ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಅತ್ಯುತ್ತಮ ಶೈಕ್ಷಣಿಕ ರೂಢಿಗಳು / ಗೀತಾ / ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ

ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಸಂಸ್ಕೃತಿ ಎನ್ನುವುದು ಒಂದು ದೇಶದ ಅಭಿವೃದ್ದಿಯಲ್ಲಿ ಸುಭದ್ರಾ ಅಡಿಗಲ್ಲಾಗಿರುವಂಥದ್ದು. ಕಾಲಕ್ಕೆ ತಕ್ಕಂತೆ ಹೊಂದಿಕೊಂಡು, ನಮ್ಮ ಆಚಾರಗಳನ್ನು ಉಳಿಸಿಕೊಂಡರೆನೆ ನಾವು ಪ್ರಶಾಂತವಾಗಿ ಬದುಕುವುದಕ್ಕೆ ಸಾಧ್ಯ.ಅಂತಹ ತಳಪಾಯ ಮರೆತು ಜೀವಿಸುವುದಕ್ಕೆ ಸಾಧ್ಯವಿಲ್ಲ.

ಅದರಲ್ಲೂ ಮಾನವ ಸಂಸ್ಕೃತಿಯ ಇತಿಹಾಸದಲ್ಲಿ ಹೆಣ್ಣಿಗೆ ಪ್ರತ್ಯೇಕವಾದ ಸ್ಥಾನವಿದೆ. ಆದಿ ಸಮಾಜದ ಪರಿಕಲ್ಪನೆಯಲ್ಲಿ ತಾಯಿ ಮಕ್ಕಳನ್ನೇ ಗುರುತಿಸಿದ್ದಾರೆ. ಮಗುವನ್ನು ಜನ್ಮಕ್ಕೆ ಕಾರಣನಾದ ತಂದೆಗಿಂತ ಹೆತ್ತ ತಾಯಿಯೊಡ ಗುರ್ತಿಸಲಾಗುತ್ತಿತ್ತು. ಶಿಶುವೊಂದು ಜನ್ಮ ತಳೆಯುವ ಮುನ್ನಿನ ಸ್ಥಿತಿಯಿಂದಲೇ ತಾಯಿ ಆಸರೆಯಲ್ಲಿ ಬೆಳೆದು ಮುಂದೆ ಅದು ತನ್ನ ವ್ಯಕ್ತಿತ್ವವನ್ನು ಆ ತಾಯಿಯಿಂದಲೇ ಪಡೆಯುತ್ತದೆ.

ಒಂದು ಸಂಸಾರದಲ್ಲಿ ಗೃಹಿಣಿಯ ಪಾತ್ರ ಬಹಳ ಪ್ರಮುಖವಾದುದು. ಗೃಹ ಹಾಗೂ ಗೃಹಿಣಿ ಎನ್ನುವುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಂಸಾರವನ್ನು ನಡೆಸಲು ಗಂಡಿನಿಂದಲೇ ಸಾಧ್ಯವಿಲ್ಲ, ಹೆಣ್ಣು ಕೂಡ ಅಗತ್ಯ.ಪ್ರಾಚಿನ ಕಾಲದಲ್ಲೂ ಕೂಡ ಮಾತೃ ಸಮಾಜದ ಪರಿಕಲ್ಪನೆ ಇದ್ದಂತೆ ಇಂದಿಗೂ ಕೂಡ ನಮ್ಮ ದೇಶದ ಮೂಲನಿವಾಸಿಗಳ ಬುದಕತ್ತುಗಳಲ್ಲಿ ಕೇರಳ ಮುಂತಾದ ಕಡೆ ಸಮುದಾಯವು ಮಾತೃ ಸ್ವರೂಪದ್ದಾಗಿದೆ.

ಸತ್ಪುರುಷರನ್ನು ಪಡೆದು ಅವರಿಗೆ ಸದ್ಬುದ್ದಿಯನ್ನು ಕಳಿಸಿ ಮನೆಯ ಆಡಳಿತ ಕಾರ್ಯವನ್ನು ಶಿಸ್ತಿನಿಂದ ನಡೆಸುವುದು ಗೃಹಿಣಿಯ ಆದ್ಯ ಕರ್ತವ್ಯ. ಮುಂದೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಗತ್ಯವಾದ ಧ್ಯೇಯಗಳನ್ನು ತುಂಬುವವಳೇ ತಾಯಿ. ಅದರಲ್ಲೂ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಶ್ರೇಷ್ಠ ಹಾಗೂ ಪವಿತ್ರ ಸ್ಥಾನ ನೀಡಲಾಗಿದೆ. ಇಲ್ಲಿನ ಹಿರಿಮೆ ಎಂದರೆ ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ಕಂಡಿರುವುದು. ಅದರಂತೆ "ಎಲ್ಲೇ ನಾರಿಯರು ಪೂಜಿಸಲ್ಪಡುತಾರೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ." ಎಂಬ ನಂಬಿಕೆ ನಮ್ಮ ಸಂಸ್ಕ್ರುತಿಯಲ್ಲಿದೆ. ನಮ್ಮಲ್ಲಿ ತಾಯಿಯನ್ನು ಸ್ವರ್ಗಕ್ಕಿಂತಲೂ ಮಿಗಿಲು ಎಂದು ಆರಾಧಿಸುತ್ತಾರೆ. ಜನಪದದಲ್ಲಿ 'ಮಾತೆಗಿಂತ ಬಂಧುಗಳಿಲ್ಲ' ಎಂದಿದ್ದಾರೆ. ಆದರೆ ಅವಳ ಸಂಬಂಧ ಬಾಂದವ್ಯಗಲಿಗಿಂತಲೂ ಮಿಗಿಲಾದುದು. ತಾಯಿ ತನ್ನ ಮಕ್ಕಳ ಸಂತೋಷದಲ್ಲೇ ತಾನು ತೃಪ್ತಿ ಪಟ್ಟುಕೊಳ್ಳುವನ್ತಹವಳು. ತಾಯಿಯ ಮಮತೆ ಪ್ರೀತಿ ವಾತ್ಸಲ್ಯ ಯಾವುದೇ ವಸ್ತುವಿಗೂ ಕೂಡ ಸರಿಸಾಟಿಯಾಗಲಾರದು. ಹಿಂದೂ ಸಂಸ್ಕೃತಿ ಅನೇಕ ಏಳು ಬೀಳುಗಳನ್ನು ಎದುರಿಸಿ, ಕ್ರೂರ ದಬ್ಬಾಳಿಕೆಗೆ ಸಿಕ್ಕಿ ನರಳಿದ್ದರೂ, ಇಂದು ಕೂಡ ಅದು ತನ್ನ ಸತ್ವವನ್ನು ಉಳಿಸಿಕೊಂಡು ಅಚ್ಚಳಿಯದೆ ಬೆಳಗುತ್ತಿರುವುದು ಈ ಮಣ್ಣಿನ ಹಣ್ಣು ಉಳಿಸಿಕೊಂಡು ಬಂದಿರುವ ತಾಳ್ಮೆ, ಸಹನಾ ಗುಣಗಳಿಂದ. ತಾನು ನೊಂದರೂ ಇತರ ಕಷ್ಟ ಪಡುವ ಜೀವಿಗಳಲ್ಲಿ ಅನುಕಂಪ ಪಡುವ ಅವಳ ಗುಣ ಎಂದಿಗೂ ಪ್ರಿಯ, ಅದನ್ನೇ ಬಿಟ್ಟು ಬಿಟ್ಟರೆ ತುಂಬಾ ಕಷ್ಟ. ಇಂದೂ ಕೂಡ ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಜ್ಞಾನಕ್ಕಾಗಿ, ಮನೋಸ್ಥೈರ್ಯಕ್ಕಾಗಿ, ಶಾಂತಿಗಾಗಿ ಮತ್ತು ಹೆಣ್ಣಿನ ಸಹನಾಗುಣಕ್ಕಾಗಿ ಗೌರವಿಸುತ್ತಾರೆ.

ಆದರೆ ಪಾಶ್ಚಾತ್ಯ ದೇಶದ ಪರಿಸ್ಥಿತಿಗಳು ಬೇರೆ. ಅಲ್ಲಿನ ಮಹಿಳೆ ತನಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿ ಪರಿವರ್ತಿಸಿಕೊಂದಿದ್ದಾಳೆ. ನಮ್ಮ ದೇಶದ ಹೆಣ್ಣಿನಂತೆ ಅವಳು ತಾನು ತನ್ನ ಮನೆಯೆಂದುಕೊಂಡು ಸಂತೃಪ್ತಿಯಿಂದ ಬಾಳಲಾರಳು. ಅವಳು ಗಂಡಿಗೆ ಸರಿಸಮಾನವಾಗಿ ನಿಲ್ಲುವ ಹವಣಿಕೆಯಿಂದ ಆಡಂಬರದ ಮೆರಗಿನ ಹೆಂಡತಿಯಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಗಂಡಸಿನೊಂದಿಗೆ ಪೈಪೋಟಿ ನಡೆಸುತ್ತಾಳೆ. ಅಲ್ಲಿ ಆಕೆ ಸ್ತ್ರಿ ಸಹಜ ಗುಣಗಳನ್ನು ಮರೆತು ಕೇವಲ ಯಾಂತ್ರಿಕೃತ ಬದುಕನ್ನು ನಡೆಸುತ್ತಿರುತ್ತಾಳೆ. ಅಲ್ಲಿನ ಯಾವುದೇ ಸಂಬಂಧಗಳಿಗೂ ಗಟ್ಟಿ ನೆಲೆ ಎಂಬುದಿರುವುದಿಲ್ಲ. ನಮ್ಮಲ್ಲಿ ಇರುವಂತೆ ಎಂದೂ ಅವರು ಬಾಂಧವ್ಯಗಳಿಗೆ ಅಂಟಿಕೊಂಡು ಇರುವುದಿಲ್ಲ. ರಾಜಕಾರಣಿಯಾಗಿ, ಕಾರ್ಯದರ್ಶಿ, ಕೈಗಾರಿಕಾ ಕೆಲಸಗಾರಳಾಗಿ ಇನ್ನೂ ಹಲವು ರಂಗಗಳಲ್ಲಿ ದುಡಿದರೂ ಕೂಡ ಆಕೆಗೆ ತೃಪ್ತಿ ಎಂಬುದಿಲ್ಲ . ಪಾಶ್ಚಾತ್ಯ ದೇಶದ ಸ್ತ್ರಿ ಮಕ್ಕಳನ್ನು ಹೆರಲಾರಳು, ಹೆತ್ತರೂ ಕೂಡ ನಮ್ಮ ತಾಯಿಯಂತೆ ಪ್ರೀತಿಯಿಂದ ಪೊರೆಯಲಾರಳು. ಮುಂದೆ ಆ ಮಕ್ಕಳು ದಾದಿಯರ ಪೋಷಣೆಯಲ್ಲೋ ಶಿಶು ಸಮ್ರಕ್ಷಣಾಲಯದಲ್ಲೊ ಮಾತೆಯ ವಾತ್ಸಲ್ಯ ಆತ್ಮೀಯತೆಗಳಿಲ್ಲದೆ ಒಂಟಿಯಾಗಿ ಬೆಳೆಯುತ್ತಾರೆ. ಕ್ರಮೇಣ ಅವರು ಮಾನಸಿಕ ಕ್ಲೇಷಕ್ಕೆ ಒಳಗಾಗಿ ಯಾನ್ತ್ರಿಕೃತ ಬದುಕಿಗೆ ಬೇಸತ್ತು ದುರಾಸೆ ಕ್ರೂರತನ ಅಸೂಯೆ ಮತ್ತು ದುರ್ನದತೆಗಳಿಂದ ತುಂಬಿ ತುಳುಕುತ್ತಾರೆ. ಆ ದೇಶಗಳಲ್ಲಿ ಹೆಣ್ಣು ಎಂದೂ ಕೂಡ ಇನ್ನೊಬ್ಬರ ಅಧೀನದಲ್ಲಿ ಬಾಳಲಾರಳು. ಆದರೂ ಕೂಡ ಅವಳು ಸ್ವತಂತ್ರವಾಗಿ ಬದುಕಿದರೂ ಅತಂತ್ರ ಸ್ಥಿತಿಯಲ್ಲಿ ನರಳುತ್ತಲೇ ಇರುತ್ತಾಳೆ.

ನಮ್ಮ ಸಂಸ್ಕೃತಿಯಲ್ಲೂ ಕೂಡ ಹೆಣ್ಣು ನಾನಾ ರಂಗದಲ್ಲಿ ಕೆಲಸ ಕೈ ಗೊಂಡಿದ್ದಾಳೆ. ರಾಣಿಯಾಗಿ, ಸೇನಾನಿಯಾಗಿ, ರಾಜಕಾರಣಿಯಾಗಿ, ಅಧಿಕಾರಿಯಾಗಿ ಇದ್ದರೂ ಎಂದೂ ತನ್ನ ತನ ಮರೆಯದೇ ಅವಳು ತನ್ನ ಸ್ವಂತ ಕರ್ತವ್ಯಗಳಿಂದ ವಿಮುಖಳಾಗಿಲ್ಲ.

ಆದರೆ, ಇಂದು ಪರಿಸ್ಥಿತಿಗಳು  ಬದಲಾಗುತ್ತಿವೆ. ನಾಗರೀಕತೆ ಎನ್ನುವ ಹೆಸರಿನಲ್ಲಿ ಎಲ್ಲಾ ಸಂಬಂಧಗಳು ಕೂಡ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಆಧುನಿಕತೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ವಿಲಕ್ಷಣ ಜೀವನಕ್ಕೆ ಮಾರುಹೋಗಿ ಇಂದು ಅನೇಕ ಜನರು ತಮ್ಮ ಬದುಕನ್ನು ನರಕ ಸದೃಶ ಮಾಡಿಕೊಳ್ಳುತ್ತಿದ್ದಾರೆ. ನಾಗರೀಕತೆ ಎಂಬ ಹೆಸರಿನಲ್ಲಿ ಇಂದು ನಡೆಯುತ್ತಿರುವ ಎಲ್ಲಾ ಅನಾಹುತಗಳು ಬಹಳ ಅಪಾಯಕಾರಿಯಾಗಿವೆ. ನಮ್ಮ ಶಿಷ್ಟತೆ, ಸಂಪ್ರದಾಯ, ಆಚಾರ-ವಿಚಾರಗಳನ್ನು ಮರೆತು ನಾವು ಆಧುನಿಕತೆ ಎಂಬ ಸೋಗಿನಲ್ಲಿ ಮೆರೆಯುತ್ತಿದ್ದೇವೆ.

ನಮ್ಮ ದೇಶದಲ್ಲೂ ಕೂಡ ಇಂದು ಸ್ತ್ರಿ ಸ್ವಾತಂತ್ರ್ಯ ಚಳುವಳಿಗಳು ನಡೆದು ಅವಳಿಗೆ ಸ್ವತಂತ್ರ ಸಿಕ್ಕಿರಬಹುದು. ಆದರೆ, ಅವಳು ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದಾಳೆ ಎಂಬುದು ಗಮನಿಸಬೇಕಾದ ಅಂಶ. ಕೆಲವೆಡೆ ಅದನ್ನು ಸ್ವೇಚ್ಚೆಯಾಗಿ ಬಳಸಿಕೊಂಡು ತನ್ನ ತನವನ್ನೇ ಕಳೆದುಕೊಳ್ಳುತ್ತಿದ್ದಾಳೆ. ಸ್ತ್ರಿ ಸಹಜ ಗುಣಗಳನ್ನು ಮರೆತು ರಂಗಿನ ಆಡಂಬರದ ಪ್ರಪಂಚದಲ್ಲಿ ಮುಳುಗಿ ಹೋಗುತ್ತಿದ್ದಾಳೆ. ಸಂಘ ಸಂಸ್ಥೆಗಳೂ, ಸಮಾಜ ಕಾರ್ಯ ಎಂಬ ಹೆಸರಿನಲ್ಲಿ ಇಂದು ಮಹಿಳೆಯರು ತಮ್ಮ ಸ್ವಂತ ಜವಾಬ್ದಾರಿಯನ್ನು ಮರೆತು ಅವರದೇ ಆದ ಭ್ರಮಾಲೋಕದಲ್ಲಿ ಮೈ ಮರೆತಿದ್ದಾರೆ. ಅವರಿಗೆ ಇದರಿಂದ ಮುಂದೆ ಆಗುವ ದುಷ್ಪರಿಣಾಮಗಳ ಅರಿವಿಲ್ಲ. ಮಕ್ಕಳನ್ನು ಕೂಡ ಗಮನಿಸಲು ಸಮಯವಿಲ್ಲ. ಇದರಿಂದ ಮುಂದೆ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮ ಅರಿವಿಗೆ ನಿಲುಕದ್ದು, ತಾಯಿಯ ಪ್ರೀತಿ, ಮಮತೆಯಿಂದ ವಂಚಿತರಾದ ಮಕ್ಕಳು ಸಮಾಜಕ್ಕೆ ಕಂಟಕ ಪ್ರಾಯರಾಗಬಹುದು. ಇಂದು ಹಲವಾರು ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನರಳುತ್ತಿದ್ದಾರೆ. ಹೀಗೆ ಅವಳು ತಾನೂ, ತನ್ನದೂ ಎಂದು ಕೊಂಡು ಆಡಂಬರದ ಬದುಕಿಗೆ ದಾಸಿಯಾಗಿರುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಅವಳಿಗೆ  ನೀಡಿರುವ ಸ್ಥಾನಮಾನಗಳು ಸಿಗದೇ ಹೋಗಬಹುದು. ಮುಂದೆ ಅವಳನ್ನು ಭೋಗದ ವಸ್ತುವೆಂದು ನೋಡುತ್ತಾರೆಯೇ ವಿನಃ ಪೂಜ್ಯ ಭಾವನೆಯಿಂದ ಕಾಣುವುದಿಲ್ಲ. ಸರಿಯಾದ ಸಮಯದಲ್ಲಿ ಎಚೆತ್ತುಕೊಳ್ಳದಿದ್ದರೆ ತನ್ನ ಅವನತಿಯ ಹೊಂಡವನ್ನು ಸ್ವತಃ ಅವಳೇ ತೋಡಿಕೊಳ್ಳಬೆಕಾಗುತ್ತದೆ. ಮುಂದೆ ಅದಕ್ಕಾಗಿ ಪಶ್ಚಾತಾಪ ಪಟ್ಟರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

ಆದ್ದರಿಂದ ಸಕಾಲದಲ್ಲಿ ಎಚ್ಚೆತ್ತುಕೊಂಡು ಅವಳು ತಾನು ಮುನ್ನಿನಂತೆ ನಮ್ಮ ಆಚಾರ-ವಿಚಾರಗಳನ್ನು ಅನುಸರಿಸಿ ಅನ್ಯ ಸಂಸ್ಕೃತಿಯನ್ನು ಗೌರವಿಸಬೇಕು, ನಮ್ಮ ಸಂಸ್ಕೃತಿಯನ್ನು ಪೂಜಿಸಬೇಕು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಈ ನೀರಸ ಬದುಕಿನಲ್ಲಿ ಸ್ನೇಹ ಸೊರಗುತ್ತಿದೆ. ಆತ್ಮೀಯತೆ ಅಳಿಸಿ ಹೋಗುತ್ತದೆ.ಪ್ರೀತಿ ಕರಗಿ ಹೋಗುತ್ತಿದೆ. ಇದಕ್ಕೆಲ್ಲಾ ಕಾರಣ ನಾವು ಬೆಳೆಸಿಕೊಳ್ಳುತ್ತಿರುವ ಆಧುನಿಕತೆಯ ಮೋಹ. ಎಲ್ಲಾ ಬಾಂಧವ್ಯಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುತ್ತಿರುವ ಭಾವ. ಇಂದು ಸಂಬಂಧಗಳಲ್ಲಿನ ಮಮತೆ ಮಾಯವಾಗಿ ಜನರಿಗೆ ಎಲ್ಲಾ ಯಾಂತ್ರಿಕೃತ ಅನಿಸುತ್ತದೆ. ಇದನ್ನು ಬಿಟ್ಟು ಮಾನವ ಸಹಜವಾದ ಬಂಧನವನ್ನು ಉಳಿಸಿಕೊಳ್ಳಬೇಕಾದರೆ ನಾವು ಮತ್ತೆ ನಮ್ಮ ಹಿಂದಿನ ವಾತ್ಸಲ್ಯ  ಜೀವನಕ್ಕೆ ಮರಳಿ ಹೋಗಬೇಕು. ಇಲ್ಲದಿದ್ದರೆ ಬದುಕು ಬರಡಾಗಿ, ಬಾಳು ಹಸನಾಗದೆ ಮುರುಟಿ ಹೋಗಬಹುದು. ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ ಅಲ್ಲವೇ?.

ಮೂಲ: ರಜತ ದರ್ಪಣ.

3.04854368932
Madu Sep 08, 2019 08:09 PM

Good

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top