ವೃಷಣದಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಸಂಭೋಗ ಕ್ರಿಯೆಯಲ್ಲಿ ಮಹಿಳೆಯ ಗರ್ಭಾಶಯವನ್ನು ತಲುಪದಂತೆ ಮಾಡುವುದು ನೋ ಸ್ಕಾಲ್ ಪೆಲ್ ವ್ಯಾಸೆಕ್ಟಮಿ. ಈ ಚಿಕಿತ್ಸೆಯಲ್ಲಿ ವೃಷಣದಿಂದ ವೀರ್ಯಾಣು ಸಾಗಿಸುವ ನಾಳವನ್ನು ಕತ್ತರಿಸಿ ಅದರ ಎರಡೂ ಕೊನೆಯ ಭಾಗಗಳನ್ನು ಗಂಟು ಹಾಕುವುದು. ಇದರಿಂದ ವೀರ್ಯಾಣುಗಳು ವೃಷಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಈ ಚಿಕಿತ್ಸೆ ಪಡೆದ ಪುರುಷನೊಂದಿಗೆ ಲೈಂಗಿಕ ಕ್ರಿಯೆ ಮೊದಲಿನಂತೆಯೇ ಸಾಮಾನ್ಯವಾಗಿ ನಡೆದರೂ ಗರ್ಭಧಾರಣೆಯಾಗುವುದಿಲ್ಲ. ಇದರಿಂದಾಗಿ ಗರ್ಭಧಾರಣೆಯ ಭಯವಿಲ್ಲದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು.
ಎನ್ ಎಸ್ ವಿ ಚಿಕಿತ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೋಕ್ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ಲಭ್ಯ.
ನಾನು ಜೆ.ಎನ್. ನರಸಿಂಹಸ್ವಾಮಿ, ತುಮಕೂರು ಜಿಲ್ಲೆ, ಕೊರಟಗೆರೆ ತಾಲೋಕ್, ಜಮೆನಹಲ್ಲಿಯವನು. ನನಗೀಗ ೪೪ ವರ್ಷ. ನನ್ನ ಕೆಲಸ ರೈಸ್ ಮಿಲ್ನಲ್ಲಿ ಮೂಟೆ ಹೊರೋದು. ಈಗ ೮ ತಿಂಗಳ ಹಿಂದೆ ನನ್ನ ಹೆಂಡತಿ ಲಕ್ಷ್ಮಿಗೆ ಎರಡನೇ ಮಗುವಿನ ಹೆರಿಗೆಯಾಯ್ತು. ಅದು ಸಿಸೇರಿಯನ್ ಹೆರಿಗೆ. ಮೊದಲನೇ ಮಗೂ ಕೂಡ ಸಿಸೇರಿಯನ್ನಲ್ಲೇ ಆಗಿತ್ತು. ಎರಡು ಮಕ್ಕಳು ಸಾಕು ಅಂತ ನಾವಿಬ್ರೂ ತೀರ್ಮಾನ ಮಾಡಿದ್ವಿ. ಸರಿ, ನಮ್ಮ ಹಳ್ಳಿ ಕಡೆ ಇರೋದೆಲ್ಲಾ ಏನು ಮಕ್ಕಳಾಗದಂತೆ ಹೆಂಡತಿಗೆ ಆಪರೇಶನ್ ಮಾಡಿಸೋದು. ನನ್ನ ಹೆಂಡತಿಗೆ ಎರಡು ಸಾರಿ ಸಿಸೇರಿಯನ್ ಆಗಿದ್ರಿಂದ ಮತ್ತೆ ಅವಳಿಗೆ ಆಪರೇಶನ್ ಮಾಡಿಸೋದು ನನಗೆ ಇಷ್ಟ ಇರಲಿಲ್ಲ. ಅದೂ ಅಲ್ಲದೆ ಡಾಕ್ಟ್ರು ಅವಳ ರಕ್ತದ ಗುಂಪು ಎಬಿ ನೆಗೆಟಿವ್ ಅಂತ ಹೇಳಿದ್ರು. ಆ ರಕ್ತ ಸಿಗೋದು ತುಂಬಾ ಕಷ್ಟವಂತೆ. ಇಂಥ ಸಂದರ್ಭದಲ್ಲಿ ವಸಂತಲಕ್ಷ್ಮಿ ಅನ್ನೋ 'ಅಶಾ' ನನಗೆ ಎನ್ ಎಸ್ ವಿ ಮಾಡಿಸ್ಕೊಳ್ಳೋಕೆ ಹೇಳಿದ್ರು. ಅಯ್ಯೋ ನಾನು ಕೆಲಸ ಮಾಡೋ ಗಂಡಸು, ನಾನು ಆಪರೇಶನ್ ಮಾಡಿಸ್ಕೊಂದ್ರೆ ದುಡಿಯೋರು ಯಾರು ಮೇಡಂ ಅಂತ ಅವರಿಗೆ ಕೇಳಿದೆ. ಅಯ್ಯೋ ದಡ್ಡ ನೀನಿನ್ನೂ ಯಾವ ಕಾಲದಲ್ಲಿದ್ದಿ. ಗಂಡಸರಿಗೆ ಮಕ್ಕಳಾಗದಂತೆ ಆಪರೇಶನ್ ಮಾಡಿದ್ರೆ ಕೆಲಸ ಮಾಡಕ್ಕಾಗೋದಿಲ್ಲ ಅಂತ ಹೇಳಿದೋರು ಯಾರು? ಇದನ್ನು ಮಾಡಿಸ್ಕೊಂಡ್ರೆ ನಿನಗೆ ಯಾವುದೇ ತೊಂದರೆ ಇಲ್ಲ, ಜೊತೆಗೆ ನಿನ್ನ ಹೆಂಡತಿಗೆ ಮೂರನೇ ಸಾರಿ ಆಪರೇಶನ್ ಮಾಡಿಸೋದನ್ನು ತಪ್ಪಿಸಬಹುದು, ಅಂತ ಹೇಳಿ ನನ್ನನ್ನ ಒಪ್ಪಿಸಿಯೇಬಿಟ್ರು.
ಹತ್ತ್ತು ನಿಮಿಷ ಅಷ್ಟೇ ಸಾರ್, ನನಗೆ ಗೊತ್ತೇ ಆಗಲಿಲ್ಲ. ಆಗೇ ಹೋಯ್ತು. ಕುಯ್ಲೂ ಇಲ್ಲ, ಇನ್ನು ಹೊಲಿಗೆ ಹಾಕೋದು ಎಲ್ಲಿಂದ ಬಂತು? ಡಾಕ್ಟ್ರು ಎಲ್ಲಾನೂ ಹೂವೆತ್ತಿದ ಹಂಗೆ ಮಾಡಿದ್ರು. ಅರ್ಧ ಗಂಟೆ ಇರಬಹುದು ಅಷ್ಟೇ ಮನೆಗೆ ಹೋದೆ. ಎರಡು ಮೂರು ದಿನ ಬಿಟ್ಟು ಮತ್ತೆ ನನ್ನ ಮಾಮೂಲಿ ಕೆಲಸ ಮಾಡಲಿಕ್ಕೆ ಹೊರಟೆ. ನನಗೇನೂ ಇದರಿಂದ ವ್ಯತ್ಯಾಸ ಗೊತ್ತಾಗಿಲ್ಲ. ಗಂಡಸರು ಆಪರೇಶನ್ ಮಾಡಿಸ್ಕೊಂದ್ರೆ ಸುಸ್ತಾಯ್ತದೆ ಕೆಲಸ ಮಾಡಕ್ಕಾಗದಿಲ್ಲ ಅಂತಾ ನಾನು ಏನ್ ತಿಳಕ್ಕಂಡಿದ್ನೋ ಅದೆಲ್ಲಾ ಸುಳ್ಳು ಅಂತ ಗೊತ್ತಾಯ್ತು. ಈಗ ನೋಡಿ ಐದು ತಿಂಗಳಾಯ್ತು, ಎಲ್ಲ ಕೆಲಸಾನೂ ಮೊದಲಿನಂಗೆ ಮಾಡ್ತಾ ಇದ್ದೀನಿ. ಹೆಂಡತಿ ಜೊತೆ ದೇಹ ಸಂಪರ್ಕ ಕೂಡ ಮೊದಲಿನಂಗೆ ಇದೆ. ಈಗ ನಮಗಿಬ್ರುಗೂ ಮತ್ತೆ ಮಕ್ಕಳಾಗುವ ಭಯ ಇಲ್ಲ ನೋಡಿ, ಅದರಿಂದಲೂ ಏನೋ ಈಗ ಮೊದಲಿಗಿಂತಾ ಚೆನ್ನಾಗಿ ಸೇರ್ತಾ ಇದ್ದಿವಿ.
ನಾನು ಹೇಳೋದು ಇಷ್ಟೇ ಸಾರ್, ಗಂಡಸರು ಮಕ್ಕಲಾಗದಂಗೆ ಆಪರೇಶನ್ ಮಾಡಿಸ್ಕೊಳ್ಳೊದ್ರಿನ್ದ ಅವರಿಗೆ ಯಾವುದೇ ತೊಂದ್ರೆ ಇಲ್ಲ. ಇದನ್ನೇ ನಾನು ನಂಗೆ ಗೊತ್ತಿರೋವ್ರ ಹತ್ರಾನೂ ಹೇಳ್ತಾ ಇದ್ದೀನಿ. ನನ್ನನ್ನ ನೋಡಿ ಸುಮಾರು ಜನ ಮಾಡಿಸ್ಕೊಂಡವ್ರೆ. ನಾವು ಹೆಂಡತಿ, ಮಕ್ಕಳು ನೆಮ್ಮದಿಯಾಗಿದ್ದೀವಿ.
ಮೂಲ:ಕುಟುಂಬ ವಾರ್ತೆ.
ಕೊನೆಯ ಮಾರ್ಪಾಟು : 4/25/2020