অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪೋಲಿಯೋ ಮುಕ್ತ

ಪೋಲಿಯೋ ಮುಕ್ತ

ದೇಶದ ಮೂಲೆ ಮೂಲೆಯಲ್ಲಿರುವ ಪ್ರತೀ ಮಗುವೂ ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ, ಲಸಿಕೆಯ ಡಬ್ಬ ಹಿಡಿದು ಓಡಾಡಿದ ಲಕ್ಷಾಂತರ ಮಂದಿ ಕಾರ್ಯಕರ್ತರ ಸೇವೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ.

ದಶಕಗಳಿಂದ ದೇಶದ ಅಸಂಖ್ಯಾತ ಮಕ್ಕಳನ್ನು ಅಂಗವಿಕಲಗೊಳಿಸಿದ್ದ ಪೋಲಿಯೋ ರೋಗದಿಂದ ದೇಶ ಮುಕ್ತಗೊಳ್ಳುವ ಕಾಲ ಸನ್ನಿಹಿತವಾಗಿದೆ. ಪೋಲಿಯೋ ಮುಕ್ತ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ನಿಟ್ಟಿನಲ್ಲಿ ಭಾರತ ನಡೆಸುತ್ತಾ ಬಂದಿರುವ ಪ್ರಯತ್ನದ ಗುರಿ ತಲುಪಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿಯಿದೆ. ದೇಶದ ಆರೋಗ್ಯ ವ್ಯವಸ್ಥೆ ಪೋಲಿಯೋ ನಿರ್ಮೂಲನಕ್ಕಾಗಿ ನಡೆಸಿದ ನಿರಂತರ ಹೋರಾಟದ ಫಲ ಲಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO ) ಭಾರತವನ್ನು ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಿಂದ ತೆಗೆದು ಹಾಕಿದೆ. ಫೆಬ್ರವರಿ ೨೫ ರಂದು   ನವದೆಹಲಿಯಲ್ಲಿ ನಡೆದ ಪೋಲಿಯೋ ಶೃಂಗ ಸಭೆ -೨೦೧೨ ರಲ್ಲಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಸಮ್ಮುಖದಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಗುಲಾಂ ನಬಿ ಆಜಾದ್ ಅವರು ದೇಶದ ಆರೋಗ್ಯ ವ್ಯವಸ್ಥೆಗೆ ಹೊಸ ಗರಿ ಮೂಡಿಸುವ ಈ ಘೋಷಣೆ ಮಾಡಿದರು.

ಕಳೆದ ಒಂದು ವರ್ಷದಿಂದೀಚೆಗೆ ದೇಶದ  ಯಾವುದೇ ಭಾಗದಲ್ಲಿ ಒಂದೂ ಪೋಲಿಯೋ ಪ್ರಕರಣ ವರದಿಯಾಗಿಲ್ಲದಿರುವುದರಿಂದ ಪೋಲಿಯೋ ನಿರ್ಮೂಲನೆಯಲ್ಲಿ ದೇಶ ಅಪೂರ್ವ ಪ್ರಗತಿ ಸಾಧಿಸಿದಂತಾಗಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ೧೨.೦೧.೨೦೧೧ ರಂದು ವರದಿಯಾದ ಪೋಲಿಯೋ ಪ್ರಕರಣವೇ ಕೊನೆಯದಾಗಿದೆ. ಈ ಸಾಧನೆಯನ್ನು ಗುರುತಿಸಿರುವ WHO ಈ ಮಹತ್ವದ ಪ್ರಕಟಣೆ ಮಾಡಿದೆ. ಇನ್ನು ಎರಡು ವರ್ಷಗಳ ಕಾಲ ದೇಶದಲ್ಲಿ ಒಂದೂ ಪೋಲಿಯೋ ಪ್ರಕರಣ ವರದಿಯಾಗದಿದ್ದರೆ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸುವುದಾಗಿಯೂ WHO  ತಿಳಿಸಿದೆ.

ದೇಶದ ಮೂಲೆ ಮೂಲೆಯಲ್ಲಿರುವ ಪ್ರತೀ ಮಗುವೂ ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ, ಲಸಿಕೆಯ ಡಬ್ಬ ಹಿಡಿದು ಓಡಾಡಿದ ಲಕ್ಷಾಂತರ ಮಂದಿ ಕಾರ್ಯಕರ್ತರ ಸೇವೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಹಾಗಾಗಿಯೇ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪೋಲಿಯೋ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ೨೩ ಲಕ್ಕ್ಷ ಮಂದಿ ಕಾರ್ಯಕರ್ತರಿಗೆ ಇದರ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಲಕ್ಷಾಂತರ ಸ್ವಯಂ ಸೇವಕರು ದೇಶದುದ್ದಕ್ಕೂ ಕುಗ್ರಾಮಗಳಿಗೂ ತೆರಳಿ ಪ್ರತೀ ಮಗುವಿಗೂ ಲಸಿಕೆ ನೀಡಿದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಪ್ರಧಾನಿಯವರು ಪ್ರಶಂಸಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿರುವುದು ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ. ೨೦೦೭ ರ ನವಂಬರ್ ೩ ರಂದು ರಾಯಚೂರಿನಲ್ಲಿ ವರದಿಯಾದ ಪೋಲಿಯೋ ಪ್ರಕರಣವೇ ಕೊನೆಯದು. ಅದೂ ಸಹ ವಲಸೆ ಕುಟುಂಬವೊಂದರಲ್ಲಿ ಕಂಡುಬಂದದ್ದು. ರಾಜ್ಯದವರಲ್ಲಿಯೇ ಕಂಡು ಬಂದ ಪೋಲಿಯೋ ಪ್ರಕರಣ ವರದಿಯಾಗಿದ್ದು ಎಂಟು ವರ್ಷಗಳ ಹಿಂದೆ. ೨೦೦೪ ರಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ಈ ಪ್ರಕರಣ ಪತ್ತೆಯಾಗಿತ್ತು.

ಮೂಲ/ಕುಟುಂಬ ವಾರ್ತೆ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate