অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಾಲ್ಟರ್, ಕೊಹ್ನ್

ವಾಲ್ಟರ್, ಕೊಹ್ನ್

ವಾಲ್ಟರ್, ಕೊಹ್ನ್ (1923---)  ೧೯೯೮

ಆಸ್ಟ್ರಿಯಾ- ರಸಾಯನಶಾಸ್ತ್ರ-ಘನಗಳ ಮೇಲ್ಮೈ ಮೇಲಿನ ವಾಹಕತ್ವ (Surface  Conductivity) ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ (Density Activation) ಸಿದ್ಧಾಂತ ರೂಪಿಸಿದಾತ.

ಹಲವಾರು ಜನ ನೊಬೆಲ್ ಪ್ರಶಸ್ತಿ ವಿಜೇತರ  ಜೀವನ ಚರಿತ್ರೆಯನ್ನು ನಾನು ಓದಿದ್ದೇನೆ. ಅವರ ಬಾಲ್ಯ ಕುತೂಹಲ, ಗಣಿತ ಪ್ರತಿಭೆ, ಪುಸ್ತಕದ ಗೀಳು, ನಾನಾ ತರದ  ಸೋಲು ಗೆಲವುಗಳಿಂದ  ತುಂಬಿ ತುಳುಕುತ್ತಿದೆ. ನನ್ನ ಜೀವನದಲ್ಲಿ ಅಂತಹುದಾವುದೂ ಇಲ್ಲ. ನನ್ನಂತಹ ಕೈ ಬೆರಳೆಣಿಕೆಯ ಜನ ನೊಬೆಲ್ ಪ್ರಶಸ್ತಿ ಪಡೆದಿರುವುದನ್ನು ನಾನು ಬಲ್ಲೆ. ಆದರೆ ಒಟ್ಟಾರೆಯಾಗಿ ನೊಬೆಲ್ ಪ್ರಶಸ್ತಿ ಗಳಿಸುವಂತಹ ಸ್ಥಿತಿಗೆ ನನ್ನನು ಎಳೆತಂದ ಸನ್ನಿವೇಶಗಳನ್ನು ಸರಿಯಾಗಿ ನಾನರಿಯೆ ಎಂದು ಕೊಹ್ನ್ ತನ್ನ ಸಂಕ್ಷಿಪ್ತ ಜೀವನ ವಿವರದಲ್ಲಿ ಹೇಳಿದ್ದಾನೆ. 1957ರಲ್ಲಿ ಅಸಂಸಂಗಳ ಪ್ರಜೆಯಾದ ಕೊಹ್ನ್ ಬಾಲ್ಯದ ನೆನಪುಗಳೆಲ್ಲವೂ ಕಹಿ. ಕೊಹ್ನ್ ಜನಿಸಿದಾಗ ಆಸ್ಟ್ರಿಯ ಹಿಟ್ಲರ್ ಹಿಡಿತದಲ್ಲಿದ್ದಿತು. ನಾಝಿಗಳು ನಡೆಸಿದ ಸಾಮೂಹಿಕ ಯಹೂದಿ ಹತ್ಯೆಯಲ್ಲಿ ಈತನ ತಂದೆ ತಾಯಿಗಳಿಬ್ಬರೂ ಬಲಿಯಾದರು.. ಯುದ್ದಕ್ಕೆ ಶಾಂತಿಯೊಂದೇ ಶಮನಕಾರಿಯೆಂದು ಬಾಲ್ಯದಿಂದ ಕಂಡುಕೊಂಡಿದ್ದ ಕೊಹ್ನ್ ಅಸಂಸಂ ಮತ್ತು ರಷ್ಯಾಗಳ ಮಧ್ಯದ ಶೀತಲ ಸಮರ ಕೊನೆಗೊಳಿಸಲು ಹೆಣಗಿದ ಕೈ ಬೆರಳೆಣಿಕೆಯ ವಿಜ್ಞಾನಿಗಲ್ಲೊಬ್ಬನು. ಲಾಸ್ ಆಲ್ಮೋಸ್ ಮತ್ತು ಲಿವರ್’ಮೋರ್ನಲ್ಲಿದ್ದ ನ್ಯೂಕ್ಲಿಯರ್ ವೆಪನ್ಸ್ ಲ್ಯಾಬೋರೋಟರಿಯ ನಿರ್ವಾಹಕನಾಗಿದ್ದಾಗಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಯುದ್ಧ ಸಂಬಂಧಿ ಸಂಶೋಧನೆಗಳಲ್ಲಿ ಭಾಗಿಯಾಗಬಾರದೆಂಬ ದೃಢ ನಿಲುವನ್ನು ಹೊಂದಿದ್ದನು. ಆದರೆ ಕೊಹ್ನ್‍ನ ಈ ತೀರ್ಮಾನಕ್ಕೆ ಅಂತಹ ಬೆಂಬಲ ದಕ್ಕಲಿಲ್ಲ. ಮನುಕುಲಕ್ಕೆ ಶಾಂತಿಯೊಂದೇ ಪರಮಗತಿಯೆಂದು ನಂಬಿರುವ ಕೊಹ್ನ್ ಈ ದಿಶೆಯಲ್ಲಿ ಜಾಗತಿಕ ಶಾಂತಿ ತರಲು ತನ್ನದೇ ಆದ ಪ್ರಯತ್ನಗಳಲ್ಲಿ ನಿರತನಾಗಿದ್ದಾನೆ. ಶಾಲಾ ಜೀವನದಲ್ಲಿ ಲ್ಯಾಟಿನ್ ಕೊಹ್ನ್‍ನ ನೆಚ್ಚಿನ ವಿಷಯವಾಗಿದ್ದಿತು. ಗಣಿತ ವಿಜ್ಞಾನಗಳಿಂದ ಈತ ದೂರವಾಗಿದ್ದನು. ಹಿಟ್ಲರ್ 1933ರಲ್ಲಿ ಆಸ್ಟ್ರಿಯಾ ವಶಪಡಿಸಿಕೊಂಡ ತಕ್ಷಣ ಯಹೂದಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಛಾಟಿಸಲಾಯಿತು. ಇದರಲ್ಲಿ ಕೊಹ್ನ್ ಸಹ ಒಬ್ಬನಾಗಿದ್ದನು. ಮುಂದಿನ ಶಿಕ್ಷಣಕ್ಕಾಗಿ ಸೌಕರ್ಯ ಕೊರತೆಯಿಂದ ಹಿಂದುಳಿದಿದ್ದ ಯಹೂದಿ ಶಾಲೆಗಳಲ್ಲಿ ಶಿಕ್ಷಣ ಮುಂದುವರೆಯಿತು. ಎರಡನೇ ಜಾಗತಿಕ ಯುದ್ದದಲ್ಲಿ ತಂದೆ ತಾಯಿಯಿಂದ ಬೇರ್ಪಟ್ಟ ಕೊಹ್ನ್ ಇಂಗ್ಲೆಂಡ್‍ನಲ್ಲಿದ್ದ ಸ್ನೇಹಿತರ ಮನೆಯಲ್ಲಿ ನೆಲೆ ಕಾಣಬೇಕಾಯಿತು. 1940ರಲ್ಲಿ ಚರ್ಚಿಲ್  ಬ್ರಿಟನ್‍ನಲ್ಲಿರುವ ಶತ್ರುಗಳನ್ನು ಬಂಧಿಸಬೇಕೆಂಬ ಆಜ್ಞೆ ನೀಡಿದನು. ಆಗ ಕೊಹ್ನ್ ಬ್ರಿಟಿಷ್ ಸೇನೆಗೆ ಸೆರೆಸಿಕ್ಕು ಎರಡು ತಿಂಗಳ ಕಾಲ ಕಾರಾಗೃಹದಲ್ಲಿದ್ದನು. ಇಲ್ಲಿರುವಾಗ ಬಂಧನದಲ್ಲಿರುವ ಜರ್ಮನಿ ಯುವಕರಿಗೆ ಡಾ ಫ್ರಿಟ್ಜ್’ರೋಥ್ ಬರ್ಜರ್ ನೀಡಿದ ಗಣಿತದ ಉಪನ್ಯಾಸಗಳಿಂದ ಕೊಹ್ನ್‍ನ ಜೀವನ ದೃಷ್ಟಿಯೇ ಬದಲಾಯಿತು. ಕೆಲಕಾಲದ ನಂತರ ಅನಾಥರಾದ ಯಹೂದಿ ಮಕ್ಕಳನ್ನು ಸಾಕುತ್ತಿದ್ದ ವೈದ್ಯ ದಂಪತಿಗಳ ಅನುಕಂಪಕ್ಕೆ ಪಾತ್ರನಾದ ಕೊಹ್ನ್ ಕೆನಡಾದ ಟೊರಂಟೋ ಸೇರುವಂತಾಯಿತು. ಇವರ ಒತ್ತಾಸೆಯಿಂದಲೇ ಕೊಹ್ನ್ ವಿಜ್ಞಾನದ ಪದವಿ ಗಳಿಸುವಂತಾಯಿತು. ಕಾಲೇಜಿನ  ವಿದ್ಯಾರ್ಥಿ ಜೀವನದುದ್ದಕ್ಕೂ ಮರದ ದಿಮ್ಮಿಗಳನ್ನು ಕತ್ತರಿಸುವ, ಸಾಗಿಸುವ ಕಂಪನಿಯಲ್ಲಿ ಕೆಲಸಮಾಡುತ್ತಾ ವ್ಯಾಸಂಗ ನಡೆಸಿದನು. ಇದರಿಂದ ದೊರೆತ ಅಲ್ಪ ಸ್ವಲ್ಪ ಹಣ ಉಳಿಸಿ ಹಾರ್ಡಿ ರಚಿಸಿದ ಫೂರಿಯರ್ ಮ್ಯಾಥೆಮ್ಯಾಟಿಕ್ಸ್ ಮತ್ತು ಸ್ಲೇಟರ್ ರಚಿಸಿದ ಕೆಮಿಕಲ್ ಫಿಸಿಕ್ಸ್ ಪುಸ್ತಕಗಳನ್ನು ಖರೀದಿಸಿದನು. ಈ ಪುಸ್ತಕಗಳನ್ನು ಕೊಹ್ನ್ ಈಗಲೂ ಜತನದಿಂದ ಕಾಯ್ದಿರಿಸಿಕೊಂಡಿದ್ದಾನೆ. ಟೊರಂಟೋ ವಿಶ್ವವಿದ್ಯಾಲಯದಲ್ಲಿ ಮುಂದೆ ಜಗದ್ವಿಖ್ಯಾತನಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತನಾದ ಆರ್ಥರ್ ಷ್ವಾಲೋ ಕೊಹ್ನ್‍ನ ಸಹಪಾಠಿಯಾಗಿದ್ದನು. ಡಾಕ್ಟರೇಟ್ ಗಳಿಕೆಗಾಗಿ ಕೊಹ್ನ್ ಅಸಂಸಂಗಳ  ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೂಲಿಯಟ್ ಷ್ವಿಂಜರ್ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಾರಂಭಿಸಿದನು. ಹಾರ್ವರ್ಡ್ ವಿಶ್ವವಿದ್ಯಾಲಯ ನೂರಾರು ಪ್ರತಿಭಾವಂತ ವಿಜ್ಞಾನಿಗಳ ಗಣಿಯಾಗಿದ್ದಿತು. ಇವರೊಂದಿಗೆ ತನ್ನನ್ನು ಹೋಲಿಸಿಕೊಂಡು ಕುಹ್ನ್ ಕೆಲಕಾಲ ಅಪ್ರತಿಭನಾಗಿದ್ದನು. ಆದರೆ ಜೆ.