ಎಷ್ಟೋ ಸಾರಿ ಬದುಕಿನ ಪಯಣದಲ್ಲಿ ಹೀಗಾಗಿ ಬಿಡುತ್ತದೆ. ನಾವು ಅಂದುಕೊಂಡಿದ್ದನ್ನು ಸಾಧಿಸುವ ಮುನ್ನವೇ ಬಿಟ್ಟು ಕೊತ್ತಿರುತ್ತೇವೆ. ಅಥವಾ ನಾವೇ 'ಇದೆಲ್ಲಾ ನಮ್ಮಿಂದ ಸಾಧ್ಯವಿಲ್ಲವೆನೋ' ಎಂಬ ನಕಾರಾತ್ಮಕ ಚಿಂತನೆಗಳಿಂದಾಗಿ ಅವಕಾಶಗಳನ್ನು ಕೈ ಚೆಲ್ಲಿ ಬಿಟ್ಟಿರುತ್ತೇವೆ. ಕನಸುಗಳು ಯಾರಿಗಿರುವುದಿಲ್ಲ? ಆದರೆ ಅದೆಲ್ಲವನ್ನೂ ಸಾಧಿಸಲು ಅದೃಷ್ಟ, ಹಣೆಬರಹ ಚೆನ್ನಾಗಿರಬೇಕು' ಎಂಬ ತರ್ಕವಿಲ್ಲದ ಆಲೋಚನಾ ಸರಣಿಯಿಂದಾಗಿ ಹೆಜ್ಜೆಗಳನ್ನು ನಾವೇ ಹಿಂದೆ ತೆಗೆದಿರುತ್ತೇವೆ. ನಮ್ಮ ಕಣ್ಣೆದುರೇ ನಮ್ಮ ಕನಸುಗಳು ಕೈ ಜಾರಿ ಹೋಗುತ್ತಿದ್ದರೂ ಪ್ರಯತ್ನಿಸದೇ ಸುಮ್ಮನೆ ಇದ್ದು ಬಿಡುತ್ತೇವೆ. ಜೊತೆಗೆ ಒಂದು ನೆಪ ಬೇರೆ 'ಹೇಗಿದ್ದರೂ ನಮ್ಮಿಂದಂತೂ ಆಗುತ್ತಿರಲಿಲ್ಲ ಹಾಗಾಗಿ......!
ನಮಗೆ ಚಿಕ್ಕಂದಿನಲ್ಲಿ ಎಲ್ಲರೂ ಪ್ರಾಥಮಿಕ ಶಾಲೆಯಲ್ಲಿ ಕಲಿತ ಪಾಠ ನೆನಪಿರಬೇಕು. ಬಾಯಾರಿಕೆಯಿಂದ ಬಳಲಿದ ಕಾಗೆಯೊಂದು ಮಡಿಕೆಯ ಆಳದಲ್ಲಿದ್ದ ನೀರನ್ನು ಕುಡಿಯಲು ಪ್ರಯತ್ನಿಸಿ ವಿಫಲವಾಗುತ್ತದೆ. ನಂತರ ಚೇತರಿಸಿಕೊಂಡು ಅಲ್ಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಮಡಿಕೆಯೊಳಗೆ ಹಾಕುತ್ತಾ ... ನಂತರ ಅದರಿಂದಾಗಿ ತಾನಾಗಿ ನೀರು ಮೇಲೆ ಬಂದಾಗ ಕುಡಿದು ಬಾಯಾರಿಕೆ ಕಡಿಮೆ ಮಾಡಿಕೊಂಡ ಪ್ರಸಂಗ ನೆನಪಿಗೆ ಬಂತೆ? ಆಗುವುದಿಲ್ಲ 'ಎನ್ನುವ ಹಂತದಿಂದ ಏಕೆ ಪ್ರಯತ್ನಿಸಬಾರದು ಎಂದು ನಿರ್ಧರಿಸಿ ಒಂದೊಂದೇ ... ಹೆಜ್ಜೆಗಳನ್ನು ಹಾಕುತ್ತಾ ಗುರಿಮುಟ್ಟಿದ್ದು ಹೇಗೆ ಎಂಬುದನ್ನು ಮರೆಯಲು ಸಾಧ್ಯವೇ?
'ಬದುಕು ಎನ್ನುವುದು ಅಂದುಕೊಂಡಿದ್ದನ್ನೆಲ್ಲಾ ಸಾಧಿಸಲು ಇರುವ ಒಂದು ಸುಂದರ ಅವಕಾಶ'. ನಮ್ಮ ಕನಸುಗಳು, ಗುರಿಗಳು, ಆಶಯಗಳನ್ನು ಎಲ್ಲವನ್ನೂ ನಾವೇ ಸಾಧಿಸಿ ತೋರಿಸಬೇಕೇ ಹೊರತು ಬಿಟ್ಟು ಕೊಡಬಾರದು. ಹೋರಾಟಕ್ಕೆ ಮುನ್ನವೇ ಸೋಲೋಪ್ಪಿಕೊಳ್ಳುವುದು ತರವಲ್ಲ. ಆದರೆ ಒಮ್ಮೆ ಕಣಕ್ಕಿಳಿದ ನಂತರ "ಗೆಲ್ಲಲೇಬೇಕು" ಎನ್ನುವ ಛಲದೊಂದಿಗೆ ಆಟವಾಡಲು ಇಳಿಯಬೇಕು. ನಮ್ಮ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ, ಹೊಣೆಗಾರಿಕೆ ನಮ್ಮದೇ ! ಗೆಲವು, ಯಶಸ್ಸು ನೀಡುವ ಸ್ಪೂರ್ತಿ ಇನ್ನಾವುದೂ ನೀಡಲು ಸಾಧ್ಯವಿಲ್ಲ. ಗೆಲ್ಲುವುದು, ಗೆಲ್ಲುತ್ತಲೇ ಹೋಗುವುದು ಅಭ್ಯಾಸವಾಗಿ ಬಿಡಬೇಕು!
ಈ ಮುಂದೆ ನೀಡುವ ಕಾರಣಗಳನ್ನು ಹಾಗೇ ಸುಮ್ಮನೇ ಓದುತ್ತಾ ಹೋಗಿ ಕೊನೆಗೆ ನೀವೇ ಹೇಳುತ್ತೀರಿ "ಹೌದು ಯಾವ ಕಾರಣಗಳಿಗೂ ಸಾಧಿಸಬೇಕಾದ್ದನ್ನು ಬಿಟ್ಟು ಕೊಡಬಾರದು" ಎಂದು.
'ಇದುವರೆವಿಗೂ ಯಾರೂ ಏರದ ಈ ಶಿಖರವನ್ನು ನಿನ್ನಿಂದ ಏರಲು ಸಾಧ್ಯವೇ?' ಎಂದು ಪ್ರೀತಿಯಿಂದ ಕೆನ್ನೆ ತಟ್ಟಿ ನಿತ್ಯ ಮಗನನ್ನು ತಾಯಿ, ಹಸುಗಳನ್ನು ಮೇಯಿಸಲು ಕಳಿಸುವಾಗ ಬುತ್ತಿ ಕೊಟ್ಟು ಸವಾಲನ್ನು ಎಸೆಯುತ್ತಿದ್ದಳು. ಆ ಪುಟ್ಟ ಹುಡುಗ ಸವಾಲನ್ನು ಸ್ವೀಕರಿಸಿ ನಿತ್ಯ ಮನಸ್ಸಿನೊಳಗೇ ಬೆಟ್ಟ ಏರಲು ಪ್ರಾರಂಭಿಸಿದ. ನಿಜವಾಗಿಯೂ ದೊಡ್ಡವನಾದ ನಂತರ ಸತತ ಪ್ರಯತ್ನಗಳಿಂದಾಗಿ ಒಂದು ದಿನ ಶಿಖರ ಏರಿ, ಮೇಲೆ ನಿಂತು ಆಕಾಶಕ್ಕೆ ಮುಖ ಮಾಡಿ ಹೇಳಿದ "ಅಮ್ಮಾ ನೀನು ಹೇಳಿದಂತೆ ಯಾರೂ ಏರದಿದ್ದ ಈ ಹಿಮಾಲಯ ಶಿಖರ ಏರಿಬಿಟ್ಟೆ" ! ಆ ಸಾಧಕನ ಹೆಸರು ತೇನ್ ಸಿಂಗ್ !.
ಸ್ವಂತಿಕೆಯನ್ನೇ ಕಳೆದುಕೊಂಡು ಅಖಂಡ ಭಾರತವಾಗಿ ಜೀವಿಸುವುದೇ ಸಾಧ್ಯವಿಲ್ಲ ಎನ್ನುವಂತಿದ್ದ ಭಾರತೀಯರಲ್ಲಿ ಹೊಸ ಹುರುಪು ತುಂಬಿ ಇಡೀ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಕೇವಲ 'ಸತ್ಯ ಮತ್ತು ಅಹಿಂಸೆ' ಎನ್ನುವ ಅಸ್ತ್ರ ಹಿಡಿದು ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ನೆನಪಿಸಿಕೊಳ್ಳಿ. ಇವರಿಂದ ಸ್ಪೂರ್ತಿ ಪಡೆದ ಯುವಕನೊಬ್ಬ ಆಫ್ರಿಕಾದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮಿಕಿದ. ಆತನ ಹೋರಾಟವನ್ನು ಹೇಗಾದರೂ ಹತ್ತಿಕ್ಕಬೇಕೆಂದು ಬ್ರಿಟಿಷರು ಅವನನ್ನು ಪದೇ ಪದೇ ಬಂಧಿಸಿ ಜೈಲಿಗೆ ಅಟ್ಟುತ್ತಿದ್ದರು.ಒಂದು ದಿನ ಶಾಶ್ವತವಾಗಿ ಅವನನ್ನು ಸರಳುಗಳ ಹಿಂದೆ ತಳ್ಳಿ ಬಿಟ್ಟರು. ದೇಶದ ಸ್ವಾತಂತ್ರ್ಯದ ಕನಸು ಕಂಡ ಅವನು ಜೈಲಿನಿಂದಲೇ ಚಳುವಳಿಯನ್ನು ಮುನ್ನಡೆಸಿದ. ಒಂದು .... ಎರಡು...... ಮೂರು...... ತನ್ನ ಇಡೀ ಯೌವ್ವನದ ಅಮೂಲ್ಯ ೨೭ ವರ್ಷಗಳನ್ನು ಜೈಲಿನಲ್ಲೇ ಕಳೆದ ! ಕೊನೆಗೆ ಇಡೀ ಜಗತ್ತು ಅವನ ಬೆಂಬಲಕ್ಕೆ ನಿಂತಿತು. ನಂತರ ಆತನ ಬಿಡುಗಡೆಯು ಆಯಿತು. ದೇಶಕ್ಕೆ ಸ್ವಾತಂತ್ರ್ಯವನ್ನೂ ತಂದುಕೊಟ್ಟ ! ರಾಷ್ಟ್ರಾಧ್ಯಕ್ಷನೂ ಆಗಿ ಬಿಟ್ಟ ! ಯಾರು ಗೊತ್ತೇ ? ಆತನೇ .... ನೆಲ್ಸನ್ ಮಂಡೇಲಾ.
ಆಟ ಬ್ಯಾಟ್ ಹಿಡಿದು ನಿಂತರೆ ಇಡೀ ಕ್ರೀಡಾ ಜಗತ್ತು ಅವನತ್ತಲೇ ನೋಟ ಹರಿಸುತ್ತದೆ. ಪ್ರತಿ ಸಾರಿ ಆಟಕ್ಕಿಳಿದಾಗಲೂ ಆಟ ತನ್ನದೇ ದಾಖಲೆಗಳನ್ನು ಮುರಿಯುತ್ತಾನೆ. ಹೊಸ ದಾಖಲೆ ಸೃಷ್ಟಿಸುತ್ತಾನೆ. ಸಾಧನೆ ಎಂದರೆ ಇತರರ ದಾಖಲೆಯನ್ನು ನಾವು ಮುಟ್ಟುವುದಿಲ್ಲ ! ಅವೆಲ್ಲವನ್ನು ಮುಟ್ಟಿ ಮೆಟ್ಟಿ ನಿಂತು ನಮ್ಮದೇ ಆದ ಹೊಸ ದಾಖಲೆ ಸೃಷ್ಟಿಸುವುದು ! ಸಚಿನ್ ವರ್ತಮಾನ ಕಂಡ ಅದ್ಭುತ ಕ್ರೀಡಾಪಟು. ಆತನ ಏಕಾಗ್ರತೆ ಗಮನಿಸಿ. ಯಾವ ಬೌಲರ್ ಅನ್ನೂ ಕಡೆಗಣಿಸುವುದಿಲ್ಲ.ಸತತ ಅಭ್ಯಾಸ ನಡೆಸಿ ತನ್ಮಯತೆಯಿಂದ ಬ್ಯಾಟ್ ಬೀಸುತ್ತಾನೆ. ಕೋಟ್ಯಾಂತರ ಕ್ರೀಡಾ ಅಭಿಮಾನಿಗಳಿಗೆ ದೇಶ ಗಡಿಗಳ ಮಿತಿ ಮೀರಿ ಆನಂದ ಉಂಟು ಮಾಡುತ್ತಾನೆ. ತನ್ನ ಆಟದ ಮೂಲಕ... ತನ್ನನ್ನು ತಾನು ಪಂದ್ಯದಿಂದ ಪಂದ್ಯಕ್ಕೆ ತಿದ್ದಿಕೊಳ್ಳುತ್ತಾನೆ.ಯಾವುದನ್ನು ಹಗುರಾಗಿ ಭಾವಿಸುವುದಿಲ್ಲ ! ಗುರಿ, ಅಭ್ಯಾಸ, ಏಕಾಗ್ರತೆ ಉಳಿದದ್ದು ? ಬರೀ ಸಾಧನೆ, ದಾಖಲೆ, ನಿತ್ಯ ಹೊಸ ಇತಿಹಾಸದ ಸೃಷ್ಟಿ.!
ನಿತ್ಯ ಎರಡು ಕಿಲೋಮೀಟರ್ ನಡೆಯಲು ಸಾಧ್ಯವಿಲ್ಲ ಎನ್ನುವ ಸೋಮಾರಿಗಳು, ಧಡೂತಿಗಳು ಬೇಕಾದಷ್ಟಿದ್ದಾರೆ. ಸಣ್ಣ ಆಗಬೇಕು ಎನ್ನುವ ಆಸೆ, ಆದರೆ ಹಾಸಿಗೆ ಬಿಟ್ಟೇ ಎದ್ದೇಳುವುದಿಲ್ಲ ! ಆದರೆ ಗ್ರೀಸ್ನಲ್ಲಿ ನಡೆದ ಯುದ್ದದ ವಿಜಯದ ಸುದ್ದಿ ಹೇಳಲು ಸಾವಿರಾರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಸುದ್ದಿ ಮುಟ್ಟಿಸಲು ಸತತ ನಲವತ್ತು ಕಿಲೋಮೀಟರ್ ಓಡುತ್ತಾ ಸಾಗಿದ ! ಅದೂ ಕಾಡು, ಬೆಟ್ಟ, ಗುಡ್ಡಗಳ ನಡುವೆ ! ಆತನ ನೆನಪಿಗಾಗೇ ಒಲಂಪಿಕ್ಸ್ ನಲ್ಲಿ ಮ್ಯಾರಥಾನ್ ಓಟವನ್ನು ಆಯೋಜಿಸುತ್ತಾರೆ. ನೆನಪಿಡಿ. ನಿಮ್ಮಂತೆ ನಡೆಯುವ ಆಸೆ ಇದ್ದರೂ ಹಾಸಿಗೆ ಬಿಟ್ಟು ಏಳದ ಸೋಮಾರಿಗಳಿಗೆ ಯಾವ ಸ್ಪರ್ಧೆಯೂ ಎಲ್ಲೂ ನಡೆಯುವುದಿಲ್ಲ.!
ನೀವು ಸೃಜನಾತ್ಮಕವಾಗಿ ಹೊಸತನ್ನು ಏನಾದರೂ ಸಾಧಿಸಲೇಬೇಕು ಎಂದು ಹೊರಟಾಗ ಟೀಕಿಸುವವರು ಇದ್ದೇ ಇರುತ್ತಾರೆ. ವಿನಾಕಾರಣ ದ್ವೇಷಿಸುತ್ತಾರೆ. ಕಹಿ ಮಾತಿನಿಂದ ನಿಮ್ಮ ಉತ್ಸಾಹ ಕುಗ್ಗಿಸುತ್ತಾರೆ. 'ಇದೆಲ್ಲಾ ಸಾಧ್ಯವೇ ಇಲ್ಲಾ' ಎನ್ನುವ ಗೆರೆ ಎಳೆದು ಬಿಡುತ್ತಾರೆ. ನಮ್ಮ ಗುರಿ ಸಾಧಿಸಬೇಕೆಂದರೆ ಮೊದಲು ಮಾಡಬೇಕಾದ ಕೆಲಸ ನಕಾರಾತ್ಮಕ ಚಿಂತನೆಯ ವ್ಯಕ್ತಿಗಳಿಂದ ದೂರ ಇರುವುದು! ಟೀಕಿಸುವವರನ್ನು ನಗುತ್ತಲೇ ಬಿಟ್ಟು ಮುಂದೆ ಹೋಗುವುದು. ನಿಮ್ಮನ್ನು 'ಬಾ' ಎಂದು ಕರೆಯಬೇಕಾದ್ದು ನಿಮ್ಮ ಗುರಿಯೇ ಹೊರತು ಏನನ್ನು ಸಾಧಿಸದ ಅಯೋಗ್ಯಕರ ನುಡಿಗಳಲ್ಲ! ದ್ವೆಶಿಸುವವರನ್ನು ಹಾಗೇ ಅವರ ಪಾಡಿಗೇ ಬಿಟ್ಟು ಬಿಡಿ. ನೀವು ನಿಮ್ಮ ಗುರಿ ಸಾಧನೆಗೆ ಗಮನ ಹರಿಸಿ.
ನಾಯಕತ್ವ ಗುಣಗಳನ್ನು ಹೊಂದದೆ ಯಾರೂ ಮಹತ್ತರ ಸಾಧನೆಗಳನ್ನು ಮಾಡಿದ ಉದಾಹರಣೆ ಎಲ್ಲೂ ಇಲ್ಲ! ಮೊದಲು ನಮ್ಮ ಬದುಕಿಗೆ ನಾವೇ ನಾಯಕರಾಗಬೇಕು! ಬೇರೆ ಇನ್ನಾರದ್ದೋ ನಮ್ಮ ಮೇಲೆ ಸವಾರಿ ಮಾಡಲು ಬಿಡಬಾರದು. ಇಲ್ಲದಿದ್ದರೆ ಕೀಳರಿಮೆ, ಭಯ, ಅನಿಶ್ಚತೆಗಳು ಬಂದು ಬಿಡುತ್ತವೆ. ಮಾನಸಿಕವಾಗಿ ಸಬಲರಾಗಿ. ಗುರಿಗಳನ್ನು ಪಟ್ಟಿ ಮಾಡಿಕೊಳ್ಳಿ. ಗುರಿ ಸಾಧನೆಗೆ ಸಿದ್ದತೆ, ಪೂರ್ವ ತಯಾರಿ ಮಾಡಿಕೊಳ್ಳಿ. ಕಾರ್ಯ ಯೋಜನೆ ರೂಪಿಸಿ. ನಿಮ್ಮ ಟೇಬಲ್ ಎದುರು ಗೋಡೆಗೆ ಅಂಟಿಸಿ. ಅದು ನಿಮ್ಮನ್ನು ಕೆಣಕಿ ಸಾಧನೆಗೆ ತೊಡಗಲು ಕರೆಯುತ್ತದೆ ! ನಿಮ್ಮ ಭವಿಷ್ಯ ಕುರಿತು ನಿಮಗೆ ಖಚಿತತೆ ಇರಲಿ. ನಿಜವಾದ ನಾಯಕತ್ವ ಹೊಂದಿರುವವರು ಸದಾ ಚಟುವಟಿಕೆ ಹಾಗೂ ಕ್ರಿಯಾಶೀಲತೆ ಹೊಂದಿರುವುದನ್ನು ಗಮನಿಸಿ. ನುಡಿದಂತೆ ನಡೆಯುವುದನ್ನು ರೂಢಿಸಿಕೊಳ್ಳಿ. ನೀವು ನಂಬಿದ ಧ್ಯೇಯ, ತತ್ವ ಸಿದ್ದಾಂತಗಳಿಗೆ ಬದ್ದರಾಗಿರಿ. ಮುಂದೆ ಸಾಗಿರಿ. ಎಂದೋ ಒಂದು ದಿನ ನೀವು ಹಿಂತಿರುಗಿ ನೋಡಿದಾಗ ನಿಮ್ಮ ಸಾಧನೆಯಿಂದಾಗಿ ಇಡೀ ಜಗತ್ತು ನಿಮ್ಮನ್ನು ಹಿಂಬಾಲಿಸುತ್ತದೆ ! ಆದ್ದರಿಂದ ಇಂದೇ ಹಿಂಬಾಲಕರಾಗುವುದನ್ನು ಬಿಟ್ಟು ಬಿಡಿ. ನಿಮಗೆ ನೀವೇ ನಾಯಕರಾಗಿ.
ಡಾರ್ವಿನ್ಸ್ ಸಿದ್ದಾಂತ ಏನು ಹೇಳುತ್ತದೆ? ಯಾರು ವಿಕಾಸವಾದಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವುದಿಲ್ಲವೊ ಅವರೆಲ್ಲಾ ಪ್ರಕೃತಿಯಲ್ಲಿ ಹಾಗೇ ಹಿಂದೆ ಉಳಿದು ಹೋಗುತ್ತಾರೆ! ಇನ್ನೂ ಮರದ ಮೇಲೆ ಇರುವ ಕೋತಿಗಳನ್ನು ಗಮನಿಸಿ ಮರದಿಂದ ಮರಕ್ಕೆ ನೆಗೆಯುವುದರಲ್ಲೇ ಖುಷಿ ಕಾಣುತ್ತವೆ ! ಇನ್ನೂ ಸ್ವಲ್ಪ ಮುಂದೆ ಹೋಗಿ ನೆಲಕ್ಕೆ ಇಳಿದು ಬದಲಾವಣೆ ಒಡ್ಡಿಕೊಂದಿದ್ದರೆ ಅವೂ ನಮ್ಮ ನಿಮ್ಮಂತೆ ಮನುಷ್ಯರಾಗುತ್ತಿದ್ದವು,ನಾವು ಮನುಷ್ಯರಾದ ಮೇಲೆ ಮಾಡುವುದು ಇನ್ನೂ ಏನಿದೆ? ಜಗತ್ತು ತಂತ್ರಜ್ಞಾನ ವಿಜ್ಞಾನ, ನೂತನ ಆವಿಶ್ಕಾರಗಳಿನ್ದಾಗಿ ಬದಲಾಗಿ ಹೋಗಿದೆ! ಈ ಜಗತ್ತಿಗೆ ನಮ್ಮದೂ ಏನಾದರೂ ಕೊಡುಗೆ ಬೇಡವೇ? ಇಂದೇ ನಿಮ್ಮ ಆಲೋಚನಾ ಕ್ರಮಗಳನ್ನು ಬದಲಾಯಿಸಿಕೊಳ್ಳಿ. ಹೊಸ ಬದಲಾವಣೆಯ ಹರಿಕಾರರಾಗಿ, ಜಗತ್ತಿಗೆ ನಿಮ್ಮದೇ ಆದ ನೂತನ ಕೊಡುಗೆ ನೀಡಿ.
ಈಗ ಹೇಳಿ ನಿಮ್ಮ ಕನಸುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ತಾನೇ? ಅಂದುಕೊಂಡಿದ್ದನ್ನೆಲ್ಲಾ ಸಾಧಿಸುವ ಹಂತ ತಲುಪಿದ ದಿನ ಇಡೀ ಜಗತ್ತು ನಿಮ್ಮನ್ನು ಅಭಿನಂದಿಸುತ್ತದೆ. ನೀವು ಇತರರಿಗೆ ಮಾದರಿ ಆಗುತ್ತೀರಿ.ನಿಮ್ಮಿಂದ ಎಲ್ಲರೂ ಸ್ಪೂರ್ತಿ ಹೊಂದುತ್ತಾರೆ. ಜಗತ್ತಿನಲ್ಲಿ ಪ್ರಯತ್ನಗಳೇ ಇಲ್ಲದೆ ಏನನ್ನೂ ಸಾಧಿಸಿದ ಉದಾಹರಣೆಗಳಿಲ್ಲ! ಪ್ರಯತ್ನಿಸಿ ಸೋತರೂ ಕುಗ್ಗದೆ ಮುಂದೆ ಸಾಗಿದಾಗ, ಸಾಧಿಸದೆ ಖಾಲಿ ಕೈಲಿ ಹಿಂದೆ ಬಂದ ಯಾವ ನಿದರ್ಶನಗಳೂ ಇಲ್ಲ! ಮುಖ್ಯ ನಮ್ಮ ಗುರಿ ಸಾಧಿಸಲು ಛಲಬೇಕು. ಬದ್ದತೆಬೇಕು. ಯುದ್ದಕ್ಕೆ ಮುನ್ನವೇ ಶರಣಾಗತಿ ಹೇಡಿಗಳ ಲಕ್ಷಣ, ಆದರೆ ನೀವು ಇರುವುದು ನಿಮ್ಮ ಕನಸುಗಳ ದಾರಿಯಲ್ಲಿ! ಮುಂದೆ ಸಾಗಿ ಯಶಸ್ವಿನೊಂದಿಗೆ ಮರಳಿ ಬನ್ನಿ. ಜಗತ್ತೇ ನಿಮ್ಮನ್ನು ಅಭಿನಂದಿಸಲು ಕಾದು ಕುಳಿತಿರುತ್ತದೆ! ಒಳ್ಳೆಯದಾಗಲಿ ಇನ್ನೇಕೆ ತಡ ? ಮುಂದೆ ಸಾಗಿ.
ಮೂಲ:ರಜತ ದರ್ಪಣ
ಕೊನೆಯ ಮಾರ್ಪಾಟು : 1/28/2020