ಮಗು ಚೆನ್ನಾಗಿ ಬೆಳೆಯುತ್ತಿದೆಯೇ, ಅದರಲ್ಲಿ ಯಾವುದೇ ಅಸಹಜತೆಗಳಿವೆಯೇ ಎಂದು ಅದು ಸ್ಪಷ್ಟವಾಗಿ ತಿಳಿಸಲು ಈಗಲೂ ಒಂದು ಸ್ಕ್ಯಾನಿಂಗ್ ಸಹಾಯಕವಾಗಿರುತ್ತದೆ.
ಈ ದಿನಗಳಲ್ಲಿ ಇನ್ನೊಂದು ಪಿಡುಗು ಗರ್ಭಿಣಿಗೆ ಎದುರಾಗಬಹುದು. ಗರ್ಭವನ್ನು ಆವರಿಸಿರುವ ಕೋರಿಯಾನಿಕ್ ಲೋಮನಾಳಗಳಲ್ಲಿ ದ್ರವವಸ್ತು ಸಂಚಿತವಾಗಿ ಇಡೀ ಗರ್ಭವು ಒಂದು ದ್ರಾಕ್ಷಾ ಗೊಂಚಲಿನಂತೆ ಕಾಣುತ್ತದೆ. ಈ ‘ದ್ರಾಕ್ಷಾಗರ್ಭ’ದಲ್ಲಿ ಜೀವಿಸಿರುವುದಿಲ್ಲ. ಹೀಗಾದಾಗ ರಕ್ತಸ್ರಾವ, ಕ್ಯಾನ್ಸರ್ ಅಪಾಯಗಳಿರುವ ಕಾರಣ, ಅದನ್ನು ಸ್ಕ್ಯಾನಿಂಗ್‌ನಿಂದ ಹಾಗೂ ತಜ್ಞರ ತಪಾಸಣೆಯಿಂದ ತಿಳಿದುಕೊಂಡ ಕೂಡಲೆ ಗರ್ಭಕೋಶವನ್ನು ತೆರವು ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ.
ಗರ್ಭಪಾತದ ಅಪಾಯವೂ ನಡುನಡುವೆ ಏಳಬಹುದು. ಗರ್ಭವನ್ನು ಸಂರಕ್ಷಿಸುವ ‘ಪ್ರೊಜೆಸ್ಟರೋನ್’ ರಸದೂತದ (ಬಸಿರಣಿಕ) ಪ್ರಮಾಣ ತಗ್ಗಿದರೆ, ಅದನ್ನು ಮಾತ್ರೆ ಅಥವಾ ಇಂಜೆಕ್ಷನ್ ರೂಪದಲ್ಲಿ ನೀಡುತ್ತಾರೆ. ಆದರೆ, ಗರ್ಭವು ಗರ್ಭಕೋಶದಿಂದ ಆಂಶಿಕವಾಗಿ ಬೇರ್ಪಟ್ಟಿದ್ದಾಗ, ಅದನ್ನು ಪೂರ್ತಿಯಾಗಿ ತೆಗೆಯುವ ಅಗತ್ಯವಿರುತ್ತದೆ. ಮೂರನೇ ತ್ರೈಮಾಸಿಕವು ಪ್ರಾರಂಭವಾಗುವಾಗ ಗರ್ಭಕೋಶದ ಮೇಲುಭಾಗವು ಗರ್ಭಿಣಿಯ ಹೊಕ್ಕಳ ಮಟ್ಟಕ್ಕೂ ಮೇಲೇರುತ್ತಿರುತ್ತದೆ. ಈ ಅವಧಿಯ ಕೊನೆಯಲ್ಲಿ ಅದು ಗರ್ಭಿಣಿಯ ಎದೆಯೆಲುಬಿನ ಕೆಳಅಂಚಿನ ಮಟ್ಡದಲ್ಲಿದ್ದು ಅಂತಿಮ ವಾರದಲ್ಲಿ ಸ್ವಲ್ಪ ಇಳಿಯಬಹುದು.
ಈ ಸಮಯದಲ್ಲಿಯೂ ರಕ್ತ, ಮೂತ್ರ ತಪಾಸಣೆಗಳಾಗುತ್ತಲೇ ಇರಬೇಕು. ತೂಕವನ್ನು ಗಮನಿಸುವುದು ಮುಖ್ಯವೇ. ರಕ್ತದೊತ್ತಡ ಅಳೆಯುತ್ತಾರೆ. ಈ ಅವಧಿಯಲ್ಲಿ ಬಸಿರು ನಂಜು, ಎಳೆಬಸಿರು ನಂಜುಗಳ ಅಪಾಯ ಎದುರಾಗುವುದನ್ನು ನಿರ್ವಾಹಕರು ಎಚ್ಚರಿಕೆಯಿಂದ ಗಮನಿಸುತ್ತಲೇ ಇರುತ್ತಾರೆ. ಎಳೆಬಸಿರು ನಂಜಿನಲ್ಲಿ (ಪ್ರಿ – ಎಕ್ಯಾಂಸಿಯಾ) ಗರ್ಭಿಣಿಯ ರಕ್ತದೊತ್ತಡ ಗಮನಾರ್ಹವಾಗಿ ಮೇಲೇರಿ ಮೂತ್ರದಲ್ಲಿ ಆಲ್ಬುಮಿನ್ ಮುಂತಾದ ಸಸಾರಜನಕಗಳು ಸೋರುತ್ತವೆ. ಅವಳ ಮೈಯಲ್ಲಿ ನೀರು ಸೇರಿ, ಕೈಕಾಲು, ಮುಖಗಳು ಊದುತ್ತವೆ. ಕೈ ಉಂಗುರ, ಕಾಲುಂಗುರಗಳು ಬಿಗಿಯಾಗುತ್ತವೆ. ಈ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಗರ್ಭಿಣಿಗೆ ಸೆಳವು (ಫಿಟ್ಸ್) ತೋರಿ ಪರಿಸ್ಥಿತಿ ಬಹಳಷ್ಟು ಬಿಗಡಾಯಿಸುತ್ತದೆ. ಆರಂಭಿಕ ಚಿಕಿತ್ಸೆ ಪರಿಣಾಮಕಾರಿ.
ಈ ಅವಧಿಯಲ್ಲಿ ಗರ್ಭಸ್ಥ ಮಗುವಿನ ಹೃದಯದ ಬಡಿತದ ಅನನ್ಯ ಅನುಭವ ಗರ್ಭಿಣಿಗೆ ಸ್ಪಷ್ಟವಾಗಿ ಆಗುತ್ತಿರುತ್ತದೆ. ತಜ್ಞರು ಅದನ್ನೇ ಫಿಟೊಸ್ಮೆಪ್ ಸ್ಮಥಾಸ್ಕೋಪ್ ಅಥವಾ ಡಾಪ್ಲರ್ ಪರಿಕರಗಳ ಸಹಾಯದಿಂದ ಆಗಾಗ ಎಣಿಸುತ್ತಿರುತ್ತಾರೆ. ಸಹಜವಾಗಿ ಚೆನ್ನಾಗಿ ಬೆಳೆದ ಮಗುವಿನ ಹೃದಯದ ಬಡಿತ, ನಿಮಿಷಕ್ಕೆ 120–140 ಇದ್ದು, ಅದೇನಾದರೂ ಹೆಚ್ಚು ಕಡಿಮೆ ಆಗುವುದು, ಮಗು ಆಯಾಸಗೊಂಡಿರುವ ಸೂಚನೆ ನೀಡುತ್ತದೆ.
ಗರ್ಭಜಲವೂ ಕೆಲವೊಮ್ಮೆ ಹೆಚ್ಚು ಕಡಿಮೆಯಾಗುವುದುಂಟು. ಅವಳಿ ತ್ರಿವಳಿಗಳು ಬೆಳೆಯುತ್ತಿದ್ದರೆ ಅದು ಹೆಚ್ಚಾಗಿದ್ದು, ಗರ್ಭಿಣಿಗೆ ಆಯಾಸವಾಗುತ್ತದೆ. ಅದು ಕಡಿಮೆಯಾದರೆ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಒಳ್ಳೆಯದಲ್ಲ.
ಗರ್ಭಸ್ಥ ಕೂಸು ಸ್ವೇಚ್ಛೆಯಾಗಿ ಗರ್ಭಜಲದಲ್ಲಿ ಈಜುತ್ತಾ ಜೀಕುತ್ತಾ ಇದ್ದು, ಕೊನೆಯ ವಾರಗಳಲ್ಲಿ ಒಂದು ನಿಶ್ಚಿತ ನಿಲುವನ್ನು ಪಡೆಯುತ್ತದೆ. ತಲೆ ಕೆಳಮುಖವಾಗಿ ಪೃಷ್ಠ ಮೇಲಿದ್ದರೆ ಹೆರಿಗೆ ಸುಗಮವಾಗುತ್ತದೆ ಎನ್ನಬಹುದು. ಬದಲಾಗಿ ಅದರ ಪೃಷ್ಠವು ಗರ್ಭಕೋಶದ ಕೆಳಭಾಗದಲ್ಲಿದ್ದರೆ ಹೆರಿಗೆ ಕಷ್ಟವಾಗುತ್ತದೆ. ಅಡ್ಡಲಾಗಿದ್ದರಂತೂ ಅಸಾಧ್ಯವೆಂದೇ ಹೇಳಬಹುದು. ಈ ಎಲ್ಲಾ ಸಂದರ್ಭಗಳಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸಾ ವಿಧಾನವು ಸಹಾಯಕ್ಕೆ ಬಂದು ಸುರಕ್ಷಿತ ತಾಯ್ತನಕ್ಕೆ ನಾಂದಿ ಹಾಡುತ್ತದೆ.
ಇನ್ನು ಹೆರಿಗೆಯ ಪ್ರಕ್ರಿಯೆಗೆಯ ಕಡೆಗೆ ಗಮನ ಹರಿಸೋಣ.
ಸುಮಾರು 270 ದಿನಗಳು ಕಳೆದಾಗ ಅಚಾನಕ್ಕಾಗಿ ಹೆರಿಗೆ ನೋವು ಧುತ್ತೆಂದು ಪ್ರಾರಂಭವಾಗುುತ್ತದೆ. ಕ್ರಮೇಣ ಅದು ತೀವ್ರವಾಗಿ ಎರಡು ನೋವುಗಳ ಅಂತರ ಕಡಿಮೆಯಾಗುತ್ತಾ ಹೋಗುತ್ತದೆ. ಇಲ್ಲಿಯೂ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ನಿಜವಾದ ಹೆರಿಗೆ ನೋವು (ಹುಸಿ ನೋವೂ ಇರುತ್ತದೆ!) ಪ್ರಾರಂಭವಾಗಿ ಗರ್ಭಕೋಶ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ. ಮಗು ಪೂರ್ತಿಯಾಗಿ ಹುಟ್ಟುವವರೆಗೆ ಎರಡನೆಯ ಹಂತ. ಮೂರನೇ ಹಂತದಲ್ಲಿ ಪ್ಲಾಸೆಂಟಾ (ಸತ್ತೆ, ಮಾಸು, ಕಸ) ಗರ್ಭಕೋಶದಿಂದ ನಿಧಾನವಾಗಿ ಬಿಡಿಸಿಕೊಂಡು ಹೊರಬೀಳುತ್ತದೆ. ಗರ್ಭಕೋಶವು ಚೆನ್ನಾಗಿ ಸಂಕುಚಿತಗೊಂಡು ಗಟ್ಟಿಯಾಗುತ್ತದೆ.
ಹೆರಿಗೆಯ ಪ್ರತಿ ಹಂತದಲ್ಲಿಯೂ ತೊಂದರೆಗಳು ಏಳಬಹುದಾದ ಕಾರಣ, ಅದು ತಜ್ಞರ ಉಸ್ತುವಾರಿಯಲ್ಲಿಯೇ ಜರುಗಬೇಕು. ಹೆರಿಗೆಯೇ ಒಂದು ಪಯಣ ಎಂದು ಭಾವಿಸಿದರೆ ಅಲ್ಲಿನ ತೊಂದರೆಗಳು ಪ್ರಯಾಣಿಕನಿಂದ (ಮಗು) ಬರಬಹುದು. ಪ್ರಯಾಣದ ಹಾದಿಯೇ ಅವುಗಳಿಗೆ ಕಾರಣವಾಗಬಹುದು. (ಪ್ರದನನ ಮಾರ್ಗ). ಶಕ್ತಿಗಳು ಹೆರಿಗೆ ನೋವು ಮತ್ತು ಹೆಣ್ಣು ಮುಕ್ಕುವ ಬಲ.
ಮೊದಲ ಹಂತದಲ್ಲಿ ಮಗುವಿನ ನಿಲುವು ಸಮರ್ಪಕವಾಗಿಲ್ಲದಿದ್ದರೆ, ಅದು ತೀರಾ ದೊಡ್ಡದಾಗಿದ್ದರೂ, ಹೆರಿಗೆ ಕಷ್ಟಕರವಾಗುತ್ತದೆ. ಯಾವುದೇ ಸಮಯದಲ್ಲಿ ತಾಯಿ, ಮಗುವಿಗೆ ಆಯಾಸ ಕಂಡುಬಂದರೆ, ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ಮುಗಿಸುವುದೇ ಒಳ್ಳೆಯದು. ಗರ್ಭಕಂಠ ಸಮಯದಲ್ಲಿ ತೆರೆಯದೆ ಇದ್ದರೂ ಕಷ್ಟವೇ. ಇದಕ್ಕಿಂತಲೂ ಮುಖ್ಯವಾಗಿ ಗರ್ಭಿಣಿಯ ಆತಂಕ, ಭಯಗಳೇ ಕಾರಣವಾಗಿರುವ ಕಾರಣ, ಗರ್ಭಣಿಯ ಮನಸ್ಸು ಶಾಂತಿ, ಸಮಾಧಾನಗಳಿಂದ ಕೂಡಿರುವಂತೆ ನೋಡಿಕೊಳ್ಳಬೇಕು.
ಹೆರಿಗೆ ನೋವು ಜಡವಾದರೂ ಕಷ್ಟ, ತೀರ ತೀವ್ರವಾದರೂ ಕಷ್ಟ. ಈ ಅತಿವೃಷ್ಟಿ ಅನಾವೃಷ್ಟಿಗಳಿಗೆಲ್ಲಾ ತಜ್ಞರ ಬಳಿಯಲ್ಲಿ ಸಂಜೀವಿನಿಗಳಿರುತ್ತವೆ. ಭಯಕ್ಕೆ ಕಾರಣವಿಲ್ಲ. ಮೂರನೆಯ ಹಂತ ಮಗು ಹುಟ್ಟಿದೊಡನೆಯೇ ತಾಯಿಯ ಉದರದ ಮೇಲೆ ಮಲಗಿಸಿದಾಗ ಅವರಿಬ್ಬರ ಅನುಬಂಧ ಗಟ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಹೊಕ್ಕಳ ಬಳ್ಳಿಯನ್ನು ಎರಡು ಹಿಡಿಗಳ ನಡುವೆ ಕತ್ತರಿಸಿ ಮಗುವನ್ನು ಬೇರ್ಪಡಿಸಿ ಶುಚಿಗೊಳಿಸಿ ತಾಯಿಯ ಬದಿಯಲ್ಲಿ ಮಲಗಿಸಿ, ಅವಳ ಮೊಲೆ ತೊಟ್ಟನ್ನು ಅದು ಚೀಪುವಂತೆ ಮಾಡಿದಾಗ ಆ ಅನುಬಂಧ ಮತ್ತಷ್ಟು ಗಟ್ಟಿಯಾಗಿ ತಾಯಿಯ ಹೃದಯದಲ್ಲಿ ಹರ್ಷ ಹೊಮ್ಮಿ ಅವಳ ಆರೋಗ್ಯಕ್ಕೆ ಮೆಟ್ಟಿಲಾಗುತ್ತದೆ.
ಮಗು ಹುಟ್ಟಿದಾಕ್ಷಣ ಹೆರಿಗೆ ಮುಗಿದಂತಲ್ಲ! ಪ್ಲಾಸೆಂಟಾ ಇನ್ನು ಒಳಗೇ ಇರುತ್ತದೆ. ಅದು ಹೊರಬರಲು ಸಮಯ ನೀಡಬೇಕು. ಆತುರದಿಂದ ಗರ್ಭಕೋಶವನ್ನು ಹಿಸುಕುವುದಾಗಲಿ, ತಳ್ಳುವುದಾಗಲಿ, ಹೊಕ್ಕುಳ ಬಳ್ಳಿಯನ್ನು ಎಳೆಯುವುದಾಗಲಿ ಮಾಡುವುದು ದೊಡ್ಡ ತಪ್ಪಾಗುತ್ತದೆ. ಆ ಉಪಾಂಗವೇನಾದರೂ ಆಂಶಿಕವಾಗಿ ಹೊರಬಂದರೆ ಪ್ರಸವೋತ್ತರ ರಕ್ತಸ್ರಾವ ಕಟ್ಟಿಟ್ಟದ್ದು. ಈ ಹಂತವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.
ಹೆರಿಗೆಯ ನಿರ್ವಹಣೆಯಲ್ಲಿಯೂ ಹೊಸ ಹೊಸ ಆವಿಷ್ಕಾರಗಳು ಬರುತ್ತಿವೆ. ಲಾಮಾಜ್ ವಿಧಾನದಲ್ಲಿ ನಿಯಮಿತ ಉಸಿರಾಟಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಪತಿಯೂ ಹೆರಿಗೆ ಕೋಣೆಯಲ್ಲಿದ್ದಾಗ, ಗರ್ಭಿಣಿಯ ಆತಂಕ ಕಡಿಮೆಯಾಗಿ ಹೆರಿಗೆ ಸುಗಮವಾಗುವುದನ್ನು ಗಮನಿಸಿದ್ದಾರೆ. ವಿಶಿಷ್ಟವಾದ ನೀರಿನ ತೊಟ್ಟಿಯಲ್ಲಿ ಹೆರಿಗೆ ಮಾಡಿಸುವುದೂ ಜನಪ್ರಿಯವಾಗುತ್ತಿದೆ. ನಿರ್ವಾತದ ಉಡುಪನ್ನು ಧರಿಸುವುದೂ ಉಂಟು. ಒಂದು ಮುಖ್ಯ ವಿಷಯ ಹೆರಿಗೆ ಎಲ್ಲೇ ಆಗಲಿ, ಹೇಗೇ ಆಗಲಿ ಸಂಪೂರ್ಣವಾದ ಕ್ರಿಮಿರಹಿತ ಪರಿಸರದಲ್ಲಾಗುವುದು ಮುಖ್ಯ.
ಸುರಕ್ಷಿತ ತಾಯ್ತನಕ್ಕೆ ಅನೇಕ ಕೈಗಳು ಜೋಡಣೆಯಾಗಬೇಕು. ಮನೆಯಲ್ಲಿರುವವರ ಪ್ರೀತಿ ಸಹಕಾರಗಳು, ಆಸ್ಪತ್ರೆಗೆ ಕರೆದುಕೊಂಡು ಹೋಗುವವರು ಅಲ್ಲಿ ಹೆರಿಗೆ ಸಮಯದಲ್ಲಿ ಸಕಾಲಕ್ಕೆ ವಾಹನದ ವ್ಯವಸ್ಥೆ (ಈಗ 108 ವಾಹನ ಸಹಾಯಕವಾಗಿದೆ) ಸಾರಿಗೆ ಸುಗಮ ರಸ್ತೆ ಇವೆಲ್ಲವೂ ಇರಬೇಕಾಗುತ್ತೆ. ಗರ್ಭಿಣಿ ಸುಶಿಕ್ಷಿತೆಯಾದರೆ, ಕುಟುಂಬದಲ್ಲಿ ಅವಳಿಗೊಂದು ನಿರ್ಧಾರಕಸ್ವರವಿದ್ದರೆ ಎಲ್ಲವನ್ನೂ ತಿಳಿದುಕೊಳ್ಳುತ್ತಾಳೆ. ಸಲಹೆ, ಸೂಚನೆಗಳನ್ನು ಸ್ವೀಕರಿಸುತ್ತಾಳೆ. ಎಲ್ಲವೂ ಸಂತೋಷದಿಂದ ಮುಕ್ತಾಯವಾಗುವ ಸಂಭವಗಳು ಹೆಚ್ಚುತ್ತವೆ. ದಾಯಗಳನ್ನು, ಟ್ರೆಡಿಷನಲ್ ಬರ್ತ್ ಅಟೆಂಡಂಟ್ (ಟಿ.ಬಿ.ಎ. ಸಾಂಪ್ರದಾಯಿಕ ಹೆರಿಗೆ ಸಹಾಯಕಿಯರು) ಗಳಿಗೆ ತರಬೇತಿ ನೀಡುತ್ತಿರಬೇಕು. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿ.ಎಚ್.ಸಿ.) ಜಿಲ್ಲಾ ಆಸ್ಪತ್ರೆಗಳನ್ನು ಸುಸಜ್ಜಿತವನ್ನಾಗಿಸಿ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಿ ಬೇಕಾದ ಔಷಧಿಗಳನ್ನು ಒದಗಿಸುವುದರ ಕಡೆಗೆ ಅಧಿಕಾರ ಗಮನ ಹರಿಸಬೇಕು. ಸುರಕ್ಷಿತ ತಾಯ್ತನಕ್ಕೆ ಹೈಟೆಕ್ ಆಸ್ಪತ್ರೆಗಳಿಗಿಂತ ಇವೇ ಮುಖ್ಯವಾಗಿವೆ.
ಹೆಣ್ಣಿನ ಆರೋಗ್ಯವೇ ಕುಟುಂಬದ ಆರೋಗ್ಯ. ಕುಟುಂಬದ ಆರೋಗ್ಯವೇ ಸಮಾಜದ, ರಾಷ್ಟ್ರದ ಆರೋಗ್ಯ. ಅವಳ ಆರೋಗ್ಯಕ್ಕೆ ಧಕ್ಕೆಯುಂಟಾದರೆ ದೇಶದ ಅಸ್ಥಿಭಾರವೇ ಅಲುಗಾಡುತ್ತದೆ. ನೆನಪಿರಲಿ!l
ಮೂಲ :ಡಾ. ಲೀಲಾವತಿ ದೇವದಾಸ್‌ಪ್ರಜಾವಾಣಿ
ಕೊನೆಯ ಮಾರ್ಪಾಟು : 10/14/2019
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊ...
ಆರೋಗ್ಯವಂತ ತಾಯಿಗೆ ಆರೋಗ್ಯವಂತ ಮಗು ಕುರಿತಾದ ಮಾಹಿತಿ ಇಲ್ಲ...
ಡಯಾಬೆಟಿಸ್ ಮೆಲಿಟಿಸ್ ಒಂದು ಅಸಹಜತೆ ಅದರಲ್ಲಿ ರಕ್ತದಲ್ಲಿನ ...
3 ಮಗುವಿನ ರಕ್ಷಣೆಯ ವಿಷಯ ಮತ್ತು ಪ್ರತಿಯೊಬ್ಬ ಶಿಕ್ಷಕರು ತಿ...