ಅಡಿಕೆ ಮರದಿಂದ ಹೊರಬೀಳುವ ಹಾಳೆಗಳನ್ನು ಗೊಬ್ಬರಕ್ಕಾಗಿಯೋ ಅಥವಾ ಉರುವಲಿಗಾಗಿ ಬಳಸಿಕೊಳ್ಳುವುದು ಮಲೆನಾಡು ಹಾಗೂ ಬಯಲುಸೀಮೆಯ ಮಂದಿಗೆ ಹೊಸತೇನಲ್ಲ. ಈ ಹಾಳೆಯಿಂದ ಊಟದ ತಟ್ಟೆ, ದೊನ್ನೆಯನ್ನು ತಯಾರು ಮಾಡಿ ಮಾರಾಟ ಮಾಡುವವರೂ ಅಲ್ಲಲ್ಲಿ ಇದ್ದಾರೆ.
ಆದರೆ ಇದೇ ಹಾಳೆ ಇಲ್ಲಿ ಸಾವಿರಾರು ಮಂದಿಯ ಜೀವನಕ್ಕೆ ದಾರಿ ತೋರುತ್ತಿದೆ. ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿಗಳನ್ನು ಗಳಿಸಲು ಇದೊಂದು ದಾರಿಯೂ ಆಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಮಹಿಳೆಯರು ಕೂಡ ಸ್ವಾವಲಂಬಿಯಾಗಬಹುದಾಗಿದೆ.
ಇಂಥದ್ದೊಂದು ಸ್ವಾವಲಂಬಿ ಬದುಕಿಗೆ ದಾರಿ ತೋರಿಸಿಕೊಡುತ್ತಿದ್ದಾರೆ ಕುಂದಾಪುರ ತಾಲ್ಲೂಕಿನ ಹಾಲಾಡಿ ಸಮೀಪದ ಗೋಳಿ ಅಂಗಡಿ ನರಸಿಂಹ ಶೆಟ್ಟರು. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಅಡಿಕೆ ಹಾಳೆಯ ಘಟಕ ಸ್ಥಾಪಿಸಿರುವ ಇವರು ಅಂಧರೂ ಸೇರಿದಂತೆ ಸಾವಿರಾರು ಮಂದಿಗೆ ಜೀವನೋಪಾಯದ ಹಾದಿ ತೋರಿಸುತ್ತಿದ್ದಾರೆ.
ಒಂದು ಅಡಿಕೆ ಹಾಳೆಯಲ್ಲಿ ಸಾಮಾನ್ಯವಾಗಿ 10 ಇಂಚು (ಒಳಭಾಗದಲ್ಲಿ ಎಂಟೂವರೆ ಇಂಚು) ಹಾಗೂ 12 ಇಂಚು (ಒಳಭಾಗದಲ್ಲಿ 10 ಇಂಚು) ಗಾತ್ರದ ಮೂರು ಊಟದ ತಟ್ಟೆ ಮತ್ತು ಎರಡು ತಿಂಡಿ ಪ್ಲೇಟ್, ಮೂರು ದೊನ್ನೆಗಳನ್ನು ತಯಾರಿಸಬಹುದು. ಊಟದ ತಟ್ಟೆ ಹಾಗೂ ತಿಂಡಿ ಪ್ಲೇಟ್ ತಯಾರಿಸಿದ ನಂತರ ಉಳಿದ ಹಾಳೆಗಳಿಂದ ದೊನ್ನೆಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ ಯಾವುದೇ ಒಂದು ಅಡಿಕೆ ಹಾಳೆಯಲ್ಲಿ ವ್ಯರ್ಥವಾಗುವ ಭಾಗ ಇರುವುದಿಲ್ಲ.
ಅಡಿಕೆ ಹಾಳೆಯಿಂದ ಉತ್ಪನ್ನಗಳನ್ನು ತಯಾರಿಸಲು ಅರ್ಧ ಹೆಚ್.ಪಿ. ಹೈಡ್ರಾಲಿಕ್ ಯಂತ್ರಬೇಕಾಗುತ್ತದೆ. ನರಸಿಂಹ ಶೆಟ್ಟರು ಈ ಯಂತ್ರವನ್ನು ತಾವೇ ತಯಾರಿಸುತ್ತಿದ್ದಾರೆ. ಗ್ರಾಹಕರಿಗೆ ಬೇಕಾದ ಯಂತ್ರೋಪಕರಣಗಳನ್ನು ಅವರ ಮನೆ ಬಾಗಿಲಿಗೆ ಸ್ವತಃ ತಲುಪಿಸುತ್ತಾರೆ. ಜೊತೆಗೆ ಅಡಿಕೆ ಹಾಳೆಯಿಂದ ಯಂತ್ರದ ಮುಖಾಂತರ ಉತ್ಪನ್ನಗಳನ್ನು ತೆಗೆಯುವ ವಿಧಾನಗಳನ್ನು, ಗ್ರಾಹಕರಿಗೆ ಅವರ ಮನೆ ಬಾಗಿಲಲ್ಲಿಯೇ ತರಬೇತಿ ನೀಡಿ, ಸಂಪೂರ್ಣ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಾರೆ.
‘ಮನೆಯಲ್ಲಿಯೇ ಕೆಲವು ಮಹಿಳೆಯರು ಒಟ್ಟುಗೂಡಿ ಅಡಿಕೆ ಹಾಳೆಯ ಉತ್ಪನ್ನಗಳನ್ನು ತಯಾರಿಸಬಹುದು. ಇದಕ್ಕೆ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಬೇಡಿಕೆ ಇರುವ ಕಾರಣ, ಉತ್ಪನ್ನ ಮಾರಾಟವಾಗುತ್ತದೆಯೇ ಇಲ್ಲವೇ ಎಂಬ ಚಿಂತೆಯೇ ಬೇಡ’ ಎನ್ನುವುದು ಶೆಟ್ಟರ ಅವರ ಭರವಸೆಯ ಮಾತು. ಇದಕ್ಕೆ ಇಂಬು ನೀಡುವಂತೆ ಈ ಉತ್ಪನ್ನಗಳನ್ನು ತಾವೇ ಕೊಂಡು ಮಾರಾಟ ಮಾಡುವ ಸಂಪೂರ್ಣ ಜವಾಬ್ದಾರಿಯನ್ನೂ ಅವರೇ ವಹಿಸಿಕೊಳ್ಳುತ್ತಾರೆ.
ನಿಗದಿಪಡಿಸಿದ ಬೆಲೆಯನ್ನು ತಕ್ಷಣ ನೀಡುತ್ತಾರೆ. ಒಂದು ವೇಳೆ ತಯಾರಕರು ಒಂದು ಬಾರಿಗೆ ಕನಿಷ್ಠ 5000 ಪರಿಕರಗಳನ್ನು ಕಳಿಸಿದ್ದಲ್ಲಿ ಸಾರಿಗೆಯ ವೆಚ್ಚದ ಶೇ 50ರಷ್ಟನ್ನುಅವರೇ ಭರಿಸುತ್ತಾರೆ. ಅಂದಹಾಗೆ, ಸದ್ಯ ಅಡಿಕೆ ಹಾಳೆಯ ಮಾರುಕಟ್ಟೆ ಬೆಲೆ ಹೀಗಿದೆ: 12 ಇಂಚು ತಟ್ಟೆಗೆ₹2.25, 10 ಇಂಚಿಗೆ ₹ 1.60, 8 ಇಂಚಿಗೆ ₹1.00, 6 ಇಂಚಿಗೆ ₹ 0.50 ಹಾಗೂ 4 ಇಂಚಿನ ತಟ್ಟೆ ₹0.40. ಇದೇ ದರದಲ್ಲಿ ಶೆಟ್ಟರು ತಟ್ಟೆಗಳನ್ನು ಖರೀದಿಸು ತ್ತಾರೆ. ತಯಾರಕರು ಸ್ವತಃ ಮಾರು ಕಟ್ಟೆಗೆ ಒದಗಿಸಿದರೆ ತಮ್ಮ ಉತ್ಪನ್ನಗಳಿಗೆ ಇನ್ನೂ ಸ್ವಲ್ಪ ಹೆಚ್ಚಿನ ಬೆಲೆ ಪಡೆಯಬಹುದು.
ಸರ್ಕಾರದ ನೆರವು
ಶೆಟ್ಟರು ತಯಾರಿಸಿರುವ ಯಂತ್ರದ ಬೆಲೆ 70 ಸಾವಿರ ರೂಪಾಯಿ. ಅಡಿಕೆ ಹಾಳೆಯ ಉತ್ಪನ್ನ ಕೈಗೊಳ್ಳುವವರಿಗೆ ರಾಜ್ಯ ಸರ್ಕಾರದಿಂದ ‘ಸ್ತ್ರೀ ಶಕ್ತಿ ಗುಂಪು ಹಾಗೂ ಸಂಘಟನೆ ಉದ್ಯೋಗಿನಿ ಯೋಜನೆ’ ಮೂಲಕ ನೆರವು ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಗುಂಪು ಹಾಗೂ ಸಂಘಟನೆ ಯೋಜನೆಯ ಅಡಿ ಬಡತನದ ರೇಖೆಯಿಂದ ಕಡಿಮೆ ಆದಾಯವಿರುವ ಕುಟುಂಬದ ಮಹಿಳೆಯರು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಕ್ಕೆ ಸೇರಿದ ಮಹಿಳೆಯರು ಹಾಗೂ ಭೂರಹಿತ ಕೃಷಿ ಕಾರ್ಮಿಕರು ಒಂದುಗೂಡಿ ಕೆಲಸ ಮಾಡಬಹುದು.
ಈ ಗುಂಪಿನಲ್ಲಿ 15 ರಿಂದ 20 ಮಹಿಳೆಯರು ಇರಬೇಕಾಗುತ್ತದೆ. ಸರ್ಕಾರದಿಂದ ಎಲ್ಲಾ ಗುಂಪುಗಳಿಗೆ ತಲಾ ₹5000 ‘ಸತ್ತುನಿಧಿ’ ಕೊಡಲಾಗುತ್ತದೆ ಹಾಗೂ ₹ 600 ಕಾಗದ ಪತ್ರದ ಖರ್ಚಿಗೆ ನೀಡಲಾಗುತ್ತದೆ. ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಈ ಗುಂಪುಗಳಿಗೆ ಸಾಲ ಒದಗಿಸಲಾಗುವುದು. ಉದ್ಯೋಗಿನಿ ಯೋಜನೆ ಅಡಿ ವಾರ್ಷಿಕ 40ಸಾವಿರಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬದ 18–45 ವರ್ಷದ ಮಹಿಳೆಯರು ಭಾಗವಹಿಸಬಹುದು. ಈ ಯೋಜನೆಗೆ ವಾಣಿಜ್ಯ ಬ್ಯಾಂಕುಗಳು ಹಾಗೂ ಗ್ರಾಮೀಣ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಜೊತೆಗೆ ಅರ್ಹರಿಗೆ ಒಂದಿಷ್ಟು ಅನುದಾನವೂ ಸಿಗುತ್ತದೆ.
ಇದರ ಹೊರತಾಗಿ, ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಅಡಿ 18–35ರೊಳಗಿರುವ, ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವ ಹಿಂದುಳಿದ ವರ್ಗದ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದು. ‘ಉತ್ಪನ್ನಗಳನ್ನು ತಯಾರಿಸಲು ಬೇಕಾದ ಯಂತ್ರೋಪಕರಣ, ತರಬೇತಿ, ವಸ್ತುಗಳ ಮಾರಾಟ ಈ ಎಲ್ಲಾ ಜವಾಬ್ದಾರಿಯನ್ನು ಈ ಸಂಘಟನೆಯೇ ವಹಿಸುವುದರಿಂದ, ಜನಸಾಮಾನ್ಯರು ಸುಲಭವಾಗಿ ಈ ಗುಡಿ ಕೈಗಾರಿಕೆಯನ್ನು ತಮ್ಮ ಮನೆಯಲ್ಲಿಯೇ ಪ್ರಾರಂಭಿಸಬಹುದು.
ಅಂಧರು, ಅಂಗವಿಕಲರು, ಸ್ತ್ರೀಯರು ಹಾಗೂ ವಯೋವೃದ್ಧರು ಕೂಡಾ ಈ ಯೋಜನೆ ಕೈಗೆತ್ತಿಕೊಳ್ಳಬಹುದು. ಸ್ವಾವಲಂಬನೆ, ಉತ್ತಮ ವರಮಾನ ಹಾಗೂ ಸಮಯದ ಸದುಪಯೋಗಪಡಿಸಲು ಇಂತಹ ಯೋಜನೆಗಳು ಸಹಾಯಕಾರಿ’ ಎನ್ನುತ್ತಾರೆ ಇದರ ಪ್ರಯೋಜನ ಪಡೆದುಕೊಂಡಿರುವ ಬೆಂಗಳೂರು ಸಮೀಪದ ಹೆಸರುಘಟ್ಟದ ವೀಣಾ ಹಾಗೂ ಲಿಂಗೇಗೌಡ ದಂಪತಿ ಹಾಗೂ ಹಾಸನ ಜಿಲ್ಲೆ ಆಲೂರಿನ ಪ್ರಕಾಶ್.
ನರಸಿಂಹ ಶೆಟ್ಟಿ ಅವರ ಸಂಪರ್ಕಕ್ಕೆ: 9880040093/ 990689793.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 1/6/2020
ರಮೇಶ ರಾಜುರವರ ತೋಟ, ಮಂಡ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.