ಎಚ್.ವ್ಯಾನ್‍ವ್ಲೆಕ್‍ನ ನೈತಿಕ ಬೆಂಬಲ ಕೊಹ್ನ್‍ಗೆ ದಕ್ಕಿತು. ಪಿ,ಡಬ್ಲ್ಯೂ.ಆ್ಯಂಡರ್‍ಸನ್, ಎನ್.ಬ್ಲೂಮ್‍ಬರ್ಜೆನ್, ಬಿ.ಮಾಟೆಲ್‍ಸನ್‍ರ ಸ್ನೇಹ ಕೊಹ್ನ್‍ಗೆ ದಕ್ಕಿತು. ಜೂಲಿಯನ್ ಷ್ವಿಂಜರ್  ಮಾರ್ಗದರ್ಶನದಲ್ಲಿ ವೈದ್ಯುತ್ ಗತಿಶಾಸ್ತ್ರದ ಸಮಸ್ಯೆಗಳ ಪರಿಹಾರದಲ್ಲಿ ಕೊಹ್ನ್ ಶ್ರಮಿಸಿದನು. 1951 ರಿಂದ ಒಂದು ವರ್ಷ ಕಾಲ ಡೆನ್ಮಾರ್ಕ್‍ನ ಕೊಪೆನ್‍ಹೇಗ್‍ನ ಬೊಹ್ರ್ ಸಂಸ್ಥೆಯಲ್ಲಿ ಘನ ಸ್ಥಿತಿ ಭೌತಶಾಸ್ತ್ರದಲ್ಲಿ ಅತಿವಾಹಕತೆ (Superconductivity) ಮತ್ತು ಚದುರಿಕೆ ಸಿದ್ದಾಂತಗಳನ್ನು ಪರಿಷ್ಕರಿಸುವಲ್ಲಿ ಶ್ರಮಿಸಿದನು. 1953ರಲ್ಲಿ ಬೆಲ್ ಲ್ಯಾಬೋರೇಟರಿ ಸೇರಿ ಟ್ರಾನ್ಸಿಸ್ಟರ್ ಉಪಜ್ಞೆಕಾರ ಡಬ್ಲ್ಯು ಷಾಕ್ಲೆಯ ಸಹಾಯಕನಾಗಿ ಕೆಲಸ ಮಾಡಿದ ಕೊಹ್ನ್ ಇಲ್ಲಿ ಸಿಲಿಕಾನ್ ಮತ್ತು ಜರ್ಮೇನಿಯಂಗಳು ವಿಕಿರಣ ದಾಳಿಗೊಳಗಾಗುವುದರ ಅಧ್ಯಯನ ನಡೆಸಿದನು. 1966ರಲ್ಲಿ ಲುಟ್ಟಿಂಜರ್ ಸಾಂಗತ್ಯದಲ್ಲಿ ಕೊಹ್ನ್ ಶುದ್ಧ ವಿಕರ್ಷಕ ಅಂತಕ್ರಿಯೆಗಳಿದ್ದಾಗಲೂ ಅತಿವಾಹಕತೆಯಿರುವ ಸಾಧ್ಯತೆಯನ್ನು ತೋರಿಸಿದನು. ಕೊಹ್ನ್ ಘನಗಳ ಮೇಲ್ಮೈ ಮೇಲಿನ ವಾಹಕತ್ವ ಕುರಿತಾದಂತೆ ಸಾಂದ್ರತೆ ಕ್ರಿಯಾಶೀಲತಾ ಸಿದ್ಧಾಂತ  ಮಂಡಿಸಿದ್ದಾನೆ. ಇದಕ್ಕಾಗಿ ಕೊಹ್ನ್ 1998ರ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾಗಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/13/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate