অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾಡಿದ್ದುಣ್ಣೋ ಮಹಾರಾಯ

ಮಾಡಿದ್ದುಣ್ಣೋ ಮಹಾರಾಯ

ಸೋಮಪ್ಪ ಬಡ ರೈತ. ಸಾಧು, ನಿರುಪದ್ರವಿ ಕೂಡ, ತಾನಾಯಿತು ತನ್ನ ಸಂಸಾರವಾಯಿತು ಹೆಂಡತಿ ಸಾವಿತ್ರಮ್ಮ ಹೆಸರಿಗೆ ತಕ್ಕಂತೆ ಸಂತತಿ ಸಾವಿತ್ರಿಯೇ ಗಂಡನಿಗೆ ತಕ್ಕ ಹೆಂಡತಿಯಾಗಿದ್ದಳು, ಸೋಮಪ್ಪ ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಬಂದಷ್ಟು ಫಸಲನ್ನು ತೆಗೆದು ಉಳಿದ ಸಮಯದಲ್ಲಿ ಇತರರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದನು. ಅಂತು ಹೇಗೋ ಆ ಪುಟ್ಟ ಸಂಸಾರ ರಥ ಯಾವುದೇ ತೊಂದರೆಯಿಲ್ಲದೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿತ್ತು.

ಸೋಮಪ್ಪ, ಸಾವಿರಮ್ಮನವರಿಗೆ ಶ್ಯಾಮ, ಕೋಮಲ ಎಂಬ ಮುದ್ದಾದ ಎರಡು ಮಕ್ಕಳು, ಬಡತನದ ಬವಣೆಯಲ್ಲೂ ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅತ್ಯಂತ ಅಕ್ಕರೆಯಿಂದ ಬೆಳೆಸುತ್ತಿದ್ದರು. ಮಕ್ಕಳ ಆಟಪಾಠಗಳನ್ನು ನೋಡುತ್ತ ಅವರ ಸಂತೋಷದಲ್ಲಿ ತಮ್ಮ ಕಷ್ಟಗಳನ್ನು ಮೆರೆಯುತ್ತಿದ್ದರು. ಮಕ್ಕಳೇ ಅವರ ಬದುಕಿನ ದಾರಿ ದೀಪಗಳಾಗಿದ್ದವು.

ಬಡತನದಲ್ಲಿ ಬದುಕುತ್ತಿದ್ದ ಸೋಮಪ್ಪ ಮತ್ತು ಸಾವಿತ್ರಮ್ಮನವರ ಬಾಳಿಗೆ ನವೋತ್ಸಾಹವನ್ನು ತಂದು ಕೊಟ್ಟವರು ಮಕ್ಕಳೇ. ಆದುದರಿಂದಲೇ ಮಕ್ಕಳ ಶ್ರೇಯಸ್ಸಿಗೆ ತಮ್ಮನ್ನೇ ಅರ್ಪಿಸಿಕೊಂಡರು, ತಮ್ಮಂತೆ, ಮಕ್ಕಳು ಕಷ್ಟ ಪಡಬಾರದೆಮ್ಬುದೆ ಅವರ ಬಯಕೆಯಾಗಿತ್ತು.

ಆರು ವರ್ಷ ತುಂಬುತ್ತಲೇ ಮಗ ಶ್ಯಾಮನನ್ನು ಶಾಲೆಗೇ ಸೇರಿಸಿದರು, ಆರ್ಥಿಕವಾಗಿ ತೊಂದರೆಯಿದ್ದರೂ ಅವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟು ಓದಿಸುವುದಕ್ಕೆ ಮುಂದಾದರು, ತಂದೆ ತಾಯಿಗಳ ಆಸೆಯಂತೆ ಶ್ಯಾಮನಿಗೆ ಓದಬೇಕೆಂಬ ಆಸೆಯು ಹೆಚ್ಚಾಯಿತು. ದಿನಗಳೆದಂತೆ ಕೋಮಲೆ ಕೂಡ ಶಾಲೆಗೆ ಹೋಗಲು ಪ್ರಾರಂಭಿಸಿದಳು, ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹೇಗೂ ನಿರಾತಂಕವಾಗಿ ನಡೆಯುತ್ತಿತ್ತು.ಶಾಲೆಗೆ ಹೋಗಿ ಬರುತ್ತಿದ್ದ ಮಕ್ಕಳನ್ನು ಕಣ್ತುಂಬ ನೋಡುವುದೇ ಅವರಿಗೆ ಮಹದಾನಂದವಾಗಿತ್ತು. ಆ ಆನಂದದಲ್ಲಿ ಅವರ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತಿದ್ದವು.

ಮಗ ಶ್ಯಾಮ ಮಾಧ್ಯಮಿಕ ಶಾಲೆಯಿಂದ ಪ್ರೌಡಶಾಲೆಗೆ ಸೇರಿದ, ಸೋಮಪ್ಪ ಮಗನಿಗೆ ಬೇಕಾದ್ದನ್ನೆಲ್ಲ ತೆಗೆದುಕೊಟ್ಟು, ಶ್ಯಾಮ ಕೂಡ ಚೆನ್ನಾಗಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾದ. ತಂದೆ ತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆ ವೇಳೆಗಾಗಲೇ ಕೋಮಲೆ ಕೂಡ ಹೈಸ್ಕೂಲ್ ಮೆಟ್ಟಿಲು ಹತ್ತಿದ್ದಳು.

ಹಳ್ಳಿಯಿಂದ ಬಂದ ಶ್ಯಾಮನಿಗೆ ಪಟ್ಟಣದ ಜೀವನ ಹೊಸದಾಗಿ ಕಂಡಿತು. ದಿನಗಳೆದಂತೆ ಶ್ರೀಮಂತರ ಮಕ್ಕಳ ಸ್ನೇಹ ಉಂಟಾಯಿತು. ಅವರ ಐಶಾರಾಮಿ ಜೀವನ ಶ್ಯಾಮನಿಗೆ ಅಪ್ಯಾಯ ಮಾನವಾಗಿ ಕಂಡಿತು. ಆ ಜೀವನಕ್ಕೆ ಹೊಂದಿಕೊಳ್ಳುತ್ತಾ, ಅನುಭವಿಸುತ್ತಾ ಹೋದ, ತಾನು ಅವರ ರೀತಿ ಇರಬೇಕೆಂಬ ಆಸೆ ಉಂಟಾಯಿತು. ಹಣಕ್ಕೆ ಕೊರತೆಯಾದರೆ ಮಗನಿಗೆ ಎಲ್ಲಿ ತೊಂದರೆಯಾಗುತ್ತದೋ ಎಂಬ ಆತಂಕದಿಂದ ಸೋಮಪ್ಪ ತನ್ನ ಹೊಟ್ಟೆ ಬಟ್ಟೆ ಕಟ್ಟಿ ಮಗನಿಗೆ ಹಣ ಕಳುಹಿಸುತ್ತಿದ್ದ. ಆತನಿಗೆ ಮಗ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದಾನೆ ಎಂಬುದೇ ಹೆಮ್ಮೆಯ ವಿಷಯವಾಗಿತ್ತು.

ಪಟ್ಟಣದ ಬದುಕು ಸುಂದರವಾಗಿ ಕಂಡ  ಶ್ಯಾಮನಿಗೆ ಹಳ್ಳಿಯಲ್ಲಿದ್ದ ತಂದೆತಾಯಿಗಳ ನೆನಪು ಕಡಿಮೆಯಾಗುತ್ತ ಹೋಯಿತು. ಸ್ನೇಹಿತರ ಸಲಿಗೆ, ಸ್ವಾತಂತ್ರ್ಯ, ಐಶಾರಾಮಿ ಜೀವನ ನನಗಿಲ್ಲವಲ್ಲ ಎಂಬ ಕೊರಗು ಶ್ಯಾಮನನ್ನು ಕಾಡತೊಡಗಿತು. ಇದಕ್ಕೆ ಕಾರಣ ತಂದೆ ತಾಯಿಗಳೇ ಎಂದು ಬಗೆದ. ದೊಡ್ಡ ದೊಡ್ಡ ಅಧಿಕಾರಗಳನ್ನು ಕಂಡಾಗ ತಾನು ಅವರಂತೆ ಆಗಬೇಕೆಂದು ಬಯಸಿ ಚೆನ್ನಾಗಿ ಓದಲಿಕ್ಕೂ ಪ್ರಾರಂಭಿಸಿದ. ಹಣಕ್ಕಾಗಿ  ತಂದೆ ತಾಯಿಗಳಿಗೆ ಪತ್ರದ ಮೇಲೆ ಪತ್ರ ಬರೆಯುವುದನ್ನು ಮರೆಯಲಿಲ್ಲ.

ಹಳ್ಳಿಯಲ್ಲಿ ಹೊತ್ತೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಸೋಮಪ್ಪನಿಗೆ ಮಗನಿಗೆ ಹಣ ಹೊಂದಿಸಲು ಬಹಳವಾಗಿ ಹೆಣಗಾಡಬೇಕಾಯಿತು. ಈ ನಡುವೆ ಕೋಮಲೆ ಕೂಡ ಪ್ರೌಡಶಾಲೆ ವಿದ್ಯಾಭ್ಯಾಸ ಮುಗಿಸಿದ್ದಳು. ಮಗನ ಓದಿಗಾಗಿಯೇ ಬವಣೆ ಪಡುತ್ತಿದ್ದ ತಂದೆ ತಾಯಿಗಳು ಮಗಳನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಕಳುಹಿಸಲು ಅಸಮರ್ಥವಾಗಿ ಮಗಳ ಓದನ್ನು ಅಲ್ಲಿಗೆ ನಿಲ್ಲಿಸಿದರು.

ಪದವಿ ತರಗತಿಯಲ್ಲಿ ಓದುತ್ತಿದ್ದ ಶ್ಯಾಮ, ತನ್ನ ಗೆಳೆಯರಂತೆ ತಾನು ಮೋಜು ಮಾಡುವುದನ್ನು ಕಲಿತ. ಹಳ್ಳಿಯ ಜೀವನ ದಿನಗಳೆದಂತೆ ಆತನಿಗೆ ಅಸಹ್ಯವಾಗಿ ಕಾಣತೊಡಗಿತು. ಇಂದಲ್ಲ ನಾಳೆ ಮಗ ಓದಿ ಕೆಲಸ  ಸಿಕ್ಕಿ ನಮಗೆ ಆಸರೆಯಾಗಿ ನಿಂತಾನು ಎಂಬ ಬಯಕೆ ಕೂಡ ಹೆಮ್ಮರವಾಗಿ ಬೆಳೆಯುತ್ತಾ ಕಷ್ಟಗಳಿಗೆ ಮಗ ತೆರೆ ಎಳೆಯುತ್ತಾನೆ ಎಂಬ ಬಯಕೆಯು ಇಲ್ಲದಿರಲಿಲ್ಲ.

ಪದವಿ ಮುಗಿಸಿ ಮಗ ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ. ವಿಷಯ ತಿಳಿದ ತಂದೆ ತಾಯಿಗಳಿಗೆ ಅಪಾರ ಆನಂದವಾಯಿತು, ಇನ್ನಾದರೂ ಈ ಕಷ್ಟದಿಂದ ಮುಕ್ತಿ ಹೊಂದಿ ನೆಮ್ಮದಿಯ ಬದುಕನ್ನು ಸಾಗಿಸಲು ಮಗ ನೆರವಾಗುತ್ತಾನೆಂಬ ಅಭಿಲಾಷೆ ಅವರದಾಗಿತ್ತು. ಮಗಳ ಮದುವೆಯನ್ನು ಸುಲಭವಾಗಿ ನೆರವೇರಿಸಬಹುದು ಎಂಬ ಕನಸು ಕಾಣ ತೊಡಗಿದರು ಕನಸು ನುಚ್ಚು ನೂರಾಗಲಿಕ್ಕೆ ಹೆಚ್ಚು ಕಾಲ ಬೇಕಾಗಲಿಲ್ಲ. ಕೆಲಸ ಸಿಕ್ಕಿದ್ದು ಮಗ ಶ್ಯಾಮನಿಗೆ ಐಶ್ವರ್ಯ ಬಂದಂತಾಗಿತ್ತು. ತನ್ನ ಸುಖ ಸಂತೋಷದಲ್ಲಿ ತಂದೆ ತಾಯಿಗಳನ್ನು, ಏಕೆ ತನ್ನ ಒಡಹುಟ್ಟಿದ ತಂಗಿಯನ್ನು ಮರೆತ.

ಒಂದು ದಿನ ಇದ್ದಕ್ಕಿದ್ದಂತೆ ಮಗ ಹಳ್ಳಿಗೆ ಬಂದ ತಂದೆ ತಾಯಿಗಳಿಗೆ ಸಂತೋಷದ ಜೊತೆಗೆ ಆಶ್ಚರ್ಯವೂ ಉಂಟಾಯಿತು, ಬಂದ ಮಗ ತಾನು ತಮ್ಮ ಫ್ಯಾಕ್ಟರಿ ಯಲ್ಲಿಯೇ ಕೆಲಸ ಮಾಡುವ ರುಕ್ಮಿಣಿಯನ್ನು ಪ್ರೀತಿಸುತ್ತಿರುವುದು, ಅವಳನ್ನೇ ಮದುವ್ಯಾಗಳು ನಿರ್ಧರಿಸುವುದಾಗಿಯೂ ತಿಳಿಸಿದ. ಬೆಳೆದ ಮಗಳು ಮನೆಯಲ್ಲಿರಬೇಕಾದರೆ ತನ್ನ ಮದುವೆಯ ಪ್ರಸ್ತಾಪ ಮಾಡುತ್ತಾನಲ್ಲ ಎಂದು ತಂದೆ ತಾಯಿಗಳಿಗೆ ನೋವು ಉಂಟಾದರೂ ತಂಗಿಯ ಮದುವೆಯಾಗುವ ತನಕ ಕಾಯಬೇಕಾಗಿ ವಿನಯದಿಂದ ಕೇಳಿಕೊಳ್ಳುತ್ತಾರೆ. ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ. ಸೋಮಪ್ಪ ಮಗಳಿಗೆ ಗಂಡು ಹುಡುಕುವ ಕೆಲಸದಲ್ಲಿ ತೊಡಗಿದ ಅವಳ ಪುಣ್ಯವೋ ಎಂಬಂತೆ ಪಕ್ಕದ ಹಳ್ಳಿಯ ಸಾಮಾನ್ಯ ಕುಟುಂಬದ ಶ್ರಿಧರನೊಡನೆ ಮಾಡುವೆ ನಿಶ್ಚಯವಾಯಿತು. ಇದ್ದ ಜಮೀನನ್ನು ಮಾರಿ ಬಂದ ಹಣದಿಂದ ಮಗಳ ಮದುವೆ ಮಾಡಿ ಮುಗಿಸಿದರು. ಕೋಮಲೆಯ ಮದುವೆ ಮುಗಿಯುತ್ತಿದ್ದಂತೆ ಶ್ಯಾಮ ತನ್ನ ಮದುವೆ ತಯಾರಿ ಮಾಡತೊಡಗಿದ. ಮಗಳ ಮದುವೆ ಮಾಡಿ ತೊಂದರೆಯಲ್ಲಿದ್ದ ತಂದೆತಾಯಿಗಳಿಗೆ ಇವನ ನಡತೆ ಸರಿಕಾಣಲಿಲ್ಲ. ಹೇಗೂ ಮಗ ಚೆನ್ನಾಗಿರಲಿ ಎಂಬುದೇ ಅವರ ಸಂಕಲ್ಪವಾಗಿತ್ತು.

ಪಟ್ಟಣದಲ್ಲಿ ಶ್ಯಾಮ ರುಕ್ಮಿಣಿಯರ ಜೀವನ ಪ್ರಾರಂಭವಾಯಿತು. ಶ್ಯಾಮ ತನ್ನ ಸಂತೋಷದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆ ತಾಯಿಗಳನ್ನು ಮರೆತ. ಶ್ಯಾಮನಿಗೆ ಒಂದು ಮುದ್ದಾದ ಗಂಡು ಮಗು ಆಯಿತು. ಮಗನಿಗೆ ಕೃಷ್ಣ ಎಂದು ಹೆಸರಿಟ್ಟರು. ಇದಾವ ಕಾರ್ಯಕ್ಕೂ ತನ್ನ ತಂದೆ ತಾಯಿಗಳನ್ನು ಕರೆಯಲಿಲ್ಲ ಶ್ಯಾಮ.

ವಯಸ್ಸಾದ ತಂದೆ ತಾಯಿ ತಮ್ಮ ಮಗ ಬಂದು ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಾನೆ. ಆಗ ಕರೆಯುತ್ತಾನೆ, ಈಗ ಕರೆಯುತ್ತಾನೆ, ಎಂದು ಬಯಸಿದ ಅವರಿಗೆ ನಿರಾಶೆಯಾಯಿತು. ಶ್ಯಾಮ ಆ ಪ್ರಸ್ತಾಪವನ್ನೇ ಎತ್ತಲಿಲ್ಲ. ಶಕ್ತಿಯಿರುವಷ್ಟು ದಿನ ಹಳ್ಳಿಯಲ್ಲಿದ್ದ ಸೋಮಪ್ಪ ಸಾವಿತ್ರಮ್ಮನವರು ದುರ್ಬಲರಾದಾಗ ತಾವಾಗಿ ಶ್ಯಾಮನ ಮನೆಗೆ ಬರುತ್ತಾರೆ. ನಿರಾತಂಕವಾಗಿದ್ದ ಶ್ಯಾಮನಿಗೆ ತಂದೆ ತಾಯಿಗಳ ದಿಡೀರ್ ಆಗಮನ ಸಹ್ಯವಾಗಲಿಲ್ಲ, ಮಗ ತಂದೆ ತಾಯಿಗಳನ್ನು ಬಹಳ ನಿಕೃಷ್ಟವಾಗಿ ನೋಡತೊಡಗಿದ, ಹೆಂಡತಿಯನ್ನು ಅವರ ಸಹಾಯಕ್ಕೆ ನಿಲ್ಲಲು ಅವಕಾಶ ಕೊಡಲಿಲ್ಲ. ಈ ನಡತೆಯಿಂದ ಬೇಸತ್ತ ತಂದೆ ತಾಯಿಗಳು ತಮ್ಮ ಹಳ್ಳಿಯ ಹಾದಿ ತುಳಿಯಬೇಕಾಯಿತು. ಹಂಗಿನ ಅರಮನೆಗಿಂತ ತಮ್ಮ ಮನೆಯ ಗಂಜಿಯೇ ಅವರಿಗೆ ಅಮ್ರುತವಾಗಿ ಕಂಡಿತು. ತಂದೆ ತಾಯಿಗಳು ಹಳ್ಳಿಗೆ ಹೊರಡುವ ಸುದ್ದಿ ಶ್ಯಾಮನಿಗೆ ಸಂತೋಷವಾದರೂ ಕೃಷ್ಣನಿಗೆ ಅದು ದುಃಖ ವಾಗಿ ಪರಿಣಮಿಸಿತು. ಅಜ್ಜ ಅಜ್ಜಿಯನ್ನು ಬಿಟ್ಟಿರಲಾರದ ಮುಗ್ದ ಬಾಲಕನ ಪ್ರೀತಿ ಅವರನ್ನು ಕಟ್ಟಿ ಹಾಕಿತ್ತು. ಶ್ಯಾಮ ಅಸಹಾಯಕನಾದ ಹೇಗೋ ತಿಂದು ಬಿದ್ದಿರಲಿ ಎಂದು ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ. ತಾನಾಯಿತು ತನ್ನ ಸುಖದ ಬದುಕಾಯಿತು.

ಹಂಗಿನ ಅನ್ನದಿಂದ ಸೋಮಪ್ಪ ಸಾವಿತ್ರಮ್ಮ ಸಂಪೂರ್ಣವಾಗಿ ಕುಗ್ಗಿಹೋದರು. ಮಗನ ದುರ್ನಡತೆಗಳು ಅವರಿಗೆ ಬೇಸರ ತಂದಿತ್ತು, ಸೋಮಪ್ಪ ಮಗನ ಈ ನಡವಳಿಕೆಯಿಂದ ಕೊರಗಿ ಕೊರಗಿ ಒಂದು ದಿನ ಇಹಲೋಕ ತ್ಯಜಿಸಿದ ಗಂಡನನ್ನು ಕಳೆದುಕೊಂಡ ಸಾವಿತ್ರಮ್ಮ ಒಬ್ಬಂಟಿಯಾದಳು. ಗಂಡನ ಚಿಂತೆ ಹೆಚ್ಚಾಯಿತು. ತಮಗೆ ಒದಗಿದ ದುಸ್ಥಿತಿಗಾಗಿ ನೊಂದ ಗಂಡನನ್ನು ಬಿಟ್ಟಿರಲಾರದ ಸಾವಿತ್ರಮ್ಮ ಗಂಡನ ಚಿಂತೆಯಲ್ಲಿಯೇ ಕೊನೆಯುಸಿರೆಳೆದಳು, ತಂದೆ ತಾಯಿಯ ಅಗಲಿಕೆ ಶ್ಯಾಮನಿಗೆ ನೋವುಂಟು ಮಾಡದಿದ್ದರೂ ಅವರ ಕೊರತೆಯನ್ನು ನಿಜವಾಗಿ ಅನುಭವಿಸಿದವನೆಂದರೆ ಕೃಷ್ಣ ಮಾತ್ರ. ಕೃಷ್ಣ ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾದ. ಐಶಾರಾಮ ಜೀವನಕ್ಕೆ ಮಾರುಹೋಗಿದ್ದ ಶ್ಯಾಮ ಫ್ಯಾಕ್ಟರಿಯಲ್ಲಿ ಕೆಲಸ ಕಳೆದುಕೊಂಡ, ಗಂಡ ಹೆಂಡತಿಯರು ಕೃಷ್ಣ ಆಶ್ರಯದಲ್ಲಿ ಬದುಕಬೇಕಾಗಿ ಬಂತು ಶ್ಯಾಮನ ದುರಭ್ಯಾಸಗಳಿಂದ ಅನೇಕ ಖಾಯಿಲೆಗಳು ಆತನಿಗೆ ಗಂಟು ಬಿದ್ದಿದ್ದವು. ಔಷದೊಪಚಾರದಿಂದ ಗುನಮುಖನಾಗದ ಶ್ಯಾಮ ಮೂಲೆ ಸೇರಿದ.

ದೊಡ್ಡ ಅಧಿಕಾರಿಯ ಮಗಳಾದ ರಾಧಾಳ ಜೊತೆ ಕೃಷ್ಣ ಮದುವೆಯಾಯಿತು. ರಾಧಾ ಆಧುನಿಕ ಹುಡುಗಿ ಎಲ್ಲವೂ ಶಿಸ್ತಿನಿಂದ ಇರಬೇಕೆಂದು ಬಯಸುವವಳು, ವಿದ್ಯಾವಂತೆ ಕೂಡ, ಇರಬೇಕಾದರೆ ಯಾವಾಗಲೂ ಖಾಯಿಲೆಯಿಂದ ನರಳುತ್ತಿದ್ದ ಮಾವನನ್ನು  ನೋಡಲಿಕ್ಕೆ ಅವಳಿಗೆ ಅಸಹ್ಯವಾಗುತ್ತಿತ್ತು. ಆದುದರಿಂದ ಶ್ಯಾಮನಿಗೆ ಪ್ರತ್ಯೇಕ ಕೊಠಡಿ,ತಟ್ಟೆ, ಲೋಟಗಳೆಲ್ಲವೂ ಸಿದ್ದವಾದವು, ಶ್ಯಾಮ ಪರತಂತ್ರ ಜೀವಿಯಾದ. ಖಾಯಿಲೆಯಿಂದ ನರಳುತ್ತಿದ್ದ ಶ್ಯಾಮನಿಗೆ ಹಿಂದಿನ ಜೀವನದ ನೆನಪುಗಳು  ಕಾಡ ತೊಡಗಿದವು. ಮಾಡಿದ ಪಾಪ ಕರ್ಮಗಳಿಗೆ ಪಶ್ಚಾತ್ತಾಪ ಪಡುತ್ತಾ ಪರಿತಪಿಸುತ್ತಾ ಸೊಸೆ ಹಾಕಿದ ಅನ್ನಕ್ಕೆ ತಟ್ಟೆ ಹಿಡಿದು ಕುಳಿತಿದ್ದಾನೆ ಶ್ಯಾಮಣ್ಣ.

ಮೂಲ:ರಜತ ದರ್ಪಣ
© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate