ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾ ಬೆಳೆಯಾದ ಸಜ್ಜೆ, ಜೋಳ, ಮೆಕ್ಕೆಜೋಳ ಇನ್ನಿತರ ಪ್ರಮುಖ ಬೆಳೆಯನ್ನು ಬೆಳೆಸಿದರೂ ಅವು ಕೈಹಿಡಿಯಲಿಲ್ಲ. ಆಗ ನನ್ನನ್ನು ಆಕರ್ಷಿಸಿದ್ದು ರೇಷ್ಮೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರೇಷ್ಮೆ ಬೆಳೆಸಬಹುದೇ ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿತು. ಚಿಂತನ ಮಂಥನದ ಬಳಿಕ ಆ ಬೆಳೆಗೆ ಮೊರೆ ಹೋದೆ. ಅದು ನನ್ನ ಕೈ ಬಿಡಲಿಲ್ಲ. ಇದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ಮಾರ್ಕಂಡಯ್ಯ ಬೀಜಕಲ್ ಅವರ ಮಾತುಗಳು.
ತಮ್ಮ ಎರಡು ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿರುವ ರೈತ ಬೀಜಕಲ್ ಓದಿದ್ದು ಕೇವಲ 8ನೇ ತರಗತಿ. ಆದರೆ ಕೃಷಿಯ ವಿಷಯದಲ್ಲಿ ಅವರ ಪ್ರಯೋಗಶೀಲತೆ ಯಾವ ವಿವಿಯಲ್ಲೂ ಸಿಗದಷ್ಟು ಚುರುಕಾಗಿದೆ. ಅವರ ಹೊಸತನದ ಹುರುಪು ಕಂಡುಕೊಂಡು ಮನೆಯವರು ಕೂಡ ನೆರವು ನೀಡಿದ್ದರಿಂದ ರೇಷ್ಮೆ ಕೃಷಿಯಲ್ಲಿ ಅವರು ಹಿಂತಿರುಗಿ ನೋಡಿಲ್ಲ.
ಉತ್ತರ ಕರ್ನಾಟಕ ಭಾಗದಲ್ಲಿ ಬಹುಪಾಲು ರೈತರು ಮಳೆಯಾಶ್ರಿತ ಬೆಳೆಗಳನ್ನು ಅವಲಂಬಿತರಾಗಿದ್ದಾರೆ. ಅದರಂತೆ ಬೀಜಕಲ್ ಅವರೂ ಪ್ರಾರಂಭದಲ್ಲಿ ಆಹಾರ ಬೆಳೆಯಾದ ಸಜ್ಜೆ, ಜೋಳ, ಮೆಕ್ಕೆಜೋಳ, ನವಣೆ, ತೊಗರಿ, ಮಡಿಕೆ, ಹೆಸರು ಮುಂತಾದ ಬೆಳೆಯನ್ನು ಬೆಳೆಸಿ ವಿಫಲರಾದರು. ಮಳೆ ನೀರಿನ ಅಲಭ್ಯತೆಯಿಂದ ಬೇಸತ್ತು ಬೋರ್‌ವೆಲ್ ಕೊರೆಸಿ ಯಶಸ್ವಿಯೂ ಆದರು. ಭೂಮಿಯಲ್ಲಿ ನೀರು ಸಿಕ್ಕಿತು. ಸಾಕಷ್ಟು ಮಾಹಿತಿ ಪಡೆದು ಶುರು ಮಾಡಿದ ರೇಷ್ಮೆಯ ಪ್ರಯೋಗವೂ ಕೈ ಹಿಡಿಯಿತು. ಇದೀಗ ವರ್ಷಪೂೂರ್ತಿ ಇವರ ಜಮೀನು ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಶೆಡ್‌ನಲ್ಲಿ ಹಸಿರು ಬಣ್ಣದ ಹುಳಗಳು ಗಮನ ಸೆಳೆಯುತ್ತವೆ.
ರೇಷ್ಮೆ ಬೆಳೆ ಬೆಳೆಸಬೇಕಾದರೆ ಮೊದಲು ಕಡ್ಡಿಗಳನ್ನು ನಾಟಿ ಮಾಡಬೇಕು. ಕೆಲ ರೈತರು ಬೋದಿನ ಮೂಲಕ ನಾಟಿ ಮಾಡುತ್ತಿದ್ದಾರೆ. ಆದರೆ ಇವರು ಹಾಗಲ್ಲ. ವಿನೂತನದಿಂದ ನಾಟಿ ಮಾಡುವಾಗ ಜಮೀನಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ನಾಟಿಯಲ್ಲಿ ಕೂಡ ಸಾಲು ಸಾಲಿನಿಂದ ಡ್ರಿಪ್ ಹಾಕಿದ್ದಾರೆ. ಜತೆಗೆ ಅಂತರ ಬೆಳೆಯಾಗಿ ಮೆಣಸು ಹಾಕಿದ್ದಾರೆ. ಹೀಗೆ ಎರಡು ಬೆಳೆಗೆ ಪೂರಕವಾಗುವಂತೆ ವ್ಯವಸ್ಥೆ ಮಾಡಿಕೊಂಡಿರುವುದು ಅವರಿಗೆ ಹಲವು ವಿಧದಲ್ಲಿ ಅನುಕೂಲ ಮಾಡಿಕೊಟ್ಟಿದೆ.
ಸಹಾಯಧನ ಪಡೆದುಕೊಂಡಿದ್ದು, ತೋಟಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ನೀರು ವ್ಯರ್ಥಗೊಳಿಸದೆ ಉತ್ತಮ ಇಳುವರಿ ಪಡೆಯಲು ಇದರಿಂದ ಸಾಧ್ಯವಾಗುತ್ತಿದೆ. ಇಲಾಖೆ ಅಧಿಕಾರಿಗಳು ಆಗಾಗ ಜಮೀನಿಗೆ ಬಂದು ಸಲಹೆ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ ಮಾರ್ಕಂಡಯ್ಯ.
ಈ ರೈತ ದಿನದ ಸಾಕಷ್ಟು ಅವಧಿಯನ್ನು ತೋಟದಲ್ಲಿ ಕಳೆಯುತ್ತಿದ್ದು, ಕುಟಂಬದವರು ಕೂಡ ರೈತ ಬೀಜಕಲ್‌ಗೆ ಸಾಥ್ ನೀಡುತ್ತಿದ್ದಾರೆ. ಅಣ್ಣಂದಿರಾದ ಶರಣಯ್ಯ ಮತ್ತು ಗವಿಸಿದ್ದಯ್ಯನ ಸಹಕಾರವಿದೆ. ತಂದೆ ದೇವಯ್ಯ ಬೀಜಕಲ್ ಸಲಹೆ ಕೊಟ್ಟು ಬೆನ್ನು ತಟ್ಟುತ್ತಾರೆ. ರಂಟೆ ಕುಂಟೆ, ನೀರು ಹಾಯಿಸುವುದು, ತಪ್ಪಲು ಕಟಾವು ಮಾಡುವುದು, ಮಾರುಕಟ್ಟೆಗೆ ಹೋಗುವಂಥ ಎಲ್ಲ ಕಾರ‌್ಯವನ್ನು ಸ್ವತಃ ನಿರ್ವಹಿಸುತ್ತಾರೆ.
ಸರಿಯಾಗಿ ಗೊಬ್ಬರ ನೀಡುವುದು, ಅಗತ್ಯಕ್ಕನುಗುಣವಾಗಿ ನೀರು ಹಾಯಿಸುವುದು, ಹೀಗೆ ಅಧಿಕ ಶ್ರಮ ಹಾಕಿದರೆ ಅದಕ್ಕೆ ತಕ್ಕ್ಕುದಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಕಾಯಕವೇ ಕೈಲಾಸದಂತೆ ಮಳೆ, ಚಳಿ, ಬಿಸಿಲು ಎನ್ನದೇ ಭೂ ತಾಯಿ ಮಡಿಲಲ್ಲಿ ಕೃಷಿ ಮಾಡುತ್ತಿದ್ದು ನೆಮ್ಮದಿಯ ಜೀವನ ನನ್ನದಾಗಿದೆ ಎನ್ನುತ್ತಾರೆ ಕೃಷಿಕ ಬೀಜಕಲ್.
ರೇಷ್ಮೆ ಹುಳಗಳನ್ನು ಹಾಕುವುದಕ್ಕಾಗಿ ಸುಸಜ್ಜಿತವಾದ ಶೆಡ್ ನಿರ್ಮಿಸಿದ್ದು, ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ವರ್ಷಕ್ಕೆ ಆರು 6 ಬಾರಿ ಇಳುವರಿ ತರುವ ಕಾರ್ಯವಿದು. ಒಮ್ಮೆಗೆ 250-300 ಕೆಜಿ ಹುಳವನ್ನು ಶಿರಹಟ್ಟಿ, ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತದೆ. ಒಂದು ಸಲಕ್ಕೆ ಖರ್ಚು ವೆಚ್ಚ ಕಳೆದು ಕನಿಷ್ಠ 50 ಸಾವಿರ ರೂ. ಆದಾಯ ಸಿಗುತ್ತದೆ ಎನ್ನುತ್ತಾರೆ ಬೀಜಕಲ್.
ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.
ಕೊನೆಯ ಮಾರ್ಪಾಟು : 2/19/2020
ಆರ್ಥಿಕ ಬಿಕ್ಕಟ್ಟಿನ ಪರಿಣಾಮ ರೇಷ್ಮೆ ಕೃಷಿ-ಕೈಗಾರಿಕೆ...
ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ವೈಜ್ಞಾನಿಕ ಬೇಸಾಯ ಕ್ರಮಗಳ ...