অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊಳ್ಳೇಗಾಲ ತಾಲ್ಲೂಕು ಜಾತ್ರೆಗಳು ಮತ್ತು ಹಬ್ಬಗಳು

ಕೊಳ್ಳೇಗಾಲ ತಾಲ್ಲೂಕು ಜಾತ್ರೆಗಳು ಮತ್ತು ಹಬ್ಬಗಳು

ಪ್ರೊ.ಮಹದೇವ ಶಂಕನಪುರ

ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು

ಕೊಳ್ಳೇಗಾಲ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಪ್ರದೇಶ. ವಿಸ್ತೀರ್ಣದ ದೃಷ್ಟಿಯಲ್ಲಿ ಇದು ದೊಡ್ಡ ತಾಲ್ಲೂಕೂ ಹೌದು. ಬಹುಕಾಲ ಈ ತಾಲ್ಲೂಕು ತಮಿಳುನಾಡಿಗೆ ಸೇರಿತ್ತು, ಹೀಗಾಗಿ ವಿಭಿನ್ನ ಭಾಷೆ, ಜನಾಂಗ ಸಂಸ್ಕೃತಿಗಳ ಹಿನ್ನಲೆಯನ್ನು ಹೊಂದಿದೆ. ಇಲ್ಲಿ ದ್ರಾವಿಡ ಸಂಸ್ಕೃತಿಯ ಛಾಪು ಪ್ರಧಾನವಾಗಿ ಎದ್ದು ಕಾಣಿಸುತ್ತದೆ.

ಕೊಳ್ಳೇಗಾಲ ತಾಲ್ಲೂಕು ಭೌಗೋಳಿಕವಾಗಿ ಕಾವೇರಿ ನದಿ, ಬೆಟ್ಟಗುಡ್ಡಗಳ ಮಲೆಗಳಿಂದ, ಕಾಡು ಕಣಿವೆಗಳಿಂದ ರೂಪಿತವಾದದ್ದು ಹಲವು ಸಾಧು, ಸಂತರು, ಸಿದ್ಧಪುರುಷರು ನೆಲೆ ನಿಲ್ಲಲು ಪ್ರೇರೇಪಿಸಿದೆ. ಮೈಸೂರು ಸೀಮೆಯಲ್ಲಿ ಕತ್ತಲರಾಜ್ಯವೆಂದು ಜನಪದೀಯವಾಗಿ ಕರಸಿಕೊಳ್ಳುವ ಈ ತಾಲ್ಲೂಕಿನ ಹಲವು ಕಡೆಗಳಲ್ಲಿ ಇದ್ದ ಶರಣರು ಈ ಭಾಗಕ್ಕೆ ಬೆಳಕಾಗಿ ಬಂದಿದ್ದಾರೆ.

ಈ ತಾಲ್ಲೂಕಿನಲ್ಲಿ ಹೆಸರಾಂತ ಮಹಾಸಂತರು ತಿರುಗಾಡಿ, ವಾಸಿಸಿ, ಐಕ್ಯರಾಗಿ ಈ ಭಾಗದ ಸಂಸ್ಕೃತಿ, ಧಾರ್ಮಿಕತೆಯ ವೈಶಿಷ್ಟ್ಯಕ್ಕೆ ಕಾರಣರಾಗಿದ್ದಾರೆ. ಮಂಟೇಸ್ವಾಮಿ, ಸಿದ್ಧಪ್ಪಾಜಿ, ಮಲೆ ಮದೇಶ್ವರ ಮೊದಲಾದ ಶರಣ ಸಂತರು ತಿರುಗಾಡಿದ, ವಾಸಿಸಿದ, ನೆಲೆ ನಿಂತ ಕುರುಹುಗಳಿರುವ ತಾಣಗಳು ತಾಲ್ಲೂಕಿನ ತುಂಬಾ ಸಿಗುತ್ತವೆ. ಕುರುಬನಕಟ್ಟೆ, ಚಿಕ್ಕಲ್ಲೂರು, ಹರಳೆ, ಕುಂತೂರುಬೆಟ್ಟ, ಮುದ್ದುಮಲೆ, ಮಲೆಮಾದೇಶ್ವರ ಬೆಟ್ಟ, ಹೊಂಡರಬಾಳು ಸಿದ್ದರ ಬೆಟ್ಟ ಮೊದಲಾದ ಕಡೆಗಳಲ್ಲಿ ಇಂದಿಗೂ ಅವರ ಹೆಸರಿನ ಗದ್ದಿಗೆಗಳಲ್ಲಿ ಮಹತ್ವದ ಜಾತ್ರೆಗಳು, ಹಬ್ಬಗಳು ನಡೆಯುತ್ತವೆ.

ಮಲೆಮಾದೇಶ್ವರ ಜಾತ್ರೆ : ಕರ್ನಾಟಕದ ಮೈಸೂರು ಸೀಮೆಯ ಅತ್ಯಂತ ಪ್ರಮುಖ ಜಾತ್ರೆಗಳಲ್ಲಿ ಮಲೆಮಾದೇಶ್ವರ ಜಾತ್ರೆ ಒಂದು. ಮಾದೇಶ್ವರ ಹಳೇ ಮೈಸೂರು ಪ್ರಾಂತ್ಯದ ಜನಪ್ರಿಯ ದೈವ. ಈ ಪ್ರಾಂತ್ಯದ ಬಹುತೇಕ ಎಲ್ಲಾ ಜನರು ಪಡೆದುಕೊಳ್ಳುವ ನಿರ್ದಿಷ್ಟ ಸಮುದಾಯಗಳನ್ನು ಒಕ್ಕಲು ಪಡೆದಿರುವ ಮಾದೇಶ್ವರನ ದೇವಾಲಯ (ಐಕ್ಯ ಗುಡಿ) ಮಾದೇಶ್ವರ ಬೆಟ್ಟದಲ್ಲಿದೆ. ಮಲೆಮಾದೇಶ್ವರನ ಶಿಶು ಮಕ್ಕಳಾಗಿ ಮಣಿಧಾರಣೆ ಮಾಡಿಸಿಕೊಳ್ಳುವವರನ್ನು 'ಮಾದೇಶ್ವರ ದೇವರ ಗುಡ್ಡರು ಅಥವಾ ''ಕಂಸಾಳೆ ಗುಡ್ಡರು' ಎಂದು ಕರೆಯುತ್ತಾರೆ. ಇವರು ಮಲೆಮಾದೇಶ್ವರನ ಜೀವನ, ಸಾಧನೆಗಳನ್ನು ಒಳಗೊಂಡಿರುವ ಮಲೆ ಮಾದೇಶ್ವರ ಮೌಖಿಕ ಕಾವ್ಯವನ್ನು ಹಾಡುತ್ತಾರೆ. ಬಹುತೇಕ ಇವರು ದಲಿತರು, ಹಿಂದುಳಿದವರು. ಮಲೆಮಾದೇಶ್ವರ ಚಾರಿತ್ರಿಕ ವ್ಯಕ್ತಿಯಾಗಿದ್ದು, ಈತ ಶ್ರೀಶೈಲದಿಂದ ದಕ್ಷಿಣ ಭಾಗದಲ್ಲಿನ ಮೈಸೂರು ಸೀಮೆಯ ಕತ್ತಲ ರಾಜ್ಯಕ್ಕೆ ಬಂದು ಜನ ಕಲ್ಯಾಣ ಮಾಡಿ ಇಲ್ಲೆ ನೆಲೆ ನಿಂತವನು. ಹಲವು ಶಾಸನಗಳು ಸಾಹಿತ್ಯ ಕೃತಿಗಳು ಈತನನ್ನು ಕುರಿತು ಉಲ್ಲೇಖಿಸುತ್ತವೆ. ಕ್ರಿ.ಶ. 1838ರಲ್ಲಿದ್ದ ದೇವಚಂದ್ರನ ರಾಜಾವಳಿ ಕಥಾಸಾರ ಈತ ಮಾದಿಗ ಸಮುದಾಯಕ್ಕೆ ಸೇರಿದವನೆಂದು ಹೇಳುತ್ತದೆ. ಹಾಗೆಯೇ ಈತ ವೀರಶೈವನೆಂಬ ವಾದವೂ ಇದೆ. 15-16ನೇ ಶತಮಾನಗಳ ನಡುವೆ ದೊಡ್ಡ ಸಾಮಾಜಿಕ, ಸಾಂಸ್ಕೃತಿಕ, ಆಂದೋಲನ ಮಾಡಿದ ಮಾದೇಶ್ವರ ಈ ಭಾಗದ ಹಲವಾರು ಬುಡಕಟ್ಟು, ದಲಿತ, ಹಿಂದುಳಿದ ಸಮುದಾಯಗಳನ್ನು ಒಕ್ಕಲಾಗಿ ಪಡೆದು ತನ್ನದೇ ಆದ ವಿಶಿಷ್ಟ ಪರಾಯ ಪಂಥ ಸೃಷ್ಟಿಸಿದ್ದಾರೆ. ಮಲೆಮಾದೇಶ್ವರ ಬೆಟ್ಟದ ಜಾತ್ರೆ ಕರ್ನಾಟಕದಾದ್ಯಂತ ಜನಪ್ರಿಯ, ಚಿರಪರಿಚಿತ. ತಿರುಪತಿ, ಶಬರಿಮಲೆ ಯಾತ್ರೆಗಳಷ್ಟೆ ಈ ಯಾತ್ರೆ ಮಹತ್ವದ್ದು ಯುಗಾದಿ, ಶಿವರಾತ್ರಿ ದೀಪಾವಳಿ, ಗೌರಿ ಮೊದಲಾದ ತಿಂಗಳು ವಿಶೇಷ ಜಾತ್ರೆ ನಡೆಯುತ್ತದೆ. ಲಕ್ಷಾಂತರ ಜನ ಬಂದು ಹೋಗುತ್ತಾರೆ. ಮಿಕ್ಕಂತೆ ಪ್ರತಿನಿತ್ಯವೂ ಪೂಜೆಗೆ ಪರಿಷೆ ಬರುತ್ತದೆ.

“ಮಲೆಮಾದೇಶ್ವರ ಕಾವ್ಯ" ಕನ್ನಡದ ಅತ್ಯಂತ ಪ್ರಮುಖ ಜನಪದ ಕಾವ್ಯವಾಗಿದ್ದು ಇದು ಕೊಳ್ಳೇಗಾಲ ತಾಲ್ಲೂಕು ಹಾಗೂ ಚಾಮರಾಜನಗರ ಜಿಲ್ಲೆಯ ಒಂದು ದೊಡ್ಡ ಕೊಡುಗೆಯಾಗಿದೆ. ಫಿನ್ಲ್ಯಾಂಡಿನ 'ಕಲೆವಾಲ' ಜನಪದ ಕಾವ್ಯ ವಿಶ್ವದ ಮೊದಲ ಹಾಗೂ ಬಹುದೊಡ್ಡ ಕಾವ್ಯ ಎನಿಸಿದರೆ ಮಲೆಮಾದೇಶ್ವರ ಕಾವ್ಯ ಎರಡನೆಯ ಸುದೀರ್ಘ ಕಾವ್ಯ ಎನಿಸಿರುವುದು ಹೆಮ್ಮೆಯ ಸಂಗತಿ.

ಮಲೆಮಾದೇಶ್ವರ 12ನೇ ಶತಮಾನದ ವಚನ ಚಳವಳಿಯಂತೆ 15-16ನೇ ಶತಮಾನದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಯನ್ನು ತಂದ ಸಿದ್ದಪುರುಷ. ಈತ ದಲಿತರು, ಬುಡಕಟ್ಟು, ಸೋಲಿಗ, ಹಿಂದುಳಿದ ಜನಾಂಗಗಳ ಸುಧಾರಣೆ ಹಾಗೂ ಅಭಿವೃದ್ಧಿ ಮತ್ತು ಬದಲಾವಣೆಗೆ ಶ್ರಮಿಸಿದಾತ. ಈ ಎಲ್ಲಾ ಸಮುದಾಯಗಳು ಈತನನ್ನು ದೈವವಾಗಿ ಪೂಜಿಸುತ್ತಾರೆ, ಕಂಪಣಬೇಡರು ಮಲೆಮಾದೇಶ್ವರ ಗುಡಿಯ ತಂಬಡಿ (ಪೂಜಾರಿ)ಕೆ ಮಾಡುವರಾಗಿದ್ದಾರೆ. ಮಲೆಮಾದೇಶ್ವರ ಬೆಟ್ಟದಲ್ಲಿ ವರ್ಷವಿಡೀ ಜಾತ್ರೆ ನಡೆದೇ ಇರುತ್ತದೆ.

