ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಹಾಲು : ಪವಿತ್ರವಾದ ಆಹಾರ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹಾಲು : ಪವಿತ್ರವಾದ ಆಹಾರ

ಹಾಲು : ಪವಿತ್ರವಾದ ಆಹಾರ

ಹಾಲು ಮಾಂಸಾಹಾರವೋ ಸಸ್ಯಾಹಾರವೋ ಎಂಬ ವಿಷಯದಲ್ಲಿ ಸಾಕಷ್ಟು ತರ್ಕ-ವಿತರ್ಕಗಳಿವೆ.  ಹಾಲು ಪ್ರಾಣಿಜನ್ಯವಾದುದರಿಂದ ಅದೂ ಮಾಂಸಹಾರವೇ ಎಂದೂ, ಪ್ರಪಂಚದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮಾಂಸಾಹಾರಿಗಳೇ ಎಂದೂ ಮಾಂಸಾಹಾರಿಗಳ ವಾದ.  ಆದರೆ ಮಾಂಸಾಹಾರಕ್ಕೂ ಕ್ಷೀರಾಹಾರಕ್ಕೂ ಇರುವ ಅಂತರಗಳನ್ನು ಇವರು ಮರೆತಂತಿದೆ.   ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು:-

ಮಾಂಸಾಹಾರ
1.   ಪ್ರಾಣಿಗಳನ್ನು ಕತ್ತರಿಸಬೇಕು-ಅವುಗಳ ಜೀವಹಾನಿಯಾಗುತ್ತದೆ.
2.   ಪ್ರಾಣಿಗಳಿಂದ ಮಾಂಸವನ್ನು ತೆಗೆದರೆ ಅವುಗಳಿಗೆ ನೋವಾಗುತ್ತದೆ.
3.   ಹೆಚ್ಚು ಮಾಂಸವನ್ನು ಕಿತ್ತಷ್ಟೂ ನೋವು ಹೆಚ್ಚು     
4.   ಮಾಂಸದೊಂದಿಗೆ ಹೊರಬರುವ ರಕ್ತದ 
ಕೆಂಪುಬಣ್ಣ ಅಪಾಯದ ಸಂಕೇತ
5.   ಪ್ರಾಣಿಗಳಲ್ಲಿ ಸದಾಕಾಲವೂ ದೊರಕುತ್ತದೆ
6.   ಎಲ್ಲ ಪ್ರಾಣಿಗಳಲ್ಲಿಯೂ ಇರುತ್ತದೆ.    
7.   ಘಟಕಗಳಲ್ಲಿ ಕೊಬ್ಬು ಅಧಿಕ ಪ್ರಮಾಣ
8.   ಜೀರ್ಣವಾಗುವುದು ಕಷ್ಟ
9.   ಘನ ಆಹಾರ    
10. ರೋಗವರ್ಧಕ
11. ತಾಮಸ    
12. ಎಲ್ಲರೂ ಬಳಸುವುದಿಲ್ಲ

ಕ್ಷೀರಾಹಾರ
1. ಪ್ರಾಣಿಗಳಿಗೆ ಯಾವುದೇ ಅಪಾಯವಿಲ್ಲ.  ಇದು ಸಹಜ ಆಹಾರ.
2. ಪ್ರಾಣಿಗಳಿಂದ ಹಾಲನ್ನು ತೆಗೆಯದಿದ್ದರೆ ಅವುಗಳಿಗೆ ನೋವಾಗುತ್ತದೆ.
3. ಹೆಚ್ಚು ಹಾಲನ್ನು ತೆಗೆದಷ್ಟೂ ಹಗುರವಾಗುತ್ತದೆ.
4. ಹಾಲಿನ ಬಿಳಿಯ ಬಣ್ಣ ಹಿತ ಮತ್ತು ಶಾಂತಿಯ ಸಂಕೇತ. 
5. ಮರಿಗಳು ಹುಟ್ಟಿದಾಗ ಕೆಲವು ಕಾಲ
6. ಕೆಲವು ಪ್ರಾಣಿಗಳಲ್ಲಿ ಮಾತ್ರ 
(ಹೆಣ್ಣು ಪ್ರಾಣಿಗಳಲ್ಲಿ , ಸಸ್ತನಿಗಳಲ್ಲಿ – ತಾಯಿಯಲ್ಲಿ)
7. ಎಲ್ಲ ಅವಶ್ಯ ಘಟಕಗಳೂ ಇರುತ್ತವೆ.
8. ಜೀರ್ಣವಾಗುವದು ಸುಲಭ.
9. ದ್ರವ ಆಹಾರ
10. ರೋಗನಿರೋಧಕ
11. ಸಾತ್ತ್ವಿಕ
12. ಬಹಳಷ್ಟು ಜನರು ಬಳಸುತ್ತಾರೆ.

ಇಷ್ಟೊಂದು ವ್ಯತ್ಯಾಸವಿರುವುದರಿಂದ ಹಾಲನ್ನು  ಮಾಂಸಾಹಾರವೆಂದು ಪರಿಗಣಿಸಲು ಸಾಧ್ಯವೇ ಇಲ್ಲವೆಂಬುದು ಸುಸ್ಪಷ್ಟವಾಗುತ್ತದೆ.

ಹಾಲು ಉತ್ತಮವಾದ ಆಹಾರವೆಂಬುದು ನಮಗೆಲ್ಲ ಗೊತ್ತು. ಎಲ್ಲ ಜೀವಿಗಳಿಗೂ ಪರಮಾತ್ಮನು ಹುಟ್ಟುವ ಮೊದಲೇ, ಅದು ಸ್ವತಂತ್ರವಾಗಿ ಆಹಾರವನ್ನು ಸಂಪಾದಿಸಿಕೊಳ್ಳುವಂತೆ ಆಗುವವರೆಗೆ ಆಹಾರವನ್ನು ನಿರ್ಮಿಸಿಯೇ ಇರುತ್ತಾನೆ. ಸಸ್ತನಿಗಳಲ್ಲಿ ಮರಿಗಳೂ ಹುಟ್ಟುವ ಹೊತ್ತಿಗೆ ತಾಯಿಯಲ್ಲಿ ಸಿದ್ಧವಾಗಿರುವ ಅಮೃತರೂಪವಾದ ದ್ರವವೇ ಕ್ಷೀರ.  ಮರಿ ಹುಟ್ಟಿದಂದಿನಿಂದ ಆಯಾ ಜಾತಿಗೆ ಅನುಗುಣವಾಗಿ ಹೆಚ್ಚೆಂದರೆ 1-1 ½ ವರ್ಷ ಮಾತ್ರ ಸಿಕ್ಕುವ ಅಪರೂಪದ ಆಹಾರವಿದು.  ಅಷ್ಟು ಹೊತ್ತಿಗೆ ಬೇರೆ ಆಹಾರವನ್ನು ಸಂಪಾದಿಸುವ, ತಿನ್ನುವ, ಜೀರ್ಣಿಸಿಕೊಳ್ಳುವ ಶಕ್ತಿ ಮರಿಗೆ ಬಂದಿರುತ್ತದೆ.   ಪರಮಾತ್ಮನ ಕರುಣಾಮೃತವೇ ಇದೆಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ.
ಹಾಲಿನಲ್ಲಿ ಮರಿಯ ಪೋಷಣೆಗೆ ಬೇಕಾದುದೆಲ್ಲವೂ ಸಂಗ್ರಹಿಸಲ್ಪಟ್ಟಿರುತ್ತದೆ. ಹಾಲಿನ ಹೆಚ್ಚು ಭಾಗ ನೀರು.  ಅದರಲ್ಲಿ ಬೆಣ್ಣೆಯ ಕೊಬ್ಬಿನ ಕಣಗಳು ಹರಡಿರುತ್ತವೆ.  ಇಂತಹ ದ್ರವವನ್ನು ‘ಕಲಾಯ್ಡ್” ದ್ರಾವಣವೆಂದು ಕರೆಯುತ್ತಾರೆ.  ದ್ರಾವಣದಲ್ಲಿ ಕಣಗಳು ಅತ್ಯಂತ ಚಿಕ್ಕದಾಗಿದ್ದರೆ, ಅದನ್ನು ಬೇರೆಯಾಗಿ ಗುರುತಿಸಲು ಆಗುವುದಿಲ್ಲ.  ಆಗ ದ್ರಾವಕವು ದ್ರವದಲ್ಲಿ ಕರಗಿವೆ ಅಥವ ವಿಲೀನವಾಗಿದೆಯೆಂದು ಹೇಳುತ್ತೇವೆ.  ಇವೆರಡೂ (ದ್ರವ + ಘನ) ಸೇರಿ ದ್ರಾವಣವಾಗುತ್ತದೆ.  ಘನವಸ್ತುವಿನ ಕಣಗಳು ಬಹಳ ದಪ್ಪವಾಗಿದ್ದರೆ, ಅದು ದ್ರವದೊಂದಿಗೆ ಸೇರದೆ, ಕೆಳಗಡೆ ಸಂಗ್ರಹವಾಗಿ ಬಿಡುತ್ತದೆ.  ಇವೆರಡರ ನಡುವಿನ ಸ್ಥಿತಿಯೇ ‘ಕಲಾಯ್ಡ್  ದ್ರಾವಣ.’ ಇದರಲ್ಲಿ ಕಣಗಳು ದ್ರವದಲ್ಲಿ ನಿರಂತರವಾಗಿ ಚಲನೆಯಲ್ಲಿರುತ್ತವೆ.  ಕೆಲವು ವಿಧಾನಗಳಿಂದ ಬೆಣ್ಣೆಯ (ಕೊಬ್ಬಿನ) ಈ ಕಣಗಳನ್ನು ಬೇರ್ಪಡಿಸಲು ಸಾಧ್ಯ.
ಹಾಲಿನಲ್ಲಿ ಕೊಬ್ಬು ಸ್ವಲ್ಪ ಪ್ರಮಾಣ ದಲ್ಲಿದ್ದರೂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಖನಿಜಲವಣಗಳು, ರೋಗ ನಿರೋಧಕಗಳೂ ಎಲ್ಲವೂ ಇದ್ದು ಅದೊಂದು ಸಂಪೂರ್ಣ ಆಹಾರವೆನಿಸಿದೆ.  ರೋಗಿಗಳು, ವೃದ್ಧರು, ಅಶಕ್ತರು ಎಲ್ಲರಿಗೂ ಅದೊಂದು ವರದಾನವೆನಿಸಿದೆ.  ಎಂಟು ಸಸ್ತನಿಗಳ ಹಾಲನ್ನು  ‘ಕ್ಷೀರವರ್ಗ’ವೆಂದು ಸುಶ್ರುತ ಸಂಹಿತೆಯಲ್ಲಿ ಹೇಳಿದೆ.  ಇವುಗಳಲ್ಲಿ ಔಷಧೀಯ ಗುಣಗಳಿವೆಯೆಂದು ಹೇಳಿದೆ.  ಅವುಗಳೆಂದರೆ

ಗವ್ಯಮಾಜಂ ತಥಾ ಚೌಷ್ಟ್ರಂ ಆವಿಕಂ ಮಾಹಿಷಂ ಚ ಯತ್‌
ಅಶ್ಯಾಯಾಶ್ಚೈವ ನಾರ್ಯಾಶ್ಚ ಕರೇಣೋನಾಂ ಚ ಯತ್ಪಯಃ ॥

ಹಸು, ಆಡು, ಒಂಟೆ, ಕುರಿ, ಎಮ್ಮೆ, ಕುದುರೆ, ಸ್ತ್ರೀ ಮತ್ತು ಆನೆಯ ಹಾಲುಗಳು.  ಆದರೆ ದಿನಬಳಕೆಯಲ್ಲಿ ಹಸು ಮತ್ತು ಎಮ್ಮೆಗಳ ಹಾಲೇ ಹೆಚ್ಚು ಕಂಡುಬರುತ್ತದೆ.
ಹಾಲಿಗೆ ಸಂಸ್ಕೃತದಲ್ಲಿ ದುಗ್ಧ ಮತ್ತು ಪಯಸ್ ಎಂಬ ಹೆಸರುಗಳೂ ಇವೆ.  ದುಗ್ಧವೆಂದರೆ ‘ತುಂಬುವಿಕೆ’ಯೆಂದೂ ಅರ್ಥವಾಗ್ತುದೆ.  ಆರೋಗ್ಯದಿಂದ ದೇಹವನ್ನೂ, ರುಚಿಯಿಂದ ಇಂದ್ರಿಯಗಳನ್ನೂ, ಪೌಷ್ಟಿಕತೆಯಿಂದ ಹೊಟ್ಟೆಯನ್ನೂ, ತೃಪ್ತಿಯಿಂದ ಮನವನ್ನ್ನೂ ತುಂಬುವ ಆಹಾರ ಹಾಲು.  ಹಾಲಿನಿಂದ ಬರುವ ಮೊಸರು, ಬೆಣ್ಣೆ, ತುಪ್ಪ ಕೂಡ ರುಚಿ ಮತ್ತು ಆರೋಗ್ಯವೆರಡನ್ನು ಕೊಡುವ ವಸ್ತುಗಳು.  ‘ಆಯುಃಘೃತಂ’ ಅಂದರೆ ತುಪ್ಪವೇ ಆಯಸ್ಸನ್ನು ಕೊಡುವ ವಸ್ತುವು. ಹಾಲನ್ನು ನೇರವಾಗಿ ಕುಡಿಯುವುದರ ಜೊತೆಗೆ ಎಲ್ಲ ಸಿಹಿತಿಂಡಿಗಳಿಗೂ ಹಾಲು ಮತ್ತು ಅದರ ಉತ್ಪನ್ನಗಳು ಬೇಕು.  ಪರಮಾತ್ಮನ ಪೂಜೆಯಲ್ಲಿಯೂ ಅಭಿಷೇಕ, ನೈವೇದ್ಯಗಳೆರಡರಲ್ಲಿಯೂ ಕ್ಷೀರೋತ್ಪನ್ನಗಳದೇ ಪ್ರಧಾನ ಪಾತ್ರವು.  ‘ಹಾಲುಕುಡಿದಷ್ಟು’ ಎಂಬ ನುಡಿಗಟ್ಟು ಸಂತೋಷದ ಪರಮಾವಯನ್ನು ಸೂಚಿಸುತ್ತದೆ.  ‘ಪ್ರಿಯತೇ’ ಎಂದರೆ ಕುಡಿಯುವುದೆಂದು ಅರ್ಥವು ಅದರಿಂದ ಬಂದಿರುವ ‘ಪಯಸ್’ ಶಬ್ದಕ್ಕೆ ನೀರು, ಹಾಲು ಮುಂತಾದ ಎಲ್ಲ ದ್ರವಗಳ ಸಮಾನಾರ್ಥವಿದೆ.  ಹೆಚ್ಚು ಪಾನೀಯಗಳಲ್ಲಿ ಹಾಲು ಒಂದು ಘಟಕವಾಗಿರುವುದನ್ನೂ ಇಲ್ಲಿ ಗಮನಿಸಬಹುದು.  ಒಂದು ದಿನ ಬೆಳಿಗ್ಗೆ ಹಾಲು ಸಿಕ್ಕದಿದ್ದರೆ, ಕಾಫಿ ಅಥವಾ ಚಹ ಸೇವಿಸದಿದ್ದರೆ, ದಿನದ ಕಾರ್ಯಕ್ರಮಗಳೆಲ್ಲ ಅಸ್ತವ್ಯಸ್ತವಾಗುತ್ತವೆಯಲ್ಲವೆ?
ಇನ್ನು ಹಾಲನ್ನು ಸಸ್ಯಾಹಾರವೆಂದು ಭಾವಿಸುವುದೂ ಸಾಧ್ಯವಿಲ್ಲ.  ಏಕೆಂದರೆ, ಹಾಲು ಪ್ರಾಣಿಜನ್ಯವಾದುದು.  ಕೆಲವು ಸಸ್ಯಗಳಲ್ಲಿಯೂ ಹಾಲು ಉತ್ತತ್ತಿಯಾದರೂ ಯಾವ ಸಸ್ಯದ ಹಾಲೂ ಆಹಾರವಾಗಿ ಬಳಕೆಯಾಗುವುದಿಲ್ಲ, ಅದಕ್ಕೆ  ವಾಣಿಜ್ಯಕವಾದ ಬೇರೆ ಅನೇಕ ಉಪಯೋಗಗಳಿರಬಹುದು.  ಉದಾಹರಣೆಗೆ ರಬ್ಬರ್‌ಹಾಲು ಒಂದು ದೇಶದ ಆರ್ಥಿಕಸ್ಥಿತಿಯನ್ನೇ ನಿಯಂತ್ರಿಸುತ್ತದೆ.  ಕೆಲವು ಹಾಲುಗಳು ಔಷಧವಾಗಿ ಬಳಕೆಯಾಗಬಹುದು.  ಎಕ್ಕದ ಹಾಲು ಅಂತಹ ಒಂದು ಉದಾಹರಣೆ.
ಹೀಗಾಗಿ ಕ್ಷೀರವು ಇವೆರಡಕ್ಕೂ ಸೇರದ ತನ್ನದೇ ವಿಶಿಷ್ಟವಾದ ಒಂದು ಆಹಾರವಾಗಿದೆ.  ಇದನ್ನು ಸಮರ್ಥಿಸುವ ಒಂದು ಆಖ್ಯಾಯಿಕೆಯನ್ನು ಬೃಹ ದಾರಣ್ಯಕೋಪನಿಷತ್ತಿನಲ್ಲಿ ಕಾಣುತ್ತೇವೆ.  (ಬೃಹ 1.5).  ಜಗತ್ತಿನ ತಂದೆಯು ತನ್ನ ಬುದ್ಧಿವಂತಿಕೆಯಿಂದ 7 ಬಗೆಯ ಅನ್ನಗಳನ್ನು ಸೃಷ್ಟಿದನಂತೆ! ಅವುಗಳಲ್ಲಿ ಮೊದಲನೆಯದು ಸಾಧಾರಣವಾದ ಆಹಾರ.  ಇದನ್ನೇ ಅಲ್ಲಿ ಅನ್ನವೆಂದು ಕರೆದಿದೆ.  ಇವರಲ್ಲಿ ಎಲ್ಲ ಪ್ರಾಣಿಗಳು ತಿನ್ನುವ ಆಹಾರಗಳಾದ  ಸಸ್ಯಾಹಾರ, ಮಾಂಸಾಹಾರಗಳೆಲ್ಲ ಸೇರಿ ಹೋಗುತ್ತವೆ.  ಮುಂದಿನ ಎರಡನ್ನು ಹುತ ಮತ್ತು  ಪ್ರಹುತವೆಂದು ಕರೆದಿದೆ.  ಇದರಲ್ಲಿ ಹೋಮ, ಬಲಿಹರಣ, ಪಿತೃಗಳಿಗೆ ಕೊಡುವ ಅನ್ನ ಇವುಗಳೆಲ್ಲ ಸೇರುತ್ತವೆ.   ನಾಲ್ಕನೆಯದು ಹಾಲು.  ಇದನ್ನು ಅನ್ನದಿಂದ ಬೇರೆಯಾಗಿ ಹೇಳಿರುವುದೇ, ಅದು ವಿಶಿಷ್ಟ ಆಹಾರವೆಂಬುದನ್ನು  ಸೂಚಿಸುತ್ತದೆ.  ಇದನ್ನು , ‘ತಸ್ಮಿನ್ ಸರ್ವಂ ಪ್ರತಿಷ್ಠಿತಂ ಯಚ್ಛ ಪ್ರಾಣಿತಿ ಯಚ್ಚ ನ’ ಎಂದು ಅಲ್ಲಿ ಹೊಗಳಿದೆ.  ಅಂದರೆ ಇನ್ನೂ ಹುಟ್ಟುವ ಮತ್ತು ಹುಟ್ಟಿರುವ ಎಲ್ಲ ಪ್ರಾಣಿಗಳೂ ಇದನ್ನು ಅವಲಂಬಿಸಿರುತ್ತಾರೆ.  ಹುಟ್ಟುವ ಮೊದಲೇ ಅತೃಣಾದವಾದ ಅಂದರೆ ಹುಲ್ಲನ್ನೂ ತಿನ್ನಲಾರದ ಕರುವಿಗಾಗಿ ಇದು ಸಿದ್ಧವಾಗಿರುತ್ತದೆ.  ಅಗ್ನಿಹೋತ್ರಾದಿ ವೈದಿಕಕರ್ಮಗಳೂ ಹಾಲನ್ನೇ ಆಶ್ರಯಿಸಿರುತ್ತವೆ.  ಈ ಭಾಗದ ಭಾಷ್ಯದಲ್ಲಿ ಆಚಾರ್ಯ ಶಂಕರರೂ, ಅಧ್ಯಾತ್ಮ, ಅಭೂತ ಮತ್ತು ಅದೈವರೂಪವಾದ ಜಗತ್ತೆಲ್ಲವೂ ಇದರಲ್ಲಿ  ಪ್ರತಿಷ್ಠಿತವಾಗಿದೆಯೆಂದು  ಅಭಿಪ್ರಾಯಪಟ್ಟಿರುತ್ತಾರೆ. ಉಳಿದ ಮೂರು ಅನ್ನಗಳನ್ನು ವಾಕ್, ಪ್ರಾಣ ಮತ್ತು ಮನಸ್ಸುಗಳು ಅಧ್ಯಾತ್ಮ ಸಂಬಂಗಳು.  ಹೀಗೆ ಹಾಲನ್ನು ವೇದಕಾಲದಿಂದಲೂ ಪ್ರತ್ಯೇಕವಾದ, ಪವಿತ್ರವಾದ ಆಹಾರವೆಂದು ಭಾವಿಸಲಾಗಿದೆ.

- ಡಾ. ಎಸ್‍. ಹೇಮಲತಾ

ಮೂಲ: ವಿಕ್ರಮ

2.97959183673
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top