ್ರಮಾಣದಲ್ಲಿ ಸುರಕ್ಷಿತವಾಗಿ ಉತ್ಪಾದಿಸುವುದು ಸಾಧ್ಯವಾಯಿತು. ಇದು ಜಗತ್ತಿನಲ್ಲಿ ವಿಶೇಷವಾಗಿ ಕೈಗಾರಿಕಾ ಮಟ್ಟದಲ್ಲಿ ಅಮೋನಿಯ ಹಾಗೂ ರಾಸಾಯನಿಕ ಗೊಬ್ಬರಗಳ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ತಂದಿತು. 1917ರಲ್ಲಿ ಒಪ್ಪಡ ಪಟ್ಟಣದಲ್ಲಿ ಪ್ರಾರಂಭವಾದ, 1917ರಲ್ಲಿ ಮಾರ್ಸ್‍ಬರ್ಗ್‍ನ ಹತ್ತಿರ ನಿರ್ಮಾಣಗೊಂಡ ಬೃಹತ್ ಅಮೋನಿಯಾ ಹಾಗೂ ರಸಗೊಬ್ಬರ ತಯಾರಿಕಾ ಕಂಪನಿಗಳು ಜಗತ್ತಿನಾದ್ಯಂತ ಕೃಷಿಗೆ ಬೇಕಾಗಿದ್ದ ಸಾರಜನಕ ಆಧಾರಿತ ರಾಸಾಯನಿಕ ಗೊಬ್ಬರಗಳಿಗಿದ್ದ ಬೇಡಿಕೆಯನ್ನು ಪೂರೈಸಿದವು.  ಕಾರ್ಲ್ ಔದ್ಯೋಗಿಕ ರಂಗದಲ್ಲಿ ಕ್ರಿಯಾಶೀಲವಾಗಿದ್ದಂತೆ, ಶುದ್ದ ರಾಸಾಯನಿಕ ಶಾಸ್ತ್ರದಲ್ಲೂ ಗಮನಾರ್ಹ ಸಾಧನೆಗಳನ್ನು ಮಾಡಿದನು.  ಜಗತ್ತಿನಾದ್ಯಾಂತ ಹಲವಾರು ಗೌರವ, ಮನ್ನಣೆಗಳಿಗೆ ಪಾತ್ರವಾಗಿದ್ದ ಕಾರ್ಲ್ 1931ರಲ್ಲಿಫ್ರೆಡರಿಕ್ಬರ್ಜಿಯಾಸ್‍ನೊಂದಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 12/30/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate