অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜತೀಂದ್ರನಾಥ ಮುಖರ್ಜಿ

ಜತೀಂದ್ರನಾಥ ಮುಖರ್ಜಿ

ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಆಂಗ್ಲರು ಭಾರತೀಯರನ್ನು ಅತ್ಯಂತ  ಹೀನಾಯವಾಗಿ ಹಾಗೂ ತುಚ್ಚಾಗಿ ನಡೆಸಿಕೊಳ್ಳುತ್ತಿದ್ದರು ಎಂದು ನಾವೆಲ್ಲ ಓದಿದ್ದೇವೆ ಹಾಗೂ ಕೇಳ್ಪಟ್ಟಿದ್ದೇವೆ. ಇದಕ್ಕೆ ಮಹಾತ್ಮ ಗಾಂಧಿಯಿಂದ ಹಿಡಿದು ಎಲ್ಲ ಸ್ವತಂತ್ರ ಸೇನಾನಿಗಳು ಸೇರ್ಪಟ್ಟಿದ್ದಾರೆ. ಅದರಲ್ಲೂ ಕ್ರಾಂತಿಕಾರಿಗಳು ಸೆರೆ ಸಿಕ್ಕಾಗಂತೂ ಅವರನ್ನು ನರಕ ಸಮಾನ ಜೈಲುಗಳಲ್ಲಿ ಕ್ರೂರವಾದ ಶಿಕ್ಷೆ ನೀಡಿ ಖುಷಿ ಪಡುತ್ತಿದ್ದರು ಈ ಯಮ ಕಿಂಕರ ಆಂಗ್ಲರು. ಆದರೂ ಆಂಗ್ಲರಲ್ಲಿ ಎಲ್ಲರೂ ಕೆಟ್ಟವರಲ್ಲ ಅವರಲ್ಲಿ ಭಾರತೀಯರನ್ನು ಕಂಡು ಮರುಗಿ ಸಹಾನುಭೂತಿ ತೋರಿದ ಹಲವರು ಇದ್ದಾರೆ. ಒಮ್ಮೆ ಭಾರತದ ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದ ಆಂಗ್ಲರಿಗೆ ಬೇಕಾಗಿದ್ದ  ಕ್ರಾಂತಿಕಾರಿಯೊರ್ವನ ಜೊತೆ ಭಾರಿ ದೊಡ್ಡ ಗುಂಡಿನ ಕಾಳಗವೇ ನಡೆಯಿತು. ಕಡೆಗೆ ಆ ಕ್ರಾಂತಿಕಾರಿಯು  ತನ್ನ ಎಲ್ಲ ಸಹಪಾಟಿಗಳನ್ನು ಕಳೆದುಕೊಂಡು ಅಳಿದುಳಿದ ಸಹಪಾಠಿಗಳ ಜೊತೆ ಸೆರೆ ಸಿಕ್ಕನು. ಅವನು ಸೆರೆ ಸಿಕ್ಕಾಗ ಮೈಯೊಳಗೆ ಗುಂಡುಗಳು ಹೊಕ್ಕಿ ಮೈಯಿಂದ ರಕ್ತ ಹರಿಯುತ್ತಿತ್ತು.ಇದಲ್ಲದೇ ಬೀಳುತ್ತಿದ್ದ ಮಳೆ ಸಹ ಗಾಯದ ಮೇಲೆ ಬರೆಯೆಳದಂತಿತ್ತು . ಬಹಳ ಸಮಯದವರೆಗೂ ಹೋರಾಡಿದ್ದರಿಂದ  ಅತ ಬಳಲಿದ್ದನು ಇದನ್ನು ಕಂಡ ಆಂಗ್ಲ ಅಧಿಕಾರಿ ಅವನಿಗೆ ನೀರು ಕುಡಿಸಿ ಅತ್ಯಂತ ವಿನಯಪೂರ್ವಕವಾಗಿ ಮಾತನಾಡಿಸಿದನು. ಮಳೆ ಬರುತ್ತಿದ್ದರಿಂದ ಕ್ರಾಂತಿಕಾರಿಯ ದೇಹದ ಮೇಲೆ ಬಿದ್ದ ಮಳೆ ಹನಿಗಳಿಂದ ರಕ್ತ ತಸು ವೇಗವಾಗಿ ದೇಹದಿಂದ ಹೊರಕ್ಕೆ ಹರಿಯುತ್ತಿತ್ತು ಇದನ್ನು ಕಂಡ ಆಂಗ್ಲ ಅಧಿಕಾರಿ ಕ್ರಾಂತಿಕಾರಿಯ ದೇಹವನ್ನು ತನ್ನ ಕೋಟಿನಿಂದ ಮುಚ್ಚಿದನು. ಆಮೇಲೆ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿ ಕ್ರಾಂತಿಕಾರಿಯ ಮೈಯೊಳಗಿನ  ಗುಂಡನ್ನು ವೈದ್ಯರು ತಗೆದು ದೇಹಕ್ಕೆ ಹೊಲಿಗೆ ಹಾಕುತ್ತಾರೆ. ಆಂಗ್ಲ ಅಧಿಕಾರಿ ರಾತ್ರಿಯೆಲ್ಲ ಜಾಗರಣೆ ಮಾಡಿ ಕ್ರಾಂತಿಕಾರಿಯು ಬದುಕುಳಿಯುತ್ತಾನೆ ಎಂದು ಸಂತೋಷಪಡುತ್ತಾನೆ. ಆದರೆ ಆ ಕ್ರಾಂತಿಕಾರಿಯ ದೇಹಕ್ಕೆ  ಹಾಕಿದ ಹೊಲಿಗೆಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಬಂದು ಆತನ ಶಕ್ತಿಯನ್ನು ಕುಂದಿಸುತ್ತಾ ಬರುತ್ತದೆ . ಸ್ವಲ್ಪ ಸಮಯದ ನಂತರ ಅತ ಇಹ ಲೋಕ ತ್ಯಜಿಸಿ ಭಾರತ ಮಾತೆಯಲ್ಲಿ ಲೀನನಾಗುತ್ತಾನೆ. ಈ ಕ್ರಾಂತಿಕಾರಿ ಸ್ವತಂತ್ರ ಸೇನಾನಿ ಮತ್ತಾರು  ಅಲ್ಲ ಜತೀಂದ್ರನಾಥ ಮುಖರ್ಜಿ. ಮಾನವೀಯತೆ ಹಾಗೂ ಸಹಾನುಭೂತಿ ಮೇರೆದ ಅಧಿಕಾರಿಯ ಹೆಸರು ಕಿಲ್ಬಿ.

ಜತಿನ್ ಮುಖರ್ಜಿ ಡಿಸೆಂಬರ್ ೭ ೧೮೭೯ರಲ್ಲಿ ಬಂಗಾಳದ ಕೋಯ ಗ್ರಾಮದ ಶರತ್ ಶಶಿ ಹಾಗೂ ಉಮೇಶ್ ಚಂದ್ರ ಮುಖರ್ಜಿ ದಂಪತಿಗಳಿಗೆ ಜನಿಸಿದರು.ಇವರು ಬಾಲಕರಾಗಿದ್ದಾಗ ತಮ್ಮ ಗ್ರಾಮಕ್ಕೆ ನುಗ್ಗಿದ್ದ ಹುಲಿಯ ಜೊತೆ ಹೋರಾಡಿ ಹುಲಿಯನ್ನು ಕೊಂದಿದ್ದರು ಹಾಗಾಗಿ ಭಾಗ್(ಹುಲಿ) ಜತಿನ್ ಎಂದು ಬಾಲಕರಾಗಿದ್ದಾಗಲೇ ಪ್ರಸಿದ್ದರಾಗಿದ್ದರು. ಐದನೇ ವಯಸ್ಸಿನಲ್ಲಿದ್ದಾಗ ಜತೀನ್ ತನ್ನ ತಂದೆಯನ್ನು ಕಳೆದುಕೊಂಡನು. ಬಾಲ್ಯದಲ್ಲೇ ಅವರ ತಾಯಿಯೂ ಹೇಳುತ್ತಿದ್ದ ರಾಮಾಯಣ , ಮಹಾಭಾರತದ ವೀರರ ಕಥೆಗಳು ಬಾಲಕನ ಮೇಲೆ ಅಗಾಧ ಪರಿಣಾಮ ಬೀರಿದವು. ತಂದೆ ಮರಣದ ಸ್ವಲ್ಪ ಸಮಯದ ನಂತರ ಅವರ ತಾಯಿಯು ಸಹ ಮರಣ ಹೊಂದಿದರು ಹಾಗಾಗಿ ಜತೀನ ಅಕ್ಕನ  ಆಶ್ರಯದಲ್ಲೇ ಬೆಳೆದನು , ಅವನ ಅಕ್ಕ ವ್ಯಾಯಾಮ, ಲಾಟಿ  ಹಾಗೂ ವಿವಿಧ ಯುದ್ದ ವಿದ್ಯೆಗಳಲ್ಲಿ ತರಬೇತಿ ಕೊಡಿಸಿದಳು. ವಿದ್ಯೆಯಲ್ಲಿ ಮುಂದಿದ್ದ ಜತೀನ್ ಮುಂದೆ ಎಲ್ಲ ವಿದ್ಯೆಗಳಲ್ಲೂ ಸಮಕಾಲೀನವರಿಗಿಂತ ಮುಂದೆ ಬೆಳೆದು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಂಡನು.

ಗೋದೈ  ನದಿಯು ಪೊರ್ವ ಬಂಗಾಳದ ಪದ್ಮ ನದಿಯ ಉಪನದಿಯಾಗಿದ್ದು ಆಂಗ್ಲ ಸರ್ಕಾರ ಭಾರತೀಯರನ್ನು ಬಳಸಿ ಈ ನದಿಗೆ ಸೇತುವೆ ಕಟ್ಟುವ ಯೋಜನೆ ನಿರಂತರ ಮಾಡುತ್ತಲೇ ಇತ್ತು ಆದರೆ ನದಿಯ ಪ್ರವಾಹಕ್ಕೆ ಪ್ರತಿ ಬಾರಿ ಸೇತುವೆ ಯೋಜನೆ ಮುಕ್ತಾಯವಾಗದೇ ಭಾರತೀಯರು ಹಿಂದಿರುಗುತ್ತಿದ್ದರು. ಕಡೆಗೆ ಆಂಗ್ಲ ಸರ್ಕಾರ "ಈ ಸಲ ಹಿಮ್ಮೆಟ್ಟಿ ಬಂದರೆ ನಿಮ್ಮನ್ನು ಕೊಂದುಹಾಕುತ್ತೇವೆ ." ಎಂದು ಭಾರತೀಯರಿಗೆ ಎಚ್ಚರಿಸಿತು. ಆದರೆ ಪ್ರಕೃತಿಯ ಮುಂದೆ ಭಾರತೀಯರು ನಿಲ್ಲಲಾರದೇ ಮತ್ತೆ ಹಿಂದೇಟು ಹಾಕತೊಡಗಿದರು. ಇದನ್ನು ಕಂಡ ಆಂಗ್ಲ ಅಧಿಕಾರಿಗಳು ಅವರ ಮೇಲೆ ಗುಂಡು ಹಾರಿಸಿ ಹನ್ನೆರಡು ಮಂದಿಯನ್ನು ಕೊಂದುಹಾಕಿದರು. ಈ ಸನ್ನಿವೇಶ ಜತೀನ್  ಮನದ ಮೇಲೆ ಅಗಾಧ ಪರಿಣಾಮ ಬೀರಿತು.

ಅತಿ ಚಿಕ್ಕವಯಸ್ಸಿನಲ್ಲಿ ಜತೀನ್ ಸಿಸ್ಟರ್ ನಿವೇದಿತಾ ಅವರ ಅನುಯಾಯಿಯಾದನು, ಮುಂದೆ ನಿವೇದಿತಾ ಅವರು ಸ್ವಾಮಿ ವಿವೇಕಾನಂದರ ಪರಿಚಯ ಮಾಡಿಸಿದರು. ಶ್ರೀ ಅರವಿಂದರು ಜತೀನನಲ್ಲಿದ್ದ ದೇಶಾಭಿಮಾನ, ಸಂಘಟನಾ ಚತುರತೆ ಹಾಗೂ ಅಪ್ರತಿಮ ಶೌರ್ಯವನ್ನು ಕಂಡು  ದೇಶವನ್ನು ಸ್ವತಂತ್ರಗೊಳಿಸುವ ಕ್ರಾಂತಿಕಾರಿ ಚಳುವಳಿಯ ಕಡೆಗೆ ಮಾರ್ಗದರ್ಶನ ನೀಡಿದರು.

ಬಂಗಾಳದ ವಿಭಜನೆ ಈ ಕ್ರಾಂತಿಕಾರಿ ಚಳುವಳಿಗೆ ಮುನ್ನುಡಿ ಬರೆಯಿತು ಎಂದರೆ ತಪ್ಪಾಗಲಾರದು, ಖುದೀರಾಂ ಬೋಸ್ ಮತ್ತು ಪ್ರಫುಲ್ಲಾ ಚಾಕಿ ಹಾಗೂ ಹಲವಾರು ದೇಶಭಕ್ತರು ದೇಶಕ್ಕಾಗಿ ಪ್ರಾಣತೆತ್ತರು.  ಜತೀನ್ ಹಾಗೂ ಮಾನವೇಂದ್ರನಾಥ್ ಇಬ್ಬರು ಸೇರಿ ಆಂಗ್ಲರ ಸೈನಿಕರಲ್ಲಿಯೇ ಅಸಮಾಧಾನ ಹುಟ್ಟಿಸಿ ಸರ್ಕಾರದ ವಿರುದ್ದ ತಿರುಗಿಬೀಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದನ್ನು ಅರಿತ ಆಂಗ್ಲ ಸರ್ಕಾರ ಈ ಕೃತ್ಯವನ್ನು ಮಾಡಿದವರವನ್ನು ಹುಡುಕಲು ಆರಂಭಿಸಿದರು. ಕಡೆಗೆ ಜತೀನ್ನ  ಒಬ್ಬ ಅನುಯಾಯಿ ಸರ್ಕಾರಿ ಸಾಕ್ಷಿಯಾದ ಆಗ ಎಲ್ಲ ಕೃತ್ಯಗಳಿಗೂ ಜತಿನ್ ಕಾರಣನೆಂದು ಸರ್ಕಾರ ಬಂಧಿಸಿ ಹದಿನೈದು ತಿಂಗಳು ಜೈಲಿನಲ್ಲಿ ನರಕಯಾತನೆಯನ್ನು ನೀಡಿದರೂ ಯಾವುದಕ್ಕೂ ಜಗ್ಗಲಿಲ್ಲ , ಕಡೆಗೆ ಜತಿನ್ ವಿರುದ್ದ ಸಾಕ್ಷ್ಯವೇ ಇಲ್ಲದೆ ಜೈಲಿನಿಂದ ಬಿಡುಗಡೆ ಮಾಡಿದರು.

ಜೈಲಿನಿಂದ ಹೊರಬರುತ್ತಿದ್ದಂತೆ  ಜತೀನ್ ಜರ್ಮನಿ ಹಾಗೂ ರಷ್ಯಾ ದೇಶಗಳೊಡನೆ ಸಂಪರ್ಕ ಬಳಸಿ ಸ್ವತಂತ್ರಗೊಳಿಸುವ ಕಾರ್ಯಕ್ಕೆ ಮುಂದಾದ , ಶಸ್ತ್ರಾಸ್ತ್ರ ಖರೀದಿಸಿ, ತನ್ನ ಅನುಯಾಯಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ತಲ್ಲೀನನಾದರು. ೧೯೧೫ ಫೆಬ್ರವರಿ ೨೧ಕ್ಕೆ ಪಂಜಾಬಿನಲ್ಲಿ ಕ್ರಾಂತಿಕಾರಿ ಚಳುವಳಿಯನ್ನು ಆರಂಭಿಸಬೇಕು ಎಂದು ನಿರ್ಧರಿಸಿದರು ಆದರೆ ಆಂಗ್ಲ ಸರ್ಕಾರಕ್ಕೆ ಈ ಗುಪ್ತ ಮಾಹಿತಿ ಹೋಗಿ ಈ ಚಳುವಳಿ ಹಿಂದೆ ಇದ್ದವರನೆಲ್ಲ ಬಂಧಿಸಿದರು, ಕೆಲವರನ್ನು ಅಂಡಮಾನಿನ ಸೆರೆಮನೆಗೆ ಉಳಿದವರಿಗೆ  ಗಲ್ಲಿಗೆರಿಸಿದರು. ಇದರಿಂದ ಚಳುವಳಿ ಹತ್ತಿಕ್ಕಬಹುದು ಎಂದು ಆಂಗ್ಲರು ಅಂದಾಜಿಸಿದರು ಆದರೆ ಇದರಿಂದ ಚಳುವಳಿ ಮತ್ತೆ ಉಗ್ರ ಸ್ವರೂಪ ಪಡೆಯಿತು. ಬಂಗಾಳದಲ್ಲಿ ಕ್ರಾಂತಿಕಾರಿ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ಒರಿಸ್ಸಾದ ಬಲಸೋರಿಗೆ ಆಂಗ್ಲ ಅಧಿಕಾರಿಗಳು ಯುನಿವರ್ಸಲ್ ಎಂಪೋರಿಯಮ್ ಸಂಸ್ಥೆಯನ್ನು ಶೋಧಿಸಿದರು ಆದರೆ ಏನು ಸಿಗದೇ ನಿರಾಶಾರದರೂ ಕಡೆಗೆ ಒಂದು ಸಣ್ಣ ಚೀಟಿಯೊಂದರಲ್ಲಿದ್ದ ಕಾಫ್ಟಿಪಡಾ   ಎಂಬ ಮಾಹಿತಿ ಆದರಿಸಿ ಕಾಫ್ಟಿಪಡಾ ಕಡೆಗೆ ಮುನ್ನುಗಿದರು.

ಜತಿನ್ ಹಾಗೂ ಅವನ ಸಂಗಡಿಗರನ್ನು ಹುಡುಕುವ ಸಲುವಾಗಿ ಹಲವಾರು ಕಡೆ ಶೋಧಿಸಿದರು, ಆದರೆ ಇವರ ಬರುವಿಕೆಯನ್ನು ಮುಂಚೆಯೇ ಅರಿತಿದ್ದ ಜತೀನ್ ತಕ್ಷಣವೇ ಯಾವ ಮಾಹಿತಿಯು ಸಿಗದಂತೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದನು.  ಕಡೆಗೆ ಆಂಗ್ಲ ಸರ್ಕಾರ ಪೊಲೀಸರನ್ನು ಎಲ್ಲಡೇ ಕಳುಹಿಸಿ ಹಳ್ಳಿಗಳಿಗೆ ಡಕಾಯಿತರು ಬರುತ್ತಿದ್ದಾರೆ ಇವರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡಲಾಗುವುದು ಎಂದು ಸಂದೇಶ ಸಾರಿ ಕಾಫ್ಟಿಪಡಾ ಸುತ್ತಲೂ ಭಾರಿ ಕಾವಲು ಹಾಕಿದರು. ಜತೀನ್ ಹಾಗೂ ಅವನ ಸಂಗಡಿಗರು ಅಲ್ಲಿಂದ ತಪ್ಪಿಸಿಕೊಂಡು ಹೊರಟರು ಆದರೆ ಪೊಲೀಸರಿಂದ ತಪ್ಪಿಸಿಕೊಂಡರು ಜನರ ಮುಂದೆ ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ ಕಾರಣವಿಷ್ಟೆ ಪೊಲೀಸರು ಅವರನ್ನು ಭಯಂಕರ ಡಕಾಯಿತರು ಎಂದು ಆಗಾಗಲೇ ಬಿಂಬಿಸಿದ್ದರು. ಕಾಡುಮೇಡುಗಳನ್ನು ಅಲೆಯುತ್ತ ಸುಸ್ತಾಗಿ ಬುದ್ದಗಂಗಾ ಎಂಬ ನದಿಯ ತೀರಕ್ಕೆ ಜತಿನ್ ಅವರ ಗುಂಪು ಬಂದಿತು , ಅಲ್ಲಿದ್ದ ಅಂಬಿಗನಿಗೆ ನಮ್ಮನ್ನು ನದಿ ದಾಟಿಸಬೇಕೆಂದು ಮನವಿ ಮಾಡಿದಾಗ, ಅಂಬಿಗನಿಗೆ ಅನುಮಾನ ಬಂದು ಡಕಾಯಿತರು ಎಂದು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾನೆ. ತಕ್ಷಣವೆ ಹಳ್ಳಿಯ ಜನರೆಲ್ಲ ಅವರನ್ನು ಸುತ್ತುವರೆಯುತ್ತದೆ. ಆಗ ನಾವು ಡಕಾಯಿತರಲ್ಲವೆಂದು ಜತಿನ್ ಮನವಿ ಮಾಡುತ್ತಾನೆ, ಆಗ ಹಳ್ಳಿಯವನೊಬ್ಬ ಜತೀನನ  ಸಂಗಡಿಗನನ್ನು ಹಿಡಿಯಲು ಮುನ್ನುಗ್ಗಿದಾಗ ಜತೀನ್  ಸಂಗಡಿಗ ಅವನ ಮೇಲೆ  ಗುಂಡು ಹಾರಿಸುತ್ತಾನೆ ಅಲ್ಲಿಗೆ ಜನರು ಸುಮ್ಮನಾಗುತ್ತಾರೆ . ಅಲ್ಲಿಂದ ಮುಂದೆ ತಪ್ಪಿಸಿಕೊಂಡು ಹೋಗುತ್ತಾರೆ ಆದರೆ ದೇಹದ ಆಯಾಸ ಅವರೆಲ್ಲವರನ್ನು ಹಿಮ್ಮೆಟ್ಟಿಸುತ್ತದೆ. ಸಶಸ್ತ್ರಧಾರಿ ಪೊಲೀಸರು ಅವರಿರುವ ಸ್ಥಳಕ್ಕೆ ಆಗಮಿಸುತ್ತಾರೆ. ಕಡೆಯ ಗುಂಡಿರುವವರೆಗೂ ಇಬ್ಬರಿಗೂ ಭಯಂಕರ ಕಾಳಗ ನಡೆದು ಆಂಗ್ಲರ ಕೈ ಮೇಲಾಗುತ್ತದೆ. ಈ ಕಾಳಗದಲ್ಲಿ ಜತೀನನ ದೇಹಕ್ಕೆ ಗುಂಡುಗಳು ತಗುಲುತ್ತವೆ  ಯುದ್ದ ಮಾಡುತ್ತಲೇ ಸೆರೆಸಿಗುತ್ತಾನೆ. ಮುಂದೆ ಆಸ್ಪತ್ರೆಗೆ ಸೇರಿಸಲಾಗಿ ಚಿಕಿತ್ಸೆ  ಫಲಕಾರಿಯಾಗದೆ  ಜತೀಂದ್ರನಾಥ ಮುಖರ್ಜಿಯ ಆತ್ಮ ಭರತಮಾತೆಯಲ್ಲಿ ಲೀನವಾಗುತ್ತದೆ. ಜತೀಂದ್ರನಾಥ ಮುಖರ್ಜಿಯ ಸಾಹಸ, ತ್ಯಾಗ ಬಲಿದಾನವನ್ನು ನಾವೆಲ್ಲ ಸ್ಮರಿಸಬೇಕು.

ಕೊಡುಗೆದಾರರು : ಮಧು ಚಂದ್ರ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate