ನವಜಾತ ಶಿಶು ಸಮರ್ಪಕವಾಗಿ ಉಸಿರಾಡದೇ ಇರುವುದು ಅಥವಾ ಅಳದೇ ಇರುವುದನ್ನೇ ನವಜಾತ ಶಿಶು ಅಸ್ಫಿಕ್ಸಿಯಾ ಎನ್ನಲಾಗುತ್ತದೆ. ನವಜಾತ ಶಿಶುಗಳು ಜನಿಸಿದಾಕ್ಷಣ ಯಾವುದೇ ಹೆಚ್ಚಿನ ನೆರವಿಲ್ಲದೇ ಉಸಿರಾಡಲು ಆರಂಭಿಸುತ್ತವೆ ಮತ್ತು ಆಗಾಗ್ಗೆ ಅಳುವುದೂ ಸಾಮಾನ್ಯ. ಗರ್ಭದಿಂದ ಹೊರಬಂದ ಒಂದು ನಿಮಿಷದೊಳಗೆ ಶಿಶುಗಳು ಸಮರ್ಪಕವಾಗಿ ಉಸಿರಾಡುತ್ತವೆ ಅಥವಾ ಅಳಲಾರಂಭಿಸುತ್ತವೆ. ಈ ಎರಡೂ ಕ್ರಿಯೆಗಳನ್ನು ಮಾಡಲು ವಿಫಲವಾದ ಮಗುವಿಗೆ ನಿಯೋನಾಟಲ್ ಅಸ್ಫಿಕ್ಸಿಯಾ ಇದೆ ಎಂದು ಹೇಳಲಾಗುತ್ತದೆ. ಹೆರಿಗೆಯಾದ ತತ್ ಕ್ಷಣ ತುರ್ತಾದ ಚಿಕಿತ್ಸೆ ಒದಗಿಸದಿದ್ದಲ್ಲಿ, ಈ ಸ್ಥಿತಿಯು ಹಿಪೋಕ್ಸಿಯಾ ಎಂಬ ರೋಗಕ್ಕೆ ತಿರುಗಬಹುದು. ಸೂಕ್ತವಾಗಿ ನಿಭಾಯಿಸದಿದ್ದಲ್ಲಿ ಈ ರೋಗ ಲಕ್ಷಣ ನವಜಾತ ಶಿಶುವಿನ ಮರಣಕ್ಕೂ ಕಾರಣವಾಗಬಹುದು.
ದೇಹದ ಜೀವಕೋಶಗಳಲ್ಲಿ ಆಮ್ಲಜನಕ ಅತಿ ಕಡಿಮೆ ಪ್ರಮಾಣದಲ್ಲಿರುವ ಸ್ಥಿತಿಯನ್ನು ಹಿಪೋಕ್ಸಿಯಾ ಎಂದು ಗುರುತಿಸಲಾಗುತ್ತದೆ. ಭ್ರೂಣ ಅಥವಾ ನವಜಾತ ಶಿಶುವಿಗೂ ಈ ಬಗೆ ಸ್ಥಿತಿ ಒದಗಬಹುದು. ಗರ್ಭವೇಷ್ಟನ (ಪ್ಲಾಸೆಂಟಾ –ಮಾತೃ ದೇಹಕ್ಕೂ ಹಾಗೂ ಭ್ರೂಣಕ್ಕೂ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುವ ಅಂಗಾಂಶ, ಅದನ್ನು ಮಾಸ ಎಂದೂ ಕರೆಯುತ್ತಾರೆ.) ಸಮರ್ಪಕ ಪ್ರಮಾಣದಲ್ಲಿ ಆಮ್ಲಜನಕವನ್ನು ಭ್ರೂಣಕ್ಕೆ ತಲುಪಿಸಲು ವಿಫಲವಾದಾಗ, ಭ್ರೂಣ ಗಂಡಾತರ ಸ್ಥಿತಿಯನ್ನು ತಲುಪಿದಾಗ ಹಿಪೋಕ್ಸಿಯಾ ಉಂಟಾಗುತ್ತದೆ. ಅದೇ ಬಗೆಯಲ್ಲಿ, ಜನನವಾದ ಬಳಿಕ, ಮಗುವು ಸರಿಯಾಗಿ ಉಸಿರಾಡಲು ಸಾಧ್ಯವಾಗದೇ ಹೋದರೆ, (ಅಂದರೆ, ನಿಯೋನಾಟಲ್ ಅಸ್ಫಿಕ್ಸಿಯಾ) ಅದು ಮುಂದೆ ಹಿಪೋಕ್ಸಿಯಾವಾಗಿ ರೂಪಾಂತರಗೊಳ್ಳುತ್ತದೆ. ಹಿಪೋಕ್ಸಿಯಾದ ಪರಿಣಾಮವಾಗಿ ಮಗುವಿನ ಹೃದಯದ ಬಡಿತ ಕುಸಿದು, ಸೆಂಟ್ರಲ್ ಸಯನೋಸಿಸ್ (ದೇಹ ನೀಲಿಗಟ್ಟುವಿಕೆ) ಆರಂಭವಾಗಿ, ದೇಹ ಜಡವಾಗುತ್ತದೆ. ಹೆರಿಗೆಯ ಸಂದರ್ಭದಲ್ಲಿ ಬಹುತೇಕ ಭ್ರೂಣದ ಹಿಪೋಕ್ಸಿಯಾ ಉಂಟಾಗುತ್ತದೆ.
ನಿಯೋನಾಟಲ್ ಅಸ್ಫಿಕ್ಸಿಯಾ ಹಾಗೂ ಹಿಪೋಕ್ಸಿಯಾಗಳ ವ್ಯಾಖ್ಯೆಗಳು ಒಂದೇ ಅಲ್ಲ. ಭ್ರೂಣದಲ್ಲಿನ ಹಿಪೋಕ್ಸಿಯಾವು ನವಜಾತ ಅಸ್ಫಿಕ್ಸಿಯಾಕ್ಕೆ ಕಾರಣವಾಗಬಲ್ಲದು. ನವಜಾತ ಅಸ್ಫಿಕ್ಸಿಯಾವನ್ನು ಸರಿಯಾಗಿ ನಿಭಾಯಿಸದೇ ಇದ್ದಲ್ಲಿ ಅದು ಹಿಪೋಕ್ಸಿಯಾಕ್ಕೆ ಕಾರಣವಾಗುತ್ತದೆ. ಭ್ರೂಣ ಹಿಪೋಕ್ಸಿಯಾದಿಂದಲೇ ಹುಟ್ಟುವ ಅನೇಕ ಶಿಶುಗಳು, ಜನನ ಸಂದರ್ಭದಲ್ಲಿ ಅಳುತ್ತವಾದದ್ದರಿಂದ ಅವುಗಳಲ್ಲಿ ಜನನಾನಂತರ ಅಸ್ಫಿಕ್ಸಿಯಾ ಇರುವುದಿಲ್ಲ.
ಜನನಾಂತರ ಶಿಶುವಿನ ಕ್ಲಿನಿಕಲ್ ಸ್ಥಿತಿಯನ್ನು ಅಂದಾಜಿಸುವ ಕ್ರಮಬದ್ಧ ವ್ಯವಸ್ಥೆಯನ್ನು ಎಪಿಜಿಎಆರ್ ಸ್ಕೋರ್ ಎಂದು ಕರೆಯಲಾಗುತ್ತದೆ. ಎಪಿಜಿಎಆರ್ ಸ್ಕೋರ್ ಐದು ಪ್ರಮುಖ ಅಂಶಗಳನ್ನು ಅವಲಂಬಿಸಿರುತ್ತದೆ.
ಪ್ರತಿ ಪ್ರಮುಖ ಅಂಶಕ್ಕೂ 0 ಅಥವಾ 1 ಅಥವಾ 2 ಅಂಕಗಳನ್ನು ನೀಡಲಾಗುತ್ತದೆ. ಪ್ರಮುಖ ಅಂಶವೊಂದು ಸಹಜ ಸ್ಥಿತಿಯಲ್ಲಿದ್ದರೆ, ಅದಕ್ಕೆ 2 ಅಂಕಗಳನ್ನು, ಕೊಂಚ ವಿಪರೀತವಿದ್ದರೆ ಅದಕ್ಕೆ 1 ಅಂಕವನ್ನು ಹಾಗೂ ತೀವ್ರ ತೆರನಾಗಿ ವಿಪರೀತವಾಗಿದ್ದರೆ ಅದಕ್ಕೆ 0 ಅಂಕವನ್ನೂ ನೀಡಲಾಗುತ್ತದೆ. ಪ್ರತಿ ಪ್ರಮುಖ ಅಂಶಕ್ಕೂ ಈ ಬಗೆಯಲ್ಲಿ ಅಂಕ ನೀಡಿ ಅವುಗಳ ಮೊತ್ತವನ್ನು ತೆಗೆದುಕೊಳ್ಳಲಾಗುತ್ತದೆ. ಈ ಪದ್ಧತಿಯಲ್ಲಿ ಗರಿಷ್ಠ ಅಂಕ 10 ಹಾಗೂ ಕನಿಷ್ಠ ಅಂಕ 0.
ಸಾಮಾನ್ಯವಾಗಿ ಈ ಅಂಕಗಳು 7 -10 ನಡುವಿರುತ್ತದೆ. 4-6ರ ನಡುವೆ ಅಂಕ ಪಡೆದ ಶಿಶುಗಳು ಮಧ್ಯಮ ಪ್ರಮಾಣದಲ್ಲಿ ತೊಂದರೆಗೊಳಗಾದವು ಹಾಗೂ 0-3 ಅಂಕ ಪಡೆದ ಶಿಶುಗಳು ಗಂಭೀರ ಸಮಸ್ಯೆಗಳನ್ನು ಹೊಂದಿರುತ್ತವೆ ಎಂದು ಅಂದಾಜಿಸಲಾಗುತ್ತದೆ.
ಹೆರಿಗೆಯ ಸಂದರ್ಭದಲ್ಲಿ ಬಹುತೇಕ ಶಿಶುಗಳು ಪರಿಧಿಯ ಸಯನೋಸಿಸ್ ಹೊಂದಿರುವುದರಿಂದ ಜನನದ ಒಂದು ನಿಮಿಷದಲ್ಲಿ ಆ ಶಿಶುಗಳು 10 ಅಂಕಗಳನ್ನು ಪಡೆಯುವುದು ಕಷ್ಟ ಸಾಧ್ಯ. ಹುಟ್ಟಿದ 5 ನಿಮಿಷದ ಬಳಿಕ ಮಕ್ಕಳು 10 ಅಂಕಗಳನ್ನು ಪಡೆಯುತ್ತವೆ. ಈ ಅಂಕಗಳನ್ನು ನಿಖರವಾಗಿ ನೀಡದೇ, ಕೇವಲ ಅಂದಾಜಿನಲ್ಲಿ ನೀಡಿದರೆ, ಹೆಚ್ಚು ಅಂಕ ದೊರೆಯಬಹುದು. ಎಜಿಪಿಎಆರ್ ಸ್ಕೋರಿಂಗ್ ಪದ್ಧತಿಯಲ್ಲಿ ಆಗುವ ದೊಡ್ಡ ಪ್ರಮಾದವೆಂದರೆ, ಈ ಬಗೆಯಲ್ಲಿ ಅಂದಾಜಿಸುವುದೇ ಆಗಿದೆ.
ಆರೋಗ್ಯವಂತ ಶಿಶುವಿನ ಎಪಿಜಿಎಆರ್ ಸ್ಕೋರ್ 7 ಅಥವಾ ಅದಕ್ಕಿಂತ ಹೆಚ್ಚು
ಹೆರಿಗೆ ಸಂಪೂರ್ಣಗೊಂಡ ಒಂದು ನಿಮಿಷದ ಬಳಿಕ ಶಿಶುವಿನ ಕ್ಲಿನಿಕಲ್ ಸ್ಥಿತಿಯನ್ನು ದಾಖಲಿಸಲು ಎಪಿಜಿಎಆರ್ ಸ್ಕೋರ್ ಲೆಕ್ಕ ಹಾಕಿ, ಮಗುವಿಗೆ ತುರ್ತು ಚಿಕಿತ್ಸೆಯೇನಾದರೂ ಒದಗಿಸಬೇಕಾದೀತೆ ಎಂಬುದನ್ನು ನಿರ್ಧರಿಸಬೇಕು. ಈ ಸ್ಕೋರ್ 7ಕ್ಕಿಂತ ಕಡಿಮೆಯಿದ್ದರೆ, ತುರ್ತು ಚಿಕಿತ್ಸೆಯ ಫಲಿತವನ್ನು ಪರಿಗಣಿಸಲು, ಈ ಕ್ರಮವನ್ನು 5ನೇ ನಿಮಿಷದಲ್ಲಿ ಪುನರಾವರ್ತನೆ ಮಾಡಬೇಕು. ಇನ್ನೂ ಕಡಿಮೆಯಿದ್ದರೆ, ಪ್ರತಿ ಐದು ನಿಮಿಷಗಳಿಗೊಮ್ಮೆ ಪುನರಾವರ್ತಿಸಬೇಕು. ಅನೇಕ ಆಸ್ಪತ್ರೆಗಳಲ್ಲಿ, ಒಂದನೇ ನಿಮಿಷದ ಅಂಕಗಳು 7ಕ್ಕಿಂತ ಹೆಚ್ಚಿದ್ದರೂ, ಪ್ರತಿ ಐದು ನಿಮಿಷಗಳಿಗೊಮ್ಮೆ ಪುನರಾವರ್ತಿಸಲಾಗುತ್ತದೆ. ಇದು ಅಗತ್ಯವಿಲ್ಲ. ಅಂಥ ಸಂದರ್ಭದಲ್ಲಿ ಶಿಶುವನ್ನು ತಾಯಿಗೆ ನೀಡಬಹುದು. ಮಗುವಿನ ಆರೋಗ್ಯದ ಕುರಿತು ಇದು ಅತಿ ಮುಖ್ಯ ದಾಖಲೆ.
ಎಲ್ಲ ಶಿಶುಗಳು ಜನಿಸಿದ ಒಂದು ನಿಮಿಷದೊಳಗೆ ಎಪಿಜಿಎಆರ್ ಸ್ಕೋರನ್ನು ಪಡೆಯಲೇಬೇಕು.
ಎಪಿಜಿಎಆರ್ ಅಂಕಗಳು ಕಡಿಮೆಯಾಗಲು ಹಲವಾರು ಕಾರಣಗಳಿವೆ. ಅವುಗಳೆಂದರೆ
ಹಿಪೋಕ್ಸಿಯಾದಿಂದ ಭ್ರೂಣ ಗಂಡಾಂತರಕಾರಿ ಸ್ಥಿತಿ ತಲುಪುವುದು ಹೆರಿಗೆ ಸಂದರ್ಭದಲ್ಲಿ ಮಾತ್ರ ಹಾಗೂ ನಿಯೋನಾಟಲ್ ಅಸ್ಫಿಕ್ಸಿಯಾಕ್ಕೆ ಅದೂ ಒಂದು ಪ್ರಮುಖ ಕಾರಣ ಎಂಬುದನ್ನು ಗಮನಿಸಿ.
ಜನನವಾದ ಒಂದು ನಿಮಿಷದೊಳಗಿನ ಎಪಿಜಿಎಆರ್ ಅಂಕಗಳು ಕಡಿಮೆ ಬಂದಿದ್ದರೆ, ಅದಕ್ಕೆ ಕಾರಣಗಳನ್ನು ಪತ್ತೆ ಹಚ್ಚುವುದು ಬಲು ಮುಖ್ಯ. ಈ ಅಂಕಗಳು ಐದು ನಿಮಿಷಗಳ ಬಳಿಕವೂ (ಸೂಕ್ತ ಚಿಕಿತ್ಸೆಯ ಬಳಿಕವೂ) ಏರಿಕೆಯಾಗದಿದ್ದರೆ, ಜನನ ಪೂರ್ವದಲ್ಲಿಯೇ ಭ್ರೂಣವು ಹಿಪೋಕ್ಸಿಯಾದಿಂದ ನರಳುತ್ತಿದೆ ಎಂದರ್ಥ.
ನಿಯೋನಾಟಲ್ ಅಸ್ಫಿಕ್ಸಿಯಾಕ್ಕೆ ಮುಖ್ಯ ಕಾರಣ ಹೆರಿಗೆ ಸಂದರ್ಭದಲ್ಲಿ ಕಾಣಿಸಿಕೊಂಡ ಹಿಪೋಕ್ಸಿಯಾ.
ಹೊಕ್ಕಳು ಬಳ್ಳಿಯ ರಕ್ತನಾಳದ ಸ್ಯಾಂಪಲ್ ಬೇಸ್ ಡಿಫಿಸಿಟ್ 10 ಅಥವಾ ಅದಕ್ಕೆ ಹೆಚ್ಚಿದ್ದರೆ, ಶಿಶುವಿಗೆ ಹೆರಿಗೆಪೂರ್ವದಲ್ಲಿಯೆ ಹಿಪೋಕ್ಸಿಯಾ ಇತ್ತು ಎಂಬ ಅಂಶವನ್ನು ಬಲವಾಗಿ ಸಮರ್ಥಿಸುತ್ತದೆ. ಗಂಡಾಂತರಕಾರಿ ಸ್ಥಿತಿಯಲ್ಲಿರುವ ಭ್ರೂಣದ ಹೆರಿಗೆ ಸಂದರ್ಭದಲ್ಲಿ ಇದು ಅತಿ ಉಪಯುಕ್ತ ಮಾಹಿತಿ. ಹೆರಿಗೆಯಾದ ಬಳಿಕ ಶಿಶುಗಳಿಗೆ ತತ್ ಕ್ಷಣದ ತುರ್ತು ಚಿಕಿತ್ಸೆ ನೀಡಲೂ ಈ ಮಾಹಿತಿ ಸಹಕಾರಿ.
ವಿಷಮ ಸ್ಥಿತಿಯಲ್ಲಿರುವ ಅಂದರೆ ಕಡಿಮೆ ಎಪಿಜಿಎಆರ್ ಅಂಕಗಳನ್ನು ಹೊಂದಿರುವ ಶಿಶುವಿನ ಉಸಿರಾಟ, ಹೃದಯದ ಬಡಿತ, ಮೈ ಬಣ್ಣ, ಮೈಕಾಂತಿ ಹಾಗೂ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಲು ಕೈಗೊಳ್ಳುವ ಸರಣಿ ಚಿಕಿತ್ಸಾ ಕ್ರಮಗಳನ್ನು ಶಿಶು ಮರುಚೈತನ್ಯ ಪೂರಣ ಎಂದು ಕರೆಯಲಾಗುತ್ತದೆ.
ಹುಟ್ಟಿದ ಬಳಿಕ ಸರಿಯಾಗಿ ಉಸಿರಾಡದ ಶಿಶುಗಳು (ಅಂದರೆ, ನಿಯೋನಾಟಲ್ ಅಸ್ಫಿಕ್ಸಿಯಾದಿಂದ ನರಳುವ ಶಿಶುಗಳು) ಅಥವಾ 7ಕ್ಕಿಂತ ಕಡಿಮೆಯಿರುವ ಎಪಿಜಿಎಆರ್ ಅಂಕಗಳನ್ನು ಹೊಂದಿರುವ ಶಿಶುಗಳಿಗೆ ತತ್ ಕ್ಷಣ ಮರುಚೈತನ್ಯ ಪೂರಣ ನೀಡಬೇಕು. ಎಪಿಜಿಎಆರ್ ಅಂಕಗಳು ಕಡಿಮೆಯಿದ್ದಷ್ಟೂ ಮರುಚೈತನ್ಯಪೂರಣದ ತುರ್ತು ಅಗತ್ಯ ಅಷ್ಟು ಜಾಸ್ತಿ. ಉಸಿರಾಟವನ್ನು ನಿಲ್ಲಿಸಿದ ಶಿಶು ಅಥವಾ ವಿಷಮ ಸ್ಥಿತಿಯನ್ನು ತೋರಿಸುವ ಅಥವಾ ನರ್ಸರಿಯಲ್ಲಿರುವ ಯಾವುದೇ ಶಿಶುವಿಗೂ ಮರುಚೈತನ್ಯ ಪೂರಣ ಚಿಕಿತ್ಸೆಗಳನ್ನು ನೀಡಬೇಕಾಗಬಹುದು. ಹಾಗಾಗಿ, ಹೆರಿಗೆಯಾಗುತ್ತಿದ್ದಂತೆ ಶಿಶುವಿನ ಕ್ಲಿನಕಲ್ ಸ್ಥಿತಿಯನ್ನು ವಿಧಿಯುಕ್ತವಾಗಿ ತಪಾಸಿಸುವುದು ಅತಿ ಮುಖ್ಯ.
7ಕ್ಕಿಂತ ಕಡಿಮೆ ಒಂದು ನಿಮಿಷದ ಎಪಿಜಿಆರ್ ಅಂಕ ಹೊಂದಿರುವ ಎಲ್ಲ ಶಿಶುಗಳಿಗೂ ಮರುಚೈತನ್ಯಪೂರಣ ಅಗತ್ಯ
ಆದರೆ, ವಾಡಿಕೆಯಲ್ಲಿ ಒಂದು ನಿಮಿಷವಾಗುವುದಕ್ಕೆ ಮುನ್ನವೇ, ಶಿಶುವಿಗೆ ಮರುಚೈತನ್ಯಪೂರಣ ಮಾಡಬೇಕಾಗಬಹುದು. ಆದ್ದರಿಂದ, ಜನನವಾದ 30 ಸೆಕೆಂಡುಗಳ ಬಳಿಕವೇ ಮರುಚೈತನ್ಯ ಪೂರಣದ ಅಗತ್ಯವನ್ನು ಅಂದಾಜಿಸಲು ಹಲವು ವಿಧಾನಗಳು ಹೇಳುತ್ತವೆ. ಆದರೆ, ಶಿಶುವು ಸಂಪೂರ್ಣವಾಗಿ ಒಣಗಿಸಿ, ಹೊಕ್ಕಳು ಬಳ್ಳಿಗೆ ಕ್ಲಾಂಪ್ ಹಾಕಲು ಹಾಗೂ ತತ್ ಕ್ಷಣದ ಸಾಮಾನ್ಯದ ತಪಾಸಣೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ.
ಸಾಧ್ಯ. ಈ ಮುಂದೆ ತಿಳಿಸಲಾದ ಕ್ಲಿನಿಕಲ್ ಸಂದರ್ಭಗಳಲ್ಲಿ, ಜನಿಸಿದ ಬಳಿಕ ಶಿಶುವು ನಿಯೋನಾಟಲ್ ಅಸ್ಫಿಕ್ಸಿಯಾದಿಂದ ನರಳುತ್ತಿರಬಹುದು ಮತ್ತು ಒಂದನೇ ನಿಮಿಷದಲ್ಲಿ ಅತಿ ಕಡಿಮೆ ಎಪಿಜಿಎಆರ್ ಅಂಕಗಳನ್ನು ಹೊಂದಿರಬಹುದು.
ಈ ಯಾವುದೇ ಮುನ್ಸೂಚನೆಯಿಲ್ಲದೇ, ಶಿಶುವು ನಿಯೋನಾಟಲ್ ಅಸ್ಫಿಕ್ಸಿಯಾದೊಂದಿಗೆ ಜನಿಸಲು ಸಾಧ್ಯ. ಹಾಗಾಗಿ, ಹೆರಿಗೆ ಎಲ್ಲ ಸಂದರ್ಭಗಳಲ್ಲಿ ನವಜಾತ ಶಿಶುಗಳಿಗೆ ಮರುಚೈತನ್ಯಪೂರಣ ನೀಡಲು ಸರ್ವ ಸನ್ನದ್ಧರಾಗಿರಬೇಕು. ಹೆರಿಗೆ ಮಾಡಿಸುವ ಯಾವುದೇ ವ್ಯಕ್ತಿಯು, ಶಿಶುವಿಗೆ ಮರುಚೈತನ್ಯ ಪೂರಣ ನೀಡಲು ಸಮರ್ಥರಿರಬೇಕು.
ಯಾವುದೇ ಮುನ್ಸೂಚನೆಯಿಲ್ಲದೇ,ಶಿಶುವು ನಿಯೋನಾಟಲ್ ಅಸ್ಫಿಕ್ಸಿಯಾದೊಂದಿಗೆ ಜನಿಸಲು ಸಾಧ್ಯ
ಶಿಶುವಿಗೆ ಮರುಚೈತನ್ಯಪೂರಣ ಮಾಡಲು ಅವಶ್ಯವಿರುವ ಎಲ್ಲ ಮೂಲಭೂತ ಉಪಕರಣಗಳನ್ನು ಹೊಂದಿರುವುದು ಆದ್ಯ ಅಗತ್ಯ. ಆ ಎಲ್ಲ ಉಪಕರಣಗಳೂ ಸುಸ್ಥಿತಿಯಲ್ಲಿರುವುದರ ಜೊತೆಗೆ ತತ್ ಕ್ಷಣಕ್ಕೆ ಲಭ್ಯವಾಗುವಂತಿರಬೇಕು. ಆ ಉಪಕರಣವನ್ನು ಪ್ರತಿದಿನವೂ ತಪಾಸಿಸಬೇಕು.
ಮರುಚೈತನ್ಯಪೂರಣಕ್ಕೆ ಬೆಚ್ಚನೆಯ ಹಾಗೂ ಸೂಕ್ತ ಬೆಳಕಿನಿಂದ ಕೂಡಿದ ಪ್ರಸವ ಕೋಣೆಯ ಮೂಲೆಯೊಂದಿದ್ದರೆ ಆಯಿತು. ಓವರ್ ಹೆಡ್ ರೆಡಿಯಂಟ್ ವಾರ್ಮರಿನಂತಹ ಶಾಖದ ಮೂಲವೊಂದು ಶಿಶುವನ್ನು ಬೆಚ್ಚಗಿಡಲು ಬೇಕಾಗುತ್ತದೆ. ತೀವ್ರ ತೆರನಾದ ಗಾಳಿಯ ಪ್ರವಾಹ ಇಲ್ಲದಂತೆ ನೋಡಿಕೊಳ್ಳಬೇಕು. ಮಗುವನ್ನು ಸೂಕ್ಷ್ಮವಾಗಿ ಗಮನಿಸಲು ಸೂಕ್ತವಾದ ಬೆಳಕಿನ ವ್ಯವಸ್ಥೆ (ಆಂಗಲ್ ಪಾಯ್ಸ್ ಲ್ಯಾಂಪ್) ಇದ್ದರೆ ಅನುಕೂಲ
ಶಿಶು ಜನನವಾದ ತತ್ ಕ್ಷಣ, ಶಿಶುವನ್ನು ಬೆಚ್ಚಗಿನ ಟವಲ್ಲೊಂದರಿಂದ ಒಣಗಿಸಿ ಒರಸಿ, ಮತ್ತೊಂದು ಬೆಚ್ಚಗಿನ ಆದರೆ ಒಣ ಟವಲ್ಲಿನ ಮೇಲಿಡಬೇಕು. ಇದರಿಂದ ಶಿಶುವಿನ ಉಷ್ಣತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಒಣ ಟವೆಲಿನಲ್ಲಿರುವ ಶಿಶುವನ್ನು ಮೃದುವಾಗಿ ನೇವರಿಸುವುದರಿಂದ ಹಾಗೂ ಕೈಯಾಡಿಸುವುದರಿಂದ ಉಸಿರಾಟವನ್ನು ಶುರು ಮಾಡಿಸಲು ಸಾಧ್ಯ. ಶಿಶುವಿನ ಪಾದಕ್ಕೆ ಮೃದುವಾಗಿ ತೀಡುವುದೂ ಉಸಿರಾಟ ಆರಂಭಿಸಲು ಸಹಕಾರಿಯಾಗಬಲ್ಲದು. ಬಹುತೇಕ ಶಿಶುಗಳು ಉಸಿರಾಟ ಆರಂಭಿಸಲು ಈ ಬಗೆಯ ಉತ್ತೇಜನವೊಂದೇ ಸಾಕು. ಮಗುವಿನ ಬಾಯಿಯಲ್ಲಿ ಹೆಚ್ಚಿನ ಪ್ರಮಾಣದ ಸ್ರಾವವಿದ್ದರೆ, ಅದನ್ನು ಸ್ವಚ್ಛವಾದ ಟವಲಿನಿಂದ ಶುಚಿಗೊಳಿಸಬಹುದು. ಉಸಿರಾಟ ಆರಂಭಿಸಲು, ಶಿಶುವಿಗೆ ಬಲವಾಗಿ ಹೊಡೆಯುವ ಅಗತ್ಯವಿಲ್ಲ. ಚಟುವಟಿಕೆಯಿಂದಿರುವ, ನಸುಗೆಂಪು ಅಥವಾ ಗುಲಾಬಿ ಬಣ್ಣ ಹೊಂದಿರುವ ಮತ್ತು ಉತ್ತಮವಾಗಿ ಉಸಿರಾಡುತ್ತಿರುವ ಮಕ್ಕಳು ತಾಯಿಯ ಜೊತೆಗಿರಬಹುದು. ಕಾಂಗರೂ ತಾಯಿ ಕಾಳಜಿ ವಹಿಸುವ ಸ್ಥಿತಿಯಲ್ಲಿ ನವಜಾತ ಶಿಶುಗಳನ್ನು ತಾಯಿಯೊಂದಿಗೆ ಮಲಗಿಸಿ, ತಾಯಿಯ ಮೊಲೆವಾಲು ಕುಡಿಯಲು ಅವಕಾಶ ಕೊಡಬೇಕು. ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಅಥವಾ ಮರುಚೈತನ್ಯ ಪೂರಣ ಸಂದರ್ಭದಲ್ಲಿ ಸದಾ ಕೈಗವಸುಗಳನ್ನು (ಗ್ಲೋವ್ಸ್) ಹಾಕಿಕೊಳ್ಳಿ.
ಹೆರಿಗೆಯಾದ ತಕ್ಷಣ ಶಿಶುವಿನ ಬಾಯಿ ಹಾಗೂ ಮೂಗುಗಳನ್ನು ಚೋಷಣ ಕ್ರಿಯೆ (ವಾಯುರಹಿತ ಶೂನ್ಯವನ್ನು ಕಲ್ಪಿಸಲು) ಸಾಮಾನ್ಯವಾಗಿ ನೀಡುವ ಅಗತ್ಯವಿಲ್ಲವೆ. ಶಿಶುವಿಗೆ ಹೇಗೆ ಮರುಚೈತನ್ಯಪೂರಣ ನೀಡಲಾಗುತ್ತದೆ?
ಒಣಗಿಸುವಿಕೆ ಹಾಗೂ ಸ್ಪರ್ಶ ಉದ್ದೀಪನಕ್ಕೆ ಶಿಶುವು ಸಂವೇದಿಸದಿದ್ದಲ್ಲಿ, ಮರುಚೈತನ್ಯಪೂರಣ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸಬೇಕು. ಈ ಕ್ರಿಯೆಯನ್ನು, ಅತಿ ಅನುಭವಿಗಳು (ಪದವಿ ಅಥವಾ ದರ್ಜೆಯ ಪರಿಗಣನೆ ಬೇಕಿಲ್ಲ) ಮಾತ್ರ ಶಿಶುವಿನ ಮರುಚೈತನ್ಯಪೂರಣ ಕ್ರಿಯೆಯಲ್ಲಿ ತೊಡಗಬೇಕು. ಆದರೆ, ಹೆರಿಗೆ ಮಾಡಿಸುವ ಎಲ್ಲ ಸಿಬ್ಬಂದಿಯೂ ಶಿಶುಗಳ ಮರುಚೈತನ್ಯಪೂರಣ ಮಾಡಬಲ್ಲರು. ಈ ಸಂದರ್ಭದಲ್ಲಿ ಸಹಾಯಕರೊಬ್ಬರಿದ್ದರೆ ಅನುಕೂಲ.
ನವಜಾತ ಶಿಶುವಿಗೆ ಮರುಚೈತನ್ಯಪೂರಣ ಪ್ರಕ್ರಿಯೆಯು 4 ಹಂತಗಳನ್ನು ಹೊಂದಿದೆ. ಆ ಹಂತಗಳನ್ನು “ABCD” ಅಕ್ಷರಗಳ ಮೂಲಕ ನೆನಪಿಟ್ಟುಕೊಳ್ಳಬಹುದು. ABCD ಅಂದರೆ, AIRWAY (ಗಾಳಿಯ ಜಾಡು)- BREATHING – (ಉಸಿರಾಟ), CIRCULATION (ಪ್ರಸರಣೆ) – DRUGS (ಔಷಧ).
ಶಿಶುವಿನ ಶಿರವನ್ನು ಸಾಮಾನ್ಯ ಸ್ಥಿತಿಯಲ್ಲಿಡಿ. ಉಸಿರಾಟದ ಮಾರ್ಗವನ್ನು ತೆರೆಯಲು ಅನುವಾಗುವಂತೆ, ಶಿಶುವಿನ ಶಿರವನ್ನು ಕೊಂಚವೇ ಕೊಂಚ ಉದ್ದ ಮಾಡಿ. ಆದರೆ, ಕತ್ತನ್ನು ಎಳೆಯುವ ಅಥವಾ ಬಗ್ಗಿಸುವ ಪ್ರಯತ್ನ ಬೇಡ. ಶಿಶುವನ್ನು ಸ್ಥಿರವಾದ ಮೇಲ್ಮೈನಲ್ಲಿ, ಅಂಗಾತ ಮಲಗಿಸುವುದು ಒಳ್ಳೆಯದು.
ಶಿಶುವಿನ ಗಂಟಲನ್ನು ನಯವಾಗಿ ಸ್ವಚ್ಛಗೊಳಿಸಿ. ಉಸಿರಾಟದ ಮಾರ್ಗದಲ್ಲಿರುವ ಲೋಳೆ ಅಥವಾ ರಕ್ತದಿಂದಾಗಿ ಶಿಶುವಿನ ಉಸಿರಾಟಕ್ಕೆ ಅಡ್ಡಿಯಾಗಿರಬಹುದು. ಉದ್ದೀಪನದಿಂದಲೂ ಶಿಶು ಉಸಿರಾಡಲು ಸಾಧ್ಯವಾಗದಿದ್ದರೆ, ಮೃದುವಾದ ಎಫ್-10 ಕ್ಯಾಟೆರ್ ಉಪಕರಣದಿಂದ ಶಿಶುವಿನ ಬಾಯಿ ಮತ್ತು ಗಂಟಲಿಗೆ ಚೋಷಕ ಕ್ರಿಯೆ ನಡೆಸಬೇಕು. ಉಸಿರಾಟದ ಮಾರ್ಗ ಮುಕ್ತವಾಗುತ್ತಿದ್ದಂತೆ ಶಿಶುವಿನ ಉಸಿರಾಟ, ಮೈಬಣ್ಣ ತುತ ಹೃದಯದ ಬಡಿತವನ್ನು ಲೆಕ್ಕ ಹಾಕಬೇಕು.
ನವಜಾತ ಶಿಶುಗಳ ಮರುಚೈತನ್ಯಪೂರಣ ಪ್ರಕ್ರಿಯೆಯಲ್ಲಿ ವಾತಾಯನ ವ್ಯವಸ್ಥೆ ಮಹತ್ವದ ಹೆಜ್ಜೆ. ಶಿಶುವು ಸರಿಯಾಗಿ ಉಸಿರಾಡುತ್ತಿದೆಯೋ ಇಲ್ಲವೋ ಅಥವಾ ಹೃದಯದ ಬಡಿತ 100 ದಾಟಿದೆಯೋ ಇಲ್ಲವೋ ಎಂಬುದನ್ನು ಗಮನಿಸಿ.
ಆಮ್ಲಜನಕ ಮುಕ್ತ ಪ್ರವಾಹದಿಂದ, (ಯಾವುದೇ ವಾತಾಯನ ವ್ಯವಸ್ಥೆಯಿಲ್ಲದೇ) ಶಿಶುಗಳು ಉತ್ತಮವಾಗಿ ಉಸಿರಾಡಿದರೂ, ಉತ್ತಮ ಹೃದಯದ ಬಡಿತ ಹೊಂದಿದ್ದರೂ, ಸೆಂಟ್ರಲಿ ಸಯನೋಸ್ ಆಗಿರಬಹುದು. ಸೂಕ್ತವಾದ ವಾತಾಯನ ವ್ಯವಸ್ಥೆಯನ್ನು ನೀಡುವ ಮೂಲಕ ಶಿಶುವಿನ ಉಸಿರಾಟವನ್ನು ಆರಂಭಿಸಬಹುದು.
ಕೊಂಚ ಪ್ರಮಾಣದ ಉದ್ದೀಪನ ಹಾಗೂ ಉಸಿರಾಟದ ಮಾರ್ಗದ ಅಡೆತಡೆಗಳ ತೆರೆವಿನ ಬಳಿಕವೂ, ಶಿಶುವು ಉಸಿರಾಡಲು ವಿಫಲವಾದರೆ, ಕೃತಕ ಉಸಿರಾಟದ ವ್ಯವಸ್ಥೆಯ ಅಗತ್ಯವಿದೆ. ಮುಖವಾಡ ಹಾಗೂ ಚೀಲವೊಂದರ ಮುಖಾಂತರ ಬಹುತೇಕ ಶಿಶುಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬಹುದು. ಮುಖವಾಡವು ಶಿಶುವಿನ ಮೂಗು ಹಾಗೂ ಬಾಯಿಗಳಿಗೆ ಬಲವಾಗಿ ಹಿಡಿದುಕೊಳ್ಳಬೇಕು. ಶಿರವು ಸರಿಯಾದ ಸ್ಥಿತಿಯಲ್ಲಿದೆ ಹಾಗೂ ಉಸಿರಾಟದ ಮಾರ್ಗ ಸರಾಗವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
ಎಂಡೋಟ್ರಾಕಿಯಲ್ ಟ್ಯೂಬಿನ ಮೂಖಾಂತರ ಉಸಿರಾಟದ ವ್ಯವಸ್ಥೆ ಕಲ್ಪಿಸುವದು ಅತ್ಯಂತ ಪರಿಣಾಮಕಾರಿ. ಮುಖವಾಡ ಉಸಿರಾಟ ವ್ಯವಸ್ಥೆಗೆ ಸ್ಪಂದಿಸಲು ಸಾಧ್ಯವಾಗದ ಮಕ್ಕಳನ್ನು ಇನ್ಟ್ಯೂಬ್ ಮಾಡಬೇಕಾಗುತ್ತದೆ. ಪ್ರತಿ ನಿಮಿಷಕ್ಕೆ 40 ಉಚ್ಛಾಸ ಮಾಡುವಷ್ಟು ವಾತಾಯನ ವ್ಯವಸ್ಥೆ ಕಲ್ಪಿಸಿ. ಪ್ರತಿ ಉಚ್ಛಾಸದೊಂದಿಗೂ ಶಿಶುವಿನ ಎದೆ ಚಲಿಸುತ್ತದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಿ ಮತ್ತು ಅದು ಉತ್ತಮವಾಗಿದ್ದು, ವಾಯುಪ್ರವೇಶದ ಶಬ್ದ ಕೇಳಿಸುತ್ತದೆ ಎಂಬುದನ್ನು ಗಮನಿಸಿ. ನಿಯೋನಾಟಲ್ ಅಸ್ಫಿಕ್ಸಿಯಾದಿಂದ ನರಳುವ ಮಕ್ಕಳಿಗೆ ನೀಡುವ ಮರುಚೈತನ್ಯ ಪೂರಣ ಪ್ರಕ್ರಿಯೆಯಲ್ಲಿ ಇದು ಅತಿ ಮಹತ್ವದ ಅಂಗ.
ಮುಖವಾಡ ಹಾಗೂ ಚೀಲವೊಂದರ ಮುಖಾಂತರ ಬಹುತೇಕ ಶಿಶುಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಸಾಧ್ಯ
ಉಸಿರಾಟದ ವ್ಯವಸ್ಥೆ ಸರಿಯಾಗುವವರೆಗೂ ವಾತಾಯನ ವ್ಯವಸ್ಥೆಯ ಜೊತೆಗೆ ಹೆಚ್ಚಿನ ಆಮ್ಲಜನಕವನ್ನು ನೀಡಲಾಗುತ್ತದೆ.
ಎಪಿಜಿಆರ್ ಅಂಕಗಳು ಸಹಜ ಸ್ಥಿತಿಗೆ ಮರಳಿದೆ ಎಂಬುದನ್ನು ಸೂಚಿಸಲು ಮೂರು ಮುಖ್ಯ ಚಿನ್ಹೆಗಳು. ಅವುಗಳೆಂದರೆ,
ಸರಿಯಾದ ಹೃದಯದ ಬಡಿತ ಸಮರ್ಪಕ ಉಸಿರಾಟದ ಸೂಚಕ
ಹೆರಿಗೆಯಾದ ಕನಿಷ್ಠ ನಾಲ್ಕು ಗಂಟೆಗಳ ವರೆಗೆ ಮರುಚೈತನ್ಯಪೂರಣ ಹೊಂದಿದ ಮಕ್ಕಳನ್ನು ಬಹು ಎಚ್ಚರಿಕೆಯಿಂದ ಗಮನಿಸಬೇಕು. ಅವರ ಉಷ್ಟತೆ, ನಾಡಿ ಬಡಿತ, ಉಸಿರಾಟದ ದರ, ಮೈಬಣ್ಣ ಮತ್ತು ಚಟುವಟಿಕೆಗಳನ್ನು ದಾಖಲಿಸಬೇಕು ಹಾಗೂ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ತಪಾಸಿಸಬೇಕು. ಶಿಶುಗಳನ್ನು ಬೆಚ್ಚಗಿಡಿ ಹಾಗೂ ಸೂಕ್ತ ದ್ರವಾಹಾರ ಮತ್ತು ಶಕ್ತಿಯನ್ನು ಬಾಯಿಯ ಅಥವಾ ರಕ್ತನಾಳದ ಮುಖಾಂತರವಾಗಿಯಾದರೂ ನೀಡಿ. ಸಾಮಾನ್ಯವಾಗಿ ಈ ಶಿಶುಗಳನ್ನು ಮುಚ್ಚಿದ ಇನ್ಕ್ಯೂಬೇಟರುಗಳಲ್ಲಿಡಲಾಗುತ್ತದೆ. ಮಗು ಸಂಪೂರ್ಣ ಆರೋಗ್ಯ ಸ್ಥಿತಿಗೆ ಹಿಂದಿರುಗುವವರೆಗೂ ಸ್ನಾನ ಬೇಡ.
ಮರುಚೈತನ್ಯಪೂರಣ ಪ್ರಕ್ರಿಯೆಯ ಬಳಿಕ ಕೋಣೆಯಲ್ಲಿ ಶಿಶುವಿಗೆ ಉಸಿರಾಟದ ತೊಂದರೆ ಅಥವಾ ಕೇಂದ್ರೀಕೃತ ಸಯಾನೋಸ್ ಕಾಣಿಸಿಕೊಂಡಲ್ಲಿ ತತ್ ಕ್ಷಣ ಆಮ್ಲಜನಕ ನೀಡಿ. ಕೆಲ ಶಿಶುಗಳನ್ನು ಒಂದು ಕೋಣೆಯಿಂದ ಮತ್ತೊಂದೆಡೆಗೆ ಸಾಗಿಸುವಾಗಲೂ ವಾತಾಯನ ವ್ಯವಸ್ಥೆ ಮಾಡಬೇಕಾಗುತ್ತದೆ
ಹುಟ್ಟುವಾಗ ಶಿಶುವಿನ ಸ್ಥಿತಿ ವಿವರಿಸುವ ಟಿಪ್ಪಣಿಗಳನ್ನು ಜಾಗರೂಕತೆಯಿಂದ ಮಾಡಬೇಕು. ಅದರಲ್ಲಿ ಮರುಚೈತನ್ಯಪೂರಣ ನೀಡಿಕೆ ಕೂರಿತು ಹಾಗೂ ನಿಯೋನಾಟಲ್ ಅಸ್ಫಿಕ್ಸಿಯಾದ ಸಂಭವನೀಯ ಕಾರಣಗಳನ್ನು ಕುರಿತು ವಿವರಿಸಬೇಕು.
ಕೊನೆಯ ಮಾರ್ಪಾಟು : 4/28/2020
ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ...
ಆಮ್ನಿಯಾಟಿಕ್ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್...
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು
ಆಶಾಳ ಜವಾಬ್ದಾರಿಗಳು ಮತ್ತು ಕಾರ್ಯಗಳು