ಚಿಕ್ಕಲ್ಲೂರು ಜಾತ್ರೆ : ಕೊಳ್ಳೇಗಾಲ ತಾಲ್ಲೂಕಿನ ಜಾತ್ರೆಗಳಲ್ಲಿ ಚಿಕ್ಕಲ್ಲೂರು ಜಾತ್ರೆ ಕೂಡ ಪ್ರಮುಖವಾದುದು. ಕೊಳ್ಳೆಗಾಲ ಪಟ್ಟಣದಿಂದ 26 ಕಿ.ಮೀ ದೂರದಲ್ಲಿ ಚಿಕ್ಕಲ್ಲೂರಿದೆ. ಇಲ್ಲಿಂದ 6 ಕಿ.ಮೀ ದೂರಲ್ಲಿ ಕಾವೇರಿ ನದಿ ಹರಿಯುತ್ತದೆ. ಪ್ರಸಿದ್ದ ಮುತ್ತತ್ತಿಗೂ ಹತ್ತಿರವಿದೆ. ಮಲೆಮಾದೇಶ್ವರ ಪರಂಪರೆಯಷ್ಟೆ ಪ್ರಮುಖವಾದ ಹಳೇ ಮೈಸೂರು ಪ್ರಾಂತ್ಯದ ಮತ್ತೊಂದು ಪರಂಪರೆ ಎಂದರೆ ಮಂಟೇಸ್ವಾಮಿ ಪರಂಪರೆ, ಚಿಕ್ಕಲ್ಲೂರು ಜಾತ್ರೆ ಮಂಟೇಸ್ವಾಮಿ ಪರಂಪರೆಗೆ ಸೇರಿದ್ದು ಮಾದೇಶ್ವರರ ಸಮಕಾಲೀನರೆಂಬಂತೆ ತಿಳಿದುಬರುವ ಮಂಟೇಸ್ವಾಮಿಗಳು ಸಹ 15-16ನೇ ಶತಮಾನದಲ್ಲಿದ್ದ ಸಿದ್ದಪುರುಷ. ಇವರು ಉತ್ತರ ಕರ್ನಾಟಕದ ಕೊಡೇಕಲ್ಲು ಬಸವಣ್ಣನ ಶಿಷ್ಯರಾಗಿದ್ದು, ಕಾಯಸಿದ್ದಿ ಪಡೆದು ಅಲ್ಲಿಂದ ಮೈಸೂರು ಸೀಮೆಗೆ ಬಂದವರು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಬೊಪ್ಲೇಗೌಡನಪುರದಲ್ಲಿ ಇವರು ಐಕ್ಯವಾದರು. ರಾಚಪ್ಪಾಜಿ, ದೊಡ್ಡಮ್ಮ ತಾಯಿ, ಚನಾಜಮ್ಮ, ಸಿದ್ದಪ್ಪಾಜಿ ಫಲಾರದಯ್ಯ, ಲಿಂಗಯ್ಯ, ಚನ್ನಯ್ಯ ಮೊದಲಾದವರು ಮಂಟೇಸ್ವಾಮಿಗಳ ಶಿಷ್ಯರು. ಗುರುವಿನ ಅಪೇಕ್ಷೆಯಂತೆ ಸಿದ್ದಪ್ಪಾಜಿ ಹಲಗೂರು ಪಾಂಚಾಳರಿಂದ ಕಬ್ಬಿಣ ಭಿಕ್ಷೆ ತಂದು ಬೊಪ್ಪೆಗೌಡನ ಪುರದಲ್ಲಿ ಅವರಿಗೆ ಮಠಮನೆ ಮಾಡುತ್ತಾರೆ. ನಂತರ ಗುರುಗಳ ಅಪ್ಪಣೆಯಂತೆ ಚಿಕ್ಕಲ್ಲೂರಲ್ಲಿ ಬಂದು ನೆಲೆಸುತ್ತಾರೆ.

ವರ್ಷಕ್ಕೆ ಒಮ್ಮೆ ಜನವರಿ ಫೆಬ್ರವರಿಯಲ್ಲಿ ಚಿಕ್ಕಲ್ಲೂರು ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ಬೊಪ್ಪೆಗೌಡನಪುರದ ಶ್ರೀ ಮಂಟೇಸ್ವಾಮಿ ಮಠದ ಗುರುಗಳು ಅಥವಾ 'ಸ್ವಾಮಿಗಳು(ಬುದ್ಧಿಯವರು) ಜಾತ್ರೆಯನ್ನು ನಡೆಸಿಕೊಡುತ್ತಾರೆ. ಮೈಸೂರು ಒಡೆಯರ ಮೂಲಕ್ಕೆ ಸೇರಿದ ಇವರು ಈ ಪರಂಪರೆಯ ಗುರುಸ್ಥಾನದಲ್ಲಿದ್ದಾರೆ. ಮೈಸೂರು ಒಡೆಯರೂ ಮಂಟೇಸ್ವಾಮಿ ಒಕ್ಕಲಾಗಿದ್ದು, ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪೆಗೌದನಪುರದ ಜಾತ್ರೆಗಳಿಗೆ ಬಂದು ಹೋಗುತ್ತಿದ್ದರೆಂದೂ ತಿಳಿದುಬರುತ್ತದೆ. ಇಂದಿಗೂ ಈ ಗುರುಮಠದ ಜೊತೆ ಸಂಬಂಧವಿದೆ.

ಸಿದ್ದಾಪ್ಪಾಜಿ ಮಂಟೇಸ್ವಾಮಿ ಶಿಷ್ಟರಾದರಂತೆ ಒಕ್ಕಲಾಗುವ ಸಮುದಾಯಗಳ ಗಂಡು ಮಕ್ಕಳಿಗೆ 'ನೀಲಗಾರ ದೀಕ್ಷೆ' ಕೊಡಿಸುವ ಪದ್ಧತಿ ಇದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಹೆಸರಿನಲ್ಲಿ ಮಣಿಧಾರಣೆ ಮಾಡಿಸಿಕೊಳ್ಳುವ ಇವರನ್ನು 'ನೀಲಗಾರ'ರು ಎನ್ನಲಾಗುತ್ತದೆ. ಇವರು ತಂಬೂರಿ ನುಡಿಸುತ್ತ ಮಂಟೇಸ್ವಾಮಿ ಮತ್ತವರ ಶಿಷ್ಯರ ಜೀವನ, ಸಾಧನೆಗಳನ್ನು ಜನಪದ ಕಾವ್ಯವಾಗಿ ಹಾಡುತ್ತಾರೆ. ಅದೇ ಮಂಟೇಸ್ವಾಮಿ ಕಾವ್ಯ, ಧರೆಗೆ ದೊಡ್ಡವರ : ಕಥೆ, ವಚನ ಎಂದು ಕರೆಯಲ್ಪಡುತ್ತದೆ.

ಐದು ದಿನಗಳ ಚಿಕ್ಕಲ್ಲೂರು ಜಾತ್ರೆಯಲ್ಲಿ ಮೊದಲ ದಿನ ಚಂದ್ರ ಮಂಡಲ, ಎರಡನೇ ದಿನ ದೊಡ್ಡವರ ಸೇವೆ, ಮೂರನೇ ದಿನ ಮುಡಿಸೇವೆ, ನಾಲ್ಕನೇ ದಿನ ಸಿದ್ದರ ಸೇವೆ(ಪಂಕ್ತಿ ಸೇವೆ) ಐದನೇ ದಿನ ಮುತ್ತತ್ತಿರಾಯನ ಸೇವೆಗಳು ನಡೆಯುತ್ತವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಒಳಗೊಂಡು ಹಳೇ ಮೈಸೂರು ಪ್ರಾಂತ್ಯದ ಎಲ್ಲಾ ಭಾಗದ ಲಕ್ಷಾಂತರ ಜನರು ಈ ಜಾತ್ರೆಗೆ ಸೇರುತ್ತಾರೆ. ಮಾದೇಶ್ವರ ಮಾದಿಗ ಮೂಲಕ್ಕೆ ಸೇರಿದವನು ಎಂಬಂತೆ ಮಂಟೇಸ್ವಾಮಿ ಹೊಲೆಯ ಮೂಲಕ್ಕೆ ಸೇರಿದವನು. ಸಿದ್ದಪ್ಪಾಜಿ ಆಚಾರಿ(ಪಾಂಚಾಳ) ಜಾತಿಗೆ ಸೇರಿದವರು ಎಂಬುದಾಗಿ ತಿಳಿದುಬರುತ್ತದೆ. ಗುಲ್ಬರ್ಗಾ ಜಿಲ್ಲೆಯ ಕೊಡೇಕಲ್ಲು ಪ್ರಾಂತ್ಯಕ್ಕೆ ಸೇರಿದ ವೀರಸಂಗಯ್ಯನ 'ನಂದಿ ಆಗಮ ಲೀಲೆ' ಮಂಟೇಸ್ವಾಮಿ ಚಾರಿತ್ರಿಕ ಸಂಗತಿಗಳ ಬಗ್ಗೆ ತಿಳಿಸುತ್ತದೆ.

ಬೂದಬಾಳು ಜಾತ್ರೆ : ಕೊಳ್ಳೆಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ವೆಂಕಟರಮಣ ಸ್ವಾಮಿಯ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆ ಮೊದಲ ದಿನ ತೇರು (ರಥೋತ್ಸವ) ನಡೆಯುತ್ತದೆ. ಎರಡನೇ ದಿನ ವಧೆ ಆಥವಾ ರಾಕ್ಷಸನ ಸಂಹಾರ, ಮೂರನೇ ದಿನ ವಸಂತೋತ್ಸವ (ತೆಷ್ಟೋತ್ಸವ) ನಡೆಯುತ್ತದೆ. ಇದು ಒಂದು ಗ್ರಾಮದೇವತೆಯ ಜಾತ್ರೆಯಂತೆ ಕಂಡರೂ ಇಡೀ ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಮುಖ್ಯವಾಗಿ ಇದು ವೈಷ್ಣವ ಪಂಥದ ಅಥವಾ ನಾರಾಯಣಸ್ವಾಮಿ ಒಕ್ಕಲಿನ ಸಮುದಾಯಗಳು ನಡೆಸುವ ಜಾತ್ರೆ. ವಿವಿಧ ಕಡೆಗಳಿಂದ ಬರುವ ಒಕ್ಕಲಿನವರು ಹಾಗೂ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಸಿಹಿ ಅಡುಗೆ, ಮಾಂಸದ ಅಡುಗೆ ಎರಡನ್ನೂ ಮಾಡಿ ಊಟ ಮಾಡುವ ಪದ್ಧತಿ ಇದೆ. ಈ ಜಾತ್ರೆಯಲ್ಲಿ ಹರಿಕಥೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ದೇವಾಸುರರ ಪುರಾಣಗಳನ್ನು ಹೇಳಿ ಕೊನೆಗೆ ಮಹಿಷಾಸುರ ಅಥವಾ ರಾವಣ ಪ್ರಸಂಗಳನ್ನು ಪ್ರಸ್ತಾಪಿಸಿ ಅವರನ್ನು ಸಂಹರಿಸುವುದು ಒಂದು ದಿನದ ಜಾತ್ರೆಯಾಗಿದೆ. ಕೊನೆ ದಿನ ನಾರಾಯಣಸ್ವಾಮಿಯ ತೆಷ್ಟೋತ್ಸವ ನಡೆಯುತ್ತದೆ.

ಈ ಜಾತ್ರೆಯ ಮೊದಲ ದಿನದ ರಥೋತ್ಸವ ಅತ್ಯಂತ ವಿಜ್ಯಂಭಣೆಯಿಂದ ನಡೆಯುತ್ತದೆ. ಈ ರಥೋತ್ಸವದ ದಿನದ ಅತ್ಯಂತ ಅಕರ್ಷಕ ಕಾರ್ಯಕ್ರಮವೆಂದರೆ ತೇರಿಗೆ ಹಣ್ಣು, ಜವನ ಎಸೆವಷ್ಟೇ ಮುಖ್ಯವಾದದ್ದು ತಮಟೆ ಮೇಳ, ಇದೇ ಗ್ರಾಮದ ಮಾದಿಗ ಜನಾಂಗದ ತಮಟೆ ತಂಡದವರು ಪ್ರದರ್ಶಿಸುವ ತಮಟೆವಾದನ ಮೈನವರೇಳಿಸುವಂತದ್ದು, ಕುಂಚಿಟಿಗಗೌಡರು ಈ ದೇವಸ್ಥಾನ ಪೂಜಾರಿಕೆ ಮಾಡುತ್ತಾರೆ. ಹೊಂಡರಬಾಳು ಜಾತ್ರೆ (ಸಿದ್ದಪ್ಪನ ಬೆಟ್ಟದ ಜಾತ್ರೆ) : ಕೊಳ್ಳೇಗಾಲ ಪಟ್ಟಣಕ್ಕೆ ಎಂಟತ್ತು ಕಿ.ಮೀ ದೂರದ ಹೊಂಡರಬಾಳುಬೆಟ್ಟ ಸಿದ್ದರತಾಣ. ಇಲ್ಲಿ ನಡೆಯುವ ಜಾತ್ರೆಯನ್ನು ಸಿದ್ದಪ್ಪನ ಬೆಟ್ಟದ ಜಾತ್ರೆ ಅಥವಾ ಹೊಂಡರಬಾಳು ಜಾತ್ರೆ ಎನ್ನುತ್ತಾರೆ. ಮೈಸೂರು ದಸರಾ-ನವರಾತ್ರಿ ಉತ್ಸವಕ್ಕೆ ಮುನ್ನ ನಡೆಯುವ ಈ ಜಾತ್ರೆಯಲ್ಲೂ ಚಿಗುರು ಕಡಿಯುವ (ಬನ್ನಿ) ಆಚರಣೆ ಇದ್ದು ಮೈಸೂರು ದಸರಾಕ್ಕೂ ಈ ಜಾತ್ರೆಗೂ ನಂಟಿದೆ ಎನ್ನುತ್ತಾರೆ. ಸುಮಾರು ಒಂದು ವಾರ(7ದಿನ) ನಡೆಯುವ ಈ ಜಾತ್ರೆಯಲ್ಲಿ ರಥೋತ್ಸವ, ಕೊಂಡೋತ್ಸವಗಳು ಮುಖ್ಯ. ಹೊಂಡರಬಾಳಲ್ಲಿ ಪ್ರಾಚೀನವಾದ ದೇವಾಲಯವಿದ್ದು ಅದು ಮಲೆಮಾದೇಶ್ವರ ಹಾಗೂ ವೀರಶೈವ ಗುರುಪರಂಪರೆ ಜೊತೆ ಗುರುತಿಸಿಕೊಳ್ಳುತ್ತದೆ. ಈ ಮಠದ ಗುರುಗಳು ಜಾತ್ರೆಯ ಆಚರಣೆಗಳಲ್ಲಿ ಮುಖ್ಯ ಪಾತ್ರವಹಿಸುತ್ತಾರೆ, ರಥೋತ್ಸವದ ರಾತ್ರಿ ನಡೆಯುವ ಮದ್ದುಗಾರಿಕೆಗೆ (ಪಟಾಕಿ ಸುಡುವುದು) ಹೊಂಡರಬಾಳು ಜಾತ್ರೆ ಹೆಸರುವಾಸಿ. ಹೊಂಡರಬಾಳು ಬೆಟ್ಟದ ಮೇಲಿನ ಸಿದ್ದಪ್ಪನಿಗೆ ಈ ಜಾತ್ರೆ ಆಚರಣೆಗಳು ಅರ್ಪಿತ. ಈ ಸಿದ್ಧಪ್ಪ ಬೇರೆಯಾರು ಅಲ್ಲ ಮರುಳಸಿದ್ದ, ಮರುಳ ಶಂಕರ ದೇವನೇ ಎಂದು ನಂಬಿಕೆ ಇದೆ. ಕೊಳ್ಳೆಗಾಲದ ಸಮೀಪವಿರುವ ಕಾವೇರಿಯಿಂದ ಹೊಸನೀರು ತಂದು ಸಿದ್ದಪ್ಪನ ಮೂರ್ತಿ ಶುಚಿಗೊಳಿಸುವ ಪದ್ಧತಿ ಇದೆ. ಇಂದಿಗೂ ಈ ದೈವಕ್ಕೆ ಮಾದಿಗರದೇ ಮೊದಲ ಪೂಜೆ ಎಂಬುದು ಗಮನಾರ್ಹ. ಮರುಳಸಿದ್ಧನೂ ಮಾದಿಗರ ಮೂಲದವರು.

ಹೊಂಡರಬಾಳು ಬೆಟ್ಟದ ಮೇಲೆ ನೂರಾರು ಕಲ್ಲುಗಳು ನೆಟ್ಟ ಸಮಾಧಿಯ ಅವಶೇಷಗಳಂತಹ ಕುರುಹುಗಳಿವೆ. ಇವು ಶಿಲಾಯುಗದ ಕಾಲಕ್ಕೆ ಸಂಬಂಧಿಸಿದಂತೆ ಕಾಣುತ್ತವೆ. ಈ ಹಿನ್ನಲೆಯಲ್ಲಿ ಹೊಂಡರಬಾಳು ಬೆಟ್ಟ ಪ್ರದೇಶ ಹಾಗೂ ಪರಿಸರದಲ್ಲಿ ಹೆಚ್ಚು ಅಧ್ಯಯನವಾಗಬೇಕಿದೆ. ಹಬ್ಬಗಳು: ಸಾಮಾನ್ಯವಾಗಿ ಪ್ರತಿ ಗ್ರಾಮದಲ್ಲೂ ತಮ್ಮದೇ ವಿಶಿಷ್ಟ ದೇವತೆಗಳಿಗೆ ಸಂಬಂಧಿಸಿದ ಹಬ್ಬಗಳಿರುತ್ತವೆ. ಅವುಗಳಲ್ಲಿ ಗ್ರಾಮದೇವತೆಗಳ ಹಬ್ಬಗಳೇ ಹೆಚ್ಚು ಊರಿನ ಹಿತಕ್ಕಾಗಿ, ಯಜಮಾನನ ರಕ್ಷಣೆಗಾಗಿ, ಶೀಲ ರಕ್ಷಣೆಗಾಗಿ ಇನ್ನಾವುದೋ ಕಾರಣಗಳಿಗಾಗಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀಯರು. ವೀರರು ಗ್ರಾಮದೇವತೆಗಳಾಗಿದ್ದಾರೆ. ಈ ಗ್ರಾಮದೇವತೆಗಳು ಕೆಲವೊಮ್ಮೆ ಚಾರಿತ್ರಿಕ ವ್ಯಕ್ತಿಗಳಾಗಿರುತ್ತಾರೆ. ಕೆಲವೊಮ್ಮೆ ದ್ರಾವಿಡ ಸಂಸ್ಕೃತಿಯ ಮಾತೃದೇವತೆಯ ಪ್ರತಿರೂಪದ ಮುಂದುವರಿಕೆಯು ಆಗಿರುತ್ತಾರೆ. ಕೊಳ್ಳೇಗಾಲ ತಾಲ್ಲೂಕಿನ ಹಬ್ಬಗಳು ಬಹುತೇಕ ಇಂತಹ ಹಿನ್ನಲೆಯನ್ನು ಹೊಂದಿವೆ.

ಪಾಳ್ಳದ ಸೀಗಮಾರಿಹಬ್ಬ (ಬಲಿಹಬ್ಬ): ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ಬಲಿ ಹಬ್ಬ ಅತ್ಯಂತ ವಿಶಿಷ್ಟವಾದ ಹಬ್ಬ, ಇಂದಿನ ಆಧುನಿಕ ಕಾಲಕ್ಕೂ ಹಲವು ಆಶ್ಚರ್ಯಗಳನ್ನು ಹುಟ್ಟಿಸುವ ಹಬ್ಬ ಈ ಹಬ್ಬ ನಡೆಸಲು ತಾಲ್ಲೂಕು ಮತ್ತು ಜಿಲ್ಲಾಡಳಿತದ ಸಹಮತವೂ ಇರಬೇಕು. ತುಂಬಾ ವರ್ಷಗಳ ಅಂತರದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ 5, 10, 15 ವರ್ಷಗಳಿಗೊಮ್ಮೆ ಆಚರಿಸುತ್ತಾರೆ, ಗ್ರಾಮದ ಎಲ್ಲಾ ಸಮುದಾಯಗಳು ಸೇರಿ ನಡೆಸುವ 'ಬಣ್ಣನ್ತರ ಸಭೆ' ಹಬ್ಬ ನಿರ್ಧರಿಸತ್ತದೆ. ಈ ಹಬ್ಬದಲ್ಲಿ ಪ್ರಮುಖವಾಗಿ ಪಾಲ್ಗೊಳ್ಳುವ ಆಚರಣೆ ನಡೆಸುವ ಸಮುದಾಯಗಳು ನಾಯಕರು, ಹೊಲೆಯರು, ಶಿವಾರ್ಚಕರು, ಕುಂಬಾರರು, ಮಡಿವಾಳರು, ಅರಸರು, ಬ್ರಾಹ್ಮಣರು ಮೊದಲಾದವರು. ಈ ಹಬ್ಬ ಹಲವಾರು ವೈಶಿಷ್ಟ ಆಚರಣೆಗಳನ್ನು ಒಳಗೊಂಡಿದೆ.

ಸೀಗಮಾರಮ್ಮ ಗ್ರಾಮದೇವತೆ. ಈ ದೇವತೆ ತಮಿಳುನಾಡಿನಿಂದ ವಲಸೆ ಬಂದಳೆಂದು, ಅವಳ ಶಿಶು ಮಕ್ಕಳು, ಒಕ್ಕಲಿನವರು, ಅವಳಿಗಾಗಿ ಈ ಹಬ್ಬ ನಡೆಸುತ್ತಾರೆ. ಈ ದೇವತೆಯ ಒಕ್ಕಲಿನವರಲ್ಲಿ ತೋಟಿ ವೃತ್ತಿ ಮಾಡುತ್ತಿದ್ದ ಯಬ್ರೆ (ಹೆಬ್ಬರೆ) ಕುಲದ ಹೊಲೆಯರು ಯಬ್ರೆ ಹೊರುತ್ತಾರೆ. ಪರಿವಾರ ನಾಯಕರಲ್ಲಿ ಬಾರುಕರು ಅಥವಾ ಬಾರಿಕೇರಿಯವರು ಕೇಲು ಹೊರುತ್ತಾರೆ ಮತ್ತು ಬಲಿ ಬೀಳುತ್ತಾರೆ.

ನಿರ್ದಿಷ್ಟ ನಾಯಕ ಸಮುದಾಯದವನೊಬ್ಬ ಬಲಿ ಬೀಳಲು ಗುರುತಾಗುತ್ತಾನೆ. ಈತ ಅತ್ಯಂತ ಪರಿಶುದ್ಧವಾದ ಗೃಹಸ್ಥನಿರುತ್ತಾನೆ. ಉಪವಾಸವಿದ್ದು, ರಾತ್ರಿ ಮಾರಮ್ಮನ ಪೂಜಾರಿ ಈತನ ಎದೆ ಮೇಲೆ ಪಾದವಿಟ್ಟು ತುಳಿವ ಮೂಲಕ ಬಲಿ ತೆಗೆದುಕೊಳ್ಳುತ್ತಾಳೆ. ಮಧ್ಯರಾತ್ರಿಯಿಂದ ಮಾರನೆ ದಿನ ಬೆಳಗಿನ ಜಾವದ ಆಚರಣೆ ಮುಗಿಯುವ ತನಕ ಬಲಿ ಬಿದ್ದ ವ್ಯಕ್ತಿ ಸತ್ತಂತೆ ಇರುತ್ತಾನೆ. ಇದೇ ಬಲಿ ಆಚರಣೆ, ಬಲಿ ಬಿದ್ದವನನ್ನು ಮೆರವಣಿಗೆಯಲ್ಲಿ ಹೊತ್ತು ತರುತ್ತಾ, ಮೇಲಕ್ಕೆ ಎಸೆಯುತ್ತಾ ತಂದು ಮಾರಿಗುಡಿ ಮುಂದೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಪಕ್ಕದ ಊರಿನ ಹೊಳೆಗೆರೆ ಹುಚ್ಚಮ್ಮನ ಕೇಲಿನ ತೀರ್ಥ ಹಾಕಿದಾಗ ಬೆಳಗಿನ ಜಾವ ಬಲಿ ಎದ್ದೇಳುತ್ತದೆ. ಏಳದಿದ್ದರೆ ಆತ ಸತ್ತನೆಂದು ಹೂಳಲಾಗುತ್ತದೆ. ಆದರೆ ಬಹುತೇಕ ಬಲಿ ಬದುಕುತ್ತಾನೆ. ಇದು ರೋಚಕ ಆಚರಣೆಯ ಹಬ್ಬವಾಗಿದೆ.

ಈ ಹಬ್ಬದ ಮತ್ತೊಂದು ಆಚರಣೆ ಸೀಗಮಾರಿ ಹಬ್ಬದಲ್ಲಿ ಹೆಬ್ಬರೆ ಹೊರುವ ಹೊಲೆಯರು ಜನಿವಾರ ಧಾರಣೆ ಮಾಡಿಕೊಳ್ಳುವುದು. ಕಂಬಿಕುಲದ ಹೆಬ್ಬರೆ ಮನೆಗೆ ಸೇರಿದ ಕುಟುಂಬಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗುತ್ತದೆ ಅವರಿಗೆ ಜನಿವಾರ ಧರಿಸಿ, ಬ್ರಾಹ್ಮಣರನ್ನಾಗಿ ಪರಿವರ್ತಿಸುವ ಆಚರಣೆಗಳು ನಡೆಯುತ್ತವೆ. 15 ದಿನಗಳ ಕಾಲ ಹಬ್ಬ ಮುಗಿಯುವರೆಗೆ ಅವರು ಸಸ್ಯಾಹಾರಿಗಳಾಗಿ ಪ್ರತ್ಯೇಕವಾಗಿ ಅಡಿಗೆ ಮಾಡಿ ಊಟ ಮಾಡಬೇಕು ಇಂತಹ ವಿಶಿಷ್ಟ ಆಚರಣೆಗಳು ಬಲಿ ಹಬ್ಬದಲ್ಲಿವೆ.

ಸಿಳಕಲಪುರದ ದಂಡಿನ ಮಾರಿಹಬ್ಬ : ಕೊಳ್ಳೆಗಾಲ ತಾಲ್ಲೂಕಿನ ಸಿಳಕಲಪುರದ ದಂಡಿನಮಾರಿ ಹಬ್ಬ ತುಂಬಾ ವಿಶೇಷವಾದುದು. ಈ ಗ್ರಾಮದಲ್ಲಿ ಹೊಲೆಯರು, ಲಿಂಗಾಯತರಷ್ಟೆ ವಾಸವಿದ್ದು ಈ ಹಬ್ಬ ಹೊಲೆಯರು ಆಚರಿಸುವ ಹಬ್ಬ, ಶಿವರಾತ್ರಿಯಾದ ಎಂಟತ್ತು ದಿನಗಳ ನಂತರ ಆರಂಭವಾಗುವ ಈ ಹಬ್ಬ ಎರಡು ವಾರಗಳ ಕಾಲ ಹದಿನಾಲ್ಕು ದಿನ ನಡೆದರೂ ಎರಡು ಮೂರು ದಿನಗಳು ಮಾತ್ರ ಮುಖ್ಯ. ಈ ಹಬ್ಬದಲ್ಲಿ ರಂಗ ಉಯ್ಯುವುದು (ಬರೆಯುವುದು) ರಂಗ ಕಟ್ಟುವುದು, ಕತ್ತಿಪೂಜೆ, ಕೋಣಗಳ ಬಲಿ, ಮೆರವಣಿಗೆಯಂತಹ ಆಚರಣೆಗಳಿವೆ. ದಂಡಿನಮಾರಿ ಪಟ್ಟದರಾಣಿ, ಉಳ್ಳಿಮಾರಮ್ಮ ಎ೦ಬ ಈ ದೇವತೆಗಳಿಗೆ ಸಲ್ಲುವ ಈ ಆಚರಣೆಗಳು ಮೈದಾಳುವುದನ್ನು ಗಮನಿಸಿದರೆ ಇದು ದಂಡಿಗೆ ಹೋಗುವ ಮತ್ತು ವಿಜಯಗಳಿಸಿ ಹಿಂದಿರುಗುವ ಸೈನಿಕ ಕುಲಗಳು ಸಂಭ್ರಮಿಸುವ ಹಬ್ಬ ಮತ್ತು ಆಚರಣೆಗಳಾಗಿವೆ ಎನ್ನಿಸುತ್ತದೆ. "ಕೋಣಗಳ ಬಲಿ' ಹಬ್ಬದ ಮುಖ್ಯ ಆಚರಣೆ. ಒಂದು ನಿಗದಿತ ಸ್ಥಳದಲ್ಲಿ ಹಲವಾರು ಕೋಣಗಳನ್ನು ಬಲಿ ಕೊಡಲಾಗುತ್ತದೆ. ಬಲಿ ಕೊಟ್ಟ ಕೋಣಗಳ ರಕ್ತವನ್ನು ಮಾರಮ್ಮನ ತಂಬಡಿಗಳು ಸಾಂಕೇತಿಕವಾಗಿ ಕುಡಿಯುವ ಆಚರಣೆ ಇದೆ. ನಡೆಯುವುದನ್ನು ಕಣ್ಣಾರೆ ನೋಡಿದರೆ ಯುದ್ಧವನ್ನು ಅನುಕರಿಸಿದಂತೆ ಕಾಣುತ್ತದೆ. ಮತ್ತೆ ಕೋಣ ಬಲಿ ಮಾರಮ್ಮನಿಗೆ ಅರ್ಪಿತ ಎನ್ನುವ ನಂಬಿಕೆ ಇದೆ.

ಗ್ರಾಮದ ಲಿಂಗಾಯತರು ದಲಿತರಿಗೆ ಕೋಣಗಳನ್ನು ಹರಕೆ ಕೊಡುತ್ತಾರೆ, ಪೂಜೆ ಸಾಮಾಗ್ರಿ ಕೊಡುತ್ತಾರೆ. ಗೊರೆ ಅಥವಾ ಓಕುಳಿ ಆಚರಣೆ ಇದೆ. ದಲಿತ ಯುವಕರು ಹಬ್ಬ ಮುಗಿಸಿ ಕೇರಿಯಲ್ಲಿ ನೀರು ಹಾಕಿಕೊಂಡು ಓಕುಳಿ ಆಡುತ್ತಾರೆ. ಹಾಗೆಯೇ ಲಿಂಗಾಯತರ ಬೀದಿ ಒಳಗೂ ಓಕುಳಿ ಆಡುವುದುಂಟು.

ಕುಂತೂರು ಕುಣಿಯಾಟದ ಮಾರಿಹಬ್ಬ: ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಮಾರಿಕುಣಿತ, ಕೋಲಾಟಕ್ಕೆ ಹೆಸರುವಾಸಿ. ಈ ಗ್ರಾಮ ದೇವತೆ ಹೆಸರೇ "ಕುಣಿಯಾಟದ ಮಾರಮ್ಮ" ಎಂದು ಇದು ಗ್ರಾಮದ ಹಬ್ಬವಾಗಿದ್ದು ಇಡೀ ಗ್ರಾಮದ ಎಲ್ಲಾ ಸಮುದಾಯಗಳು ಆಚರಿಸುತ್ತವೆ. ಕುಣಿಯಾಟದ ಮಾರಿ, ಕರುಗಲ್ಲ ಮಾರಿ, ವೀರದೇವರು ಹಟಮಾರಿ ಎಂಬ ಈ ದೇವತೆಗಳಿಗೆ ಸಲ್ಲವುದು ಈ ಹಬ್ಬ ನಾಯಕರು, ದಲಿತರು, ಲಿಂಗಾಯತರು ಈ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಬ್ಬ ಒಂದು ವಾರಕಾಲ ನಡೆಯುತ್ತದೆ ಮಾರಮ್ಮನ ಬಿರುದುಗಳು ಸತ್ತಿಗೆ, ಸೂರಿಪಾನಿಗಳನ್ನು ನಾಯಕರು, ಲಿಂಗಾಯತರು ಹೊತ್ತು ಮೆರೆಯುತ್ತಾರೆ. ಇಡೀ ಹಬ್ಬದಲ್ಲಿ ಉತ್ಸವ, ಮೆರವಣಿಗೆ, ರಾತ್ರಿ ಇಡೀ ರಂಗದಲ್ಲಿ ಡೋಲು ವಾದ್ಯ ನುಡಿಸುತ್ತಾ ಕುಣಿಯಾಟ ಆಡಿಸುವವರು ವೀರಮಕ್ಕಳು ಒಕ್ಕಲಿನ ಹೊಲೆಯರು. ಈ ಹಬ್ಬದ ಆಚರಣೆಗಳಲ್ಲಿ ದಲಿತರು ನುಡಿಸುವ 'ಮದ್ದಲೆ' ಪ್ರಮುಖ ಪಾತ್ರವಹಿಸುತ್ತದೆ

'ವೀರದೇವರ ಗುಡಿ' ದಲಿತರ ಕೇರಿಯಲ್ಲಿದೆ. ಇದು ಯುದ್ಧದಲ್ಲಿ ಮಡಿದ ವೀರನೊಬ್ಬನ ಸಾರಕವಾಗಿದ್ದು ದಲಿತರು ತಮ್ಮ ಕೇರಿಯಲ್ಲಿ ಇದಕ್ಕೆ ಹಬ್ಬ ಮಾಡುತ್ತಾರೆ. ತಮ್ಮನ್ನು ವೀರಮಕ್ಕಳೆಂದು ಕರೆದುಕೊಳ್ಳುವ ಇವರು ಸೈನ್ಯದಲ್ಲಿದ್ದವನ ಮನೆತನಕ್ಕೆ ಸೇರಿದವರಾಗಿದ್ದಾರೆ. ಇಂದು ಇವರ ಕೇರಿಯಲ್ಲಿರುವ 'ಮದ್ದಲೆ ದೇವರ ಗುಡಿ' ಕೂಡ ಯುದ್ದ ಸಂಬಂಧಿ ಚರ್ಮವಾದ್ಯವಾದ ಮದ್ದಲೆಯನ್ನು ಇಡುವ ಗುರಿಯಾಗಿದೆ. ಇವು ಯುದ್ಧಗಳನ್ನು ಘೋಷಿಸುವಾಗ ನುಡಿಸುತ್ತಿದ್ದ ರಣವಾದ್ಯಗಳಾಗಿವೆ. ಗಿಡಿ, ಮದ್ದಲೆ, ವೀರಮಕ್ಕಳು, ವಿವಿಧ ಬಗೆಯ ಕುಣಿತಗಳು, ರಂಗದ ಕುಣಿತ ಎಲ್ಲವೂ ಯುದ್ದ ಕಲೆಯ ಪಳಯುಳಿಕೆಯಂತೆ ಕಂಡುಬರುತ್ತವೆ. "ದಂಡಿನ ಈರಯ್ಯ' ಎಂಬುವವನು ಇದ್ದ. ಆತ ಅರಸರ ಮನೆ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಕೊನೆಗೆ ಯುದ್ದದಿಂದ ಹಿಂದಿರುಗುವಾಗ ಸತ್ತು ಹೋದ. ಆತನ ನೆನಪಿನದೇ ಈ ವೀರಗುಡಿ, ವೀರಹಬ್ಬ ಎನ್ನುತ್ತಾರೆ. ಜನ ಈ ವೀರನಚಿತ್ರ, ಆ ಹೆಂಗಸಿನ ಚಿತ್ರ, ಒಂದು ನಾಯಿಯ ಚಿತ್ರವಿರುವ ವೀರಗಲ್ಲು ಇಂದಿಗೂ ಇದೆ. ಹಬ್ಬದ ದಿನದಲ್ಲಿ ಈ ವೀರದೇವರಿಗೆ ಬಲಿ ಅರ್ಪಿಸುವ ಪದ್ದತಿ ಇದೆ. ಈ ದೇವರಿಗೆ ಎಳನೀರಿನಲ್ಲಿ ದೀಪ ಉರಿಸುವುದು ವಿಶೇಷ ಆಚರಣೆಯಾಗಿದೆ.

ಕೃಪೆ : ಹೊನ್ನು ಹೊಳೆ,ಸ್ಮರಣ ಸಂಪುಟ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate